ಪರಿಸರ ಸಂರಕ್ಷಣೆಗೆ ನೆಟ್ಟ ಗಿಡ ಕಾಪಾಡುವವರು ಬೇಕು

ಬಿ.ಎಂ.ಲವಕುಮಾರ್
ಅದ್ಯಾಕೋ ಗೊತ್ತಿಲ್ಲ ಮೊದಲಿನಂತೆ ನಾವು ನಿರೀಕ್ಷೆ ಮಾಡಿದಂತೆ ಯಾವುದೂ ನಡೆಯುತ್ತಿಲ್ಲ. ಎಲ್ಲೋ ಒಂದು ಕಡೆ ಸದ್ದಿಲ್ಲದಂತೆ ನಿಸರ್ಗದಲ್ಲಿ ಬದಲಾವಣೆ, ವಾತಾವರಣದಲ್ಲಿ ಏರುಪೇರಾಗುತ್ತಿದೆ. ಮಳೆಗಾಲದಲ್ಲಿ ಮಳೆಯಿಲ್ಲ.. ಚಳಿಗಾಲದಲ್ಲಿ ಚಳಿಗೂ ಬರ.. ಬೇಸಿಗೆಯಲ್ಲಂತು ಹೊರಗೆ ಕಾಲಿಡಲಾಗದಷ್ಟು ಧಗೆ..
ಹಿರಿಯರನ್ನು ಮಾತನಾಡಿಸಿದರೆ ಅಯ್ಯೋ ಮೊದಲು ಹೀಗಿರಲಿಲ್ಲ. ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿತ್ತು. ಇಷ್ಟೊಂದು ಬಿಸಿಲಿನ ಧಗೆಯಿರಲಿಲ್ಲ. ಮೈಮರಗಟ್ಟುವ ಚಳಿಯಿದ್ದರೂ ಯಾರಿಗೂ ತೊಂದರೆಯಾಗುತ್ತಿರಲಿಲ್ಲ.. ಎಲ್ಲವೂ ಕಾಲಕ್ಕೆ ತಕ್ಕಂತೆ ಸರಿಯಾಗಿ ನಡೆಯುತ್ತಿತ್ತು. ಈಗ ಎಲ್ಲ ಹಾಳಾಗಿದೆ ಎಂದು ತಮ್ಮ ಗತವೈಭವವನ್ನು ತೆರೆದಿಡುತ್ತಾ ಇವತ್ತಿನ ದುಸ್ಥಿತಿಗೆ ಹಿಡಿಶಾಪ ಹಾಕುತ್ತಾರೆ.
ಭೌಗೋಳಿಕವಾಗಿ ನೋಡುವುದಾದರೆ ದಿನದಿಂದ ದಿನಕ್ಕೆ ನಾವು ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಅದನ್ನು ಅಭಿವೃದ್ಧಿ ಎಂದು ಕೂಡ ಕರೆಯುತ್ತಿದ್ದೇವೆ. ನಮಗೆ ಮೂಲಭೂತ ಸೌಲಭ್ಯಗಳು ಬೇಕು. ಆ ಸೌಲಭ್ಯ ಕಲ್ಪಿಸಬೇಕೆಂದರೆ ಅಲ್ಲಿ ಒಂದಷ್ಟು ಬದಲಾವಣೆ ಆಗಲೇ ಬೇಕು.


ಒಂದು ಉತ್ತಮ ರಸ್ತೆ ಬೇಕೆಂದರೆ ಬೆಟ್ಟಗುಡ್ಡ ಅಗೆಯಬೇಕು, ಮರಗಳನ್ನು ಕಡಿಯಬೇಕು. ಅದಷ್ಟನ್ನು ಮಾಡಿಲ್ಲ ಅಂದರೆ ರಸ್ತೆ ನಿರ್ಮಾಣ ಆಗಲ್ಲ. ರಸ್ತೆಯೇ ಇಲ್ಲ ಅಂದ ಮೇಲೆ ಅಭಿವೃದ್ದಿ ಎನ್ನಲಾಗುವುದಿಲ್ಲ. ನಾವು ಅಭಿವೃದ್ಧಿಯ ಬಗ್ಗೆ ಮಾತನಾಡಿದಾಗಲೆಲ್ಲ. ಅದರ ಉಪಯೋಗವನ್ನು ಮನುಷ್ಯ ಅನುಭವಿಸಿದರೂ ಕೂಡ ದುಷ್ಪರಿಣಾಮ ಮಾತ್ರ ಪ್ರಕೃತಿ ಮೇಲೆಯೇ ಎಂಬುವುದರಲ್ಲಿ ಎರಡು ಮಾತಿಲ್ಲ.
ಇವತ್ತು ನಮಗೆಲ್ಲರಿಗೂ ಹಣದ ವ್ಯಾಮೋಹ.. ಪ್ರತಿಯೊಂದು ವಿಚಾರದಲ್ಲೂ ಲಾಭ ನಷ್ಟದ ಲೆಕ್ಕಚಾರ ಮಾಡುತ್ತೇವೆ. ಅಪ್ಪ ನೆಟ್ಟು ಬೆಳೆಸಿದ ಹಲಸಿನ ಮರದ ಹಣ್ಣನ್ನು ತಿಂದು ಬೆಳೆಯುವ ಮಗನಿಗೆ ಅದು ಕೊಡುವ ಹಣ್ಣಿಗಿಂತ ಅದನ್ನು ಕಡಿದು ಮಾರಿದರೆ ಸಿಗುವ ಹಣವೇ ಮುಖ್ಯವಾಗುತ್ತದೆ. ಇಲ್ಲಿ ಮರದ ಹಣ್ಣಿಗಿಂತ ಅದು ತಂದುಕೊಡುವ ಹಣವೇ ಕೆಲಸ ಮಾಡುತ್ತದೆ.
ಕಳೆದ ಕೆಲವು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗುತ್ತಿಲ್ಲ. ಪರಿಣಾಮ ಜೀವನಾಡಿಯಾಗಿದ್ದ ಕೆಆರ್‌ಎಸ್ ಜಲಾಶಯ ಭರ್ತಿಯಾಗುತ್ತಿಲ್ಲ. ಇದನ್ನೇ ನಂಬಿ ಬದುಕುತ್ತಿದ್ದ ರೈತಾಪಿ ಮಕ್ಕಳ ಬದುಕು ಮೂರಾಬಟ್ಟೆಯಾಗಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಕಾವೇರಿ ಕಣಿವೆಯಲ್ಲಿ ಸಮರ್ಪಕ ಮಳೆಯಾಗುತ್ತಿಲ್ಲ ಎಂಬ ಕಾರಣ ನಮಗೆ ಗೋಚರಿಸುತ್ತದೆ. ಕಾವೇರಿಯ ತವರು ಕೊಡಗಿನಲ್ಲೇ ಸಮರ್ಪಕವಾಗಿ ಮಳೆಯಾಗುತ್ತಿಲ್ಲ ಎಂದ ಮೇಲೆ ಜಲಾಶಯ ಭರ್ತಿಯಾಗುವುದಾದರೂ ಹೇಗೆ?
ಒಂದೆರಡು ದಶಕಗಳ ಹಿಂದೆ ಕೊಡಗಿಗೆ ಬಂದವರು ಈಗ ಮತ್ತೊಮ್ಮೆ  ಬಂದರೆ ಇಲ್ಲಿನ ಬದಲಾವಣೆಗಳು ಎದ್ದು ಕಾಣುತ್ತದೆ. ಮೊದಲಿನಂತೆ ಕೊಡಗು ಇದೆಯಾ? ವಾತಾವರಣವೂ ಹಾಗೆಯೇ ಇದೆಯಾ? ಎಂಬ ಪ್ರಶ್ನೆಗಳಿಗೆ ಉತ್ತರ ಸುಲಭವಾಗಿ ಸಿಕ್ಕಿಬಿಡುತ್ತದೆ.
ಕಾಡುಗಳು ನಾಶವಾಗಿ ತೋಟಗಳಾಗಿವೆ. ಗದ್ದೆಗಳು ನಿವೇಶನಗಳಾಗಿ ಕಾಂಕ್ರಿಟ್ ಕಾಡಾಗಿ ಮಾರ್ಪಟ್ಟಿದೆ. ಭತ್ತದ ಕೃಷಿಯಲ್ಲಿ ಲಾಭವಿಲ್ಲ ಎಂಬ ಕಾರಣಕ್ಕೆ ಕೆಲವು ಸದ್ದಿಲ್ಲದೆ ತೋಟಗಳಾಗಿದ್ದರೆ ಮತ್ತೆ ಕೆಲವು ಪಾಳುಬಿದ್ದಿವೆ. ದೊಡ್ಡ ಮರಗಳಿಂದ ಕೂಡಿದ ಕಾಡುಗಳ ನಡುವೆ ತಂಪಾದ ವಾತಾವರಣದಲ್ಲಿ ಕಂಡು ಬರುತ್ತಿದ್ದ ಏಲಕ್ಕಿ ನಾಶವಾಗಿ ಅವು ಕಾಫಿ ತೋಟವಾಗಿ ಮಾರ್ಪಟ್ಟಿವೆ. ಇದೆಲ್ಲದರ ನಡುವೆ ಕೊಡಗಿನ ಮೂಲಕ ಕೇರಳಕ್ಕೆ ಹಾದು ಹೋದ ಹೈಟನ್ಷನ್ ವಿದ್ಯುತ್ ಮಾರ್ಗ ಮರಕಾಡುಗಳನ್ನು ನುಂಗಿ ಹಾಕಿದೆ. ಪ್ರಾಣಿ ಪಕ್ಷಿಗಳ ಜೀವಕ್ಕೆ ಕಂಟಕವಾಗಿವೆ.
ಸುಡು ಬೇಸಿಗೆಯಲ್ಲೂ ತಣ್ಣಗಿದ್ದ ಕೊಡಗು ಇವತ್ತು ಬೇಸಿಗೆ ಬಂತೆಂದರೆ ಸುಡುತ್ತದೆ. ಕಳೆದ ಎರಡು ದಶಕಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಇಲ್ಲಿನ ಪರಿಸರದ ಮೇಲೆ ಭಾರೀ ಅತ್ಯಾಚಾರ ನಡೆದಿದೆ. ಆಧುನಿಕತೆಯ ಹೆಸರಿನಲ್ಲಿಯೂ ಇರಬಹುದು, ಟಿಂಬರ್ ಮಾಫಿಯಾದ ಮೂಲಕವೂ ಇರಬಹುದು.
ಕಾವೇರಿ ಹುಟ್ಟಿ ಹರಿಯುವ ಕೊಡಗಿನಲ್ಲೇ ಇವತ್ತು ಕುಡಿಯುವ ನೀರಿಗೆ ಹಾಹಾಕಾರವಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ. ಕಾರಣ ವಾಡಿಕೆಯ ಮಳೆಯಾಗದ ಕಾರಣದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಸಣ್ಣಪುಟ್ಟ ನದಿಗಳಲ್ಲಿ ನೀರು ಹರಿಯುತ್ತಿಲ್ಲ. ತೊರೆಗಳೇ ಇಲ್ಲಿನವರ ಜಲಮೂಲವಾಗಿದ್ದು, ಅವುಗಳೇ ಕ್ಷೀಣಿಸುತ್ತಿವೆ.
ನಾವೆಷ್ಟು ಲೆಕ್ಕಚಾರಿಗಳಾಗಿ ಸ್ವಾರ್ಥಿಗಳಾಗುತ್ತಿದ್ದೇವೆ ಎಂದರೆ ಮಾವು, ಹಲಸು, ನೇರಳೆ ಸೇರಿದಂತೆ ಹಲವು ರೀತಿಯ ಪರಿಸರ ಸ್ನೇಹಿ ಗಿಡನೆಟ್ಟು ಅದರಿಂದ ಒಂದಷ್ಟು ಜೀವಿಗಳಿಗೆ ಬದುಕಲು ಅವಕಾಶ ಮಾಡಿಕೊಡುವ ಮನೋಭಾವವಿಲ್ಲ. ಇವತ್ತು ಗಿಡನೆಟ್ಟರೆ ಇನ್ನೊಂದು ಹತ್ತು ವರ್ಷ ಬಿಟ್ಟು ಕಡಿದರೆ ಅದರಿಂದ ಎಷ್ಟು ಆದಾಯ ಬರಬಹುದು ಎಂದು ಆಲೋಚಿಸುತ್ತಿದ್ದೇವೆ. ಜತೆಗೆ ಆದಾಯ ತಂದು ಕೊಡುವ ನೀಲಗಿರಿ, ಸಿಲ್ವರ್‌ಓಕ್, ತೇಗದ ಮರಗಳನ್ನು ನೆಡುತ್ತೇವೆ. ಅವುಗಳಿಂದ ಹಸಿರುವ ಪ್ರಪಂಚವನ್ನು ಸೃಷ್ಠಿ ಮಾಡುತ್ತಿದ್ದೇವೆ. ಮುಂದೆ ಆದಾಯವನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಪರಿಸರ ಸ್ನೇಹಿ ಅರಣ್ಯವನ್ನು ಪಡೆಯಲು ಸಾಧ್ಯನಾ ಎಂದು ನಾವ್ಯಾರು ಯೋಚಿಸುತ್ತಲೇ ಇಲ್ಲ.
ನೀಲಗಿರಿ ಮರದಡಿಯಲ್ಲಿ ಹುಲ್ಲು ಕೂಡ ಹುಟ್ಟುವುದಿಲ್ಲ. ಅವುಗಳಿಂದ ಪ್ರಾಣಿಪಕ್ಷಿ ಭೂಮಿಗೂ ಒಳಿತಾಗುವುದಿಲ್ಲ. ಅವು ಹಣ ತಂದು ಕೊಡುತ್ತವೆ ಎಂಬ ಉದ್ದೇಶಕ್ಕಷ್ಟೆ ನಾವು ಅವುಗಳನ್ನು ಬೆಳೆಯುತ್ತಿದ್ದೇವೆ. ನಮಗೆ ಪರಿಸರ ಸ್ನೇಹಿ ಅರಣ್ಯ ಬೇಕಾಗಿಲ್ಲ. ಇದರ ಪರಿಣಾಮವೇ ಇವತ್ತು ವನ್ಯಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಬರುವಂತಾಗಿದ್ದು..
ಪ್ರತಿವರ್ಷ ವನಮಹೋತ್ಸವ, ಪರಿಸರ ದಿನಾಚರಣೆಯನ್ನು ಗಿಡನೆಡುವುದರ ಮೂಲಕ ಆಚರಿಸುತ್ತಿದ್ದೇವೆ. ಸಾವಿರಾರು ಗಿಡಗಳನ್ನು ನೆಡುತ್ತಲೇ ಇದ್ದೇವೆ.  ಅದು ಕೆಲವರಿಗೆ ಪ್ರಚಾರ ಪಡೆಯುವುದಕ್ಕಷ್ಟೆ ಸೀಮಿತವಾಗಿ ಹೋಗಿದೆ. ದುರಂತ ಏನೆಂದರೆ ಕಳೆದ ವರ್ಷ ನೆಟ್ಟ ಸ್ಥಳದಲ್ಲೇ ಈ ವರ್ಷವೂ ಗಿಡ ನೆಡುತ್ತೇವೆ. ಆದರೆ ನಾವ್ಯಾರೂ ಕಳೆದ ವರ್ಷ ನೆಟ್ಟ ಗಿಡ ಏನಾಯಿತು ಎಂದು ಯೋಚಿಸುವುದೇ ಇಲ್ಲ.
ಇವತ್ತಿನ ಪರಿಸ್ಥಿತಿಯಲ್ಲಿ ಗಿಡವನ್ನು ನೆಡುವವರಿಗಿಂತ ನೆಟ್ಟ ಗಿಡವನ್ನು ಸಂರಕ್ಷಿಸುವವರು ಬೇಕಾಗಿದ್ದಾರೆ. ಗಿಡವನ್ನು ಯಾರು ಬೇಕಾದರೂ ನೆಡಬಹುದು ಆದರೆ ಅವುಗಳನ್ನು ಪೋಷಿಸಿ ಬೆಳೆಸುವುದು ಎಲ್ಲರಿಂದ ಸಾಧ್ಯವಿಲ್ಲ. ಅದು  ಸಾಲುಮರದ ತಿಮ್ಮಕ್ಕನಂತಹ ಕೆಲವೇ ಕೆಲವರಿಂದ ಸಾಧ್ಯ. ಇನ್ನು ಮುಂದೆಯಾದರೂ ಬರೀ ಗಿಡನೆಡದೆ ಅದನ್ನು ಪೋಷಿಸಿ ಬೆಳೆಸುವ ಕಾರ್ಯ ಮಾಡೋಣ.. ಸದ್ಯದ ಪರಿಸ್ಥಿತಿಯಲ್ಲಿ ನಾವು ಮಾಡಬೇಕಾಗಿರುವುದು ಗಿಡಮರಗಳನ್ನು ಕಾಪಾಡುವ ಕೆಲಸ.. ಗಿಡ ನೆಟ್ಟು ಕೈತೊಳೆದುಕೊಳ್ಳದೆ ಪೋಷಿಸಿ ಬೆಳೆಸಿ ಪರಿಸರದ ಉಳಿವಿಗೆ ಕೈಜೋಡಿಸೋಣ...

ರಾಮನವಮಿಯ ಆಚರಣೆ ಹೇಗೆ?

 ಶ್ರೀ ಹರ್ಷವರ್ಧನ ಶೆಟ್ಟಿ 

 7204082646

ಶ್ರೀ ವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮಪ್ರಿತ್ಯರ್ಥ ವಾಗಿ ಶ್ರೀರಾಮನವಮಿಯನ್ನು ಆಚರಿಸುತ್ತಾರೆ. `ಚೈತ್ರ ಶುಕ್ಲ ನವಮಿ ಯನ್ನು ರಾಮನವಮಿ ಎನ್ನುತ್ತಾರೆ. ಈ ದಿನ ಪುಷ್ಯ ನಕ್ಷತ್ರದಲ್ಲಿ, ಮಧ್ಯಾಹ್ನ ಕಾಲದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಪಂಚಗ್ರಹಗಳಿದ್ದಾಗ, ಅಯೋಧ್ಯೆ ಯಲ್ಲಿ ಶ್ರೀರಾಮಚಂದ್ರನ ಜನನವಾಯಿತು. ಅನೇಕ ರಾಮಮಂದಿರಗಳಲ್ಲಿ ಚೈತ್ರ ಶುಕ್ಲ ಪಾಡ್ಯದಿಂದ ಒಂಬತ್ತು ದಿನಗಳ ಕಾಲ ಈ ಉತ್ಸವವು ಜರಗುತ್ತದೆ. ರಾಮಾಯಣದ ಪಾರಾಯಣ, ಹರಿಕಥೆ, ಕೀರ್ತನೆಗಳ ಆಯೋಜನೆ ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರಗಳು, ರಥದಲ್ಲಿ ಮೆರವಣಿಗೆ ಮುಂತಾದ ವಿಧಗಳಲ್ಲಿ ಈ ಉತ್ಸವವು ಆಚರಿಸಲ್ಪಡುತ್ತದೆ. ನವಮಿಯಂದು ಮಧ್ಯಾಹ್ನ ರಾಮಜನ್ಮದ ಹರಿಕಥೆ ಯಾಗುತ್ತದೆ. ಮಧ್ಯಾಹ್ನ ಕುಂಚಿಗೆ (ಕುಲಾವಿ) ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ. ಭಕ್ತರು ಅದರ ಮೇಲೆ, ಗುಲಾಲು ಮತ್ತು ಹೂಗಳನ್ನು ಅರ್ಪಿಸುತ್ತಾರೆ.'

 ರಾಮನವಮಿಯ ಮಹತ್ವ : ತ್ರೇತಾಯುಗದಲ್ಲಿ ಯಾವಾಗ ರಾಮನ ಜನ್ಮವಾಯಿತೋ ಆಗ ಕಾರ್ಯನಿರತವಾಗಿದ್ದ ಶ್ರೀ ವಿಷ್ಣುವಿನ ಸಂಕಲ್ಪ, ತ್ರೇತಾಯುಗದಲ್ಲಿನ ಅಯೋಧ್ಯಾವಾಸಿಗಳ ಭಕ್ತಿಭಾವ ಮತ್ತು ಪೃಥ್ವಿಯಲ್ಲಿನ ಸಾತ್ತ್ವಿಕ ವಾತಾವರಣಗಳಿಂದಾಗಿ ಪ್ರಭು ಶ್ರೀ ರಾಮನ ಜನ್ಮದ ಪರಿಣಾಮವು ಶೇ. 100 ರಷ್ಟು ಆಗಿತ್ತು. ಅನಂತರ ಪ್ರತಿವರ್ಷ ಬರುವಂತಹ ಚೈತ್ರ ಶುಕ್ಲ ನವಮಿಗೆ ಬ್ರಹ್ಮಾಂಡದಲ್ಲಿನ ವಾತಾವರಣದಲ್ಲಿ ರಾಮತತ್ತ್ವವು ಪ್ರಕ್ಷೇಪಿಸಿ ವಾತಾವರಣವನ್ನು ಸಾತ್ತ್ವಿಕ ಮತ್ತು ಚೈತನ್ಯಮಯವನ್ನಾಗಿಸಲು ವಿಷ್ಣುಲೋಕದಿಂದ ಶ್ರೀರಾಮ ತತ್ತ್ವಯುಕ್ತ ವಿಷ್ಣುತತ್ತ್ವವು ಭೂಲೋಕದ ದಿಕ್ಕಿನತ್ತ ಪ್ರಕ್ಷೇಪಿತವಾಗುತ್ತದೆ ಮತ್ತು ಆ ದಿನ ಶ್ರೀರಾಮನ ಅಂಶಾತ್ಮಕ ಜನ್ಮವಾಗುತ್ತದೆ. ಇದರ ಪರಿಣಾಮವು ಇಡೀ ವರ್ಷವಿದ್ದು ಬ್ರಹ್ಮಾಂಡ ದಲ್ಲಿ ರಾಮತತ್ತ್ವಯುಕ್ತ ಸಾತ್ತ್ವಿಕತೆ ಮತ್ತು ಚೈತನ್ಯದ ಪ್ರಕ್ಷೇಪಣೆಯಾಗುತ್ತದೆ. ರಾಮತತ್ತ್ವಯುಕ್ತ ಸಾತ್ತ್ವಿಕತೆ ಮತ್ತು ಚೈತನ್ಯವನ್ನು ಬ್ರಹ್ಮಾಂಡದಲ್ಲಿನ ಪ್ರತಿಯೊಂದು ಸಜೀವ ಮತ್ತು ನಿರ್ಜೀವ ವಸ್ತುಗಳು ಗ್ರಹಿಸಿಕೊಳ್ಳುತ್ತವೆ ಮತ್ತು ಅದರಿಂದ ಅವುಗಳಿಗೆ ತಮ್ಮ ಕಾರ್ಯವನ್ನು ಒಳ್ಳೆಯ ರೀತಿಯಿಂದ ಮಾಡಲು ಸಾಧ್ಯವಾಗುತ್ತದೆ.

ರಾಮಭಕ್ತರ ಮಹತ್ವ: ಶ್ರೀರಾಮನಂತೂ ಶ್ರೇಷ್ಠ ಮತ್ತು ಪೂಜನೀಯನಾಗಿದ್ದನು, ಅಲ್ಲದೆ ಅವನ ಭಕ್ತರೂ ಅಷ್ಟೇ ವಂದನೀಯರಾಗಿದ್ದರು. ಕಲಿಯುಗದಲ್ಲಿ ಶ್ರೀರಾಮನು ಪುನಃ ಅವತಾರ ತಾಳಬಹುದು. ಆದರೆ ಶ್ರೀರಾಮನ ಸೀಮಾತೀತ ಭಕ್ತಿಯನ್ನು ಮಾಡುವಂತಹ ಉಚ್ಚಮಟ್ಟದ ಭಕ್ತರು ಸಿಗುವುದು ಕಠಿಣವಾಗಿದೆ. ಸಾಧಕರು ಶ್ರೀರಾಮನ ಭಕ್ತರ ಗುಣಗಳನ್ನು ಅಂಗೀಕರಿಸಿ ಅದಕ್ಕನುಸಾರ ಸಾಧನೆ ಮಾಡಿದರೆ ಅವರ ಮೇಲೆ ಗುರು ರೂಪೀ ಶ್ರೀರಾಮನ ಕೃಪೆಯಾಗಿ ಅವರಿಗೆ ಅಂತರ್ಬಾಹ್ಯ ಕ್ಷಾತ್ರಧರ್ಮ ಹೋರಾಟವನ್ನು ಯಶಸ್ವಿಯಾಗಿ ನಡೆಸಲು ಆಗುವುದು ಮತ್ತು ಅವರಲ್ಲಿ ಅಂತರ್ಬಾಹ್ಯ ರಾಮರಾಜ್ಯದ ಸ್ಥಾಪನೆಯೂ ಖಂಡಿತವಾಗಿ ಆಗುವುದು.

ರಾಮರಾಜ್ಯ ಎಂದರೇನು?:ರಾಮನೊಬ್ಬನೇ ಬುದ್ಧಿವಂತನಾಗಿದ್ದನೆಂದಲ್ಲ. ತ್ರೇತಾಯುಗದಲ್ಲಿ ಎಲ್ಲ ಜನರೂ ಬುದ್ಧಿವಂತರಾಗಿದ್ದರು. ಆದ್ದರಿಂದ ರಾಮರಾಜ್ಯದಲ್ಲಿ ಒಂದೇ ಒಂದು ತಕರಾರು ರಾಮನ ದರಬಾರಿಗೆ ಬರುತ್ತಿರಲಿಲ್ಲ. ಪಂಚಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಳು, ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂಕಾರ ಇವುಗಳ ಮೇಲೆ ಹೃದಯದೊಳಗಿನ ರಾಮನ (ಆತ್ಮಾರಾಮನ) ರಾಜ್ಯವಿರುವುದೇ ನಿಜವಾದ ರಾಮರಾಜ್ಯ.

(ಆಧಾರ : ಸನಾತನ ನಿರ್ಮಿತ ಕಿರು ಗ್ರಂಥ `ರಾಮ')

 

 

ಎಂದೂ ಮರೆಯದ ಮಹಾಚೇತನ ಡಾ.ಬಿ.ಆರ್.ಅಂಬೇಡ್ಕರ್

ವತ್ತು ಆ ಹುಡುಗ ಅಸ್ಪೃಶ್ಯತೆಯನ್ನು, ಬಡತನವನ್ನು ಮೆಟ್ಟಿ ನಿಂತು, ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತ ಮರೆಯಲಾರದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲವೇನೋ? ಇವತ್ತು ಡಾ. ಬಿ.ಆರ್. ಅಂಬೇಡ್ಕರ್ ಎಂಬ ಹೆಸರು ಹೇಳುತ್ತಿದ್ದಂತೆಯೇ ಮೈರೋಮಾಂಚನಗೊಳ್ಳುತ್ತದೆ.
ಅಂಬೇಡ್ಕರ್‍ರವರು ಬಾಲ್ಯದಲ್ಲಿ ಅನುಭವಿಸಿದ ಆ ನೋವು ಒಂದೇ ಎರಡೇ ಅದನ್ನು ಹೇಳುತ್ತಾ ಹೋದರೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ. ಇಷ್ಟೊಂದು ನೋವನ್ನು ಅವರು ಅನುಭವಿಸಿದ್ದರಾ? ಎಂಬ ಸಂಕಟ ಎದೆಯಲ್ಲಿ ಢವಗುಟ್ಟುತ್ತದೆ.
ಆಗಿನ್ನೂ ಅಂಬೇಡ್ಕರ್‍ರವರಿಗೆ  ಏಳೆಂಟು ವರ್ಷದ ಪ್ರಾಯ. ಒಂದು ದಿನ ಆ ಪುಟ್ಟ ಹುಡುಗ ತನ್ನ ತಂದೆಯನ್ನು ನೋಡಲು ಎತ್ತಿನ ಗಾಡಿಯಲ್ಲಿ ಕುಳಿತು ಸಾಗುತ್ತಿದ್ದ. ಗಾಡಿ ಸ್ವಲ್ಪ ದೂರ ಹೋಗಿರಬೇಕಷ್ಟೆ. ಗಾಡಿಯವನಿಗೆ ಆ ಹುಡುಗ ದಲಿತ ಎಂಬುದು ತಿಳಿದು ಹೋಯಿತು ಕೂಡಲೇ ಗಾಡಿಯನ್ನು ನಿಲ್ಲಿಸಿ ಆ ಪುಟ್ಟ ಹುಡುಗನನ್ನು ಕೆಳಕ್ಕೆ ತಳ್ಳಿ ಹಾಕಿ ಮುನ್ನಡೆದ ಆ ಪುಟ್ಟ ಹುಡುಗನ ಮನಸ್ಸು ಹೇಗಾಗಿರಬಹುದು? ಇನ್ನೊಮ್ಮೆ ಕೆರೆಯಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಥಳಿಸಿದರು. ಆಕಸ್ಮಿಕವಾಗಿ ಮಳೆ ಬಂದಿದ್ದರಿಂದ  ರಸ್ತೆ ಬದಿಯಲ್ಲಿದ್ದ ಮನೆಯೊಂದರ ಜಗಲಿಯ ಮೇಲೆ ನಿಂತಿದ್ದಕ್ಕೆ ಮನೆಯ ಯಜಮಾನಿ ಕೋಪದಿಂದ ಜಗಲಿಯಿಂದ ತಳ್ಳಿ ಹಾಕಿದ್ದಳು. 
ಕ್ಷೌರಿಕ ಕೂದಲನ್ನು ಮುಟ್ಟದೆ ಹಿಂದಕ್ಕೆ ಕಳುಹಿಸಿದ್ದನು. ಹೀಗೆ ಒಂದೇ ಎರಡೇ? ನೂರಾರು ಅವಮಾನ, ಹಿಂಸೆ ಆ ಹುಡುಗನನ್ನು ಇನ್ನಿಲ್ಲದಂತೆ ಕಾಡಿತ್ತು. ನಾವು ಮನುಷ್ಯರೆ, ಹಿಂದುಳಿದ ಜನಾಂಗದಲ್ಲಿ ಹುಟ್ಟಿದ್ದೇ ತಪ್ಪಾಯಿತಾ? ಎಂಬ ಭಾವನೆ ಅವತ್ತು ಆ ಹುಡುಗನನ್ನು  ಕಾಡಿತ್ತು. ಅದಕ್ಕೆಲ್ಲಾ ಹೆದರಿ ಆ ಹುಡುಗ ಮುದುರಿ ಕೂತಿದ್ದರೆ ಇವತ್ತು ಜಗತ್ತೇ ಹೆಮ್ಮೆಯಿಂದ ಕೊಂಡಾಡುವ ಚೇತನವೊಂದು ನಮ್ಮ ಮುಂದೆ ಇರುತ್ತಿರಲಿಲ್ಲ. ಆದರೆ ಎಲ್ಲವನ್ನೂ ಗೆದ್ದು ನಿಂತಿದ್ದರಿಂದಲೇ ಇವತ್ತು ದೇಶ ಮರೆಯಲಾರದ ಚೇತನವಾಗಿ, ಸಂವಿಧಾನ ಶಿಲ್ಪಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ನಿಂತಿದ್ದಾರೆ. 
ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ್ದು 1891ರ ಏಪ್ರಿಲ್ 14ರಂದು ಮಹರ್ ಎಂಬ ದಲಿತ ಜನಾಂಗದಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆ ಗ್ರಾಮದಲ್ಲಿ ಸುಭೇದಾರ್ ರಾಮ್‍ಜೀ ಸಕ್ಬಾಲ್, ತಾಯಿ ಶ್ರೀಮತಿ ಭೀಮಾಬಾಯಿರವರ ಪುತ್ರರಾಗಿ ಜನಿಸಿದರು.  
ಅವತ್ತಿನ ದಿನದಲ್ಲಿ ಕೆಳಜಾತಿಯ ಹುಡುಗನೊಬ್ಬ ಶಾಲೆಗೆ ಹೋಗಿ ಅಕ್ಷರ ಕಲಿಯುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ ಅಂಬೇಡ್ಕರರಿಗೆ ಚಿಕ್ಕಂದಿನಿಂದಲೇ ಓದಬೇಕು ಏನನ್ನಾದರೂ ಸಾಧಿಸಬೇಕು ಎಂಬ ಛಲ ಇತ್ತು ಇದಕ್ಕೆ ಹೆತ್ತವರು ನೀರೆರೆದು ಪೋಷಿಸಿದರು. ಇದರ ಜೊತೆಗೆ ಸಂಸ್ಕೃತ ಕಲಿಯಬೇಕೆಂಬ ಮಹದಾಸೆಯಿತ್ತು.  ಆದರೆ ಇದಕ್ಕೆ ಕೀಳ್ಜಾತಿಯವರು ಇದನ್ನು ಓದಬಾರದೆಂದು ಮೇಲ್ಜಾತಿಯವರು ಅಡ್ಡಿಪಡಿಸಿದರು. ಆದರೆ ಇವರು ಬಗ್ಗಲಿಲ್ಲ ಬದಲಿಗೆ ಹಠತೊಟ್ಟವರಂತೆ ಸಂಸ್ಕೃತ ಕಲಿತು ಅದರಲ್ಲಿ ಸಂಪೂರ್ಣ ಪಾಂಡಿತ್ಯಗಳಿಸಿ ತಾವೇ ಹಲವಾರು ವಿಚಾರ ಕ್ರಾಂತಿ ಕೃತಿಗಳನ್ನು ರಚಿಸುವುದರ ಮೂಲಕ ‘ಆಧುನಿಕ ಮನು’ ಎಂಬ ಕೀರ್ತಿಗೆ ಪಾತ್ರರಾದರು. ಇದನ್ನು ಮಾತ್ರ ಯಾರಿಂದಲೂ ತಡೆಯಲು ಸಾಧ್ಯವಾಗಲೇ ಇಲ್ಲ. ಏಕೆಂದರೆ ಹಠವಾದಿ ಅಂಬೇಡ್ಕರರ ಭೀಮಶಕ್ತಿ ಅಂಥಾದ್ದು!.
1907ರಲ್ಲಿ ಮೆಟ್ರಿಕ್ಯೂಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಂಬೇಡ್ಕರರಿಗೆ ಆ ವರ್ಷವೇ ರಮಾಬಾಯಿಯೊಂದಿಗೆ ವಿವಾಹವಾಯಿತು. ಆ ನಂತರ ಅವರು ಮುಂಬೈನ ಎಲ್ಫಿನ್‍ಸ್ಟನ್ ಕಾಲೇಜಿನಲ್ಲಿ ಇಂಟರ್‍ಮೀಡಿಯಟ್ ಮುಗಿಸಿ 1921 ರಲ್ಲಿ ಬಿ.ಎ. ಪದವೀಧರರಾದರು.  ನಂತರ ಬರೋಡ ಮಹಾರಾಜರ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಆದರೆ ಆಗ ಬರೋಡ ಮಹಾರಾಜರೇ ಇವರ ಬುದ್ಧಿಶಕ್ತಿಗೆ ಮಾರುಹೋಗಿ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದ ನಂತರ ತಮ್ಮಲ್ಲೇ ಹತ್ತು ವರ್ಷಗಳ ಕಾಲ ಕೆಲಸ ಮಾಡಬೇಕೆಂಬ ಕರಾರಿನೊಂದಿಗೆ ಉನ್ನತ ವ್ಯಾಸಂಗಕ್ಕೆ ಇವರನ್ನು ಅಮೇರಿಕಾಕ್ಕೆ ಕಳುಹಿಸಿದರು. ಅಲ್ಲಿ ಎಂ.ಎ. ಪದವಿಯೊಡನೆ ಪಿಹೆಚ್‍ಡಿಯನ್ನು ಗಳಿಸಿ  1917ರ ಆಗಸ್ಟ್  21ರಂದು ಮತ್ತೆ ಭಾರತಕ್ಕೆ ಮರಳಿದರು. ಇಷ್ಟಾದರೂ ಅವರ ಜ್ಞಾನದಾಹ ಇಂಗಿರಲಿಲ್ಲ. ಹಾಗಾಗಿ ಪುನಃ 1920ರಲ್ಲಿ ಮತ್ತಷ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನಿಗೆ ಹೋದ ಇವರು 1922ರಲ್ಲಿ “ಬ್ಯಾರಿಸ್ಟರ್” ಎಂಬ ಪದವಿಯೊಡನೆ ಭಾರತಕ್ಕೆ ವಾಪಾಸ್ಸಾದರು.  
ವಿದೇಶದಲ್ಲಿ ಕಲಿತು ಒಂದು ಸಾಲದು ಅಂತ ಹಲವಾರು ಡಾಕ್ಟರೇಟ್ ಪದವಿಗಳನ್ನು ಗಳಿಸಿ ಅಂಬೇಡ್ಕರ್ ಅವರು ಸ್ವದೇಶಕ್ಕೆ ಬಂದಿದ್ದರೂ ಇಲ್ಲಿ ಮಾತ್ರ ಅದೇ ಅಸ್ಪøಶ್ಯತೆ ಅವರನ್ನು ಅಪಮಾನಿಸುತ್ತಿತ್ತು. ಆಗ ಅಂಬೇಡ್ಕರರು “ಮೂಕನಾಯಕ” ಎಂಬ ಪತ್ರಿಕೆಯನ್ನು ಆರಂಭಿಸಿ ಅದರ ಮುಖೇನ ಅಸ್ಪೃಶ್ಯತೆ ವಿರುದ್ಧ ಜನಜಾಗೃತಿಗೆ ನಿಂತರು.  “ಬಹಿಷ್ಕೃತ ಹಿತಕಾರಿಣಿ” ಎಂಬ ಸಭಾದಂತಹ ಸಂಘಟನೆಗಳನ್ನು ಕಟ್ಟಿ ಅಸ್ಪøಶ್ಯತೆಯ ವಿರುದ್ಧ ಸಮಾನತೆಗಾಗಿ ಬೀದಿಗಿಳಿದು ಹಲವು ತರನಾದ ಹೋರಾಟ ಮಾಡುತ್ತಾ ದಲಿತರ ಪಾಲಿಗೆ ಅಕ್ಷರಶಃ ತೋರುಬೆರಳಾಗಿದ್ದರು. ಇವರ “ಚೌದರ್ ಕೆರೆ ಚಳವಳಿ”ಯಂತೂ ಭಾರತದ ಇತಿಹಾಸದಲ್ಲಿ ದಾಖಲಿಸುವಂತಾದ್ದು.
ಹೀಗೆ ದಲಿತರ ಪರ ಇವರ ಕ್ರಾಂತಿ ಕಹಳೆ ನಿಧಾನವಾಗಿ ದೇಶದೆಲ್ಲೆಡೆ ಮೊಳಗತೊಡಗಿತ್ತು. ಅದೇ ಕಾಲಕ್ಕೆ ಎರಡನೇ ಮಹಾಯುದ್ದದ ಕಾಲದಲ್ಲಿ ಬ್ರಿಟಿಷರು ಕೆಲವು ಭಾರತೀಯರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಾಗ ಅದರಲ್ಲಿ ಪ್ರಥಮ ಪ್ರಾಶಸ್ತವ್ಯವೇ ಅಂಬೇಡ್ಕರವರಿಗೆ ದೊರಕಿತ್ತು. ಹಾಗೆಯೇ ಭಾರತ ಸ್ವಾತಂತ್ರ್ಯಗಳಿಸಿದ ನಂತರ ನೆಹರು ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿದ್ದ ಹೆಗ್ಗಳಿಕೆ ಹೊಂದಿದ್ದ ಅಂಬೇಡ್ಕರರು ಭಾರತ ದೇಶಕ್ಕೆ  ಸಶಕ್ತ ‘ಸಂವಿಧಾನ’ ನೀಡಿದ ಶಿಲ್ಪಿಯಾಗಿದ್ದು ಇದು ಇಡೀ ವಿಶ್ವಕ್ಕೆ ಮಾದರಿ ಸಂವಿಧಾನವಾಗಿದ್ದು ಇದು ಇವರಿಗೆ ಸಂದ ಮಹಾಗೌರವವೇ ಸರಿ.
ಅಧಿಕಾರ ಇರಲಿ ಇಲ್ಲದಿರಲಿ ಅಂಬೇಡ್ಕರ್‍ರವರು  ಹೆಜ್ಜೆ ಇಟ್ಟಲೆಲ್ಲಾ ಅಸ್ಪೃಶ್ಯತಾ ನಿವಾರಣೆಗಾಗಿಯೇ ಅವರ ಹೆಜ್ಜೆಗಳು ತುಡಿಯುತ್ತಿದದವು. ಅಂತೆಯೇ ದಲಿತರ ಪುರೋಭಿವೃದ್ಧಿಗಾಗಿಯೇ ಅವರ ಜೀವ ಸದಾ ಮಿಡಿಯುತ್ತಿತ್ತು.
ಭಾರತದೇಶದಲ್ಲಿ ಅಂಬೇಡ್ಕರ್ ಎಂಬ ಕ್ರಾಂತಿ ಪುರುಷ ಜನಿಸಿದ್ದರಿಂದಲೇ ದೇಶದ ಅರ್ಧ ಭಾಗದಂತಿರುವ ಉತ್ತರ ಪ್ರದೇಶ ಕಾನ್ಷಿರಾಂರಂಥ ದಲಿತ ನಾಯಕನ ಹಿಡಿತಕ್ಕೆ ಸಿಕ್ಕಿದ್ದು. ಮಾಯಾವತಿಯಂತಹ ದಲಿತ ಮಹಿಳೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಸಾಧ್ಯವಾದದ್ದು.
ಅಂಬೇಡ್ಕರರ ಇಡೀ ಜೀವನ ಅಸ್ಪೃಶ್ಯತರೆನಿಸಿಕೊಂಡವರಿಗೆ ನ್ಯಾಯವನ್ನೂ ಸಮಾನತೆಯನ್ನೂ  ದೊರಕಿಸಿಕೊಡುವುದಕ್ಕೆ ಮುಡಿಪಾಗಿತ್ತು. ಇದರಲ್ಲಿ ಅವರು ಸಾಕಷ್ಟು ಯಶಸ್ಸನ್ನೂ ಸಾಧಿಸಿದ್ದರು. ಆದರೂ ಹಿಂದೂ ಧರ್ಮದ ಅಸಮಾನತೆಯಿಂದ ರೋಷಿಹೋಗಿದ್ದ ಅವರು ಬುದ್ದನ ಕಾರುಣ್ಯದಲ್ಲಿ ಆಕರ್ಷಿತರಾಗಿ 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ನಡೆದ ಬೃಹತ್ ಸಮಾರಂಭವೊಂದರಲ್ಲಿ ತಮ್ಮ ಪತ್ನಿ ಡಾ. ಶಾರದಾ ಸೇರಿದಂತೆ ತಮ್ಮ ಅಪಾರ ಅಭಿಮಾನಿಗಳೊಡನೆ ಬೌದ್ಧಧರ್ಮಕ್ಕೆ ಸೇರಿದರು.
1956ರ ಡಿಸೆಂಬರ್ 6ರಂದು ಇಡೀ ದೇಶವನ್ನು ಅನಾಥವಾಗಿಸಿ ಕಾಣದ ಊರಿನತ್ತ ಪಯಣಿಸಿದ ಅಂಬೇಡ್ಕರರಿಗೆ ಮರಣೋತ್ತರವಾಗಿ ಭಾರತ ಸರ್ಕಾರವು 1991ರಲ್ಲಿ “ಭಾರತ ರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ. ಅಂಬೇಡ್ಕರ್ ಇವತ್ತು ನಮ್ಮ ಮುಂದೆ ಇಲ್ಲದಿರಬಹುದು ಆದರೆ ಅವರು ತಾವು ಮಾಡಿದ ಮಹತ್ ಸಾಧನೆಯಿಂದ ನೆನಪಾಗುತ್ತಲೇ ಇರುತ್ತಾರೆ.

ಹೊಸತನ ತರುವ ಯುಗಾದಿ

ಬನ್ನೂರು ರಾಜು

ಹಣ್ಣೆಲೆ ಉದುರಿ ಚಿಗುರೆಲೆ ನಳನಳಿಸುವ ಸಂಭ್ರಮ.  ಭೂ ಮಾತೆ ಹಸಿರು ಮುಕ್ಕಳಿಸುವ ಮಧುರ ಕ್ಷಣ.  ಮಧು ಚೆಲ್ಲುವ ಹೂಗಳ ಮೇಲೆ ಝೇಂಕರಿಸುವ ಜೇನ್ದುಂಬಿಗಳ ಸಡಗರ.  ನೆತ್ತಿಯ ಮೇಲೆ ಸುಡುವ ಸೂರ್ಯನಿದ್ದರೂ ತಂಪೆರೆವ ತಂಗಾಳಿಯ ನವೋಲ್ಲಾಸ.  ಮುಂಬರುವ ಎಲ್ಲ ಹಬ್ಬಗಳಿಗೂ ಮುನ್ನುಡಿ ಬರೆವ ಕಾಲ.  ಕಷ್ಟ-ಸುಖಗಳೆರಡನ್ನೂ ಸಮನಾಗಿ ಸ್ವೀಕರಿಸುವುದರ ಸಂಕೇತವಾಗಿ ಬೇವು-ಬೆಲ್ಲವನ್ನು ಮೆಲ್ಲುವ ದಿನ.  ವರುಷಕ್ಕೊಂದು ಹೊಸ ಜನ್ಮ ಪಡೆವ ಪ್ರಕೃತಿ ದೇವಿಗೆ ನಮಿಸುವ ದಿನ.  ಇದೆಲ್ಲಕ್ಕೂ ಒಂದೇ ಹೆಸರು ಅದೇ ಯುಗಾದಿ ಅರ್ಥಾತ್ ಉಗಾದಿ.  ನಮ್ಮ ಎಲ್ಲ ಧಾರ್ಮಿಕ ಆಚರಣೆ ಹಬ್ಬ-ಹರಿದಿನಗಳಿಗೆ ಪ್ರೇರಣೆಯನ್ನು ನಿಸರ್ಗದಲ್ಲಿ ಕಾಣಬಹುದು.  ಹಾಗೆಯೇ ಯುಗಾದಿ ಹಬ್ಬದ ಪ್ರೇರಣೆಗೆ ಮೂಲ ನಿಸರ್ಗವೇ ಆಗಿದೆ.

ವರ್ಷದ ಮೊದಲ ದಿನವನ್ನು ಹೊಸ ವರ್ಷದ ಹಬ್ಬವಾಗಿ ಆಚರಿಸಿ ಸಂಭ್ರಮಪಡುವ ಸಂಪ್ರದಾಯ ಜಗತ್ತಿನೆಲ್ಲೆಡೆ ಬಹು ಹಿಂದಿನಿಂದಲೂ ಉಂಟು.  ಜನವರಿ ತಿಂಗಳ ಮೊದಲ ದಿನವನ್ನು ವರ್ಷಾರಂಭವೆಂದು ರೋಮನ್ನರು, ಆಂಗ್ಲರು ಸೇರಿದಂತೆ ಪಾಶ್ಚಿಮಾತ್ಯರೆಲ್ಲರೂ ಆಚರಿಸುತ್ತಾರೆ.  ಯುಗಾದಿ ಎನ್ನುವುದು ಯುಗದ ಆದಿ.  ಯುಗವೆಂದರೆ ಸೃಷ್ಟಿಯ ಕಾಲಮಾನ ಅರ್ಥಾತ್ ಹೊಸ ವರ್ಷ.  ಆದಿ ಎಂದರೆ ಆರಂಭ ಅಥವಾ ವರ್ಷದ ಪ್ರಾರಂಭದ ದಿನ.  ಅಂದರೆ ಹೊಸ ವರ್ಷದ ಪ್ರಾರಂಭದ ದಿನವೇ ಯುಗಾದಿ.  ಹಲವು ಪರಂಪರೆಗಳ ಆಗಮದ ಕಾಲವಾಗಿ ಯುಗಾದಿ ಭಾರತೀಯರಲ್ಲಿ 

ರೂಢಿಗೆ ಬಂದಿದೆ.  ಉತ್ತರ ಭಾರತದಲ್ಲಿ ವಿಕ್ರಮ ಶಕೆಯ ಆರಂಭದ ದಿನ ಕಾರ್ತಿಕ ಶುದ್ಧ ಪಾಡ್ಯವನ್ನು ಯುಗಾದಿ ಹಬ್ಬವಾಗಿ ಆಚರಿಸುತ್ತಾರೆ.  ಜ್ಯೋತಿಷ್ಯ ಶಾಸ್ತ್ರದಲ್ಲಿ ಮೂರು ರೀತಿಯ ಲೆಕ್ಕಾಚಾರಗಳುಂಟು.  ಅವುಗಳೆಂದರೆ ೧.  ಬಾರ್ಹಸ್ಪತ್ಯಮಾನ,  ೨.  ಚಾಂದ್ರಮಾನ,   ೩.  ಸೌರಮಾನ.  ಉತ್ತರ ಭಾರತದವರು ಬಾರ್ಹಸ್ಪತ್ಯಮಾನದಲ್ಲಿ ಯುಗಾದಿಯನ್ನು ಆಚರಿಸುತ್ತಾರೆ.  ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಯುಗಾದಿ ಅತ್ಯಂತ ವಿಜೃಂಭಣೆ ಹಬ್ಬವಾಗಿದೆ.  ನಮ್ಮಲ್ಲಿ ಯುಗಾದಿ ಹಬ್ಬವನ್ನು ಎರಡೂ ರೀತಿಯಲ್ಲಿ ಆಚರಿಸುವ ಪದ್ಧತಿಯಿದೆ.  ಒಂದು ಚಾಂದ್ರಮಾನ ಯುಗಾದಿ ಮತ್ತೊಂದು ಸೌರಮಾನ ಯುಗಾದಿ.  ಹೆಸರುಗಳೇ ಹೇಳುವಂತೆ ಮೊದಲನೆಯದು ಚಂದ್ರನನ್ನೂ ಎರಡನೆಯದು ಸೂರ್ಯನನ್ನೂ ಅವಲಂಬಿಸಿವೆ.  ಚಂದ್ರನ ಚಲನೆಯನ್ನು ಅನುಸರಿಸಿ ಅಮಾವಾಸ್ಯೆ-ಹುಣ್ಣಿಮೆಗಳ ಆಧಾರದ ಮೇಲೆ ಮಾಸ ಗಣನೆ ಮಾಡುವ ಪದ್ಧತಿಗೆ ಚಾಂದ್ರಮಾನ ಎಂದು ಹೆಸರು.  ತಿಂಗಳು ಹೆಸರು ಬಂದಿರುವುದೂ ಚಂದ್ರನಿಂದಲೇ.  ಚಂದ್ರನ ಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಚಾಂದ್ರಮಾನ ಯುಗಾದಿ ನಿರ್ಧಿಷ್ಟ ಸಮಯದಲ್ಲಿ ಬರುವುದಿಲ್ಲ.  ಮೇಷ ರಾಶಿಗೆ ಸೂರ್ಯ ಪ್ರವೇಶಿಸುವ ದಿನ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ.  ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದರಿಂದ ಸಾಮಾನ್ಯವಾಗಿ ನಿಗದಿತ ಸಮಯದಲ್ಲಿ ಅಂದರೆ ಪ್ರತಿ ವರ್ಷ ಏಪ್ರಿಲ್ ೧೪ ರಂದು ಸೌರಮಾನ ಯುಗಾದಿ ಬರುತ್ತದೆ.

 ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಚಾಂದ್ರಮಾನ ಯುಗಾದಿ ಆಚರಿಸುವ ಪದ್ಧತಿ ಇದೆ.  ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸೌರಮಾನ ಯುಗಾದಿ ರೂಢಿಯಲ್ಲಿದೆ.  ಸಾಮಾನ್ಯವಾಗಿ ಕರ್ನಾಟಕದಲ್ಲಿ ಪ್ರತಿವರ್ಷದ ಚೈತ್ರಮಾಸದಲ್ಲಿ ಬರುವ ಮೊದಲ ದಿನವನ್ನು ಸಂವತ್ಸರಾದಿ ಪಾಢ್ಯಮಿ ಎಂದು ಪರಿಗಣಿಸಿ ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಚೈತ್ರಮಾಸ ಶುದ್ಧಪಾಡ್ಯಮಿಯಂದು ಆಚರಿಸಲಾಗುತ್ತದೆ.  ಈ ಹಬ್ಬವನ್ನು ಆಂಧ್ರದವರು ಉಗಾದಿ ಎನ್ನುತ್ತಾರೆ.  ಮಹಾರಾಷ್ಟ್ರೀಯರು ಕೂಡ ಯುಗಾದಿ ಎಂದೇ ಹೇಳುತ್ತಾರೆ.

ಸೌರಮಾನ ಯುಗಾದಿ ಆಚರಿಸುವ ಕೇರಳದವರು ಯುಗಾದಿಯನ್ನು 'ವರ್ಷ ಪುರಪ್ಪು' ಎಂದು ಆಚರಿಸಿದರೆ, ಕೆಲವರು ಶ್ರೀ ಕೃಷ್ಣನ ಪೂಜೆ ಮಾಡುತ್ತಾ 'ವೊಲ್ಲವರ್ಷ' ಎಂದೂ ಆಚರಿಸುತ್ತಾರೆ.

ಯುಗಾದಿಗೆ ಗುಡಿಪಾಡ್ಯ, ಪಾಡ್ಯದ ಗುಡಿ ಎಂಬ ಹೆಸರುಗಳೂ ಉಂಟು.  ಗುಡಿ ಎಂದರೆ ಬಾವುಟ ಎಂದರ್ಥ.  ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಹಾಗೂ ನಮ್ಮಲ್ಲೂ ಹಲವು ಕಡೆ ಮನೆ ಮನೆಯ ಮುಂದೆ 'ಪಾಡ್ಯದ ಗುಡಿ' ಕಟ್ಟುತ್ತಾರೆ.  ಪಾಡ್ಯದ ಗುಡಿ ಎಂದರೆ ಉದ್ದವಾದ ಕೋಲೊಂದರ ತುದಿಗೆ ಹೊಸಬಟ್ಟೆಯನ್ನು ಕಟ್ಟಿ ಅದರ ಮೇಲೆ ಹಿತ್ತಾಳೆ ಪಾತ್ರೆಯೊಂದನ್ನು ಬೋರಲು ಹಾಕಿರುತ್ತಾರೆ.  ಯುಗಾದಿ ದಿನ ಅದಕ್ಕೆ ಪೂಜೆ ಮಾಡಿ ಪ್ರತಿಯೊಂದು ಮನೆ ಮುಂದೆ ಅದನ್ನು ಮೇಲಕ್ಕೆ ಏರಿಸುತ್ತಾರೆ.  ಇದನ್ನು 'ಧ್ವಜ' ಎಂದೂ ಕರೆಯುತ್ತಾರೆ.  ಇದೇ ಯುಗಾದಿಯ ಧ್ವಜಾರೋಹಣ.  ಮಹಾಭಾರತದಲ್ಲೂ ಇದರ ಬಗ್ಗೆ ಉಲ್ಲೇಖವಿದೆ.

ವರ್ಷದಲ್ಲಿ ಬರುವ ಮೂರೂವರೆ ದಿನಗಳ ಶುಭ ಮುಹೂರ್ತ ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶ್ರೇಷ್ಠಾವಾದದು.  ಅವುಗಳೆಂದರೆ ಯುಗಾದಿ, ಅಕ್ಷಯ ತದಿಗೆ, ವಿಜಯ ದಶಮಿ ಮತ್ತು ಬಲಿಪಾಡ್ಯಮಿಯ ಅರ್ಧ ದಿವಸ.  ಈ ಮೂರೂವರೆ ಶುಭಘಳಿಗೆಯಲ್ಲಿ ನಮಗೆ ಯುಗಾದಿಯೇ ವರ್ಷದ ಪ್ರಾರಂಭದ ಶುಭ ದಿನವಾಗಿದೆ. ಈ ದಿವಸ ಏನೇ ಕೆಲಸ ಕಾರ್ಯಗಳನ್ನು ಕೈಗೊಂಡರೂ, ಯಾವುದೇ ಉದ್ದಿಮೆಗಳಲ್ಲಿ ಯೋಜನೆಗಳನ್ನು ಆರಂಭಿಸಿದರೂ ಯಶಸ್ಸು ಕಟ್ಟಿಟ್ಟಬುತ್ತಿ ಎಂಬ ನಂಬಿಕೆ ಇದೆ.  ಯುಗ ಯುಗಗಳಿಂದಲೂ ಅತ್ಯಂತ ಮಹತ್ವದ ಕಾರ್ಯಗಳು ಈ ಶುಭ ದಿವಸವೇ ನಡೆದಿವೆ ಎಂದು ಶಾಸ್ತ್ರ ಪುರಾಣಗಳೂ ಹೇಳುತ್ತವೆ.  ಹಾಗಾಗಿ ಈಗಲೂ ಸಹ ಯುಗಾದಿಯಂದು ಹೊಸ ಕಾರ್ಯ ಚಟುವಟಿಕೆಗಳಿಗೆ, ಹೊಸ ಪದಾರ್ಥಗಳ ಖರೀದಿಗೆ, ಅವರವರ ಶಕ್ತ್ಯಾನುಸಾರ ಸಣ್ಣ ವ್ಯವಹಾರದಿಂದ ಹಿಡಿದು ದೊಡ್ಡ ದೊಡ್ಡ ವ್ಯವಹಾರಗಳಿಗೆ ನಮ್ಮಲ್ಲಿ ನಾಂದಿ ಹಾಕಲಾಗುತ್ತದೆ. ಅಷ್ಟರಮಟ್ಟಿಗೆ ಯುಗಾದಿ ಜನರಲ್ಲಿ ನವ ಚೈತನ್ಯವನ್ನು ತುಂಬುತ್ತದೆ.

ಹೌದು.  ಬ್ರಹ್ಮ ದೇವನು ಈ ಜಗತ್ತನ್ನು ಚೈತ್ರಮಾಸದ ಶುಕ್ಲಪಕ್ಷದ ಮೊದಲನೆಯ ದಿನದ ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದ.  ಬ್ರಹ್ಮದೇವ ಸೃಷ್ಟಿಯನ್ನು ಆರಂಭಿಸಿದ ದಿನವೇ ಯುಗಾದಿಯಾಗಿದೆ.  ಅಂದೇ ಅವನು ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ ಕಾಲಗಣನೆ ಆರಂಭಿಸಿದನೆಂದು ಹೇಮಾದ್ರಿ ಪಂಡಿತನ 'ಚತುರ್ವರ್ಗ ಚಿಂತಾಮಣಿ' ಎಂಬ ಪುರಾಣ ಗ್ರಂಥದಲ್ಲಿ ಹೇಳಲಾಗಿದೆ.  ಶ್ರೀರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ್ದು ಈ ಯುಗಾದಿಯಂದೆ.  ಶಾಲಿವಾಹನ ಶಕೆ ಆರಂಭವಾದದ್ದು ಸಹ ಈ ಯುಗಾದಿ ದಿವಸವೆ.  ಶಾಲಿವಾಹನ ಆ ದಿನ ಪಟ್ಟಾಭಿಶಕ್ತನಾದನೆಂದೂ, ಆದ್ದರಿಂದಾಗಿ ಈ ಚರಿತ್ರೆ ಕಾಲ 'ಶಾಲಿವಾಹನ' ಶಕ ಆಯಿತೆಂದೂ ಹೇಳಲಾಗುತ್ತದೆ.  ಕ್ರಿಸ್ತ ವರ್ಷ ಆರಂಭವಾದ ಎಪ್ಪತ್ತೆಂಟು ವರ್ಷಗಳ ನಂತರ ಶಾಲಿವಾಹನ ಶಕೆ ಆರಂಭವಾಗುತ್ತದೆ.  ದಕ್ಷಿಣ ಭಾರತದಲ್ಲಿ ಈ ಶಕೆ ಬಳಕೆಯಲ್ಲಿದೆ.  ಭಾರತೀಯ ಪಂಚಾಂಗಗಳು ಈ ಶಕೆಯನ್ನು ಪ್ರಸ್ತಾಪಿಸುತ್ತವೆ.  ಯುಗಾದಿ ಹಬ್ಬವು ಜೈನರಿಗೂ ಮಹತ್ವದ ಪವಿತ್ರದಿನವಾಗಿದೆ.  ಏಕೆಂದರೆ ಮಲ್ಲಿನಾಥನೆಂಭ ೧೪ನೇ ತೀರ್ಥಂಕರ ಹುಟ್ಟದ್ದು ಯುಗಾದಿಯಂದೇ.  ಹಾಗೆಯೇ ಆದಿ ತೀರ್ಥಂಕರನ ಮಗ ಭರತ ಚಕ್ರವರ್ತಿಯೂ ದಿಗ್ವಿಜಯ ಸಾಧಿಸಿದ ದಿನವಿದು.

ವೇದಗಳ ಕಾಲದಿಂದಲೂ ಯುಗಾದಿಯ ಹಿರಿಮೆ-ಗರಿಮೆಗಳು ಅನುರಣಿಸಿಕೊಂಡು ಬಂದಿವೆ.  ಅಥರ್ವಣ ವೇದ, ಶತಪಥ ಬ್ರಾಹ್ಮಣ, ಧರ್ಮಸಿಂಧು, ನಿರ್ಣಯ ಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲೂ ಯುಗಾದಿಯನ್ನು ಅಭೂತಪೂರ್ವವಾಗಿ ವರ್ಣಿಸಲಾಗಿದೆ ಬ್ರಹ್ಮಾಂಡ ಮತ್ತು ಮಹಾಭಾರತಗಳಲ್ಲೂ ಯುಗಾದಿ ಪ್ರಸ್ತಾಪಗೊಂಡಿದೆ.

ಯುಗಾದಿಯಂದು ಸೂರ್ಯೋದಯಕ್ಕೂ ಮುನ್ನ ಮುಂಜಾನೆ ಎದ್ದು ಮಂಗಳ ಸ್ನಾನ ಮಾಡಿ ಶ್ರೀರಾಮನನ್ನು ಸ್ಮರಣೆ ಮಾಡಿ ಹೊಸಬಟ್ಟೆ ತೊಟ್ಟು ಮನೆಯನ್ನೆಲ್ಲ ಮಾವು-ಬೇವು ಎಲೆಗಳ ತೋರಣದಿಂದ ಸಿಂಗರಿಸಿ ಹೊಸವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ. ಬಾವುಟ ಹಾರಿಸುವುದು, ಬೇವು-ಬೆಲ್ಲ ತಿನ್ನುವುದು, ಪಂಚಾಂಗ ಶ್ರವಣ, ವಸಂತ ನವರಾತ್ರಿ ಆರಂಭ ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲಪುರುಷನ ಮತ್ತು ವರ್ಷಾಧಿಪತಿಯ ಆರಾಧನೆ, ಚಂದ್ರದರ್ಶನ ಇವು ಯುಗಾದಿಯ ವೈಶಿಷ್ಟ್ಯ. ಯುಗಾದಿಯಲ್ಲಿ ಬೇವು-ಬೆಲ್ಲಕ್ಕೆ ತುಸು ಹೆಚ್ಚಿನ ಮಹತ್ವ ಉಂಟು.  ಹೋಳಿಗೆ ಸೇರಿದಂತೆ ಹಬ್ಬ ದ ಸಿಹಿ ಅಡುಗೆ ಎಷ್ಟೇ ಇದ್ದರೂ ಸಹ ಬೇವು-ಬೆಲ್ಲ ಸೇವಿಸಿದಾಗಲೇ ಯುಗಾದಿ ಸಾರ್ಥಕವಾಗುವುದೆಂಬ ಭಾವ ಎಲ್ಲರದು.  ಕಷ್ಟ-ಸುಖಗಳೆರಡರ ಸಂಕೇತವೇ ಬೇವು-ಬೆಲ್ಲ.  ಜೀವನದಲ್ಲಿ ಎರಡನ್ನೂ ಸಮನಾಗಿ ಸ್ವೀಕರಿಸಿ ಬದಿಕಿನ ಬಂಡಿ ನೂಕಬೇಕೆಂಬುದು ಯುಗಾದಿಯ ಆಶಯವಾಗಿದೆ.  ಜೀವನವೆಲ್ಲಾ ಬೇವು-ಬೆಲ್ಲ.  ಎರಡೂ ಸವಿದವನೇ ಕವಿಮಲ್ಲ ಎಂದು ಯುಗದ ಕವಿ ಕುವೆಂಪು ಅವರು ಯುಗಾದಿ ಮತ್ತು ಬೇವು-ಬೆಲ್ಲದ ಮಹತ್ವವನ್ನು ಸಾರಿದ್ದಾರೆ.

 ಸಾಮಾನ್ಯವಾಗಿ ಯುಗಾದಿಯಂದು ಜ್ಯೋತಿಷಿಗಳಿಂದ ಹೊಸ ವರ್ಷದ ಫಲಗಳನ್ನು ಕೇಳುವುದು ರೂಢಿಯಲ್ಲಿದೆ.  ವರ್ಷದ ಫಲಾಫಲಗಳನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ.  ಹಾಗಾಗಿ ಯುಗಾದಿ ಸಂದರ್ಭದಲ್ಲಿ ಜ್ಯೋತಿಷಿಗಳಿಗೆ ಬಹಳ ಬೇಡಿಕೆಗಳಿರುತ್ತವೆ.  ಅಷ್ಟೇ ಅಲ್ಲ ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದಕ್ಕೂ ಅಂದು ಡಿಮ್ಯಾಂಡ್ ಇದ್ದೇ ಇರುತ್ತದೆ.  ಅಂತೆಯೇ ಯುಗಾದಿಯಂದು ಜೂಜು ಆಡುವುದು ಬಹಳಷ್ಟು ಕಡೆ ರೂಢಿಯಲ್ಲಿದೆ.  ಎಂದೂ ಜೂಜನ್ನೇ ಆಡದವರು ಕೂಡ ಅಂದು ಜೂಜಾಡಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳುತ್ತಾರೆ.  ಕೆಲವು ಕಡಿಯಂತೂ ಮನೆಯವರೆಲ್ಲ, ಊರಿನವರೆಲ್ಲ ಒಂದು ಕಡೆ ಸೇರಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾರಂಗತರಾದ ಪಂಡಿತರನ್ನುಆಹ್ವಾನಿಸಿ ಅವರಿಗೆ ಪಾದಪೂಜೆ ಮಾಡಿ ಸನ್ಮಾನಿಸಿ ಪವಿತ್ರ ಸ್ಥಳಗಳಲ್ಲಿ, ಭಕ್ತಿಯ ತಾಣಗಳಲ್ಲಿ, ದೇವಾಲಯಗಳಲ್ಲಿ ಸಂವತ್ಸರ ಕಾಲದಲ್ಲಿ ನೆಡಯುವ ಫಲಿತಾಂಶಗಳನ್ನು ಮೊದಲೇ ತಿಳಿದುಕೊಳ್ಳುತ್ತಾರೆ.  ಇದನ್ನು 'ಪಂಚಾಂಗ ಶ್ರವಣ' ಎನ್ನಲಾಗುತ್ತದೆ.  ಈ ಪಂಚಾಂಗ ಶ್ರವಣದಲ್ಲಿನ ಅಂಗಗಳಿಂದ ಅಂದರೆ ತಿಥಿಯಿಂದ ಸಂಪತ್ತು, ವಾರದಿಂದ ಆಯಸ್ಸು, ನಕ್ಷತ್ರದಿಂದ ಪಾಪನಾಶ, ಯೋಗದಿಂದ ರೋಗ ದೂರ, ಕರಣದಿಂದ ಗಂಗಾಸ್ನಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆಂದು ಹೇಳುತ್ತಾರೆ.

ಯುಗಾದಿಯ ಮಾರನೆ ದಿನ 'ವರ್ಷ ತೊಡಕು' ಆಚರಿಸಲಾಗುತ್ತದೆ.  ಇದರ ವಿಶೇಷವೆಂದರೆ ತಮ್ಮನ್ನು ತಾವು ಸತ್ಕಾರ್ಯಗಳಿಗೆ ಅರ್ಪಿಸಿಕೊಳ್ಳುವ ದಿನವಿದು.  ಅಷ್ಟೇ ಅಲ್ಲ ಇಡೀ ವರ್ಷದ ತೊಡಕುಗಳನ್ನೆಲ್ಲಾ ನಿವಾರಿಸಿಕೊಳ್ಳಲು ದೇವರಲ್ಲಿ ಮೊರೆಯಿಡುವ ದಿನವಿದು.  ಹಾಗಾಗಿ ಯುಗಾದಿ ದಿನದಷ್ಟೇ ಈ ದಿನಕ್ಕೂ ಬಹಳ ಮಹತ್ವವಿದೆ.  ಅಂದು ವಿವಿಧ ಬಗೆಯ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ರೀತಿಯ ಸ್ಪರ್ಧೆಗಳು ಜರುಗುತ್ತವೆ.  ಅಂದು ಯಾರೇ ಆಗಲಿ ಏನೇನು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೋ ಅದನ್ನು ವರ್ಷಾಂತ್ಯದವರೆಗೂ ಮಾಡುತ್ತಾರೆಂಬ ನಂಬಿಕೆ ಬಹಳ ಜನರಲ್ಲಿದೆ.  ಹಾಗೆಯೇ ಅಂದು ಯಾರಿಗೆ ಏನೇನು ಲಭಿಸುತ್ತದೋ ಅದು ವರ್ಷಪೂರ್ತಿ ಲಭಿಸುತ್ತದೆಂಬ ನಂಬಿಕೆ ಪ್ರಚಲಿತದಲ್ಲಿದೆ.  ಹೊಸ ಅಳಿಯನನ್ನು ಹಬ್ಬಕ್ಕೆ ಆಹ್ವಾನಿಸಿ ಸತ್ಕರಿಸುವ ಸಂಪ್ರದಾಯವೂ ಯುಗಾದಿಯಲ್ಲಿದೆ.  ಎಷ್ಟೋ ಕಡೆ ಯುಗಾದಿಯನ್ನು ಅಳಿಯಂದಿರ ಹಬ್ಬವೆನ್ನುವುದೂ ಉಂಟು.  ಅಷ್ಟೇ ಅಲ್ಲದೆ ಅಕ್ಕ ತಂಗಿಯರು, ಅಣ್ಣ ತಮ್ಮಂದಿರನ್ನು ತಮ್ಮ ಮನೆಗಳಿಗೆ ಬರಮಾಡಿಕೊಂಡು ಹಬ್ಬದ ಅಡುಗೆ ಬಡಿಸಿ ಆದರಿಸುವುದೂ ಯುಗಾದಿಯ ವೈಶಿಷ್ಟ್ಯಗಳಲ್ಲೊಂದು.  ಒಟ್ಟಿನಲ್ಲಿ ಹೊಸ ಸೃಷ್ಟಿಗೆ, ಹೊಸ ದೃಷ್ಟಿಗೆ ಶ್ರೀಕಾರ ಬರೆಯುವ ಯುಗಾದಿಯಿಂದ ಎಲ್ಲರೂ ನರೀಕ್ಷಿಸುವುದು ಸಂತಸ-ಸಂಭ್ರಮವನ್ನಷ್ಟೇ ಅದು ಎಲ್ಲರಿಗೂ ಸಿಗಲಿ ಅಷ್ಟೆ. ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಯುಗಾದಿ ಕುರಿತು ಹೇಳುವ ಬಗೆಯಿದು - ಮಾವು ನಾವು, ಬೇವು ನಾವು, ನೋವು ನಲಿವು ನಮ್ಮವು. ಹೂವು ನಾವು, ಹಸಿರು ನಾವು, ಬೇವು ಬೆಲ್ಲ ನಮ್ಮವು

ಹೊಸವರ್ಷ ಹೊಸತು ತರಲಿ... 

ಹೊಸ ವರ್ಷದ ಆಗಮನವಾಗುತ್ತಿದ್ದಂತೆಯೇ ನಮ್ಮಲ್ಲೂ ಹೊಸ, ಹೊಸ ಕನಸುಗಳು ಚಿಗುರುತ್ತಿವೆ. ಕಳೆದು ಹೋದ ವರ್ಷದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳೆಲ್ಲಾ ಕೊನೆಯಾಗಿ ಹೊಸ ವರ್ಷದಲ್ಲಿ ಎಲ್ಲವೂ ಸುಖಕರವಾಗಿರಲಿ ಎಂಬ ಬಯಕೆ ಮೊಳಕೆಯೊಡೆಯುತ್ತದೆ.
ಪ್ರತಿ ವರ್ಷ ಡಿಸೆಂಬರ್ ಬರುತ್ತಿದ್ದಂತೆಯೇ ಮುಂದಿನ ಹೊಸ ವರ್ಷದ ಕಲ್ಪನೆಯಲ್ಲಿ ನಾವು ವಿಹರಿಸುವುದು ಸಾಮಾನ್ಯ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಒಂದು ವರ್ಷಗಳ ಕಾಲ ನಾವು ಸವೆಸಿದ ಒಂದೊಂದು ದಿನವೂ ನಮ್ಮ ಪಾಲಿಗೆ ಹೊಸ ಅನುಭವ ನೀಡಿರುತ್ತದೆ. ಜೊತೆಗೆ ವರ್ಷದಲ್ಲಿ ನಡೆದ ಅಷ್ಟು ಘಟನೆಗಳು ನಮ್ಮ ಕಣ್ಣು ಮುಂದೆ ಬಂದು ನಿಲ್ಲುತ್ತವೆ. ದೇಶ, ವಿದೇಶಗಳಲ್ಲಿ ನಡೆದ ಹಲವು ವಿದ್ಯಮಾನಗಳು ಐತಿಹಾಸಿಕ ಘಟನೆಗಳಾಗಿ ಉಳಿದು ಬಿಡುತ್ತವೆ. ಕೆಲವೊಂದು ನಮಗೆ ಖುಷಿ ತಂದರೆ ಮತ್ತೆ ಕೆಲವು ದುಃಖ ತಂದಿವೆ. 
ಈ ವರ್ಷ ನನ್ನ ಬದುಕಿನಲ್ಲಿ ಒಳಿತು ಆಗಿಲ್ಲ ಬರೀ ಕಷ್ಟಗಳನ್ನೇ ತಂದಿದೆ ಎಂದು ಹಲಬುವವರನ್ನು ನಾವು ಅಲ್ಲಲ್ಲಿ ಕಾಣುತ್ತೇವೆ. ಅದು ತಪ್ಪು ಎನ್ನಲಾಗುವುದಿಲ್ಲ ಕಾರಣ ಹೊಸ ವರ್ಷಕ್ಕೆ ನಮ್ಮದೇ ಆದ ಹತ್ತು ಯೋಜನೆ, ಕಲ್ಪನೆಗಳನ್ನಿಟ್ಟುಕೊಂಡು ಹೆಜ್ಜೆ ಹಾಕಿರುತ್ತೇವೆ. ಅವುಗಳೆಲ್ಲಾ ಕಾರ್ಯಗತವಾಗದಿದ್ದಾಗ ನಮ್ಮಲ್ಲಿ ನಿರಾಶೆ ಮೂಡುವುದು ಸಹಜ.
ಹಾಗೆನೋಡಿದರೆ ಹೊಸ ವರ್ಷದಲ್ಲೇನಿದೆ? ಏನೂ ಇಲ್ಲ. ಎಲ್ಲಾ ದಿನಗಳಂತೆ ಅದೂ ಕೂಡ. ವರ್ಷದ ಮೊದಲ ದಿನವಷ್ಟೆ ಹೊಸತು. ನಂತರ ಅದು ಕೂಡ ಹಳೆದಾಗುತ್ತದೆ. ಮತ್ತೆ ಹೊಸ ವರ್ಷ ಬಂದಾಗ ನಾವು ಅದನ್ನು ಸ್ವಾಗತಿಸಲು ಸಿದ್ಧವಾಗಿ ಬಿಡುತ್ತೇವೆ. ಇದೆಲ್ಲವೂ ನೈಸರ್ಗಿಕ ನಿಯಮ.
ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು ಹಳೆಯ ವರ್ಷದ ದಿನಗಳನ್ನು ಮೆಲುಕು ಹಾಕುತ್ತಾ ಸಂತಸದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ದುಃಖದ ಕ್ಷಣಗಳನ್ನು ಮರೆಯುತ್ತಾ ಮುನ್ನಡೆಯ ಬೇಕು.
ಕಳೆದ ವರ್ಷದಲ್ಲಿ ನಮಗೆ ಏನು ಒಳ್ಳೆದಾಗಿದೆ ಎನ್ನುವುದಕ್ಕಿಂತ ನಾವು ನಮಗೆ, ನಮ್ಮ ಕುಟುಂಬಕ್ಕೆ, ಸಮಾಜಕ್ಕೆ ಒಳ್ಳೆದಾಗುವ ಯಾವುದಾದರು ಕೆಲಸ ಮಾಡಿದ್ದೇವೆಯೇ ಎಂಬುವುದನ್ನು ಕೂಡ ಯೋಚಿಸಬೇಕಾಗಿದೆ.  ಕೇವಲ ನಮ್ಮ ಬಗ್ಗೆ ಯೋಚಿಸಿದರೆ ಏನು ಪ್ರಯೋಜನ? ಇಡೀ ಸಮಾಜದ ಬಗ್ಗೆ ಯೋಚಿಸುವ ಮತ್ತು ನಮಗಿಂತ ಕಷ್ಟದಲ್ಲಿರುವವರಿಗೆ ನಮ್ಮಿಂದ ಏನಾದರು ಸಹಾಯ ಮಾಡುವ ಮನೋಭಾವ ನಮ್ಮಲ್ಲಿ ಹುಟ್ಟಬೇಕು. ನಮ್ಮಿಂದ ಬೇರೆಯವರಿಗೆ ಯಾವ ರೀತಿಯ ಅನುಕೂಲವಾಗಿದೆ?  ಎಂಬುವುದನ್ನು ಕೂಡ ಯೋಚಿಸಬೇಕಾಗಿದೆ. ನಮಗೆ ನಾವು ಅನುಕೂಲ ಮಾಡಿಕೊಳ್ಳುವುದರಲ್ಲಿ ಹೆಚ್ಚುಗಾರಿಕೆ ಏನಿದೆ? ಅದೇ ಬೇರೆಯವರಿಗೆ ಒಂದಷ್ಟು ಸಹಾಯ ಮಾಡಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವುದಿದೆಯಲ್ಲ ಅದು ಕೊಡುವ ಸುಖ ನಿಜಕ್ಕೂ ಮರೆಯಲಾಗದ್ದು.
ಹೊಸವರ್ಷದಲ್ಲಿ ನಾವು ಕೂಡ ಹೊಸ ಮನುಷ್ಯರಾಗುವುದರೊಂದಿಗೆ ಕುಟುಂಬಕ್ಕೆ, ಸಮಾಜಕ್ಕೆ ಕೊಡುಗೆಯಾಗುತ್ತೇವೆ. ಹೊಸದಾದ ಯೋಜನೆಗಳನ್ನು ಹಾಕಿ ಕೊಂಡು ಕಾರ್ಯರೂಪಕ್ಕೆ ತರಲು ಪಣತೊಡಬೇಕು.  ಹೊಸವರ್ಷವನ್ನು ನಾವು ಕೇವಲ ಹೊಸ ವಸ್ತುಗಳ ಖರೀದಿಗೆ ಮಾತ್ರ ಸೀಮಿತ ಮಾಡಿಕೊಳ್ಳದೆ ನಾವು ನಮಗಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಕೂಡ ಅಗತ್ಯವೇ... 
ಹೊಸ ವರ್ಷದಿಂದ ನಾನು ಹೊಸ ಮನುಷ್ಯನಾಗುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬರಬೇಕು. ಇನ್ನು ಮುಂದೆ ಮದ್ಯಪಾನ, ಧೂಮಪಾನ ಸೇರಿದಂತೆ ಯಾವುದೇ ದುಶ್ಚಟಗಳನ್ನು ಮಾಡುವುದಿಲ್ಲ ಎಂಬ ಸಂಕಲ್ಪ ಮಾಡಿದ್ದೇ ಆದರೆ ಹೊಸ ವರ್ಷದೊಂದಿಗೆ ನಾವೂ ಹೊಸ ಮನುಷ್ಯರಾಗಬಹುದು.
ಹೊಸವರ್ಷಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ವರ್ಷಪೂರ್ತಿ ಏನಾದರೊಂದು ಸಾಧನೆ ಮಾಡುತ್ತೇನೆ ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕಿದೆ. ಸಾಮಾನ್ಯವಾಗಿ ಹೊಸ ವರ್ಷಾಚರಣೆ ಎಂಬುವುದು ಮೋಜು, ಮಸ್ತಿಗೆ ಸೀಮಿತವಾಗದೆ, ಹೊಸತನಕ್ಕೂ ಮುನ್ನುಡಿ ಬರೆಯಲಿ.
ಎಲ್ಲರಿಗೂ ಹೊಸ ವರ್ಷದ ಬಗ್ಗೆ ಹತ್ತು ಹಲವು ನಿರೀಕ್ಷೆ ಮತ್ತು ಕನಸುಗಳಿರುತ್ತವೆ. ಹಾಗಾಗಿ ಕಳೆದು ಹೋದ ವರ್ಷದಲ್ಲಿ ಅನುಭವಿಸಿದ ಎಲ್ಲಾ ಕಷ್ಟಗಳು ಪರಿಹಾರವಾಗಿ ಬಾಳು ಹಸನಾಗಲಿ ಎಂಬ ಬಯಕೆಯೊಂದಿಗೆ ಹೊಸ ವರ್ಷದತ್ತ ಹೆಜ್ಜೆಯಿಡುತ್ತಿರುವ ಸಮಸ್ತ ಜನತೆಗೆ ಹೊಸವರ್ಷ ಹರ್ಷದಾಯಕವಾಗಿರಲಿ...

ದೀಪಾವಳಿ ತರದಿರಲಿ ಬಾಳಲ್ಲಿ ಕತ್ತಲೆ...

ಬಿ.ಎಂ.ಲವಕುಮಾರ್, 

ದೀಪಾವಳಿಯನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ಎಂದು ಹೇಳಲಾಗುತ್ತದೆ. ಇದು ಅಕ್ಷರಶಃ ನಿಜ. ಹಬ್ಬದ ಆಚರಣೆ ಓಕೆ ಆದರೆ ಪಟಾಕಿ ಬೇಕೆ? ಎಂಬ ಪ್ರಶ್ನೆಯೂ ಸದ್ದಿಲ್ಲದೆ ಏಳುತ್ತದೆ. ಹಬ್ಬಕ್ಕೆ ಪಟಾಕಿ ಬೇಡವೇ ಬೇಡ ಎನ್ನಲಾಗುವುದಿಲ್ಲ. ಆದರೆ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವಾಗ ಎಚ್ಚರವಾಗಿರುವುದು ಒಳಿತು ಇಲ್ಲಾಂದ್ರೆ ನಾವು ಮಾಡಿಕೊಳ್ಳುವ ಎಡವಟ್ಟುಗಳಿಂದ ಬಾಳೇ ಕತ್ತಲೆಯಾಗುವ ಸಾಧ್ಯತೆ ಇಲ್ಲದಿಲ್ಲ.

ದೀಪಾವಳಿ ಹಬ್ಬವನ್ನು ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಹಬ್ಬದಲ್ಲಿ ಹಲವು ಬಗೆಯ ಸಂಪ್ರದಾಯಗಳಿದ್ದು, ಅದರಂತೆ ಆಚರಣೆ ನಡೆಯುತ್ತಾ ಬರುತ್ತಿದೆ. ಈ ಆಚರಣೆಯಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ವಲ್ಪ ಮಟ್ಟಿಗೆ ವಿಭಿನ್ನತೆ ಕಂಡು ಬಂದರೂ ಹಬ್ಬದಲ್ಲಿ ಪಟಾಕಿ ಸಿಡಿಸುವುದಂತು ಎಲ್ಲೆಡೆಯೂ ಇದ್ದೇ ಇದೆ. ಹಿಂದಿನ ಕಾಲದಲ್ಲಿ ಈಗಿನಷ್ಟು ಮುಂದುವರೆದಿರಲಿಲ್ಲ. ಜೊತೆಗೆ ಆರ್ಥಿಕವಾಗಿಯೂ ಹೆಚ್ಚಿನವರು ಸ್ಥಿತಿವಂತರಾಗಿರಲಿಲ್ಲ. ಹಾಗಾಗಿ ತಮ್ಮ ಇತಿಮಿತಿಯಲ್ಲಿ ಹಬ್ಬವನ್ನು ಆಚರಿಸಿ ಸಂತೋಷಪಡುತ್ತಿದ್ದರು. ಅವತ್ತು ಹಬ್ಬದ ಆಚರಣೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದರಲ್ಲದೆ, ಎಲ್ಲರೂ ಒಂದೆಡೆ ಕಲೆತು ಸಂಭ್ರಮಿಸುತ್ತಿದ್ದರು. ಪಟಾಕಿಯನ್ನು ಸಿಡಿಸುತ್ತಿದ್ದರಾದರೂ ಈಗಿನಷ್ಟು ಪ್ರಾಮುಖ್ಯತೆ ನೀಡುತ್ತಿರಲಿಲ್ಲ.

ಅವತ್ತು ಹಬ್ಬದ ದಿನ ಹತ್ತಿರ ಬರುತ್ತಿದೆ ಎಂದರೆ ಸಾಕು ಮನೆ ಮಂದಿಗೆ ಎಲ್ಲಿಲ್ಲದ ಕಾತರ. ಹಬ್ಬಕ್ಕಾಗಿ ಎಲ್ಲಿಲ್ಲದ ಸಿದ್ಧತೆಗಳು ನಡೆಯುತ್ತಿದ್ದವು. ಮನೆಯಲ್ಲಿ ಮಹಿಳೆಯರು ಏನೇನು ಬೇಕೋ ಅದನ್ನೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದರು. ಕೆಲವರು ಮನೆಗೆ ಸುಣ್ಣ, ಬಣ್ಣ ಬಳಿದು ಹಬ್ಬಕ್ಕೆ ಸಿಂಗರಿಸುತ್ತಿದ್ದರು. ಮನೆಯ ಮುಂದಿನ ವಿಶಾಲ ಅಂಗಳವನ್ನು ಸಗಣಿಯಿಂದ ಸಾರಿಸಿ ರಂಗೋಲಿ ಹಾಕಿ ಮನೆಯ ಸುತ್ತಲೂ ದೀಪಗಳಿಂದ ಅಲಂಕರಿಸಿ ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.

ಇನ್ನು ಮನೆಗಳಲ್ಲಿ ಮಕ್ಕಳಿಗೆ ಹಬ್ಬದಲ್ಲಿ ಮಾಡುವ ಹಬ್ಬದೂಟಕ್ಕಿಂತ ಪಟಾಕಿಯ ಮೇಲೆಯೇ ಆಶೆ. ವಿವಿಧ ನಮೂನೆಯ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವ ತವಕ. ದಿನನಿತ್ಯವೂ ಪಟಾಕಿಯದ್ದೇ ಧ್ಯಾನ. ಅವತ್ತಿನ ದಿನಗಳಲ್ಲಿ ಆರ್ಥಿಕವಾಗಿ ಹೆಚ್ಚಿನವರು ಸ್ಥಿತಿವಂತರಾಗಿಲ್ಲದ ಕಾರಣ ಪಟಾಕಿಗೆ ಹೆಚ್ಚಿನ ಹಣ ಸುರಿಯುತ್ತಿರಲಿಲ್ಲ. ಅಷ್ಟೋ ಇಷ್ಟೋ ಹಣ ನೀಡಿ ಪಟಾಕಿ ಖರೀದಿಸಿ ಮಕ್ಕಳಿಗೆ ನೀಡುತ್ತಿದ್ದರು. ಮಕ್ಕಳು ಅದರಲ್ಲೇ ತೃಪ್ತಿಪಟ್ಟುಕೊಳ್ಳುತ್ತಿದ್ದರು.

ಬದಲಾದ ಕಾಲಘಟ್ಟದಲ್ಲಿ ಹಬ್ಬದ ಆಚರಣೆಗಿಂತ ಪಟಾಕಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಸೂಕ್ಷ್ಮವಾಗಿ ಗಮನಿಸಿದಾಗ ಅರಿವಿಗೆ ಬರುತ್ತದೆ. ಇವತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಿರುವುದರಿಂದ  ಹಬ್ಬದ ಸಂಭ್ರಮವನ್ನು ಕೆಲವರು ಪಟಾಕಿ ಸಿಡಿಸುವುದರ ಮೂಲಕ ಹೊರಗೆಡವುತ್ತಾರೆ. ಪಟಾಕಿ ಖರೀದಿಸಿ ಮನೆಗೆ ತರುವಲ್ಲಿಯೂ ಪೈಪೋಟಿ ಕೆಲವೆಡೆ ಕಂಡು ಬರುತ್ತದೆ.

ಪಟಾಕಿ ಸಿಡಿಸದೆ ಹಬ್ಬ ಆಚರಿಸಿ ಎನ್ನುವುದು ಕೂಡ ಸಾಧ್ಯವಾಗದ ಮಾತು. ಹಬ್ಬ ಎಂದ ಮೇಲೆ ಪಟಾಕಿ ಸದ್ದು ಕೇಳಲೇ ಬೇಕು. ಹಾಗಿದ್ದರೆ ಮಾತ್ರ ಹಬ್ಬಕ್ಕೊಂದು ಕಳೆ. ಆದರೆ ಹಬ್ಬದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಯನ್ನು ಬೆಂಕಿಯಲ್ಲಿ ಸುಡುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಕೂಡ ನಮ್ಮನ್ನು ಕಾಡದಿರದು. ಪಟಾಕಿ ಸಿಡಿಸುವುದರಿಂದ ಮೊದಲಿಗೆ ಹಣವನ್ನು ಬೆಂಕಿಯಲ್ಲಿ ಸುಟ್ಟಂತಾಗುತ್ತದೆ. ಎರಡನೆಯದು ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದು ಎರಡು ಕೂಡ ಇಡೀ ಸಮಾಜದ ಮೇಲೆ ಬೀರುವ ದುಷ್ಪರಿಣಾಮ. ಇನ್ನು ಪಟಾಕಿ ಸಿಡಿಸುವಾಗ ಜಾಗ್ರತೆ ವಹಿಸದೆ ಆಗುವ ಅನಾಹುತ ವ್ಯಕ್ತಿ ಹಾಗೂ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ.

ಪಟಾಕಿ ಸಿಡಿಸುವುದರಿಂದ ಆಗುವ ಅನಾನುಕೂಲ ಮತ್ತು ದುರಂತದ ಬಗ್ಗೆ ಈ ಹಿಂದಿನಿಂದಲೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೆಲವರು ಮಾಡುತ್ತಲೇ ಬಂದಿದ್ದಾರೆ.  ಆದರೂ ಅದರಿಂದ ಹೆಚ್ಚಿನ ಪ್ರಯೋಜನವಾದಂತೆ ಕಂಡು ಬರುತ್ತಿಲ್ಲ. ಏಕೆಂದರೆ  ಈಗಾಗಲೇ ಪಟಾಕಿ ಎಂಬ ಸಿಡಿಮದ್ದಿನ ಮಾಯಾಂಗನೆ ಅಬಾಲವೃದ್ದರಾಗಿ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದೆ. ಹಾಗಾಗಿ ಪಟಾಕಿ ಸಿಡಿಸುವುದರಲ್ಲೇ ಅದೇನೋ ಮಜಾ ಕಾಣುತ್ತಾರೆ.

ಹಬ್ಬದ ಸಂದರ್ಭ ಪಟಾಕಿ ಸಿಡಿಸಲೇ ಬೇಡಿ... ಬರೀ ದೀಪ ಹಚ್ಚಿ.... ಭಕ್ಷ್ಯ ಭೋಜನ ಸವಿದು ಹಬ್ಬ ಆಚರಿಸಿ... ಹಾಗೆಂದು ಹೇಳೋಕೆ ಯಾರಿಂದ ಸಾಧ್ಯ? ಇಷ್ಟಕ್ಕೂ ಅದನ್ನು ಕೇಳಿ ಪಾಲಿಸೋರು ಅದೆಷ್ಟು ಮಂದಿ ಇದ್ದಾರೆ? ಪಟಾಕಿ ಹಚ್ಚಲೇ ಬೇಡಿ ಅನ್ನೋದಕ್ಕಿಂತ ಪಟಾಕಿ ಹಚ್ಚುವಾಗ ಒಂದಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳಿ ಎಂಬ ಸಲಹೆ ನೀಡಿದರೆ ಒಂದಷ್ಟು ಮಂದಿ ಅದನ್ನು ಪಾಲಿಸಿ ತಾವೇ ತಮ್ಮ ಕೈಯ್ಯಾರೆ ತಂದುಕೊಳ್ಳುವ ದುರಂತಕ್ಕೆ ಕಡಿವಾಣ ಹಾಕಲು ಸಾಧ್ಯವಾಗಬಹುದು.

ಹಬ್ಬ ವರ್ಷಕ್ಕೊಮ್ಮೆ ಬರೋದು... ಜೊತೆಗೆ ಕತ್ತಲಿನಿಂದ ಬೆಳಕಿಗೆ ನಮ್ಮನ್ನು ಕೊಂಡೊಯ್ಯುವ ಹಬ್ಬ ಎಂದು ಕೂಡ ಹೇಳಲಾಗುತ್ತದೆ. ಹೀಗಿರುವಾಗ  ಹಬ್ಬದ ಸಂಭ್ರಮದಲ್ಲಿ  ಪಟಾಕಿ ಸಿಡಿಸೋ ಭರದಲ್ಲಿ ಎಚ್ಚರ ತಪ್ಪಿ ತಮ್ಮ ಬದುಕನ್ನು ಕತ್ತಲೆಗೆ ತಳ್ಳಿಕೊಳ್ಳಬಾರದಲ್ವ ಹಾಗಾಗಿ ಪಟಾಕಿ ಸಿಡಿಸುವ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ಜೊತೆಗಿರಲಿ.

ಗುಣಮಟ್ಟದ ಪಟಾಕಿ ಹಾಗೂ ಪರವಾನಗಿ ಹೊಂದಿದವರಿಂದಲೇ ಖರೀದಿಸಿ. ಪಟಾಕಿ ಸಿಡಿಸಲು ಹೊರಡುವವರು ಹತ್ತಿ ಬಟ್ಟೆಯನ್ನು ಧರಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಹಬ್ಬದ ಜೋಶ್‌ನಲ್ಲಿ ಪಟಾಕಿಯನ್ನು ಕೈಯ್ಯಲ್ಲಿಡಿದು ಬೆಂಕಿ ಹಚ್ಚುವ, ಬೇರೆಯವರ ಮೇಲೆ ಎಸೆಯುವ ಪ್ರಯತ್ನ ಮಾಡಬೇಡಿ. ಪಟಾಕಿ ಸಿಡಿಯಲಿಲ್ಲವೆಂದು ಅದನ್ನು ಕೈಯ್ಯಲ್ಲಿಡಿದು ಮೇಲಿನ ಪೇಪರ್ ಸುಲಿದು ಬೆಂಕಿ ಹಚ್ಚುವ ಯತ್ನ ಮಾಡಬೇಡಿ. ಕೆಲವೊಮ್ಮೆ ತಡವಾಗಿ ಸಿಡಿಯುವ ಸಾಧ್ಯತೆಯೂ ಇರುತ್ತದೆ.  ಪಟಾಕಿ ಸಿಡಿಸುವಾಗ ಕಿವಿಗೆ ಹತ್ತಿ ಹಾಗೂ ಮೂಗಿಗೆ ಮಾಸ್ಕ್ ಹಾಕಿಕೊಳ್ಳಿ. ಭಾರೀ ಸದ್ದು ಮಾಡುವ ಪಟಾಕಿಗಳಿಂದ ದೂರ ಸರಿಯಿರಿ ಇಲ್ಲಾಂದ್ರೆ ಕಿವಿಯ ತಮಟೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಣ್ಣಿಗೆ ಕನ್ನಡಕ ಧರಿಸುವುದು ಕೂಡ ಒಳ್ಳೆಯದು.

ಮನೆಯ ಹಿರಿಯರು ಮಕ್ಕಳನ್ನು ಅವರಿಷ್ಟದಂತೆ ಪಟಾಕಿ ಸಿಡಿಸಲು ಬಿಡಬೇಡಿ ನೀವು ಕೂಡ ಜೊತೆಗಿದ್ದು ಅವರ ಬಗ್ಗೆ ನಿಗಾ ವಹಿಸಿ ಜೊತೆಗೆ ಸಲಹೆ ನೀಡಿ. ಮಕ್ಕಳ ವಯಸ್ಸಿಗೆ ತಕ್ಕದಾದ ಪಟಾಕಿಗಳನ್ನೇ ಖರೀದಿಸಿ ತನ್ನಿ. ಭಾರೀ ಶಬ್ದ ಬರುವ ಪಟಾಕಿಗಳನ್ನು ನೀಡಬೇಡಿ. ಹೂಕುಂಡ(ಫ್ಲವರ್‌ಪಾಟ್)ಗಳಿಗೆ ಬೆಂಕಿ ಹಚ್ಚುವಾಗ ಅಂತರ ಕಾಪಾಡಿ. ಕೈಯ್ಯಿಂದ ಹಚ್ಚುವುದು ಒಳ್ಳೆಯದಲ್ಲ. ಹೂಕುಂಡಗಳು ಸಿಡಿದು ಕೈ,ಕಣ್ಣು ಕಳೆದುಕೊಂಡಿರುವ ಉದಾಹರಣೆಗಳು ಬಹಳಷ್ಟಿವೆ.

ಇನ್ನು ಎಲ್ಲೋ ಗಮನಹರಿಸುತ್ತಾ ಪಟಾಕಿಗೆ ಬೆಂಕಿ ಹಚ್ಚುವುದು ಅಪಾಯಕಾರಿ. ಕೆಲವರು ಫೋನ್‌ನಲ್ಲಿ ಮಾತನಾಡುತ್ತಲೋ, ಮತ್ತೇನೋ ಮಾಡುತ್ತಾ ಬೆಂಕಿ ಹಚ್ಚುವವರು ಇದ್ದಾರೆ. ಅಂತಹವರು ದಯವಿಟ್ಟು ಪಟಾಕಿಯತ್ತ ಗಮನವಿಟ್ಟು ಬೆಂಕಿ ಹಚ್ಚಿ.  ರಾಕೆಟ್ ಬಿಡುವಾಗ ಬಾಟಲಿಯನ್ನು ಉಪಯೋಗಿಸಿ. ಅಷ್ಟೇ ಅಲ್ಲ ಆಕಾಶದ ಕಡೆಗೆ ಚಿಮ್ಮುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಕೆಲವೊಮ್ಮೆ ತಮ್ಮತ್ತಲೋ, ಪಕ್ಕದ ಮನೆಗೋ ನುಗ್ಗುವ ಸಾಧ್ಯತೆಯಿರುತ್ತದೆ. ಇನ್ನು ಪ್ರಾಣಿಗಳ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚುವ ವಿಕೃತ ಕೆಲಸವನ್ನು ದಯವಿಟ್ಟು ಮಾಡಬೇಡಿ. ಪಟಾಕಿಯ ಹೊಗೆಯಲ್ಲಿ ಹೆಚ್ಚು ಹೊತ್ತು ಇರಬೇಡಿ. ಪಟಾಕಿ ಹಚ್ಚಿದ ಕೈಯ್ಯನ್ನು ಚೆನ್ನಾಗಿ ತೊಳೆದು ಆಹಾರ ಸೇವಿಸಿ. ಹೀಗೆ ಒಂದಷ್ಟು ಮುಂಜಾಗ್ರತೆಯಿದ್ದರೆ ದೀಪಾವಳಿ ಹಬ್ಬವನ್ನು ಎಂಜಾಯ್ ಮಾಡಲು ಸಾಧ್ಯವಿದೆ. 

 

 

ಕೈಲ್‌ಮುಹೂರ್ತ' ಕೊಡಗಿನ ಆಯುಧಪೂಜೆ 

ಬಿ.ಎಂ.ಲವಕುಮಾರ್, 
ಸುರಿಯುವ ಮಳೆಗೆ... ಕೊರೆಯುವ ಚಳಿಗೆ... ಸಮಯದ ಅರಿವಿಲ್ಲದೆ ವಿಶಾಲ ಗದ್ದೆ ಬಯಲನ್ನು ಉತ್ತು, ಬಿತ್ತಿ, ತಿಂಗಳಾನುಗಟ್ಟಲೆ ಸೊಂಟ ಬಗ್ಗಿಸಿ ಕೆಸರುಗದ್ದೆಯಲ್ಲಿ  ನಾಟಿ ಮಾಡಿ ಮುಗಿಸಿದ ಕೊಡಗಿನ ಮಂದಿಗೆ ರಿಲ್ಯಾಕ್ಸ್ ನೀಡುವ ಹಬ್ಬವೇ "ಕೈಲ್‌ಮುಹೂರ್ತ". 
ಈ ಹಬ್ಬ ಕೊಡಗಿನವರ ಪಾಲಿಗೆ ಮನರಂಜನೀಯ ಹಬ್ಬ. ಗದ್ದೆ ಕೆಲಸದಲ್ಲಿ ದೇಹವನ್ನು ದಂಡಿಸಿದವರು ಹೊಟ್ಟೆ ತುಂಬಾ ಉಂಡು... ಕಂಠಮಟ್ಟ ಕುಡಿದು... ಸಂಭ್ರಮಿಸುವ ಹಾಗೂ ಮೈದಾನಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ಕ್ರೀಡಾ ಕೌಶಲ್ಯತೆಯನ್ನು ಪ್ರದರ್ಶಿಸುವ ಹಬ್ಬವೂ ಹೌದು. ಅಷ್ಟೇ ಅಲ್ಲ ಕೊಡಗಿನವರಿಗೆ ಇದೊಂದು ಆಯುಧಪೂಜೆ.
ಕೊಡಗಿನ ಆಯುಧಪೂಜೆ: ಹಾಗೆನೋಡಿದರೆ ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳೆಲ್ಲವೂ ಇತರೆಡೆಗಳಲ್ಲಿ ಆಚರಿಸುವ ಹಬ್ಬಗಳಿಗಿಂತ ಭಿನ್ನವಾಗಿ, ವೈಶಿಷ್ಟ್ಯಪೂರ್ಣವಾಗಿರುತ್ತದೆ. ಇಲ್ಲಿಯ ಹಬ್ಬಗಳ ಆಚರಣೆಯನ್ನು ಕೂಲಂಕುಷವಾಗಿ ಪರಿಶೀಲಿಸಿದರೆ ಪ್ರತಿಯೊಂದು ಹಬ್ಬವೂ ಭತ್ತದ ಕೃಷಿಗೆ ಅನುಗುಣವಾಗಿ ಆಚರಣೆಗೆ ಬಂದಿರುವುದು ಗೋಚರಿಸುತ್ತದೆ. ಜೊತೆಗೆ ಎಲ್ಲಾ ಹಬ್ಬಗಳ ಹಿಂದೆಯೂ ಶೂರತ್ವ, ಕ್ರೀಡೆಯ ಹಿನ್ನಲೆ, ಸಂಪ್ರದಾಯದ ಕಾಂತಿಯೊಂದಿಗೆ ಸಂಭ್ರಮ ಉಲ್ಲಾಸ ಎದ್ದು ಕಾಣುತ್ತಿರುತ್ತದೆ. 
"ಕೈಲ್‌ಮುಹೂರ್ತ" ಹಬ್ಬವನ್ನು ಕೊಡವ ಭಾಷೆಯಲ್ಲಿ "ಕೈಲ್‌ಪೊಳ್ದ್" ಎಂದು ಕರೆಯಲಾಗುತ್ತದೆ. "ಕೈಲ್" ಎಂದರೆ ಆಯುಧ "ಪೊಳ್ದ್" ಎಂದರೆ ಹಬ್ಬ ಹಾಗಾಗಿ ಕೊಡಗಿನವರಿಗೊಂದು ಆಯುಧಪೂಜೆಯೇ... "ಕೈಲ್‌ಮುಹೂರ್ತ" ಹಬ್ಬವು ಕೊಡಗಿನವರ ಲೆಕ್ಕದ ಪ್ರಕಾರ ಚಿನ್ಯಾರ್ ತಿಂಗಳ ಹದಿನೆಂಟನೇ ತಾರೀಖಿನಂದು ಬರುತ್ತದೆ. ಅಂದರೆ ಪ್ರತಿವರ್ಷ ಸೆಪ್ಟಂಬರ್ ೩ರಂದು ಆಚರಣೆ ನಡೆಯುತ್ತದೆ.
ಕೊಡಗಿನಲ್ಲಿ ಕೈಲ್‌ಮುಹೂರ್ತ ಹಬ್ಬದ ದಿನದಂದು  ಮೇಲ್ನೋಟಕ್ಕೆ ಕಂಡುಬರುವ ಹಬ್ಬದ ದೃಶ್ಯಗಳೆಂದರೆ ಊರ ಮೈದಾನದಲ್ಲಿ ವಿವಿಧ ಕ್ರೀಡಾಕೂಟ ನಡೆಯುತ್ತಿರುತ್ತವೆ... ಮನೆಗಳಲ್ಲಿ ಹಂದಿಮಾಂಸದ ಸಾರು ಹಾಗೂ ಅಕ್ಕಿ ಕಡಂಬಿಟ್ಟು(ಕಡುಬು)ನ ಅಡುಗೆ ಘಮಘಮಿಸುತ್ತಿರುತ್ತದೆ... ಚಿಕ್ಕವರು ದೊಡ್ಡವರೆನ್ನದೆ ಎಲ್ಲರೂ ಸಾಂಪ್ರದಾಯಿಕವಾಗಿ ಮದ್ಯ ಸೇವಿಸಿ ಖುಷಿಯಾಗಿರುತ್ತಾರೆ.
ರೋಮಾಂಚನಕಾರಿ ಹಿನ್ನಲೆ: ಹಾಗೆಂದು ಕೈಲ್‌ಮುಹೂರ್ತ ಹಬ್ಬ ಕುಡಿಯುವುದು ತಿನ್ನುವುದರಲ್ಲಿ ಕಳೆದು ಹೋಗುವುದಿಲ್ಲ. ಈ  ಹಬ್ಬಕ್ಕೆ ತನ್ನದೇ ಆದ ಆಚರಣೆ ಹಾಗೂ ರೋಮಾಂಚನಕಾರಿ ಹಿನ್ನಲೆಯಿದೆ.  ಗುಡ್ಡಕಾಡುಗಳಿಂದ ಕೂಡಿದ ಕೊಡಗಿನಲ್ಲಿ ಹಿಂದೆ ಭತ್ತದ ಕೃಷಿ ಹೊರತುಪಡಿಸಿದರೆ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯಿರಲಿಲ್ಲ. ಹೀಗಾಗಿ ಕೃಷಿಕರಿಗೆ ನಿರ್ಧಿಷ್ಟ ಕೃಷಿ ಭೂಮಿಗಳಿರಲಿಲ್ಲ. ಅವರವರ ಶಕ್ತಿ, ಸಾಮರ್ಥ್ಯಕ್ಕನುಗುಣವಾಗಿ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು.  ಈ ಸಂದರ್ಭ ಬೆಳೆಗಳನ್ನು ನಾಶ ಮಾಡಲು ಬರುವ ವನ್ಯ ಮೃಗಗಳೊಂದಿಗೆ ಹೋರಾಡಿ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದ ಆಯುಧಗಳ ಅಗತ್ಯವಿತ್ತು. ಅಲ್ಲದೆ ಅದನ್ನು ಬಳಸಲು ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿಕೊಡಲಾಗುತ್ತಿತ್ತು.
ಆದುದರಿಂದ ಅಂದಿನಿಂದ ಇಂದಿನವರೆಗೆ ಇಲ್ಲಿನವರು ಶೂರರೇ. ಕೋವಿಯನ್ನು ಹಿಡಿಯದ ಕೈಗಳೇ ಇಲ್ಲವೆನ್ನಬೇಕು.
ಮಳೆಗಾಲಕ್ಕೆ ಮುನ್ನ ಬೇಟೆ ಇನ್ನಿತರೆ ಕಾರ್ಯಗಳಲ್ಲಿ ತೊಡಗಿರುತ್ತಿದ್ದ ಕೊಡಗಿನ ಜನ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಆಯುಧಗಳನ್ನು ಕೆಳಗಿಟ್ಟು ನೇಗಿಲು, ಗುದ್ದಲಿಗಳನ್ನು ಹಿಡಿದು ಗದ್ದೆಗಿಳಿದುಬಿಡುತ್ತಿದ್ದರು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಗದ್ದೆ ಕೆಲಸ ಆರಂಭವಾದರೆ ಅದು ಆಗಸ್ಟ್ ತಿಂಗಳಲ್ಲಿ ಮುಕ್ತಾಯವಾಗುತ್ತಿತ್ತು. ಸುರಿಯುವ ಮಳೆಯಲ್ಲಿ ಗದ್ದೆ ಕೆಲಸ ಮಾಡುವುದೆಂದರೆ ಸುಲಭದ ಕೆಲಸವಾಗಿರಲಿಲ್ಲ. ಜೊತೆಗೆ ನಿರ್ಧಿಷ್ಟ ಸಮಯದಲ್ಲಿ ಮಾಡಿ ಮುಗಿಸಲೇ ಬೇಕಾಗಿದ್ದುದರಿಂದ ಬಿಡುವಿಲ್ಲದ ದುಡಿಮೆ ಅನಿವಾರ್ಯವಾಗಿತ್ತು. ಈ ದಿನಗಳಲ್ಲಿ ಕೋವಿಯನ್ನು ನೆಲ್ಲಕ್ಕಿ ಬಾಡೆ(ದೇವರಕೋಣೆ)ಯಲ್ಲಿಡಲಾಗುತ್ತಿತ್ತು. ಅಲ್ಲದೆ ಕಕ್ಕಡ ಮಾಸ (ಜುಲೈ ೧೭ರಿಂದ ಆಗಸ್ಟ್ ೧೬ರವರೆಗಿನ ಒಂದು ತಿಂಗಳ ಅವಧಿ)ದಲ್ಲಿ ಶುಭಕಾರ್ಯ, ಬೇಟೆ ಮುಂತಾದ ಯಾವುದೇ ಕಾರ್ಯವನ್ನು ಮಾಡುತ್ತಿರಲಿಲ್ಲ. ಕೃಷಿ ಚಟುವಟಿಕೆಯಷ್ಟೆ ಪ್ರಮುಖವಾಗಿರುತ್ತಿತ್ತು.
ದುಡಿದು ಬೆಂಡಾದ ಜೀವಕ್ಕೆ ಸಂಭ್ರಮ: ಹೀಗೆ ದುಡಿಮೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದ ಮಂದಿ ಮೈಕೊಡವಿಕೊಂಡು ಮೇಲೇಳುತ್ತಿದ್ದದ್ದು ಕೈಲ್‌ಮುಹೂರ್ತ ಹಬ್ಬದ ಸಂದರ್ಭವೇ ಆಗಿತ್ತು. ಹಾಗಾಗಿ ಕೈಲ್‌ಮುಹೂರ್ತ  ದುಡಿದ ಜೀವಗಳಿಗೆ ಸಂತಸವನ್ನೀಯುವ ಹಬ್ಬವಾಗಿ ಆಚರಣೆಯಾಗುತ್ತಾ ಬಂದಿದೆ.ಹಬ್ಬದ ದಿನದಂದು ತಮ್ಮೊಂದಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಶುಭ್ರವಾಗಿ ಸ್ನಾನ ಮಾಡಿಸಿ ಬಳಿಕ ನೇಗಿಲು ನೊಗಗಳನ್ನು ಚೆನ್ನಾಗಿ ತೊಳೆದು ಅವುಗಳಿಗೆ ಪೂಜೆ ಮಾಡಲಾಗುತ್ತದೆ. ಬಳಿಕ ಸ್ನಾನ ಮಾಡಿಸಿದ ಎತ್ತುಗಳಿಗೆ ಎಣ್ಣೆ ಅರಿಶಿನವನ್ನು ಹಚ್ಚಿ ಕುತ್ತಿಗೆಗೆ ನೊಗವನ್ನಿಟ್ಟು ಪ್ರಾರ್ಥಿಸಿ ತೆಗೆಯಲಾಗುತ್ತದೆ. (ನಂತರ ಎತ್ತುಗಳನ್ನು ಉಳುಮೆಗೆ ಉಪಯೋಗಿಸುವುದು ಮುಂದಿನ ವರುಷದ ಮುಂಗಾರಿನಲ್ಲಿ ಮಾತ್ರ.) ಈ ಸಂದರ್ಭ ಅಕ್ಕಿಯಿಂದ ಮಾಡಿದ ವಿಶೇಷ ತಿಂಡಿಯನ್ನು ಸೇವಿಸಲಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗದ್ದೆಗಳು ಕಣ್ಮರೆಯಾಗಿ ಕಾಫಿ ತೋಟಗಳು ತಲೆ ಎತ್ತಿರುವುದರಿಂದ ಹಾಗೂ ಎತ್ತಿನ ಬದಲಾಗಿ ಟ್ರ್ಯಾಕ್ಟರ್ ಹಾಗೂ ಟಿಲ್ಲರ್‌ಗಳು ಬಂದಿರುವುದರಿಂದ ಎತ್ತುಗಳ ಬದಲಿಗೆ ಗೋಪೂಜೆ ಮಾಡುವುದು ಕೆಲವೆಡೆ ಕಂಡು ಬರುತ್ತದೆ. 
ಹಿರಿಯರಿಂದ ಕಿರಿಯರಿಗೆ ಆಶೀರ್ವಾದ: ಹಬ್ಬದ ದಿನ ಮುಂಜಾನೆ ಮನೆಯ ಯಜಮಾನ ಸ್ನಾನ ಮಾಡಿ ಕುತ್ತರ್ಚಿ ಎಂಬ ಮರದ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಜೋಡಿಸಿ ಬಿಲ್ಲು ಬಾಣವನ್ನು ತಯಾರಿಸುತ್ತಾರೆ. ನಂತರ ಹಾಲು ಬರುವ ಮರಕ್ಕೆ ಚುಚ್ಚಿ ಬರುತ್ತಾರೆ. (ಇದನ್ನು ಕೊಡವ ಭಾಷೆಯಲ್ಲಿ ಆಪ್‌ಪತರ್ ಎಂದು ಕರೆಯಲಾಗುತ್ತದೆ) ನಂತರ ಕೋವಿಯನ್ನು ದೇವರಕೋಣೆಯಲ್ಲಿಟ್ಟು ಇದಕ್ಕೆ ಕಾಡಿನಲ್ಲಿ ಸಿಗುವ ವಿಶೇಷ ಹೂವಾದ ಕೋವಿ ಹೂವನ್ನಿಟ್ಟು  ತಳಿಯತಕ್ಕಿ ಬೊಳಕ್(ಅಕ್ಕಿ ತುಂಬಿದ ತಟ್ಟೆಯಲ್ಲಿಟ್ಟ ದೀಪ)ನ್ನು ಉರಿಸಿ ಇದರ ಸುತ್ತ ಕುಟುಂಬದ ಸದಸ್ಯರು ಸೇರುತ್ತಾರೆ. ಸಾಂಪ್ರದಾಯಿಕ ಉಡುಪಾದ ಕುಪ್ಪಚೇಲೆಯನ್ನು ಧರಿಸಿ ಹಿರಿಯರನ್ನು ಸೇರಿಸಿ ಅಕ್ಕಿ ಹಾಕಿ ಕುಟುಂಬವನ್ನು ರಕ್ಷಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ. ಇದೇ ಸಂದರ್ಭ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಹಾಗೂ ಮದ್ಯವನ್ನು ಗುರುಕಾರಣರಿಗೆ ಇಟ್ಟು ಬೇಡಿಕೊಳ್ಳುತ್ತಾರೆ. ಅಲ್ಲದೆ ದೇವರ ಕೋಣೆಯಲ್ಲಿ ಕಿರಿಯರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ.
ಹಿಂದಿನ ಕಾಲದಲ್ಲಿ ಹಬ್ಬದ ದಿನ ದೇವರ ಕೋಣೆಯಲ್ಲಿಟ್ಟ ಕೋವಿಯನ್ನು ಪೂಜೆಯ ಬಳಿಕ ಹೆಗಲಿಗೇರಿಸಿಕೊಂಡು ಕಾಡಿಗೆ ತೆರಳಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸದೊಂದಿಗೆ ಮನೆಗೆ ಬರುತ್ತಿದ್ದರು.  ಆದುದರಿಂದಲೇ ಇಂದಿಗೂ  ಈ ಹಬ್ಬದಲ್ಲಿ ಮಾಂಸಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದೆ.
ಪಂದಿಕರಿ ಕಡಂಬಿಟ್ಟಿಗೆ ಮದ್ಯ ಸಾಥ್: ಇಂದು ಎಲ್ಲವೂ ಬದಲಾಗಿದೆ ಆದರೆ ಸಾಂಪ್ರದಾಯ ಉಳಿದುಕೊಂಡಿದ್ದರೂ  ಬೇಟೆಯನ್ನು ನಿಷೇಧಿಸಿರುವುದರಿಂದ ಕೈಲ್‌ಮುಹೂರ್ತ ಹಬ್ಬದ ದಿನದಂದು ಊರ ಮೈದಾನಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಿ ಅಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು ಪಾಲ್ಗೊಂಡು ತಮ್ಮ ಶೌರ್ಯ ಪ್ರದರ್ಶಿಸುತ್ತಾರೆ.
ಸಾಮಾನ್ಯವಾಗಿ ಕೈಲ್‌ಮುಹೂರ್ತ ಹಬ್ಬದಲ್ಲಿ ಹಂದಿ ಮಾಂಸ ಸಾರು(ಪಂದಿಕರಿ) ಹಾಗೂ ಕಡುಬು(ಕಡಂಬಿಟ್ಟು) ಪ್ರಧಾನ ಭಕ್ಷ್ಯವಾಗಿರುವುದರಿಂದ ಎಲ್ಲಿಲ್ಲದ ಬೇಡಿಕೆಯಿರುವುದನ್ನು ಕಾಣಬಹದು. ಕೆಲವು ಮನೆಗಳಲ್ಲಿ ಕೈಲ್ ಮುಹೂರ್ತ ಹಬ್ಬಕ್ಕೆಂದೇ ಹಂದಿಗಳನ್ನು ಸಾಕಲಾಗುತ್ತದೆ. ಈ ಹಂದಿಗಳು ಸುಮಾರು ೧೫೦ಕೆಜಿ ಗಿಂತಲೂ ಹೆಚ್ಚು ಬೆಳೆದಿರುತ್ತವೆ. ಇಂತಹ ಹಂದಿಗಳ ಮಾಂಸಕ್ಕೆ ತಿಂಗಳಿರುವಾಗಲೇ ಮುಂಗಡವಾಗಿ  ಕಾಯ್ದಿರಿಸಲಾಗುತ್ತದೆ. ಹಬ್ಬದ ಹಿಂದಿನ ದಿನ ಅಂದರೆ ಸೆಪ್ಟಂಬರ್ ೨ ರಂದು ಜಿಲ್ಲೆಯಾದ್ಯಂತ ಅರ್ಧ ಭಾಗಕ್ಕಿಂತಲೂ ಹೆಚ್ಚಿನ ಹಂದಿಗಳು ಜನರ ಉದರ ಸೇರುತ್ತವೆ. ಪ್ರತಿ ಮನೆಯಲ್ಲಿ ಕನಿಷ್ಟ ಐದರಿಂದ ಹತ್ತು ಕೆಜಿಯಷ್ಟು ಮಾಂಸವನ್ನು ಉಪಯೋಗಿಸುತ್ತಾರೆ. ಜೊತೆಗೆ ವಿವಿಧ ಬಗೆಯ ಮದ್ಯಗಳು ಸಾಥ್ ನೀಡುತ್ತವೆ. ಅಂದು ಹಿರಿಯರು, ಕಿರಿಯರು ಎಂಬ ಭೇದ ಭಾವವಿಲ್ಲದೆ ಒಟ್ಟಾಗಿ ಮದ್ಯ ಸೇವಿಸುವುದು ಸಂಪ್ರದಾಯವಾಗಿದೆ. ಅಲ್ಲದೆ ಕೈಲ್‌ಮುಹೂರ್ತ ಅಂಗವಾಗಿ ಹಲವು ದಿನಗಳ ಕಾಲ ಜಿಲ್ಲೆಯಾದ್ಯಂತ ಕ್ರೀಡಾಕೂಟಗಳು ನಡೆಯುತ್ತವೆ. ಇತ್ತೀಚೆಗಿನ ವರ್ಷಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಹಬ್ಬ ಕಳೆದ ನಂತರ ಕೈಲ್‌ಮುಹೂರ್ತ ಸಂತೋಷಕೂಟ ಏರ್ಪಡಿಸಿ ಎಲ್ಲರೂ ಒಂದೆಡೆ ಕಲೆತು ಸಂಭ್ರಮಿಸುತ್ತಾರೆ.
ಸಾಮಾನ್ಯವಾಗಿ ಕೈಲ್‌ಮುಹೂರ್ತ ಹಬ್ಬಕ್ಕೆ ಕೊಡಗಿನ ಮಂದಿ ದೂರದ ಯಾವುದೇ ಊರಿನಲ್ಲಿದ್ದರೂ ತಪ್ಪದೆ ಬರುತ್ತಾರೆ. ಕುಟುಂಬದ ಹಾಗೂ ಊರ ಜನರೊಂದಿಗೆ ಬೆರೆತು ಹಬ್ಬದ ಸಂತಸವನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿ ಕೈಲ್‌ಮುಹೂರ್ತ ಪ್ರತಿ ಕುಟುಂಬ ಹಾಗೂ ಊರಿನಲ್ಲಿ ಆತ್ಮೀಯ ಸಂಬಂಧ ಬೆಸೆಯುವ ಹಾಗೂ ಎಲ್ಲರೂ ಸಂಭ್ರಮ ಪಡುವ ಹಬ್ಬವಾಗಿದೆ.

ಮಲಯಾಳಿಗರ ಮನೆಯಲ್ಲಿ ಓಣಂ ಸಂಭ್ರಮ

ಇದೀಗ ಕೇರಳ ಮಾತ್ರವಲ್ಲದೆ, ಕೇರಳಿಗರು ಎಲ್ಲೆಲ್ಲಿ ವಾಸಿಸುತ್ತಾರೋ ಅಲ್ಲೆಲ್ಲ ನಾಡಹಬ್ಬ ಓಣಂನ ಸಂಭ್ರಮ ಮನೆ ಮಾಡಿದೆ. ಮಲಯಾಳಿಗಳ ಮನೆಯಲ್ಲಿ  ಹಬ್ಬದ ತಯಾರಿ ಭರದಿಂದ ಸಾಗಿದೆ. ತಾಯ್ನಾಡು ತೊರೆದು ದೂರದ ಊರುಗಳಲ್ಲಿ  ನೆಲೆಸಿದವರಿಗೆ ಹಬ್ಬಕ್ಕೆ ತಮ್ಮ ಹುಟ್ಟೂರಿಗೆ ತೆರಳಿ ಕುಟುಂಬದೊಂದಿಗೆ ಬೆರೆಯುವ ಕಾತರವಾದರೆ... ಕೆಲಸ ಕಾರ್ಯಗಳ ನಡುವೆ ತಮ್ಮೂರಿಗೆ ತೆರಳಲಾಗದವರು ತಾವಿದ್ದಲ್ಲೇ ಹಬ್ಬ ಆಚರಿಸಿ ಸಂತಸಪಡುವ ತವಕದಲ್ಲಿದ್ದಾರೆ.

ಓಣಂ ಹಬ್ಬ ಕೇರಳದವರ ಪಾಲಿಗೆ ನಾಡಹಬ್ಬವಿದ್ದಂತೆ. ಕೃಷಿಯ ಹಿನ್ನಲೆಯಲ್ಲಿ ಆಚರಿಸಲ್ಪಡುವ ಈ ಹಬ್ಬ ಮಳೆಗಾಳಿಗೆ ದುಡಿದು ಬೆಂಡಾದ ಜೀವಗಳಿಗೆ ಸಂತಸ ಸಂಭ್ರಮನ್ನೀಯುವ ಹಬ್ಬವಾಗಿದೆ. ಮುಂಗಾರು ಆರಂಭದಿಂದ ಇಲ್ಲಿಯವರೆಗೆ ಮಳೆಯ ಆರ್ಭಟದ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಅದನ್ನೆಲ್ಲಾ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಕೂರುವ ಕಾಲ ಇದಾಗಿದೆ. ಅಲ್ಲದೆ ಮಳೆಯಲ್ಲಿ ಮಿಂದೆದ್ದ ಪ್ರಕೃತಿಯಲ್ಲಿ ಹೊಸಪುಳಕ. ಅದು ಮುಂದೆ ಬರುತ್ತಿರುವ ಓಣಂ ಹಬ್ಬದ ಶುಭ ಸೂಚಕವೂ ಹೌದು.

ಕೇರಳದ ನಾಡಹಬ್ಬ: ಮನೆಯ ಮುಂದಿನ ಅಂಗಳದಲ್ಲೊಂದು ಹೂವಿನ ರಂಗೋಲಿ(ಪೂಕಳಂ)... ನಡುವೆ ಬೆಳಗುವ ಹಣತೆ... ಸುಣ್ಣ ಬಣ್ಣ ಬಳಿದು ಶುಭ್ರವಾಗಿ ಕಂಗೊಳಿಸುವ ಮನೆಗಳು... ಮನೆಯ ಸುತ್ತ ಹೊಸಬಟ್ಟೆ ತೊಟ್ಟು ಕೇಕೆ ಹಾಕುತ್ತಾ ಓಡಾಡುವ ಪುಟ್ಟ ಮಕ್ಕಳು... ಒಳಗೆ ವಿವಿಧ ಭಕ್ಷ್ಯ ಭೋಜನಗಳ ತಯಾರಿಯಲ್ಲಿ ನಿರತರಾದ ಹೆಂಗಳೆಯರು... ಇದು ಓಣಂ ಆಚರಿಸುವ ಮನೆಗಳಲ್ಲಿ ಕಂಡು ಬರುವ ಮೇಲ್ಮೋಟದ ದೃಶ್ಯಗಳು.

ಹಾಗೆನೋಡಿದರೆ ಓಣಂ ಹಬ್ಬ ಸಿಂಹ ಮಾಸದಲ್ಲಿ ಬರುತ್ತದೆ. (ಈ ಬಾರಿ ಆಗಸ್ಟ್ ೨೯ರಂದು ಆಚರಿಸಲಾಗುತ್ತಿದೆ.) ಈ ಸಿಂಹ ಮಾಸ ಕೇರಳದವರ ಪಾಲಿಗೆ ಚಿನ್ನದ ಮಾಸ. ಏಕೆಂದರೆ ಈ ವೇಳೆಗೆ ಕೃಷಿ ಚಟುವಟಿಕೆಯನ್ನು ಮುಗಿಸಿ ನೆಮ್ಮದಿಯಾಗಿರುತ್ತಾರಲ್ಲದೆ, ಹಬ್ಬವನ್ನು ಸ್ವಾಗತಿಸಲು ಉತ್ಸುಕರಾಗಿರುತ್ತಾರೆ. ಸಿಂಹ ಮಾಸದ ಹಸ್ತ ನಕ್ಷತ್ರದಿಂದ ಹತ್ತು ದಿನಗಳ ಕಾಲ ಓಣಂ ಆಚರಣೆಯಲ್ಲಿರುತ್ತದೆಯಾದರೂ ಕೊನೆಯ ಶ್ರಾವಣ ನಕ್ಷತ್ರದ ದಿನ ಬಹುಮುಖ್ಯವಾಗಿದ್ದು, ಇದೇ ತಿರುವೋಣಂ. 

ಓಣಂ ಹಬ್ಬಕ್ಕೆ ತನ್ನದೇ ಆದ ಇತಿಹಾಸ  ಹಾಗೂ ಪೌರಾಣಿಕ ಹಿನ್ನಲೆಯಿರುವುದನ್ನು ನಾವು ಕಾಣಬಹುದು. ಈ ಹಬ್ಬ ಪ್ರಾಚೀನ ಕಾಲದಲ್ಲಿಯೇ ಆಚರಣೆಯಲ್ಲಿತ್ತು ಎನ್ನಲಾಗುತ್ತಿದ್ದು, ಕ್ರಿ.ಶ. ೮೬೧ರ ರವಿವರ್ಮನ ಕಾಲದ ತಾಮ್ರದ ಶಾಸನದಲ್ಲಿ ಓಣಂ ಕುರಿತಂತೆ ಉಲ್ಲೇಖಗಳಿವೆ ಎಂದು ಹೇಳಲಾಗಿದೆ.ಓಣಂ ಆಚರಣೆ ಹೇಗೆ ಜಾರಿಗೆ ಬಂತು ಎಂಬುವುದನ್ನು ಪುರಾಣದ ಹಿನ್ನಲೆಯಲ್ಲಿ ನೋಡುವುದಾದರೆ ವಾಮನ ರೂಪದಲ್ಲಿ ಬಂದ ವಿಷ್ಣು ಬಲಿಚಕ್ರವರ್ತಿಯನ್ನು ಸಂಹರಿಸುವ ಕಥೆ ಎಲ್ಲರಿಗೂ ತಿಳಿದದ್ದೇ,  ಓಣಂ ಹಬ್ಬ ಕೂಡ ಬಲಿಚಕ್ರವರ್ತಿಯ ಸಂಹಾರದ ನಂತರ ಆಚರಣೆಗೆ ಬಂದಿದೆ ಎಂಬುವುದು ಪುರಾಣ ಕಥೆಗಳಿಂದ ತಿಳಿದು ಬರುತ್ತದೆ. 

ಪೌರಾಣಿಕ ಹಿನ್ನಲೆ: ಪೌರಾಣಿಕ ಯುಗದಲ್ಲಿ ಬಲಿ ಚಕ್ರವರ್ತಿ ರಾಕ್ಷಸನಾಗಿದ್ದರೂ ಪ್ರಜೆಗಳ ಬಗ್ಗೆ ಕಾಳಜಿವುಳ್ಳವನೂ, ವಾತ್ಸಲ್ಯವುಳ್ಳವನೂ, ಧರ್ಮಿಷ್ಟನೂ, ಮಹಾದಾನಿಯೂ ಹಾಗೂ ಮಹಾ ಪರಾಕ್ರಮಿಯೂ ಆಗಿದ್ದನು. ತನ್ನ ಮಹಾ ಪರಾಕ್ರಮದಿಂದ ಜಗತ್ತನ್ನೇ ಸುತ್ತುವ ದೇವ ವಾಹನವನ್ನು ಪಡೆದಿದ್ದನು. ಆದರೆ ರಾಕ್ಷಸ ಕುಲದವನಾದ ಬಲಿಗೆ ದೇವತೆಗಳ ಮೇಲೆ ಯುದ್ಧ ಸಾರಿ ಅವರನ್ನು ಬಗ್ಗುಪಡೆಯುವ ಹಂಬಲ ಉಂಟಾಗಿತ್ತಲ್ಲದೆ, ಇಂದ್ರಪದವಿಯನ್ನು ಪಡೆದೇ ತೀರಬೇಕೆಂಬ ದುರಾಸೆಯೂ ಮೂಡಿತ್ತು. ಹೀಗಾಗಿ ಇಂದ್ರಪದವಿಯನ್ನು ಪಡೆಯುವುದಕ್ಕಾಗಿ ಮಹಾಯಾಗ ಮಾಡಲು ಮುಂದಾದನು. ಯಾವಾಗ ಬಲಿಚಕ್ರವರ್ತಿ ಮಹಾಯಾಗ ಮಾಡಲು ಹೊರಟಿರುವ ವಿಷಯ ದೇವತೆಗಳ ಕಿವಿಗೆ ಬಿತ್ತೋ ದೇವತೆಗಳು ನಡುಗಿ ಹೋದರು. ಇನ್ನು ನಮಗೆ ಉಳಿಗಾಲವಿಲ್ಲ ಹೇಗಾದರು ಮಾಡಿ ನಮ್ಮನ್ನು ಕಾಪಾಡು ಎಂದು  ವಿಷ್ಣುವಿನ ಮೊರೆಹೋದರು. ದೇವತೆಗಳಿಗೆ ಒದಗಿ ಬಂದ ಕಷ್ಟವನ್ನು ಪರಿಹರಿಸಬೇಕಾದರೆ ಬಲಿಚಕ್ರವರ್ತಿಯನ್ನು ವಧಿಸಬೇಕು ಆದರೆ ಎದುರಿಗೆ ನಿಂತು ಯುದ್ಧ ಮಾಡುವ ಬದಲು ಉಪಾಯದಿಂದ ಸಂಹರಿಸುವ ತಂತ್ರ ರೂಪಿಸಿದ ವಿಷ್ಣು ವಾಮನ ರೂಪದಲ್ಲಿ ಬಲಿ ಚಕ್ರವರ್ತಿ ಬಳಿಗೆ ಬರುತ್ತಾನೆ. ನನಗೆ ತಪಸ್ಸು ಮಾಡಲು ಮೂರು ಅಡಿ ಜಾಗ ಬೇಕೆಂದು ಕೇಳುತ್ತಾನೆ. ಮಹಾದಾನಿಯಾಗಿದ್ದ ಬಲಿಚಕ್ರವರ್ತಿಗೆ ಮೂರು ಅಡಿ ಜಾಗವನ್ನು ಕೇಳುತ್ತಿರುವ ವಾಮನನನ್ನು ಕಂಡು ಕನಿಕರ ಉಂಟಾಗುತ್ತದೆಯಲ್ಲದೆ, ಜಾಗಕೊಡಲು ಒಪ್ಪಿಗೆ ನೀಡುತ್ತಾನೆ. 

ರಾಕ್ಷಸಗುರು ಶುಕ್ರಾಚಾರ್ಯರಿಗೆ ವಾಮನ ರೂಪದಲ್ಲಿ ಬಂದಾತ ವಿಷ್ಣುವೆಂದು ಗೊತ್ತಾಗುತ್ತದೆ. ಹಾಗಾಗಿ ಆತನಿಗೆ ದಾನವಾಗಿ ಜಾಗವನ್ನು ನೀಡದಂತೆ ಬಲಿ ಚಕ್ರವರ್ತಿಯಲ್ಲಿ ಭಿನ್ನವಿಸಿಕೊಳ್ಳುತ್ತಾರೆ.  ಆದರೆ ಈಗಾಗಲೇ ದಾನ ನೀಡುವುದಾಗಿ ಮಾತುಕೊಟ್ಟ ಮೇಲೆ ಅದಕ್ಕೆ ತಪ್ಪುವಾತ ನಾನಲ್ಲ. ಎಂದೂ ತನ್ನ ಬಳಿಗೆ ಬೇಡಿ ಬಂದವರನ್ನು ಬರಿಕೈಯಲ್ಲಿ ಕಳುಹಿಸಿದವನು ನಾನಲ್ಲ ಆದ್ದರಿಂದ ವಾಮನನನ್ನು ಹಿಂದಕ್ಕೆ ಕಳುಹಿಸಲಾರೆ ಎಂದು ಶುಕ್ರಾಚಾರ್ಯರ ಮಾತನ್ನು ಲೆಕ್ಕಿಸದೆ ತಪಸ್ಸಿಗೆ ಸ್ಥಳ ನೀಡುತ್ತಾನೆ.

ಪ್ರಜೆಗಳನ್ನು ನೋಡಲು ಬಲಿ ಬರುತ್ತಾನೆ: ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ವಾಮನ ರೂಪದಲ್ಲಿದ್ದ ವಿಷ್ಣು ಇದ್ದಕ್ಕಿದ್ದಂತೆ ತ್ರಿವಿಕ್ರಮನಾಗಿ ಆಕಾಶಕ್ಕೆತ್ತರ ಬೆಳೆಯುತ್ತಾನೆ. ಅಲ್ಲದೆ ಒಂದು ಪಾದದಿಂದ ಭೂಮಿಯನ್ನು ಇನ್ನೊಂದು ಪಾದದಿಂದ ಆಕಾಶವನ್ನು ಅಳೆದು ಇನ್ನೊಂದು ಪಾದವನ್ನು ಎಲ್ಲಿ ಇಡಲಿ ಎಂದು ಕೇಳುತ್ತಾನೆ. ಮಹಾದಾನಿಯಾಗಿದ್ದ ಬಲಿ ಚಕ್ರವರ್ತಿ ಮಾತಿಗೆ ತಪ್ಪದೆ ತನ್ನ ಶಿರವನ್ನು ತೋರಿಸುತ್ತಾನೆ. ಅದರಂತೆ ವಾಮನ ಅವತಾರದಲ್ಲಿದ್ದ ವಿಷ್ಣು ಆತನ ತಲೆ ಮೇಲೆ ಪಾದವನ್ನಿಡುತ್ತಿದ್ದಂತೆಯೇ ಬಲಿಚಕ್ರವರ್ತಿ ಪಾತಾಳ ಸೇರುತ್ತಾನೆ. ಆದರೆ ಪಾತಾಳ ಸೇರುವ ಮೊದಲು  ವರ್ಷಕ್ಕೊಮ್ಮೆ ಪ್ರಜೆಗಳನ್ನು ನೋಡಲು ಅನುಮತಿಯನ್ನು ಕೋರುತ್ತಾನೆ. ಅದಕ್ಕೆ ವಿಷ್ಣು ಒಪ್ಪಿಗೆ ನೀಡುತ್ತಾನೆ. ಅದರಂತೆ ಇಂದಿಗೂ ತಿರುವೋಣಂ ದಿನ ಬಲಿಚಕ್ರವರ್ತಿ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ ಕೇರಳಿಗರದ್ದಾಗಿದೆ. ಹಾಗಾಗಿ ಮನೆ ಮುಂದಿನ ಅಂಗಳದಲ್ಲಿ ಹೂವಿನ ರಂಗೋಲಿ ಹಾಕಿ ಮಧ್ಯೆ ದೀಪವನ್ನಿಟ್ಟು ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಿ ಬಲಿ ಚಕ್ರವರ್ತಿಗಾಗಿ ಕಾಯುವುದು ಇಂದಿಗೂ ರೂಢಿಯಲ್ಲಿದೆ.

 

ಪುಷ್ಪಲೋಕದ ಅಚ್ಚರಿ 'ಬ್ರಹ್ಮಕಮಲ'

ಬಿ.ಎಂ.ಲವಕುಮಾರ್
ಮಳೆಗಾಲದ ದಿನಗಳಲ್ಲಿ ಮನೆಯ ಮುಂದೆ ಹುಲುಸಾಗಿ ಬೆಳೆದ ಬ್ರಹ್ಮಕಮಲ ಗಿಡಗಳು ಹೂ ಬಿಟ್ಟಾಗ.. ಇದನ್ನು ನೋಡುವ ತವಕ, ಸಂಭ್ರಮ ಗಿಡನೆಟ್ಟ ಪ್ರತಿ ಪುಷ್ಪಪ್ರೇಮಿಯಲ್ಲೂ ಇದ್ದೇ ಇರುತ್ತದೆ. 
ಏಕೆಂದರೆ ಇದು ಇತರೆ ಹೂಗಿಡಗಳಂತೆ ಆಗಾಗ್ಗೆ ಹೂ ಬಿಡುವುದಿಲ್ಲ. ವರ್ಷಕ್ಕೋ... ಎರಡು ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಅದೂ ಕೂಡ ನಡು ರಾತ್ರಿಯಲ್ಲಿ.ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಬ್ರಹ್ಮಕಮಲ ಗಿಡಗಳಲ್ಲಿ ಹೂಗಳು ಬಿಡಲಾರಂಭಿಸುತ್ತವೆ. ಆಷಾಡದಲ್ಲಂತೂ ಗಿಡಗಳು ಒಂದಕ್ಕಿಂತ ಮತ್ತೊಂದು, ತನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಹೂಗಳನ್ನು ಬಿಟ್ಟು ಮನೆಯಂಗಳದಲ್ಲಿ ಶೋಭಿಸುತ್ತವೆ.ಹಾಗೆನೋಡಿದರೆ ಬ್ರಹ್ಮಕಮಲ ಎನ್ನುವುದು ಪುಷ್ಪಲೋಕದ ಅಚ್ಚರಿ ಎಂದರೆ ತಪ್ಪಾಗಲಾರದು. ಕ್ಯಾಕ್ಟಸ್ ಜಾತಿಗೆ ಸೇರಿದ ಬ್ರಹ್ಮಕಮಲದ ವೈಜ್ಞಾನಿಕ ಹೆಸರು ಎಪಿಫಿಲ್ಲಂ ಅಕ್ಸಿಪೆಟಲಂ. ಹಿಂದಿಯಲ್ಲಿ ನಿಶಾಗಂಧಿ, ಅಮೇರಿಕಾದಲ್ಲಿ ಮಿಡ್‌ನೈಟ್ ಲಿಲ್ಲಿ, ಅರ್ಚಿಡ್ ಕ್ಯಾಕ್ಟಸ್, ಪೋಡ್ ಲಿಲ್ಲಿ, ಕ್ಯಾಕ್ಟಸ್ ಬೆಥ್ಲೆಹೆಮ್ ಲಿಲ್ಲಿ ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
ದಕ್ಷಿಣ ಅಮೇರಿಕಾ ಇದರ ತವರೆಂದು ಅಲ್ಲಿಂದ ಸ್ಪೆಲಿಷ್‌ರು ಪೋರ್ಚ್‌ಗೀಸ್ ನಾವಿಕರ ಮೂಲಕ ವಿಶ್ವದ ಇತರ ಕಡೆಗೆ ಹರಡಿತೆಂದು ಹೇಳಲಾಗಿದೆ. ಆದರೆ ಬ್ರಹ್ಮಕಮಲ ಭಾರತದತ್ತ ಹದಿನೇಳನೇ ಶತಮಾನದಲ್ಲಿ ಬಂದಿತೆಂದು ಹೇಳಲಾಗುತ್ತಿದೆ. ಹಿಮಾಚಲದ ಪ್ರದೇಶ, ಕಾಶ್ಮೀರ, ಹಿಮಾಚಲದ ಕೆಲವು ಪ್ರದೇಶಗಳಲ್ಲಿ ಭಾರತದ್ದೇ ಆದ ನೈಜ ಜಾತಿಯ ಗಿಡಗಳು ಇಂದಿಗೂ ಕಂಡುಬರುತ್ತವೆ ಎನ್ನಲಾಗಿದೆ. ಇತರೆ ಪುಷ್ಪಗಿಡಗಳಿಗೆ ಹೋಲಿಸಿದರೆ ಇದು ವಿಶಿಷ್ಟವಾಗಿ, ವಿಭಿನ್ನವಾಗಿ ಗಮನಸೆಳೆಯುತ್ತದೆ. ಸುಮಾರು ಹತ್ತರಿಂದ ಇಪ್ಪತ್ತು ಅಡಿಯಷ್ಟು ಎತ್ತರಕ್ಕೆ ಬೆಳೆಯುವ ಈ ಸಸ್ಯದಲ್ಲಿ ರೆಂಬೆ, ಕೊಂಬೆಗಳೇ ಇಡೀ ಸಸ್ಯದ ಜೀವಾಳವಾಗಿದೆ.
ಚಪ್ಪಟೆಯಾಗಿರುವ ಕಾಂಡ, ರೆಂಬೆಗಳು ಹಚ್ಚಹಸಿರಿನಿಂದ ಕೂಡಿದ್ದು, ಇವುಗಳೇ ಧ್ಯುತಿಸಂಶ್ಲೇಷಣಾ ಕ್ರಿಯೆ ನಡೆಸುತ್ತವೆ. ತುದಿಭಾಗ ನೀಳವಾಗಿ ಹಾಗೂ ಅಗಲವಾಗಿ ಹರಡಿಕೊಂಡಿರುವ ಎಲೆಯೇ ಕಾಂಡವಾಗಿದ್ದು, ಇದನ್ನು ಪರ್ಣಸ್ಥಂಭ ರಚನೆ ಎಂದು ಕರೆಯುತ್ತಾರೆ. ಇದರ ಸಸ್ಯಾಭಿವೃದ್ಧಿ ಅಷ್ಟೇನು ಕಷ್ಟವಲ್ಲ. ಬಲಿತ ಎಲೆಯನ್ನೇ ನೆಟ್ಟರೆ ಸಾಕು ಚಿಗುರು ಮೂಡಿ ಸಸ್ಯ ಬೆಳೆಯುತ್ತದೆ. ಹೆಚ್ಚಿನ ನೀರು, ಗೊಬ್ಬರವನ್ನೂ ಇದು ಅಪೇಕ್ಷಿಸುವುದಿಲ್ಲ. ಹೀಗಾಗಿ ಇದನ್ನು ಮನೆಯ ಅಂಗಳದಲ್ಲಿ ಅಥವಾ ಹೂಕುಂಡಗಳಲ್ಲಿ ಸುಲಭವಾಗಿ ಬೆಳೆಸಬಹುದಾಗಿದೆ. ಮನೆಯ ಒಳಗೆ ಕುಂಡದಲ್ಲಿ ಬೆಳೆಸುವುದರಿಂದ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಮುಂಗಾರು ಆರಂಭವಾಗುತ್ತಿದ್ದಂತೆಯೇ  ಬಲಿತ ಗಿಡಗಳ ಎಲೆಗಳ ರಚನೆಯ ಅಂಚಿನಲ್ಲಿ ಪುಟ್ಟದಾಗಿ ನಸುಕೆಂಪು ಬಣ್ಣದ ಮೊಗ್ಗುಗಳು ಹೊರಬಂದು ಸುಮಾರು ಎರಡು ವಾರಗಳಲ್ಲಿ ಬೊಗಸೆಗಿಂತಲೂ ದೊಡ್ಡದಾಗಿ ಬೆಳೆದು ನೆಲದತ್ತ ಮುಖ ಮಾಡಿ ತೂಗಾಡುತ್ತವೆ. ಆದರೆ ಮೊಗ್ಗುಗಳು ಪಕ್ವಗೊಂಡು ಅರಳುವ ಸಮಯ ಮಾತ್ರ ರಾತ್ರಿಯೇ...
ಹೂಗಳು ರಾತ್ರಿ ಸುಮಾರು ಎಂಟು ಗಂಟೆಯಿಂದ ಅರಳಲು ಆರಂಭವಾಗಿ ಮಧ್ಯರಾತ್ರಿ ವೇಳೆಗೆಲ್ಲಾ ಪೂರ್ಣವಾಗಿ ಅರಳಿ ಸುವಾಸನೆಯನ್ನು ಬೀರಲಾರಂಭಿಸುತ್ತವೆ. ಕೆಂಪು ಪುಷ್ಪಪತ್ರೆಯಲ್ಲಿ ಅಚ್ಚ ಬಿಳಿಯ ದಳಗಳನ್ನೊಳಗೊಂಡ ಹೂಗಳು ಸುಂದರವಾಗಿಯೂ, ಮೋಹಕವಾಗಿಯೂ ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ವರ್ಷದಿಂದ ಕಾದು ಕುಳಿತ ಮನೆ ಮಂದಿಗೆ ಕೊನೆಗೂ ಮಧ್ಯರಾತ್ರಿಯಲ್ಲಿ ಅರಳಿ ತನ್ನ ಚೆಲುವನ್ನು ಪ್ರದರ್ಶಿಸುವ ಮೂಲಕ ತುಂಟ ನಗು ಬೀರುವ ಬ್ರಹ್ಮಕಮಲ ತನ್ನ ಸೌಂದರ್ಯವನ್ನು ಹೆಚ್ಚು ಸಮಯಗಳ ಕಾಲ ಸವಿಯಲು ಅವಕಾಶ ನೀಡುವುದಿಲ್ಲ. ರಾತ್ರಿ ಅರಳಿದ ಹೂ ಬೆಳಿಗ್ಗೆಯಾಗುತ್ತಿದ್ದಂತೆಯೇ ಮುದುಡಿ ಮೊಗ್ಗಿನಂತಾಗಿ ಕೊನೆಗೆ ಉದುರಿ ಬಿದ್ದು ಹೋಗಿ ಬಿಡುತ್ತದೆ. ಒಂದು ಗಿಡ ಇಷ್ಟೇ ಹೂ ಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ಗಿಡಗಳ ಬೆಳವಣಿಗೆ ಹಾಗೂ ಅವುಗಳ ಶಕ್ತಿಯಾನುಸಾರ ಹೂ ಬಿಡುತ್ತದೆ. ಗಿಡವೊಂದರಲ್ಲಿ ನಾಲ್ಕರಿಂದ ಪ್ರಾರಂಭವಾಗಿ ನೂರಾರು ಹೂಗಳನ್ನು ಬಿಡುತ್ತವೆ. ಗಿಡದ ತುಂಬಾ ಹೂವರಳಿದ ಸಂದರ್ಭ ಅದನ್ನು ನೋಡುವುದೇ ಒಂದು ಸಂಭ್ರಮ.  

ಮನೆ ಅಂಗಳದಲ್ಲೊಂದು ಸುಂದರ ತುತ್ತೂರಿ ಹೂ...

ಬಿ.ಎಂ.ಲವಕುಮಾರ್
ಮನೆಗೊಂದು  ಮಿಂಚುಬಳ್ಳಿಯಾಗಿ ಮನೆಯ ಛಾವಣಿಯಲ್ಲಿ, ಹೂತೋಟದ ಮರಗಳಲ್ಲಿ, ಚಪ್ಪರಗಳಲ್ಲಿ, ಕಾಂಪೌಂಡ್‌ನಲ್ಲಿ ಹೀಗೆ ಎಲ್ಲೆಂದರಲ್ಲಿ ಹಬ್ಬಿ ದೊಡ್ಡ ದೊಡ್ಡ ಗೊಂಚಲುಗಳಲ್ಲಿ ತುತ್ತೂರಿಯಾಕಾರದ ಹೂಗಳೊಂದಿಗೆ ಕಣ್ಮನ ಸೆಳೆಯುವ ಪಿರೋಸ್ಟೇಜಿಯಾ ವೀನ್ ಸ್ಟಾ ಎಂಬ ಸುಂದರ ಹೂವುಗಳನ್ನು ನೋಡದವರು ವಿರಳವೇ ಎನ್ನಬೇಕು. ಇದನ್ನು ಕೆಲವರು ಜಿಲೇಬಿ ಹೂವೆಂದು ಕರೆದರೆ, ಮತ್ತೆ ಕೆಲವರು ತುತ್ತೂರಿ ಹೂ ಎಂದೇ ಕರೆಯುತ್ತಾರೆ.
 ಈ ಹೂಬಳ್ಳಿ ಚಪ್ಪರದಲ್ಲೋ, ಕಾಂಪೌಂಡ್‌ನಲ್ಲೋ ಹಬ್ಬಿ ಹೂಬಿಟ್ಟಿತೆಂದರೆ ಅದರ ಸೌಂದರ್ಯವನ್ನು ಸವಿಯುವುದೇ ಒಂದು ರೀತಿಯ ಮಜಾ. ಹಾಗಾಗಿ ಇದನ್ನು ಮನೆಯ ಮುಂದಿನ ಚಿನ್ನದ ಮಳೆಗೆರೆವ  ಹೂಬಳ್ಳಿ ಎಂದರೂ ತಪ್ಪಾಗಲಾರದು. ಸದಾ ಹೂಬಿಟ್ಟು ಕಂಗೊಳಿಸುತ್ತಾ ಮನೆಗೆ, ಉದ್ಯಾನವನಕ್ಕೆ ಮೆರಗು ತರುವ ಈ ಹೂಬಳ್ಳಿ ಮೂಲತಃ ಬ್ರೆಜಿಲ್ ದೇಶದ್ದು ಎನ್ನಲಾಗಿದೆ. ಉಷ್ಣವಲಯ ಹಾಗೂ ಸಮಶೀತೋಷ್ಣವಲಯದಲ್ಲಿ ಹುಲುಸಾಗಿ ಬೆಳೆಯುತ್ತದೆ. ನಮ್ಮ ದೇಶದಲ್ಲಿ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ದಕ್ಷಿಣ ಅಮೇರಿಕಾದಲ್ಲಿ ಪಿರೋಸ್ಟೆಜಿಯಾ ವೀನ್ ಸ್ಟಾಗೆ ಸೇರಿದ ಐದು ತಳಿಗಳಿವೆ ಎಂದು ಹೇಳಲಾಗಿದೆ. ಮನೆಯ ಮುಂದೆ ಚಪ್ಪರ ಹಾಕಿ ಹಬ್ಬಿಸಿದ್ದೇ ಆದರೆ ಸದಾ ಹೂಬಿಟ್ಟು ಮನೆಗೆ ಶೋಭೆ ತರುವುದರೊಂದಿಗೆ ತಂಪು ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಇದನ್ನು  ಬೃಂದಾವನಗಳಲ್ಲಿ ಸುಂದರವಾಗಿ ವಿವಿಧ ವಿನ್ಯಾಸದಲ್ಲಿ ಹಬ್ಬಿಸಲಾಗುತ್ತದೆ. ಇದು ಹೂಬಿಟ್ಟಾಗ ತನ್ನ ಚೆಲುವಿನಿಂದ ದೂರದಿಂದಲೇ ಪುಷ್ಪಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತದೆ. 
ಪಿರೋಸ್ಟೆಜಿಯಾ ವೀನ್ ಸ್ಟಾ ಚಪ್ಪರ ಹಾಗೂ ಕಾಂಪೌಂಡ್‌ನ್ನು ಹುಲುಸಾಗಿ ಹಬ್ಬಿ ಬೆಳೆಯಲು ನೇರವಾಗಿ ಬೀಳುವ ಸುರ್ಯನ ಬೆಳಕು ಮತ್ತು ಅಧಿಕ ತೇವಾಂಶದ ಮಣ್ಣು ಬೇಕು. ಬಳ್ಳಿಯು ಹಬ್ಬುತ್ತಾ ಸಾಗಲು ಮರಿ ಬಳ್ಳಿಗಳು ಸಹಾಯ ಮಾಡುತ್ತವೆ. ಬಳ್ಳಿಯಲ್ಲಿ ಎರಡು ಅಥವಾ ಮೂರು ಎಲೆಗಳು ಮತ್ತೆ ಕಾಂಡ ಎಲೆಗಳು ಹೀಗೆ ಇದ್ದು ಇವು ಬಳ್ಳಿ ಹಬ್ಬಲು ಅಂದರೆ ನಾವು ನಿರ್ಮಿಸಿದ ಆಧಾರವನ್ನು ಆಶ್ರಯಿಸಿಕೊಂಡು ಬೆಳೆಯಲು ಸಹಾಯ ಮಾಡುತ್ತವೆ.  ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್ ನಡುವೆ ಬಳ್ಳಿಯ ತುಂಬಾ ಕಡು ಕೇಸರಿ ಬಣ್ಣದ ತುತ್ತೂರಿ ಆಕಾರದ ಹೂಗಳು ಗೊಂಚಲು ಗೊಂಚಲಾಗಿ ಬಳ್ಳಿ ತುಂಬಾ ಅರಳಿ ಕಂಗೊಳಿಸುವುದರೊಂದಿಗೆ ನೋಡುಗರನ್ನು ತನ್ನತ್ತ ಸೆಳೆಯುತ್ತವೆ.
ಈ ಹೂವಿನ ರಚನೆಯು  ವಿಭಿನ್ನವಾಗಿದ್ದು, ಮೂರರಿಂದ ಆರು ಇಂಚಿನಷ್ಟು ಉದ್ದದ ದಳನಾಳವನ್ನು ಹೊಂದಿ ಕಪ್ ಆಕಾರದ ಪುಷ್ಪ ಪಾತ್ರೆ ಐದು ದಳಗಳನ್ನೊಳಗೊಂಡ ಆಕರ್ಷಕ ಕೇಸರಗಳಿವೆ. ಬಳ್ಳಿಯಲ್ಲಿ ಹೂಬಿಟ್ಟ ನಂತರ ಕಾಯಿಗಳಾಗುತ್ತವೆ. ಈ ಕಾಯಿಗಳ ಬೀಜದಿಂದ ಸಸ್ಯಾಭಿವೃದ್ಧಿ ಮಾಡಬಹುದಾದರೂ ಹೆಚ್ಚಿನವರು ಬಳ್ಳಿಯನ್ನೇ ಕತ್ತರಿಸಿ ನೆಡುವ ಮೂಲಕ ಸಸ್ಯಾಭಿವೃದ್ಧಿ ಮಾಡುವುದನ್ನು ನಾವು ಕಾಣಬಹುದು. ಒಂದು ವರ್ಷವಾಗಿರುವ ಬಳ್ಳಿಯನ್ನು ಕತ್ತರಿಸಿ ಸುಮಾರು ಇಪ್ಪತ್ತು ಸೆಂಟಿ ಮೀಟರ್ ಉದ್ದಕ್ಕೆ  ತುಂಡುಗಳನ್ನಾಗಿ ಮಾಡಿ ನಾವು ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ ಸುಮಾರು ಒಂದೂವರೆ ಅಡಿಯಷ್ಟು ಉದ್ದ ಹಾಗೂ ಅಗಲದ ಗುಂಡಿ ತೋಡಿ ಅದರಲ್ಲಿ ಕೊಟ್ಟಿಗೆ ಗೊಬ್ಬರ ಹಾಗೂ ಮಣ್ಣನ್ನು ಬೆರೆಸಿ ನಾಟಿ ಮಾಡಬೇಕು. ಮಣ್ಣಿನ ತೇವಾಂಶ ನೋಡಿಕೊಂಡು ನೀರು ಹಾಕಬೇಕು. ಕೆಲವು ದಿನಗಳಲ್ಲಿ ನೆಟ್ಟ ಬಳ್ಳಿ ಚಿಗುರೊಡೆದು ಹಬ್ಬಲಾರಂಭಿಸುತ್ತದೆ ಈ ಸಂದರ್ಭ ಆಧಾರ ನೀಡಿ ಹಬ್ಬಿಸಬೇಕು. ಇನ್ನು ಪಾಲಿಥೀನ್ ಚೀಲದಲ್ಲಿ ಬಳ್ಳಿಯನ್ನು ಕತ್ತರಿಸಿ ಒಂದು ಚೀಲದಲ್ಲಿ ಎರಡರಿಂದ ಮೂರು ಬಳ್ಳಿಯನ್ನು ನೆಡಬೇಕು ಅದು ಚಿಗುರಿದ ಬಳಿಕ ನಮಗೆ ಎಲ್ಲಿ ಬೇಕೋ ಅಲ್ಲಿ ಸೂಕ್ತ ಸ್ಥಳದಲ್ಲಿ ಅದನ್ನು ನೆಟ್ಟು ಬೆಳೆಸಬಹುದು. ಬಳ್ಳಿ ನೆಟ್ಟು ಒಂದೆರಡು ವರ್ಷದಲ್ಲಿ  ಹೂಬಿಡಲು ಆರಂಭಿಸುತ್ತದೆ. ಅಷ್ಟೇ ಅಲ್ಲ ಹೂಗಳು ಹೆಚ್ಚು ಸಮಯ ಬಳ್ಳಿಯಲ್ಲಿದ್ದು ಮನೆಯಂಗಳದ ಚೆಲುವನ್ನು ಇಮ್ಮಡಿಗೊಳಿಸುತ್ತವೆ.

ನಂಜನಗೂಡಿನಲ್ಲಿ ಪಂಚ ಮಹಾರಥೋತ್ಸವ 

ಬಿ.ಎಂ.ಲವಕುಮಾರ್

ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಮೈಸೂರಿನ ನಂಜನಗೂಡಿನಲ್ಲೀಗ ಪಂಚ ಮಹಾರಥೋತ್ಸವದ ಸಂಭ್ರಮ. ಹಾಗಾಗಿ ಎಲ್ಲೆಡೆಯಿಂದ ಭಕ್ತ ಸಾಗರವೇ ನಂಜನಗೂಡಿಗೆ ಹರಿದು ಬರತೊಡಗಿದೆ.ಮೈಸೂರಿನಿಂದ ಸುಮಾರು 25ಕಿ.ಮೀ ದೂರದಲ್ಲಿರುವ ನಂಜನಗೂಡು ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು ಇಲ್ಲಿರುವ ಶ್ರೀಕಂಠೇಶ್ವರ ದೇಗುಲ ಇತಿಹಾಸ ಪ್ರಸಿದ್ಧವಾಗಿದೆ. ವರ್ಷಂಪ್ರತಿ ಮೀನ ಮಾಸದಲ್ಲಿ ಉತ್ತರ ನಕ್ಷತ್ರದ ದಿನದಂದು ಸಲ್ಲುವ ಲಗ್ನದಲ್ಲಿ ನಡೆಯುವ ಪಂಚಮಹಾರಥೋತ್ಸವ ವೈಶಿಷ್ಟ್ಯಪೂರ್ಣವಾಗಿದ್ದು, ಇಂತಹವೊಂದು ರಥೋತ್ಸವವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಪ್ರಸಕ್ತ ವರ್ಷ ಏಪ್ರಿಲ್ 1ರಂದು  ಶ್ರೀಕಂಠೇಶ್ವರ ಪಂಚರಥೋತ್ಸವ ನಡೆಯಲಿದೆ.

ಗೌತಮರಥ ಪ್ರಮುಖ ಆಕರ್ಷಣೆ: ಪಂಚರಥೋತ್ಸವದ ಸಂದರ್ಭ ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಗೌತಮ ರಥಗಳನ್ನು ಎಳೆಯಲಾಗುವುದು. ಈ ಐದು ರಥಗಳ ಪೈಕಿ ಗೌತಮ ರಥ ಮುಖ್ಯವಾಗಿದ್ದು, ಪಂಚ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಈ ರಥವು ಸುಮಾರು 205 ಟನ್ ತೂಕ, 90 ಅಡಿ ಎತ್ತರವನ್ನು ಹೊಂದಿದೆ. ವಿವಿಧ ಬಣ್ಣದ ಬಟ್ಟೆಗಳನ್ನು ಸುತ್ತಿ, ಹೂವಿನಿಂದ ಅಲಂಕರಿಸಲಾಗುವ ರಥದ ತುದಿಯಲ್ಲಿ  ಧ್ವಜವನ್ನು ಕಟ್ಟಲಾಗುತ್ತದೆ. ಬಳಿಕ ನವರತ್ನ ಹಾಗೂ ಹೂವಿನಿಂದ ಕಂಗೊಳಿಸುವ ಶ್ರೀಕಂಠಸ್ವಾಮಿಯ ವಿಗ್ರಹವನ್ನು ರಥದಲ್ಲಿರಿಸಿ ಮುಂಜಾನೆ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿಧಿವಿಧಾನದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಂತರ ರಥಕ್ಕೆ ಮಹಾಮಂಗಳಾರತಿಯನ್ನು ಮಾಡುವ ಮೂಲಕ ರಥಕ್ಕೆ ಚಾಲನೆ ನೀಡಲಾಗುತ್ತದೆ.

ಮುಗಿಲು ಮುಟ್ಟುವ ಘೋಷಣೆ: ರಥೋತ್ಸವದ ಈ ಭವ್ಯ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದ ಭಕ್ತರು ಜೈ ಶ್ರೀಕಂಠ, ಜೈ ನಂಜುಂಡ ಎಂದು ಮುಗಿಲು ಮುಟ್ಟುವಂತೆ ಘೋಷಣೆಗಳನ್ನು ಕೂಗುತ್ತಾ ರಥಕ್ಕೆ ಎರಡು ಕಡೆಯಲ್ಲಿ ಕಟ್ಟಿದ್ದ ಹಗ್ಗವನ್ನು ಎಳೆಯುತ್ತಾರೆ. ರಥ ಮುಂದೆ ಚಲಿಸುತ್ತಿದ್ದಂತೆಯೇ ಭಾವಪರವಶಗೊಂಡ ಭಕ್ತರು ರಥದ ಮೇಲೆ ದವನ ಬಾಳೆಹಣ್ಣುಗಳನ್ನು ಎಸೆದು ತಮ್ಮ ಹರಕೆಯನ್ನು ಶ್ರೀಕಂಠನಿಗೆ ಅರ್ಪಿಸುತ್ತಾರೆ. ರಥವು ಜನಸಾಗರದೊಂದಿಗೆ ಚಲಿಸಿ ರಾಜಗೋಪುರಕ್ಕೆ ನೇರವಾಗಿ ಬಂದು ನಿಂತಾಗ ಕಂಡು ಬರುವ ದೃಶ್ಯ ಮನಮೋಹಕವಾಗಿರುತ್ತದೆ. ನೂತನವಾಗಿ ವಿವಾಹವಾದ ನವದಂಪತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು-ದವನ ಎಸೆಯುವ ಮೂಲಕ ತಮ್ಮ ಹರಕೆಯನ್ನು ಒಪ್ಪಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ರಥಗಳು ಭಕ್ತಸಾಗರದೊಂದಿಗೆ ರಥಬೀದಿಯಲ್ಲಿ ಸಾಗುತ್ತಿದ್ದರೆ ಆ ಸುಂದರ ದೃಶ್ಯವನ್ನು ನೋಡಲು ಎರಡು ಕಣ್ಣುಗಳೇ ಸಾಲದು ಎಂಬಂತೆ ಭಾಸವಾಗುತ್ತದೆ.

ಎಲ್ಲೆಡೆ ಸಂಭ್ರಮ:  ಈ ರಥೋತ್ಸವಕ್ಕೆ ಇಡೀ ನಂಜನಗೂಡು ಪಟ್ಟಣವೇ ತಳಿರು ತೋರಣಗಳಿಂದ ಅಲಂಕಾರಗೊಂಡು ನವವಧುವಿನಂತೆ ಕಂಗೊಳಿಸಿದರೆ, ಮನೆಮನೆಗಳಲ್ಲಿ ಹಬ್ಬದ ವಾತಾವರಣ ನೆಲೆಸುತ್ತದೆ. ದೂರದ ಊರಿನಲ್ಲಿ ನೆಲೆಸಿರುವವರು ತಪ್ಪದೆ ತಮ್ಮ ಊರಿಗೆ ಬಂದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.ಹಿಂದೊಮ್ಮೆ ರಥೋತ್ಸವದ ಸಂದರ್ಭ ಅವಘಡ ಸಂಭವಿಸಿ ಓರ್ವ ಮೃತಪಟ್ಟು ಮೂವರು ತೀವ್ರಗಾಯಗೊಂಡ ಹಿನ್ನಲೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ರಥಗಳ ದುರಸ್ತಿ: ಬಹಳ ಹಿಂದಿನ ಕಾಲದ ರಥಗಳಾಗಿರುವುದರಿಂದ ಅವುಗಳ ಚಕ್ರಗಳು ಶಿಥಿಲಗೊಂಡಿತ್ತು. ಆದರೆ ಕೆಲ ವರ್ಷಗಳ ಹಿಂದೆ ಸುಮಾರು 35ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ರಥಗಳನ್ನು ಗೊಬ್ಬಳಿ ಮರ ಬಳಸಿ ದುರಸ್ತಿ ಮಾಡಲಾಗಿದೆ. ಕನ್ಯಾಕುಮಾರಿಯ ರಾಮಸ್ವಾಮಿ ಆಚಾರ್ ನೇತೃತ್ವದ 12 ಮಂದಿಯ ತಂಡ ದುರಸ್ತಿ ಕಾರ್ಯನಡೆಸಿದ್ದಾರೆ.

ರಥೋತ್ಸವದ ಪ್ರಯುಕ್ತ ಭಕ್ತರಿಗೆ ಅನುಕೂಲವಾಗುವಂತೆ ಮೈಸೂರಿನಿಂದ ನಂಜನಗೂಡಿಗೆ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ರಥೋತ್ಸವದಲ್ಲಿ ವಿವಿಧ ಸಂಘ ಸಂಸ್ಥೆಗಳು ಅನ್ನಸಂತರ್ಪಣೆ, ಪಾನಕ, ಮಜ್ಜಿಗೆ, ಕೋಸಂಬರಿಯನ್ನು ವಿತರಿಸಲು ಮುಂದಾಗಿವೆ. ತನ್ನದೇ ಆದ ಇತಿಹಾಸ ಪರಂಪರೆ ಹೊಂದಿರುವ ನಂಜನಗೂಡಿನ ಪಂಚರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿ ಶ್ರೀಕಂಠನ ಕೃಪೆಗೆ ಪಾತ್ರರಾಗಬೇಕೆಂಬ ಬಯಕೆ ನಿಮ್ಮಲ್ಲೂ ಇರಬಹುದಲ್ಲವೆ ಹಾಗಾದರೆ ಈ ಬಾರಿ ನಡೆಯಲಿರುವ ರಥೋತ್ಸವಕ್ಕೆ ತಪ್ಪದೆ ಬನ್ನಿ.

ಮೇಲುಕೋಟೆಯಲ್ಲಿ ವೈರಮುಡಿ ವೈಭವ...

ಬಿ.ಎಂ.ಲವಕುಮಾರ್

ಬೆಟ್ಟಗುಡ್ಡಗಳು... ಅವುಗಳ ಮೇಲೆ ಮತ್ತು ನಡುವೆ ನೆಲೆನಿಂತಿರುವ ಹತ್ತಾರು ದೇಗುಲಗಳು... ಸ್ಪಟಿಕದಂತೆ ಹೊಳೆಯುವ ಸುಂದರ ಕಲ್ಯಾಣಿ, ಕೆರೆಗಳು... ಹಚ್ಚ ಹಸಿರಿನೊಂದಿಗೆ ಸುತ್ತಲೂ ಹರಡಿಕೊಂಡಿರುವ ಕೃಷಿ ಭೂಮಿಗಳು... ವರ್ಣಿಸುತ್ತಾ ಹೋದಂತೆ ಇದ್ಯಾವ ಸುಂದರ ತಾಣ ಎಂಬ ಕುತೂಹಲವಾಗಿರಬಹುದಲ್ಲವೆ? ಅದುವೇ ಪವಿತ್ರ ಕ್ಷೇತ್ರ ಮಾತ್ರವಲ್ಲದೆ, ಪ್ರವಾಸಿ ತಾಣವಾಗಿಯೂ ಆಸ್ತಿಕ-ನಾಸ್ತಿಕರೆನ್ನದೆ ಎಲ್ಲರನ್ನೂ ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುವ ಮೇಲುಕೋಟೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿಗೆ ಸೇರಿರುವ ಮೇಲುಕೋಟೆಯು  ಮಂಡ್ಯದಿಂದ 28 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿಯಷ್ಟು ಎತ್ತರದಲ್ಲಿದೆ. ಇದು ಭಾರತದಲ್ಲಿರುವ ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿದ್ದು, ದಕ್ಷಿಣ ಭಾರತದ ಪ್ರಮುಖ ನಾಲ್ಕು ವೈಷ್ಣವ ಕ್ಷೇತ್ರ ( ಶ್ರೀರಂಗ, ತಿರುಪತಿ, ಕಾಂಚೀಪುರ, ಮೇಲುಕೋಟೆ)ಗಳಲ್ಲಿ ಒಂದಾಗಿದೆ.ಮೇಲುಕೋಟೆಯಲ್ಲಿ ಪ್ರತಿವರ್ಷವೂ ಹಲವಾರು ಕಾರ್ಯಕ್ರಮ, ಉತ್ಸವಗಳು ನಡೆಯುತ್ತವೆಯಾದರೂ ಅವುಗಳಲ್ಲಿ ಹತ್ತು ದಿನಗಳ ಕಾಲ ನಡೆಯುವ ಚೆಲುವರಾಯಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಅತ್ಯಂತ ಪ್ರಮುಖವಾದುದಾಗಿದೆ.
ವೈರಮುಡಿ ಉತ್ಸವ: ಚೆಲುವರಾಯಸ್ವಾಮಿಯ ವೈರಮುಡಿಯ ಬ್ರಹ್ಮೋತ್ಸವವು ಪ್ರತಿ ವರ್ಷವೂ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಯುತ್ತದೆ. (ಪ್ರಸಕ್ತ ಮಾ.30 ರಂದು ವೈರಮುಡಿ ಉತ್ಸವ ನಡೆಯಲಿದೆ.) ವೈರಮುಡಿ ಎಂಬುವುದು ವಜ್ರ ಖಚಿತ ಕಿರೀಟವಾಗಿದ್ದು, ಇದು ಶ್ರೀಮಾನ್ ನಾರಾಯಣನ ಕಿರೀಟವೆಂದೂ ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂಬುವುದು ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂಬುದು ಜನವಲಯದಲ್ಲಿರುವ ನಂಬಿಕೆಯಾಗಿದೆ.
ಇದನ್ನು ಚೆಲುವರಾಯಸ್ವಾಮಿಗೆ  ಧರಿಸುವ ಸಂದರ್ಭ ನಡೆಯುವ ಉತ್ಸವವೇ ವೈರಮುಡಿ ಬ್ರಹ್ಮೋತ್ಸವವಾಗಿದೆ. ಇದು ಹೇಗೆ ಆಚರಣೆಗೆ ಬಂತೆಂಬುವುದರ ಬಗ್ಗೆ ಪುರಾಣದ ಕಥೆಯೊಂದು ಪ್ರಚಲಿತದಲ್ಲಿರುವದನ್ನು ನಾವು ಕಾಣಬಹುದು.
ಅದು ತ್ರೇತಾಯುಗದ ದಿನಗಳು... ಅಯೋಧ್ಯೆಯಲ್ಲಿ ದಶರಥ ಮಹಾರಾಜ ತನ್ನ ಮಾನಸ ಪುತ್ರ ಶ್ರೀರಾಮಚಂದ್ರನಿಗೆ  ಪಟ್ಟಾಭಿಷೇಕ ಮಾಡಲು ನಿರ್ಧರಿಸಿ, ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನವನ್ನು ಗೊತ್ತು ಮಾಡಿ ಅರಮನೆಯಲ್ಲಿ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿದ್ದನು. ಇನ್ನೇನು ಪಟ್ಟಾಭಿಷೇಕ ನಡೆಯಬೇಕೆನ್ನುವಷ್ಟರಲ್ಲಿ ಕೈಕೇಯಿಯ ಕುತಂತ್ರದಿಂದಾಗಿ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು. ಆದರೆ ತನ್ನ ಅಣ್ಣ ಶ್ರೀರಾಮನ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ್ದ ಸೋದರ ಲಕ್ಷಣನಿಗೆ ತನ್ನ ಆಸೆ ಈಡೇರಲಿಲ್ಲವಲ್ಲ  ಎಂಬ ಕೊರಗು ಸದಾ ಕಾಡುತ್ತಿತ್ತು. ಆದರೆ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಆದಿಶೇಷನ ಅವತಾರವಾಗಿದ್ದ ಲಕ್ಷ್ಮಣ ಮುಂದೆ ಕಲಿಯುಗದಲ್ಲಿ ರಾಮಾನುಜರಾಗಿ ಜನಿಸಿ, ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿ ನೆಲೆಸಿದ ಮೇಲುಕೋಟೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಧರಿಸುವ ಮೂಲಕ ತನ್ನ ಮನದ ಇಚ್ಛೆಯನ್ನು ನೆರವೇರಿಸಿಕೊಂಡನಂತೆ ಈ ಸುದಿನವನ್ನು ಪ್ರತಿವರ್ಷವೂ ವೈರಮುಡಿ ಬ್ರಹ್ಮೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮೈಸೂರು ರಾಜರ ಆಡಳಿತದಲ್ಲಿ ವೈರಮುಡಿ ಕಿರೀಟ ರಾಜಾಶ್ರಯದಲ್ಲಿತ್ತಾದರೂ ಬಳಿಕ ಸರ್ಕಾರದ ವಶಕ್ಕೆ ಹಸ್ತಾಂತರಿಸಲಾಯಿತು. ಈಗ ಮಂಡ್ಯದ ಸರ್ಕಾರಿ ಖಜಾನೆಯಲ್ಲಿದ್ದು, ಉತ್ಸವದ ಸಂದರ್ಭ ವೈರಮುಡಿ, ರಾಜಮುಡಿ ಕಿರೀಟವನ್ನು ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ತರಲಾಗುತ್ತದೆಯಲ್ಲದೆ, ಬಳಿಕ ದ್ವಾರದ ಹನುಮಂತನ ಗುಡಿಯ ಬಳಿಯಿಂದ ಬೆಳ್ಳಿ ಪಲ್ಲಕಿಯಲ್ಲಿರಿಸಿ ಪೂಜಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.
ವೈರಮುಡಿ ಬ್ರಹ್ಮೋತ್ಸವ ಸಂದರ್ಭ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಮಾತ್ರವಲ್ಲದೆ, ಮೈಸೂರು ಅರಸರಾದ ರಾಜ ಒಡೆಯರ್ ಅರ್ಪಿಸಿದ ರಾಜಮುಡಿಯಲ್ಲದೆ, ಗಂಡಭೇರುಂಡ ಪದಕ, ಶಂಖ, ಚಕ್ರ, ಗಧೆ, ಪದ್ಮಪೀಠ, ಕರ್ಣಕುಂಡಲ ಸೇರಿದಂತೆ 14 ಆಭರಣಗಳನ್ನು ಧರಿಸಲಾಗುತ್ತದೆ. ದಶ ದಿನಗಳ ಉತ್ಸವ: ಹತ್ತು ದಿನಗಳ ಉತ್ಸವದಲ್ಲಿ ಪ್ರತಿದಿನವೂ ವಿವಿಧ ಕೈಂಕರ್ಯಗಳೊಂದಿಗೆ ಉತ್ಸವ ನಡೆಯುತ್ತದೆ.  ಸಂಜೆ ನಡೆಯುವ ಕಲ್ಯಾಣೋತ್ಸವದ ಮೂಲಕ ಉತ್ಸವ ಆರಂಭವಾಗುತ್ತದೆ. ಧ್ವಜಾರೋಹಣದಂದು ಗರುಡನಿಗೆ ಪೂಜೆ ಸಲ್ಲಿಸುವುದರೊಂದಿಗೆ ಬ್ರಹ್ಮೋತ್ಸವಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸಲಾಗುವುದು. ಆ ದಿನ ಚೆಲುವರಾಯಸ್ವಾಮಿ ಹಂಸವಾಹನದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ. ಎರಡನೆಯ ದಿನ ಶ್ರೀದೇವಿ ಭೂದೇವಿಯರೊಂದಿಗೆ ಶೇಷವಾಹನದ ಸೊಬಗಾದರೆ, ಮೂರನೆಯ ದಿನ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಬಂಗಾರದ ಪಲ್ಲಕ್ಕಿಯಲ್ಲಿ  ನಾಗವಲ್ಲಿ ಮಹೋತ್ಸವದ ಮೆರವಣಿಗೆ ನಡೆಯುತ್ತದೆ. ಅಲ್ಲದೆ ಲೋಕಕಲ್ಯಾಣಾರ್ಥ ಹೋಮ ಕೂಡ ಮಾಡಲಾಗುತ್ತದೆ. 
ಜಾತ್ರೆಯಲ್ಲಿ ನಾಲ್ಕನೆಯ ದಿನವು ಬಹಳ ಪ್ರಮುಖ ದಿನವಾಗಿದ್ದು ಅಂದು ರಾತ್ರಿ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ  ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಹಾಗೂ ಬ್ರಾಹ್ಮಿ ಮುಹೂರ್ತದಲ್ಲಿ  ರಾಜಮುಡಿ ಕಿರೀಟವನ್ನು ಧಾರಣೆ ಮಾಡಲಾಗುತ್ತದೆ. ಐದನೆಯ ದಿನ ಸಂಜೆ ದೇಶಿಕರ ಸನ್ನಿಧಿಯಲ್ಲಿ  ಪ್ರಹ್ಲಾದ ಪರಿಪಾಲನೋತ್ಸವ ನಡೆಯುತ್ತದೆ. ಅಂದು ರಾತ್ರಿ ಬಂಗಾರದ ಗರುಡವಾಹನದಲ್ಲಿ ಅಲಂಕಾರಗೊಂಡ ಚೆಲುವರಾಯಸ್ವಾಮಿ ಭಕ್ತರಿಗೆ ದರ್ಶನ ನೀಡುತ್ತಾನೆ. ಆರನೆಯ ದಿನ ಗಜೇಂದ್ರಮೋಕ್ಷ ಅಲಂಕಾರದ ವೈಭೋತ್ಸವ ಬಳಿಕ ಆನೆ, ಕುದುರೆ ಮಹೋತ್ಸವವು ನಡೆಯುತ್ತದೆ. ಏಳನೆಯ ದಿನ ಶ್ರೀದೇವಿ, ಭೂದೇವಿ, ಕಲ್ಯಾಣನಾಯಕಿ ಹಾಗೂ ರಾಮಾನುಜರೊಂದಿಗೆ ಮಹಾರಥೋತ್ಸವವು ನಡೆಯುತ್ತದೆ. ರಾತ್ರಿ ಬಂಗಾರದ ಪಲ್ಲಕಿ ಸೇವೆಯೂ ಜರುಗುತ್ತದೆ. ಎಂಟನೆಯ ದಿನದಂದು ಕಲ್ಯಾಣಿಯಲ್ಲಿ ಚೆಲುವರಾಯಸ್ವಾಮಿಯ ತೆಪ್ಪೋತ್ಸವವು ನಡೆಯುತ್ತದೆ. ಒಂಭತ್ತನೆಯ ದಿನ ತೀರ್ಥಸ್ನಾನ, ಅವಭೃತ ನಂತರ ಸಂಜೆ ಪರಕಾಲ ಮಠದಲ್ಲಿ ವೈಭವದಿಂದ ಪಟ್ಟಾಭಿಷೇಕ ಜರುಗುತ್ತದೆ.  ಹತ್ತನೆಯ ದಿನ ಜಾತ್ರೆಯ ಅಂತಿಮ ದಿನವಾಗಿದ್ದು ಅಂದು  ಶ್ರೀಚೆಲುವರಾಯಸ್ವಾಮಿಗೆ  ಮಹಾಭಿಷೇಕ ನೆರವೇರುತ್ತದೆ. ಅಲ್ಲಿಗೆ ವೈರಮುಡಿ ಜಾತ್ರೆಯ ಸಂಭ್ರಮ ಮುಗಿದು ಹೋಗುತ್ತದೆ. ಜಾತ್ರೆಗೆ ಸುತ್ತಮುತ್ತಲ ಹಳ್ಳಿಗಳಿಂದ ದೂರದ ಊರುಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡು ಪುನೀತರಾದ ಸಂತಸದಲ್ಲಿ ಮನೆಗೆ ತೆರಳುತ್ತಾರೆ.
ಗಮನಸೆಳೆಯುವ ದೇಗುಲ, ಕಲ್ಯಾಣಿಗಳು: ಹಾಗೆನೋಡಿದರೆ ವೈರಮುಡಿ ಬ್ರಹ್ಮೋತ್ಸವ ಕಳೆದ ತಕ್ಷಣ ಜನಜಂಗುಳಿ ಕಡಿಮೆಯಾಗುವುದಿಲ್ಲ. ಇಲ್ಲಿಗೆ ವರ್ಷಪೂರ್ತಿ ದೇಶ, ವಿದೇಶದಿಂದ  ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಏಕೆಂದರೆ ಈ ತಾಣದ ಮಹಿಮೆಯೇ ಹಾಗಿದೆ. ಇಲ್ಲಿ ಹಲವಾರು ದೇಗುಲಗಳು, ಕಲ್ಯಾಣಿಗಳು, ಕೆರೆಗಳು ಇರುವುದನ್ನು ನಾವು ಕಾಣಬಹುದು, ವಿಶಿಷ್ಟ ವಾಸ್ತುಶಿಲ್ಪದ ವಿಶಾಲವಾದ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಚೆಲುವರಾಯಸ್ವಾಮಿ ದೇಗುಲ ಹಾಗೂ ಬೆಟ್ಟದ ಮೇಲೆ ನೆಲೆ ನಿಂತಿರುವ ಯೋಗನರಸಿಂಹ ದೇವಾಲಯದ ನಡುವೆ ಬದರಿ ನಾರಾಯಣ ದೇವಾಲಯ, ಪಟ್ಟಾಭಿರಾಮ ದೇವಾಲಯ, ಶಾಂಡಿಲ್ಯದ ಸನ್ನಿಧಿ, ಕುಲಶೇಖರ್ ಆಳ್ವಾರ್ ಸನ್ನಿಧಿ, ಜೀಯರ್ ಸನ್ನಿಧಿ, ವೇದಾಂತದೇಶಿಕರ ಸನ್ನಿಧಿ, ಕೇಶವ ದೇವರ ಸನ್ನಿಧಿ, ನಂಜೀಯರ್ ಸನ್ನಿಧಿ, ಮಾರಮ್ಮನ ಸನ್ನಿಧಿ, ಪೇಟೆ ಆಂಜನೇಯ ಸನ್ನಿಧಿ, ನಮ್ಮಾಳ್ವಾರ್ ಗುಡಿ, ತಿರುಮಂಗೈ ಆಳ್ವಾರ್ ಗುಡಿ, ಪೇಟೆ ಕೃಷ್ಣದೇವರ ಗುಡಿ, ಸೀತಾರಣ್ಯ ಕ್ಷೇತ್ರ, ಕರಣಿಕ ನಾರಾಯಣನ ಗುಡಿ, ವೆಂಕಟೇಶ್ವರ ಗುಡಿ, ಪರಕಾಲ ಮಠ, ಅಹೋಬಲ ನರಸಿಂಹ ಸ್ವಾಮಿ ಸನ್ನಿಧಿ, ಆದಿಶೇಷ ಸನ್ನಿಧಿ, ಪಂಚ ಭಾಗವತ ಕ್ಷೇತ್ರ ಸನ್ನಿಧಿ, ಪೇಯಾಳ್ವಾರ್ ಸನ್ನಿಧಿ, ವರಾಹ ದೇವಾಲಯ, ಬಿಂದು ಮಾಧವ ದೇವಾಲಯ, ಹನುಮಾನ್ ದೇವಾಲಯ, ಹಯಗ್ರೀವ ಸನ್ನಿಧಿ, ಲಕ್ಷ್ಮಿ ನಾರಾಯಣ ಸನ್ನಿಧಿ, ದತ್ತ ನಾರಾಯಣ ಗುಡಿ, ವರಸಿದ್ದಿ ವಿನಾಯಕ (ಏಕಶಿಲೆ ಗಣಪ), ಕೇಶವ (ನಯನಕ್ಷೇತ್ರ),  ಶನೇಶ್ವರ ಗುಡಿ, ಕವಿಗಲ್ ಆಂಜನೇಯ ಗುಡಿ, ಕರಮೆಟ್ಟಿಲು ಆಂಜನೇಯ ಗುಡಿ, ಮೂಡ ಬಾಗಿಲು ಆಂಜನೇಯ ಗುಡಿ, ರಾಯರಗೋಪುರ ಆಂಜನೇಯ ಗುಡಿ, ಚೋಳರ ಬಂಡೆ, ಶ್ರೀನಿವಾಸ ದೇವಾಲಯ, ಸುಗ್ರೀವನ ಗುಡಿ, ಕಾಳಮ್ಮನ ಗುಡಿ, ಗರುಡ ದೇವರ ಗುಡಿ, ಆಂಜನೇಯ ಗುಡಿ(ಅಕ್ಕ ತಂಗಿಯರ ಹೊಂಡ), ಹೊರತಮ್ಮನ ದೇವಾಲಯ, ಶಿವನ ಗುಡಿ(ಉಳ್ಳಿಬಾವಿ) ಮೊದಲಾದ ದೇವಾಲಯಗಳಿವೆ.
ಇನ್ನು ಇಲ್ಲಿರುವ ವಿಶಾಲ ಭವ್ಯ ಕಲ್ಯಾಣಿ, ತೆಪ್ಪಕೊಳ, ಅಕ್ಕತಂಗಿಕೊಳ(ಚಲುವರಸಿಯರ ಕೊಳ), ನಿಂಗಣ್ಣನ ಕಟ್ಟೆ, ನಕ್ಷತ್ರಕೊಳ, ವೃತ್ತಕೊಳ, ಬಸವರಾಜನಕೊಳ, ವೇದಪುಷ್ಕರಣಿ, ಚಿಕ್ಕಯ್ಯನಕೊಳ, ದರ್ಭತೀರ್ಥ, ಯಾದವತೀರ್ಥ, ಪಲಾಶ ತೀರ್ಥ, ಮೈತ್ರೇಯ ತೀರ್ಥ, ಪದ್ಮತೀರ್ಥ, ನಾರಾಯಣ ತೀರ್ಥ, ತೊಟ್ಟಿಲಮಡು, ಹಾಲುಕೊಲ, ಭಟ್ಟರಕೊಳ, ನರಸಿಂಹಮಡು(ಬೆಟ್ಟದಕೊಳ), ಅಜ್ಜನಕಟ್ಟೆ, ಅಕ್ಕತಂಗಿಕೊಳ(ಗಿರಿ ಪ್ರದಕ್ಷಿಣೆ), ಒಕ್ಕರಣೆ(ಪಂಚಬಾವಿ), ಒಂಭತ್ತು ಕಲ್ಲು ಬಾವಿ, ಹೊಸಬಾವಿ, ಛತ್ರಿಕೊಳ, ಸಂತೆಮಡು, ಗಣಪತಿ ಕಟ್ಟೆ, ಪುಟ್ಟನರಸೀಕೊಳ, ಸಿಹಿನೀರುಕೊಳ, ಕೆಳಗಿನ ಚಿಕ್ಕಯ್ಯನಕೊಳ ಮೊದಲಾದ ನೀರಿನಕೊಳಗಳು ಹಾಗೂ ದಳವಾಯಿ ಕೆರೆ, ಹೊಸಕೆರೆ, ಯಾದವ, ಹೆಬ್ಬಳ್ಳ ಕೆರೆಗಳು ಇವೆಯಲ್ಲದೆ, ಯತಿರಾಜ ಮಠ, ವಾನಮಾಮಲೈ ಮಠ, ಪರಕಾಲ ಮಠ, ಅಹೋಬಲ ಮಠ, ಆಂಡವನ್ ಆಶ್ರಮಂ, ಕಂಚಿವಾದ ಕೇಸರಿ ಆಳಹಿಯ ಮಣವಾದ ಮಠ, ತ್ರಿದಂಡಿ ಚಿನ್ನಜೀಯಾರ್ ಮಠ, ತಿರುಪತಿ ಪೆರಿಯ ಜೀಯಾರ್ ಮಠ, ಬೈರಾಗಿ ಮಠಗಳಿವೆ. ಅಲ್ಲದೆ ಮೇಲುಕೋಟೆಯಲ್ಲಿ ಪ್ರೇಕ್ಷಣೀಯ ತಾಣಗಳಾಗಿ ಪ್ರವಾಸಿಗರನ್ನು ರಾಯಗೋಪುರ(ಪಟ್ಟಣದ ಬಾಗಿಲು), ನಯನಕ್ಷೇತ್ರ(ಗುಹಾಂತರ ದೇವಾಲಯ), ತಾರ್ಕ್ಷ್ಯ ಕ್ಷೇತ್ರ, ಏಕಶಿಲಾ ಗಣಪತಿ, ಅಕ್ಕತಂಗಿಯರ ಕೊಳ, ಭುವನೇಶ್ವರಿ ಮಂಟಪ, ದಳವಾಯಿಕೆರೆ, ಹೊಗರಮ್ಮನ ಗುಡಿ ಗಮನಸೆಳೆಯತ್ತದೆ. 

---------------------------------------------------------------------------------------------------------------------------

ಇಲ್ಲಿದೆ ಬೊಕ್ಕತಲೆಗೆ ಪರಿಹಾರ

ಕ್ರಿಯೇಟ್ ದಿ ಹೇರ್ ಫಿಕ್ಸಿಂಗ್ & ಟ್ಯಾಟೂ

 

ವ್ಯಕ್ತಿಯ ಬಾಹ್ಯ ಸೌಂದರ್ಯಕ್ಕೆ ಕೂದಲು ಎಷ್ಟು ಮುಖ್ಯವೋ, ಆತ್ಮವಿಶ್ವಾಸಕ್ಕೂ ಅದು ಅಷ್ಟೇ ಮುಖ್ಯ. ಹೀಗಾಗಿ ಕೂದಲು ಕಳೆದುಕೊಂಡವರ ಯಾತನೆ ಅನುಭವಿಸಿದವರಿಗೇ ಗೊತ್ತು. ಕೆಲವರಿಗೆ ಕೂದಲು ಸರಿಯಾಗಿ ಆರೈಕೆ ಮಾಡದಿರುವುದು ಮತ್ತೆ ಕೆಲವರಿಗೆ ವಂಶಪಾರಂಪರ್ಯವಾಗಿ ಮತ್ತೆ ಕೆಲವರಿಗೆ ಕ್ಯಾನ್ಸರ್ ಅಥವಾ ಇನ್ನಾವುದೋ ಚರ್ಮರೋಗದಿಂದ ಬೊಕ್ಕತಲೆಯಾಗಿ ಚಿಕ್ಕವಯಸ್ಸಿನಲ್ಲೇ ಮುಜುಗರ ಅನುಭವಿಸುವುದುಂಟು. ಅವರು ಹೊರಗಡೆ ಓಡಾಡಲು ಅಥವಾ ಯಾವುದೇ ಸಮಾರಂಭಗಳಿಗೆ ಹೋಗಲು ಹಿಂಜರಿಯುತ್ತಾರೆ.

ಇಂತಹವರಿಗಾಗಿ ಹೊಸ ಆಶಾಕಿರಣವಾಗಿ ಮೂಡಿ ಬಂದಿದೆ ಮೈಸೂರಿನ ದೇವರಾಜ ಮೊಹಲ್ಲಾದಲ್ಲಿರುವ ‘ಕ್ರಿಯೇಟ್ ದಿ ಹೇರ್ ಫಿಕ್ಸಿಂಗ್ ಸಂಸ್ಥೆ’. ಮೊದಲೆಲ್ಲಾ ಬೊಕ್ಕತಲೆ ಹೊಂದಿರುವವರು ಕೂದಲು ಕಸಿ ಮಾಡಿಸಿಕೊಳ್ಳಲು ಹೊರದೇಶಕ್ಕೋ ಅಥವಾ ಬಾಂಬೆ, ಡೆಲ್ಲಿಯಂತಹ ನಗರಗಳಿಗೆ ಹೋಗಬೇಕಿತ್ತು. ಅಲ್ಲದೇ ಈ ಚಿಕಿತ್ಸೆಗೆ ದುಬಾರಿ ವೆಚ್ಚದ್ದು ಆಗಿತ್ತು.

ಆದರೀಗ ಕಾಲ ಬದಲಾಗಿದೆ. ಈ ಚಿಕಿತ್ಸೆ ಈಗ ಮೈಸೂರಿಗೆ ಬಂದಿದೆ. ಅಲ್ಲದೇ ವೆಚ್ಚವೂ ಮಾಧ್ಯಮ ವರ್ಗದವರು ಭರಿಸುವಷ್ಟು ಇದೆ.

ಇಂದಿನ ಯುವಕ-ಯುವತಿಯರಿಗೆ ಬೊಕ್ಕ ತಲೆ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಹೀಗೆ ಯಾತನೆ ಅನುಭವಿಸುವವರ ವಯಸ್ಸು 24ರಿಂದ 35 ಮಾತ್ರ. ಬೊಕ್ಕ ತಲೆ ಇವರಿಗೆ ಹೊರಗಿನ ಸಮಸ್ಯೆ ಮಾತ್ರವಲ್ಲ, ಖಿನ್ನತೆಯಿಂದ ಒಳಗಿನಿಂದಲೂ ಇವರಲ್ಲಿ ಕೀಳರಿಮೆ ಮೂಡುವಂತಾಗಿದ್ದನ್ನು ಸಂಸ್ಥೆ ಗಮನಿಸಿ, ಮೈಸೂರಿನಲ್ಲಿ ಕೂದಲು ಕಸಿ ಮಾಡುವ ಸಂಸ್ಥೆ ಆರಂಭಿಸಿ ಜನರಿಗೆ ಕೃತಕ ಕೂದಲು ಕಸಿ ತಂತ್ರಗಾರಿಕೆಯ ಮೂಲಕ ಬೊಕ್ಕತಲೆ ಸಮಸ್ಯೆ ನಿವಾರಿಸಿ ಅಂಥವರಿಗೊಂದು ಹೊಸ ಬದುಕಿನ ಜತೆಗೆ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಕೆಲ ತಿಂಗಳ ಹಿಂದಷ್ಟೇ ಆರಂಭವಾಗಿರುವ ‘ಕ್ರಿಯೇಟ್ ದಿ ಹೇರ್ ಫಿಕ್ಸಿಂಗ್ ಸಂಸ್ಥೆ’ ಮಾಡುತ್ತಾ ಬಂದಿದೆ.

ಈ ಸಂಸ್ಥೆಯ ಸೇವೆ ಮೈಸೂರಿಗೆ ಮಾತ್ರ ಸೀಮಿತವಾಗದೆ, ಕರ್ನಾಟಕದ ನಾನಾ ನಗರಗಳ ಗ್ರಾಹಕರೂ ಸಂತೃಪ್ತಿ ಹೊಂದಿದ್ದು, ಬೊಕ್ಕತಲೆ ನಿವಾರಿಸಿಕೊಂಡಿದ್ದಲ್ಲದೇ ಆತ್ಮವಿಶ್ವಾಸದಿಂದ ಜೀವನ ಸಾಗಿಸುತ್ತಿದ್ದಾರೆ.

ಗ್ರಾಹಕರು ತಮ್ಮ ಮನಕ್ಕೊಪ್ಪುವಂತೆ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡು, ಅದು ಕೃತಕ ಎಂಬುದನ್ನೇ ಮರೆತು ಬದುಕು ನಡೆಸುತ್ತಿದ್ದಾರಂತೆ. ಹೀಗೆ ಸಿದ್ಧಪಡಿಸಿದ ಕೂದಲು ತೊಟ್ಟು ಸ್ನಾನ ಮಾಡಬಹುದು, ಈಜು ಅಥವಾ ಇನ್ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳಬಹುದಾದ್ದರಿಂದ ಇದು ನಮ್ಮದೇ ಕೂದಲು ಎಂಬ ಭಾವದ ಜತೆಗೆ ವ್ಯಕ್ತಿ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ ಎನ್ನುತ್ತಾರೆ ಸಂಸ್ಥೆಯವರು.

 

ಐಟಿ ನೌಕರರು, ಅಧಿಕಾರಿಗಳು, ಯುವಕರು ಮುಂತಾದವರು ಈ ಸಂಸ್ಥೆಯಿಂದ ಲಾಭ ಪಡೆದ ಫಲಾನುಭವಿಗಳು. ಕೆಲವರಿಗೆ ತಲೆ ತುಂಬಾ ನೈಸರ್ಗಿಕ ಕೂದಲು ಬೇಕಾಗಿದ್ದರೆ, ಇನ್ನು ಕೆಲವರಿಗೆ ತಲೆಯ ಯಾವುದೋ ಒಂದು ಭಾಗಕ್ಕೆ ಮಾತ್ರ ಅವಶ್ಯಕತೆ ಇರುತ್ತದೆ. ಅವರವರ ಅಗತ್ಯ, ಅಳತೆ ಹಾಗೂ ಅವರ ಮೂಲ ಕೂದಲಿನ ಬಣ್ಣ, ಗುಣಮಟ್ಟಕ್ಕೆ ಸರಿ ಹೊಂದುವಂತೆ ಕೃತಕ ಕೂದಲು ಕಸಿ ಮಾಡಲಾಗುತ್ತದೆ.

ಪ್ರಾರಂಭವಾಗಿ ಕೆಲವೇ ತಿಂಗಳಲ್ಲಿ ಸಾವಿರಾರು ಗ್ರಾಹಕರನ್ನು ತೃಪ್ತಿ ಪಡಿಸಿದ ಹೆಗ್ಗಳಿಕೆಗೆ ಮೈಸೂರಿನ ‘ಕ್ರಿಯೇಟ್ ದಿ ಹೇರ್ ಫಿಕ್ಸಿಂಗ್ ಸಂಸ್ಥೆ’ಯದು. ಅದೇ ರೀತಿ ಈ ಸಂಸ್ಥೆ ಮೈಮೇಲೆ ಟ್ಯಾಟೂ ಹಾಕುವ ಸೌಲಭ್ಯವನ್ನು ಕೂಡ ಹೊಂದಿದೆ. ಇಂದಿನ ಯುವಕರಿಗೆ ಟ್ಯಾಟೂ ಒಂದು ರೀತಿಯ ಫ್ಯಾಶನ್ ಆಗಿದೆ. ಅದರಲ್ಲೂ ಬಗೆ ಬಗೆಯ ವಿನ್ಯಾಸವುಳ್ಳ ಹಚ್ಚೆಗಳನ್ನು ಸಿನಿಮಾ ಮಂದಿ ಬಳಸುವುದರಿಂದ ಆಕರ್ಷಿತರಾಗಿ ಇಂದಿನ ಯುವಕರು ಅವರನ್ನು ಅನುಕರಿಸುತ್ತಾರೆ. ಇಂತಹ ಟ್ಯಾಟೂಗಳನ್ನು ಬಹಳ ಹಿಂದೆ ಹಾಕುವಾಗ ನೋವುಂಟಾಗುತ್ತಿತ್ತು.

ಆದರೆ ಈಗ ಅತ್ಯಾಧುನಿಕ ತಂತ್ರಜ್ಞಾನದಿಂದ ನೋವುಂಟಾಗದಂತೆ ಟ್ಯಾಟೂ ಹಾಕುವ ವಿಧಾನ ಬಂದಿದೆ. ‘ಕ್ರಿಯೇಟ್ ದಿ ಹೇರ್ ಫಿಕ್ಸಿಂಗ್ & ಟ್ಯಾಟೂ ಸಂಸ್ಥೆ’ಯವರು ತಮ್ಮ ಸಂಸ್ಥೆಗೆ ಬರುವ ಗ್ರಾಹಕರ ಅಭಿರುಚಿ ಮನಗಂಡು ಟ್ಯಾಟೂ ಹಾಕುವ ಅತ್ಯಾಧುನಿಕ ಯಂತ್ರಗಳನ್ನು ತರಿಸಿದ್ದಾರೆ. ಗ್ರಾಹಕರ ಇಷ್ಟಕ್ಕೆ ತಕ್ಕಂತೆ ಬಗೆ ಬಗೆಯ ವಿನ್ಯಾಸದ ಕಲರ್‍ಗಳಲ್ಲಿ ಲಭ್ಯವಿದೆ. ಗ್ರಾಹಕರು ಯಾವ ರೀತಿಯ ಟ್ಯಾಟೂ ಹಾಕಿಸಿಕೊಳ್ಳಲು ಬಯಸುತ್ತಾರೋ ಆ ರೀತಿಯ ದರಗಳಲ್ಲಿ ಇದು ಲಭ್ಯವಿದೆ.

ಇದಲ್ಲದೇ ಇದೇ ಸಂಸ್ಥೆಯು ‘ಕ್ರಿಯೇಟ್ ದಿ ಡ್ಯಾನ್ಸ್ ಅಕಾಡೆಮಿ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಸೆಮಿ ಕ್ಲಾಸಿಕಲ್, ಹಿಪ್ಪಾಪ್ಪೋ, ವೆಸ್ಟರ್ನ್, ಸಲ್ಸಾ, ಏರೋಬಿಕ್ಸ್ ನಂತಹ ವಿವಿಧ ನೃತ್ಯಗಳನ್ನು ಸಹ ಕಲಿಸಿಕೊಡಲಾಗುವುದು.

ಸಂಸ್ಥೆಯ ವಿಳಾಸ

ಕ್ರಿಯೇಟ್ ದಿ ಹೇರ್ ಫಿಕ್ಸಿಂಗ್ & ಟ್ಯಾಟೂ

# 1134, 1ನೇ ಮಹಡಿ, ಎನ್.ಎಸ್. ರೋಡ್, ಆಂಧ್ರ ಬ್ಯಾಂಕ್ ಎದುರು, ಮೋರ್ ಮೇಘಾ ಸ್ಟೋರ್ ಹತ್ತಿರ ದೇವರಾಜ ಮೊಹಲ್ಲಾ, ಮೈಸೂರು.

ಇಮೇಲ್:createthehairfixing@gmail.com

: 98450 73374, 95359 45666

ವ್ಯಾಲೆಂಟೈನ್ ಡೇ ಅಂದ್ರೆ ಇದೇನಾ... 

ಬಿ.ಎಂ.ಲವಕುಮಾರ್

ಹೋಟೆಲ್, ರೆಸ್ಟೋರೆಂಟ್, ಪಬ್‍ಗಳಲ್ಲಿ ಹುಡುಗ-ಹುಡುಗಿಯರು ಒಟ್ಟಿಗೆ ಕಲೆತು ಕಂಠಪೂರ್ತಿ ಕುಡಿದು ಕುಪ್ಪಳಿಸೋದು... ಗ್ರ್ಯಾಂಡ್ ಪಾರ್ಟಿ ಏರ್ಪಡಿಸಿ ಮಜಾ ಉಡಾಯಿಸೋದು... ಗುಲಾಬಿ ಹೂವನ್ನು ನೀಡಿ ನನ್ನ ಪ್ರೀತಿಸು ಅಂತ ಹಿಂಸೆ ನೀಡೋದು... ಹುಡುಗಿ ಒಪ್ಪದಿದ್ದರೆ ಆಸಿಡ್ ಸುರಿಯೋದು... ಇದೇನಾ ವ್ಯಾಲೆಂಟೈನ್ ಡೇ...?
ಪಾಶ್ಚಿಮಾತ್ಯರ ಸಂಸ್ಕೃತಿ ನಮ್ಮ ದೇಶದ ಯುವಜನತೆಯ ಮೇಲೆ ಎಂತಹ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುವುದಕ್ಕೆ ಇತ್ತೀಚೆಗೆ ನಮ್ಮ ಯುವಕ-ಯುವತಿಯರು ಒಂದೆಡೆ ಸೇರಿ ವ್ಯಾಲೆಂಟೈನ್ ಡೇಯನ್ನು ಆಚರಿಸುತ್ತಿರುವ ರೀತಿಯೇ ಸಾಕ್ಷಿಯಾಗಿದೆ. ಇಂತಹದೊಂದು ಆಚರಣೆ ನಮಗೆ ಬೇಕಾ? ಎಂಬ ಪ್ರಶ್ನೆ ನಮ್ಮಲ್ಲಿ ಉದ್ಭವಿಸದೆ ಇರದು. ಈ ಆಚರಣೆಗೆ ನಮ್ಮ ದೇಶದಲ್ಲಿ ವ್ಯಾಪಕ ವಿರೋಧವಿದ್ದರೂ ಆಚರಣೆ ಮಾತ್ರ ಸದ್ದಿಲ್ಲದೆ ನಡೆಯುತ್ತಾ ಬರುತ್ತಿದೆ.ಹಾಗೆನೋಡಿದರೆ ಫೆಬ್ರವರಿ 14 ಬಂತೆಂದರೆ ಯುವಕ-ಯುವತಿಯರಿಗೆ ಎಲ್ಲಿಲ್ಲದ ಸಂಭ್ರಮ. ಎಲ್ಲಿ ಹೇಗೆ ಆಚರಿಸಬೇಕು ಎಂಬುವುದರ ಬಗ್ಗೆ ಪೂರ್ವ ತಯಾರಿ ಆರಂಭವಾಗಿ ಬಿಡುತ್ತದೆ. ಐಟಿ, ಬಿಟಿ, ಉದ್ಯೋಗಿಗಳು ಸೇರಿದಂತೆ ಶ್ರೀಮಂತ ಯುವಕ, ಯುವತಿಯರು ಕುಡಿದು, ಕುಣಿದು ಕುಪ್ಪಳಿಸಿ ಮಜಾ ಉಡಾಯಿಸುವ ಆತುರದಲ್ಲಿದ್ದರೆ, ಅದಕ್ಕೆಂದೇ ದೊಡ್ಡ ದೊಡ್ಡ ಹೋಟೆಲ್‍ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತವೆ. ಅಷ್ಟೇ ಅಲ್ಲ ಪಾರ್ಟಿಗೆ ಬರುವವರು ಜೋಡಿಯಾಗಿಯೇ ಬರಬೇಕೆಂಬ ಕಟ್ಟಪ್ಪಣೆಯೂ ಇರುತ್ತದೆ. 
ಇಂದಿನ ನಗರ ನಾಗರೀಕರಣ, ಪಾಶ್ಚಿಮಾತ್ಯ ಸಂಸ್ಕøತಿಯ ಪ್ರಭಾವ ನಮ್ಮ ಮೇಲೆ ಬೀರುತ್ತಿದ್ದು, ಪರಿಣಾಮ ನಮಗೆ ಒಗ್ಗದ ಕೆಲವು ಆಚರಣೆಗಳನ್ನು ನಾವು ಬಲತ್ಕಾರವಾಗಿ ಎಳೆದು ತಂದು ಆಚರಿಸುವಲ್ಲಿ ಮುಂದಾಗುತ್ತಿದ್ದು, ಇದು ನಮ್ಮ ದೇಶದ ಸಂಸ್ಕೃತಿಗೆ ಕೊಡಲಿಯೇಟು ನೀಡುತ್ತಿದೆ ಎಂದರೆ ತಪ್ಪಾಗಲಾರದು. ವಿದೇಶಿ ಮೂಲದ ಆಚರಣೆಗಳನ್ನು ತರುವ ಮೂಲಕ ಭವ್ಯ ಸಂಸ್ಕøತಿ, ಪರಂಪರೆಯನ್ನು ಹೊಂದಿರುವ ನಮ್ಮ ದೇಶಕ್ಕೆ ಆಘಾತವುಂಟು ಮಾಡುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪಾಶ್ಚಿಮಾತ್ಯ ಸಂಘಟನೆಗಳು ಯತ್ನಿಸುತ್ತಿರುವುದಂತೂ ನಿಜ. ಇದು ನಮ್ಮ ಸಂಸ್ಕೃತಿಯಲ್ಲ. ಇದು ನಮಗೆ ಒಗ್ಗುವಂತಹದ್ದೂ ಅಲ್ಲ ಎಂಬ ಅರಿವಿದ್ದರೂ  ನಮ್ಮ ಯುವಕ-ಯುವತಿಯರು ಅದಕ್ಕೆ ಮಾರು ಹೋಗುತ್ತಿದ್ದು, ಇದಕ್ಕೆ ಮಾಧ್ಯಮಗಳು ಸಹ ಸಾಥ್ ನೀಡುತ್ತಿವೆ. ಕೇವಲ ಮಜಾ ಉಡಾಯಿಸಲೆಂದು ಕೆಲವು ಶ್ರೀಮಂತ ಯುವಕ, ಯುವತಿಯರು ಈ  ಆಚರಣೆಗಳನ್ನು ಬಳಸಿಕೊಳ್ಳುತ್ತಿದ್ದರೆ, ಇಂತಹ ಆಚರಣೆಗಳನ್ನು ಹುಟ್ಟು ಹಾಕಿ ಲಾಭ ಪಡೆಯುವ ಮಂದಿಗೇನು ಕೊರತೆಯಿಲ್ಲ. ದೊಡ್ಡ, ದೊಡ್ಡ ಐಶರಾಮಿ ಹೋಟೆಲ್‍ಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅದನ್ನೇ ನೇರ ಪ್ರಸಾರ ಮಾಡುವ ದೃಶ್ಯ ಮಾಧ್ಯಮಗಳು ಹದಿಹರೆಯದವರಲ್ಲಿ ಪ್ರೇಮದ ಕಿಚ್ಚು ಹಚ್ಚಿಸಿಬಿಡುತ್ತಾರೆ.
ಇವತ್ತು ಪ್ರೌಢ ಶಾಲಾ ಹಂತದಿಂದಲೇ ಪ್ರೇಮ ಪ್ರಕರಣಗಳು ನಡೆಯುತ್ತಿರುವುದು ಕಂಡು ಬರುತ್ತಿದೆ. ಓದಿ ಮುಂದಿನ ಭವಿಷ್ಯ ನಿರ್ಮಿಸಿಕೊಳ್ಳಬೇಕಾದ ವಯಸ್ಸಿನಲ್ಲಿಯೇ ರೋಮಿಯೋ-ಜೂಲಿಯೇಟ್  ಆಗಬೇಕೆಂಬ ಕನಸು ಕಾಣುತ್ತಾರೆ. ಇದರಿಂದಾಗಿ ಓದಿನ ಕಡೆಗೆ ಗಮನ ಕಡಿಮೆಯಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೇನು ಕೊರತೆಯಿಲ್ಲ.
ಇಷ್ಟಕ್ಕೂ ಈ ವ್ಯಾಲೆಂಟೈನ್ ಡೇ  ಕುರಿತಂತೆ ಇತಿಹಾಸವನ್ನು ಕೆದಕಿದರೆ  ಒಂದಷ್ಟು ಮಾಹಿತಿ ನಮಗೆ ಲಭಿಸುತ್ತದೆ. ರೋಮನ್ ಚಕ್ರಾಧಿಪತಿಗಳ ಕಾಲದಲ್ಲಿ  ವ್ಯಾಲೆಂಟೈನ್ ಎಂಬ ಪಾದ್ರಿಯಿದ್ದನಂತೆ. ಈತನ ಕಸುಬು ಏನೆಂದರೆ ಹುಡುಗ-ಹುಡುಗಿಯರು ತಮ್ಮ ಭವಿಷ್ಯ ರೂಪಿಸುವ ವಯಸ್ಸಿನಲ್ಲಿಯೇ ಅವರನ್ನು ಒಂದು ಗೂಡಿಸಿ ಪ್ರೇಮಾರಾಧನೆಗೆ ಒಳಪಡಿಸುತ್ತಿದ್ದನಂತೆ. ಹೀಗಾಗಿ  ಪ್ರೇಮಿಗಳ ಸಂಖ್ಯೆ ಹೆಚ್ಚಾಯಿತಲ್ಲದೆ, ಎಲ್ಲರೂ ಅವನ ಪೂಜಾರಿಗಳಾದರು. ಇದರಿಂದ ದೇಶದ ಮೇಲೆ ಭಾರೀ ಪರಿಣಾಮವಾಯಿತು. ಶಿಸ್ತಿನ ಸಿಪಾಯಿಗಳಾಗಿ ದೇಶ ಕಾಯಬೇಕಾದ ಯುವಕರು ಹೆಣ್ಣಿನ ಮೋಹದಲ್ಲಿ ಸಿಲುಕಿ ತಮ್ಮ ಕರ್ತವ್ಯವನ್ನೇ ಮರೆತರು. ಇದರಿಂದಾಗಿ ದೇಶದಲ್ಲಿ ಆರಾಜಕತೆ ತಾಂಡವವಾಡ ತೊಡಗಿತು.
ಆಗ ರೊಮನ್‍ನ ದೊರೆ ಎರಡನೇ ಕ್ಲಾಡಿಯಸ್  ದೇಶದೆಲ್ಲೆಡೆ  ಎದ್ದಿರುವ ಆರಾಜಕತೆಯನ್ನು ಹತ್ತಿಕ್ಕುವ ಸಲುವಾಗಿ ವಿವಾಹವನ್ನು ವಿರೋಧಿಸಿದನಲ್ಲದೆ, ವಿವಾಹ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳತೊಡಗಿದನು. ಗಂಡು-ಹೆಣ್ಣು ಒಂದೆಡೆ ಸೇರುವುದು ಹಾಗೂ  ಲೈಂಗಿಕ ಕ್ರಿಯೆಯಲ್ಲಿ  ತೊಡಗುವುದನ್ನು ನಿಷೇಧಿಸಿದನಲ್ಲದೆ, ಎಲ್ಲೂ ಮದುವೆಗಳು ನಡೆಯದಂತೆ ನೋಡಿಕೊಂಡನು.
ಇದೆಲ್ಲದರ ನಡುವೆ ವ್ಯಾಲೆಂಟೈನ್ ಮಾತ್ರ  ಸದ್ದಿಲ್ಲದೆ ತನ್ನ ಕಾರ್ಯವನ್ನು ಮಾಡುತ್ತಲೇ ಹೋಗುತ್ತಿದ್ದನು. ಇದು ದೊರೆಗೆ ತಿಳಿದು ಆತನನ್ನು ಬಂಧಿಸಲಾಯಿತು. ಆದರೆ ಪಾದ್ರಿ ವ್ಯಾಲೆಂಟೈನ್ ಜೈಲಿನಲ್ಲಿದ್ದುಕೊಂಡೇ ಪ್ರೇಮಿಗಳನ್ನು ಒಗ್ಗೂಡಿಸತೊಡಗಿದನು. 
ಬಂಧನದಲ್ಲಿಟ್ಟಿದ್ದರೂ ಜಗ್ಗದೆ ಪ್ರೇಮಿಗಳನ್ನು ಒಗ್ಗೂಡಿಸುತ್ತಿದ್ದ ವ್ಯಾಲೆಂಟೈನ್ ಮೇಲೆ ಕೋಪಗೊಂಡ ದೊರೆ ಆತನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದನು. ಅದರಂತೆ ಫೆಬ್ರವರಿ 14ರಂದು ಗಲ್ಲಿಗೇರಿಸಲಾಯಿತು. ಆದರೆ ದುರಂತವೆಂದರೆ  ಆತನ ಅನುಯಾಯಿಗಳು  ಅವನನ್ನು ಗಲ್ಲಿಗೇರಿಸಿದ ದಿನವನ್ನೇ ‘ವ್ಯಾಲೆಂಟೈನ್ ಡೇ’ಯಾಗಿ ಆಚರಿಸುವ ಮೂಲಕ ಆಚರಣೆ ಜಾರಿಗೆ ತಂದರು. 
ಇವತ್ತು ನಮ್ಮ ಐಟಿ, ಬಿಟಿ ಕಂಪನಿಯ ಉದ್ಯೋಗಿಗಳು ಪ್ರೇಮಾರಾಧನೆಯನ್ನು ಹಣದಿಂದ ಮಾಡುತ್ತಿದ್ದಾರೆ. ಪಾರ್ಟಿಗಳಲ್ಲಿ ಹುಡುಗ, ಹುಡುಗಿಯರು ಸೇರಿ ಕುಣಿಯುತ್ತಾರೆ. ಅಲ್ಲಿ ಪ್ರೀತಿಗಿಂತ ಕಾಮವೇ ಜಾಸ್ತಿಯಾಗಿರುತ್ತೆ. ಇಂತಹವರಿಂದ ಬಳುವಳಿಯಾಗಿ ಬಂದಿರುವ ವ್ಯಾಲೆಂಟೈನ್ ಡೇಯನ್ನು  ಆಚರಿಸಲು  ಕಾಲೇಜ್ ಕ್ಯಾಂಪಸ್‍ಗಳು ಕೂಡ ಸಿದ್ದವಾಗುತ್ತಿರುವುದು ಮಾತ್ರ ದುರಂತ. ಶಾಲಾ ಕಾಲೇಜುಗಳು ಕಲಿಕೆಯ ಕೇಂದ್ರ ಬಿಂದು. ಇಲ್ಲಿ ಕಠಿಣ ಪರಿಶ್ರಮದಿಂದ  ಅಭ್ಯಾಸಿಸಿದ್ದೇ ಆದರೆ ಮುಂದಿನ ಭವಿಷ್ಯ ನಿರ್ಮಾಣವಾಗಲು ಸಾಧ್ಯ. ಆದರೆ ಇಲ್ಲಿಯೇ ಪ್ರೀತಿ, ಪ್ರೇಮ, ಪ್ರಣಯ ಅಂತಹ ತುಂಟಾಟ ಪ್ರಾರಂಭಿಸಿದ್ದೇ ಆದರೆ ಮುಂದಿನ ಬದುಕು ಬರ್ಬರವಾಗಿ ಬಿಡುತ್ತದೆ. 
ಭಾರತೀಯ ಸಂಸ್ಕೃತಿಯಲ್ಲಿ ಪ್ರೇಮಕ್ಕೆ  ಪವಿತ್ರವಾದ ಸ್ಥಾನವಿದೆ. ಅದರದ್ದೇ ಆದ ಮೌಲ್ಯವಿದೆ. ಪ್ರೇಮಕ್ಕೆ ಕೃತಕತೆಯನ್ನು ಕರಗಿಸುವ, ಕಷ್ಟಗಳನ್ನು ಕಳೆಯುವ ತೇಜಸ್ಸಿದೆ. ನೈಜ ಸೌಂದರ್ಯವಿದೆ. ಅನಂತತೆಯ ಅನನ್ಯ ಸೊಬಗಿದೆ. ಬಾಳನ್ನು ಬೆಳಗಿಸುವ ಬೆಳಕು. ಅಷ್ಟೆ ಅಲ್ಲ ಮಾನವೀಯ ಪರಮ ಮೌಲ್ಯ ಅದಕ್ಕಿದೆ. ಅದು ಅಮರ... ಮಧುರ...
ಪಾಶ್ಚಿಮಾತ್ಯರಿಗೆ ಎರಡು ಜೀವಗಳ ನಡುವಿನ ಪ್ರೇಮಕ್ಕಿಂತಲೂ  ಕಾಮದ ಸೆಳೆತ ಜಾಸ್ತಿ. ಹಾಗಾಗಿ ಈ ವರ್ಷ ವ್ಯಾಲೆಂಟೈನ್ ಡೇ ಆಚರಿಸಿಕೊಂಡ ಪ್ರೇಮಿಗಳು ಮುಂದಿನ ವರ್ಷಕ್ಕೆ ಬದಲಾಗುತ್ತಾರೆ. ದುರಂತವೆಂದರೆ ಅಂತಹ ಸಂಸ್ಕೃತಿ ನಮ್ಮ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಬೆಳೆಯುತ್ತಿದೆ. ವಿವಾಹಪೂರ್ವ ಲೈಂಗಿಕತೆ ಹೆಚ್ಚುತ್ತಿದೆ. ಮೊದಲೆಲ್ಲಾ ಸಮಾಜದ ಭಯವಿತ್ತು. ಶೀಲ ಚಾರಿತ್ರ್ಯಕ್ಕೆ ಪೂಜ್ಯ ಸ್ಥಾನ ನೀಡಲಾಗುತ್ತಿತ್ತು. ಈಗ ಅಂತಹ ಭಾವನೆಗಳು ದೂರವಾಗುತ್ತಿವೆ. ಎಂಜಾಯ್ ಎಂಬ ಹೆಸರಿನಲ್ಲಿ ನಡೆಯಬಾರದೆಲ್ಲವೂ ನಡೆಯುತ್ತಿದೆ. ಇತ್ತೀಚೆಗೆ ಪಾರ್ಕ್, ಬಸ್‍ಸ್ಟ್ಯಾಂಡ್ ಹೀಗೆ ಎಲ್ಲರ ಮುಂದೆ ಪ್ರೇಮಿಗಳಂತೆ ಗುರುತಿಸಿಕೊಳ್ಳುವುದೇ ನಮ್ಮ ಹುಡುಗ ಹುಡುಗಿಯರಿಗೆ ಫ್ಯಾಷನ್‍ನಂತಾಗಿದೆ. ಈ ಮಧ್ಯೆ ಪ್ರೇಮದ ನಾಟಕವಾಡಿ ಕಾಮದ ತೃಷೆ ತೀರಿಸಿಕೊಂಡು ವಂಚಿಸುವ ಭೂಪರೂ ಇದ್ದಾರೆ. ಪ್ರೇಮದ ಮುಂದಿನ ಮೆಟ್ಟಿಲು ಮದುವೆ. ಪ್ರೀತಿಸಿ ಪ್ರೇಮಿಗಳಾದವರು ಮುಂದೆ ವಿವಾಹವಾಗುವ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ಸಾಯುವ ತನಕ ಜೊತೆಯಾಗಿಯೇ ಜೀವನ ಸಾಗಿಸುತ್ತಿದ್ದರು. ಡೈವರ್ಸ್ ಎಂಬುವುದು ಅಪರೂಪವಾಗಿತ್ತು. ಈಗ ಇವತ್ತು ಮದುವೆಯಾಗಿ ನಾಳೆ ಡೈವರ್ಸ್ ನೀಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕಿಂತ ಒಂದು ಪಟ್ಟು ಜಾಸ್ತಿ ಎನ್ನುವಂತೆ  ಮದುವೆಯಾಗದೆ ಒಟ್ಟಿಗೆ ಒಂದೇ ಮನೆಯಲ್ಲಿ ಒಂದೇ ಕೋಣೆಯಲ್ಲಿ ಜೀವನ ನಡೆಸುವ ‘ಲಿವಿಂಗ್ ಟುಗೆದರ್’ ಸಂಸ್ಕೃತಿ ಹೆಚ್ಚಾಗುತ್ತಿದೆ. ಇರುವಷ್ಟು ದಿನ ಜೊತೆಯಲ್ಲಿದ್ದು ಬೋರ್ ಆದಾಗ ದೂರ ಸರಿಯಲು, ಮತ್ತೊಬ್ಬ ಸಂಗಾತಿಯನ್ನು ಹುಡುಕಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಇಲ್ಲಿ ಡೈವರ್ಸ್‍ನ ಕಿರಿಕಿರಿ ಇರುವುದಿಲ್ಲ. ನೋಡಿ ಇದೆಂತಹ ಪ್ರೇಮಾ..?
ಇನ್ನೊಂದು ಭಯಾನಕ ಸಂಸ್ಕೃತಿ ನಗರಗಳಲ್ಲಿ ಬೆಳೆಯುತ್ತಿದೆ. ಅದ್ಯಾವುದೆಂದರೆ ವೈಫ್ ಸ್ವ್ಯಾಪಿಂಗ್. ವ್ಯಾಲೆಂಟೈನ್ ಡೇ ಯನ್ನು ಎಂಜಾಯ್ ಮಾಡುವ ಸಲುವಾಗಿ ಪಾರ್ಟಿಯನ್ನು ಏರ್ಪಡಿಸಿ ತಮ್ಮ ಮಡದಿಯರನ್ನೇ ಬದಲಾಯಿಸಿಕೊಳ್ಳುತ್ತಾರೆ. ಒಂದು ದಿನಪೂರ್ತಿ ಅವರೊಂದಿಗಿದ್ದು ಕುಡಿದು, ಕುಣಿದು, ಮಜಾ ಉಡಾಯಿಸುತ್ತಾರೆ.
ಈಗ ಹೇಳಿ ನಮ್ಮ ಸಂಸ್ಕøತಿಗೆ ಧಕ್ಕೆ ತರುವಂತಹ, ಯುವಜನತೆಯನ್ನು ತಪ್ಪು ದಾರಿಗೆ ಎಳೆಯುವಂತಹ ವ್ಯಾಲೆಂಟೈನ್ ಡೇ ಬೇಕಾ?

ಮನೆ-ಮನದ ಕತ್ತಲು ತೊಳೆಯುವ 'ದೀಪಾವಳಿ'

ನಮಗೆ ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ... ಆಕಾಶದಲ್ಲಿ ಚಿಮ್ಮುವ ಬಾಣಬಿರುಸು... ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು... ಅದಷ್ಟೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಮಿಳಿತಗೊಂಡಿರುವುದು ಹಬ್ಬದ ಬಗೆಗೆ ಆಳವಾಗಿ ನೋಡಿದಾಗ ಅರಿವಾಗುತ್ತದೆ. ಕೆಲವೆಡೆ ಈ ಹಬ್ಬವನ್ನು ಮೂರು ದಿನ ಆಚರಿಸಿದರೆ ಮತ್ತೆ ಕೆಲವೆಡೆ ಐದು ದಿನಗಳ ಕಾಲ ಆಚರಿಸುವ ಸಂಪ್ರದಾಯವೂ ಇದೆ.  ಈ ಹಬ್ಬಕ್ಕೆ ರಾಮಾಯಣ, ಮಹಾಭಾರತದಂತಹ ಪುರಾಣದ ಹಿನ್ನಲೆಯಿರುವುದು ಕೂಡ ಕಾಣಬಹುದಾಗಿದೆ. ಹಬ್ಬದಲ್ಲಿ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಅವತ್ತು ಬಲಿಚಕ್ರವರ್ತಿ ಭೂಲೋಕ ಸಂಚಾರ ಬರುತ್ತಾನೆ ಎಂಬ ನಂಬಿಕೆಯೂ ಇದೆ. ಹಾಗಾಗಿ ಅಂದು ಬಲೀಂದ್ರಪೂಜೆಯೂ ನಡೆಯುತ್ತದೆ. 

ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು, ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದು ಎರಡು ಹೆಜ್ಜೆಗಳಲ್ಲಿ ಆಕಾಶ-ಭೂಮಿಗಳನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರಪೂಜೆ ನಡೆಯುತ್ತದೆ. ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿ ಶ್ರೀಕೃಷ್ಣನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋಸಮೂಹವನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋವರ್ಧನಪೂಜೆಯನ್ನು ಆಚರಿಸಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಆಚರಿಸುತ್ತಾರೆ.

ರಾಮಾಯಣದ ಪ್ರಕಾರ ತ್ರೇತಾಯುಗದಲ್ಲಿ ಶ್ರೀರಾಮ ವಿಜಯದಶಮಿಯಂದು ರಾವಣನನ್ನು ಕೊಂದು 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದಾಗ ಜನರು ಸಾಲುದೀಪಗಳನ್ನು ಹಚ್ಚಿ ಸ್ವಾಗತಿಸಿ ದೀಪಾವಳಿಯನ್ನು ಆಚರಿಸಿದರಂತೆ. ಜೈನ ಪುರಾಣದ ಪ್ರಕಾರ ಭಗವಾನ್ ಮಹಾವೀರ ನಿರ್ವಾಣ ಹೊಂದಿದ್ದು ದೀಪಾವಳಿಯ ದಿನದಂದೇ. ಸಿಖ್ ಸಂಪ್ರದಾಯದಂತೆ ಗುರುಹರಗೋವಿಂದ್ ಜೀ ಮತ್ತು ಇತರ 25 ಹಿಂದೂ ಮಹಾರಾಜರುಗಳು ಮೊಘಲರಿಂದ ಬಂಧಮುಕ್ತಿ ಹೊಂದಿದ ದಿನ ಕೂಡ ದೀಪಾವಳಿ. ಅದೇನೇ ಇರಲಿ ಭಾರತೀಯ ಸಂಸ್ಕೃತಿಯ ಪ್ರತೀಕವಾದ ದೀಪಾವಳಿಯು ಒಳಕತ್ತಲು, ಹೊರಕತ್ತಲೆಲ್ಲವನ್ನೂ ಹೊರಹಾಕಿ ಮನ-ಮನೆಯನ್ನೆಲ್ಲಾ ಬೆಳಗಿಸುವ ಬೆಳಕಿನ ಹಬ್ಬವಾಗಿ ದೇಶದಾದ್ಯಂತ ಆಚರಿಸಲ್ಪಡುತ್ತಿದೆ. 

 

 

ಹುಟ್ಟುವ ಮಗು ಗಂಡೋ-ಹೆಣ್ಣೋ?  

ಮನೆಯಲ್ಲಿ ಗರ್ಭಿಣಿಯಿದ್ದರೆ ಆ ಮನೆಯ ಪ್ರತಿಯೊಬ್ಬರಿಗೂ ಗಂಡು ಮಗು ಹುಟ್ಟುತ್ತೋ ಅಥವಾ  ಹೆಣ್ಣು ಮಗು ಹುಟ್ಟುತ್ತೋ ಎಂಬ ಬಗ್ಗೆ ಒಂದು ರೀತಿಯ  ಕುತೂಹಲ ಇದ್ದೇ ಇರುತ್ತದೆ. ಕೆಲವರು ಕುತೂಹಲ ತಣಿಸಲು ಗರ್ಭಿಣಿಯಾಗುತ್ತಿದ್ದಂತೆಯೇ ಸ್ಕ್ಯಾನಿಂಗ್ ಮೂಲಕ ಭ್ರೂಣ ಗಂಡೋ ಅಥವಾ ಹೆಣ್ಣೋ ಎಂದು ಪತ್ತೆ ಮಾಡುವುದು ಕಾನೂನು ಬಾಹಿರವೆಂದು ತಿಳಿದಿದ್ದರೂ ವಾಮಮಾರ್ಗದ ಮೂಲಕ ಅಂತಹ ದುಸ್ಸಾಹಸಕ್ಕೆ ಮುಂದಾಗುತ್ತಾರೆ. ಕೆಲವು ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳು ಸರ್ಕಾರದ ಕಾನೂನನ್ನೇ ಗಾಳಿಗೆ ತೂರಿ ಹಣ ಮಾಡುವ ದಂಧೆಗಿಳಿದ ಪ್ರಕರಣಗಳು ಕೂಡ ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುತ್ತವೆ.
ಇವತ್ತಿನ ದಿನಗಳಲ್ಲಿ ಗಂಡಾಗಲಿ, ಹೆಣ್ಣಾಗಲಿ ಮಗುವೊಂದಾದರೆ ಸಾಕು ಎನ್ನುವವರ ಸಂಖ್ಯೆ ಹೆಚ್ಚಾಗಿದೆಯಲ್ಲದೆ, ಅವರು ಇಂತಹದ್ದೇ ಮಗು ಬೇಕೆನ್ನುವ ಬದಲಿಗೆ ಆರೋಗ್ಯಕರ ಮಗುವನ್ನು ಬಯಸುತ್ತಾರೆ. ಇದು ಒಳ್ಳೆಯ ಬೆಳವಣಿಗೆಯೂ ಹೌದು. ಗರ್ಭಿಣಿ ಮನೆಯಲ್ಲಿದ್ದು ಪ್ರಸವದ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಮುಂದೆ ಹುಟ್ಟುವ ಮಗು ಗಂಡೋ, ಹೆಣ್ಣೋ ಎಂಬ ಬಗ್ಗೆ ಮನೆಯವರಿಗೆಲ್ಲಾ ಕುತೂಹಲ ಸಹಜ. ಕೆಲವರು ಜ್ಯೋತಿಷಿಗಳೊಂದಿಗೆ ಶಾಸ್ತ್ರ ಕೇಳಿ ಅರಿತು ಕೊಳ್ಳುವ ಪ್ರಯತ್ನವನ್ನು ಕೂಡ ಮಾಡುತ್ತಾರೆ. ಅದು ಆಚೆಗಿರಲಿ. ಹುಟ್ಟುವ ಮಗುವಿನ ಬಗೆಗಿನ ಕುತೂಹಲ ಇಂದು ನಿನ್ನೆಯದಲ್ಲ. ಮಾನವ ಸೃಷ್ಠಿಯಾದಂದಿನಿಂದ ಅದು ಮುಂದುವರೆದುಕೊಂಡು ಬಂದಿದೆ. ಸುಮಾರು 700 ವರ್ಷಗಳ ಹಿಂದೆಯೇ ಹುಟ್ಟಲಿರುವ ಮಗುವನ್ನು ಅದು ಹೊಟ್ಟೆಯಲ್ಲಿರುವಾಗಲೇ  ‘ಚಾರ್ಟ್’ ಮೂಲಕ ಹೆಣ್ಣೋ ಅಥವಾ ಗಂಡೋ ಎಂದು ತಿಳಿದುಕೊಳ್ಳುತ್ತಿದ್ದರು ಅಂದ್ರೆ ನಮಗೆ ಅಚ್ಚರಿಯಾಗಬಹುದು ಆದ್ರೆ ಇದು ಸತ್ಯ. ಇವತ್ತು ಚೀನಾದ ಬೀಜಿಂಗ್ ಸೈನ್ಸ್ ಆಫ್ ಇನ್‍ಸ್ಟಿಟ್ಯೂಟ್‍ನಲ್ಲಿ  ಭದ್ರವಾಗಿರುವ ‘ಚೈನಾ ಚಾರ್ಟ್’ನ್ನೊಮ್ಮೆ ನೋಡಿದರೆ ಅರ್ಥವಾಗಿ ಬಿಡುತ್ತದೆ. ಈ ಚಾರ್ಟ್ ರಾಜನೊಬ್ಬನ ಸಮಾಧಿಯಲ್ಲಿ ಸಿಕ್ಕಿತೆನ್ನಲಾಗಿದೆ. ಶೇಕಡ 97ರಷ್ಟು ಚಾರ್ಟ್‍ನಲ್ಲಿ ನಮೂದಿಸಿದಂತೆಯೇ ಆಗಿದೆ ಎಂಬ ಹೆಗ್ಗಳಿಕೆಯೂ ಈ ‘ಚೈನಾ ಚಾರ್ಟ್’ಗೆ ಇದೆ.
ಚಾರ್ಟ್‍ನ್ನು ನೋಡಿ ಗಂಡೋ ಅಥವಾ ಹೆಣ್ಣೋ ಎಂದು ತಿಳಿದುಕೊಳ್ಳುವುದು ಕೂಡ ತುಂಬಾ ಸುಲಭ. ಚಾರ್ಟ್‍ನ ಮೇಲಿನ ಭಾಗದಲ್ಲಿ (ಎಡದಿಂದ ಬಲಕ್ಕೆ) ಜನವರಿಯಿಂದ ಡಿಸೆಂಬರ್‍ವರೆಗೆ 12 ತಿಂಗಳುಗಳನ್ನು ಹಾಗೂ ಕೆಳ ಭಾಗದಲ್ಲಿ (ಮೇಲಿನಿಂದ ಕೆಳಕ್ಕೆ) 18 ರಿಂದ 45ರವರೆಗೆ ಗರ್ಭಿಣಿ ಮಹಿಳೆಯ ವಯಸ್ಸನ್ನು ಬರೆಯಲಾಗಿದೆ. ಇಲ್ಲಿ ಒಟ್ಟು 336 ಚೌಕಳಿಯಿದ್ದು ಇದರಲ್ಲಿ ‘ಗಂಡು(ಒ)’ ಮತ್ತು ‘ಹೆಣ್ಣು(ಈ)’ ಎಂದು ಸೂಚಿಸಲಾಗಿದೆ.
ಉದಾಹರಣೆಗೆ ಮಹಿಳೆಯೊಬ್ಬಳಿಗೆ 18 ವರ್ಷವಾಗಿದ್ದು, ಅವಳು ಜನವರಿಯಲ್ಲಿ ಋತುಚಕ್ರ ನಿಂತು ಗರ್ಭಿಣಿಯಾಗಿದ್ದರೆ ಆಕೆಗೆ ಹುಟ್ಟುವ ಮಗು ‘ಹೆಣ್ಣು’ ಆಗುತ್ತದೆ. ಇನ್ನು ಗರ್ಭಿಣಿ ಮಹಿಳೆಗೆ 25 ವರ್ಷವಾಗಿದ್ದು, ಆಕೆ ಫೆಬ್ರವರಿಯಲ್ಲಿ ಗರ್ಭಿಣಿಯಾಗಿದ್ದರೆ ಆಗ ಆಕೆಗೆ ಹುಟ್ಟುವ ಮಗು ‘ಗಂಡು’ ಆಗುತ್ತದೆ ಎಂದು ಹೇಳಲಾಗಿದೆ.  ಇಷ್ಟಕ್ಕೂ ಇದೇ ಸತ್ಯ ಅಂತನೂ ಹೇಳಕ್ಕಾಗಲ್ಲ. ಆದರೆ ಹಿಂದಿನ ಕಾಲದಲ್ಲಿ ತಮ್ಮ ಕುತೂಹಲ ತಣಿಸಿಕೊಳ್ಳಲು ಇಂತಹವೊಂದು ಚಾರ್ಟ್‍ನ್ನು ತಯಾರಿಸಿದ್ದರಲ್ಲಾ ಎಂಬುವುದೇ ಕುತೂಹಲದ ಸಂಗತಿಯಾಗಿದೆ.

ವಿಶ್ವ ವಿಸ್ಮಯವೀ ಮೈಸೂರು ದಸರಾ

ಬನ್ನೂರು ಕೆ. ರಾಜು

ಧರೆಗಿಳಿದ ದೇವಲೋಕದಂತೆ ಮತ್ತೆ ಬಂದಿದೆ ಮೈಸೂರು ದಸರಾ.  ದೇವೇಂದ್ರನ ಅಮರಾವತಿಯಂತೆ ಮೈಸೂರಿಗೆ ಮೈಸೂರೇ ಮಿರಮಿರನೆ ಮಿಂಚುವ ಮಹಾಸಡಗರ.  ಮೈಮನ ಪುಳಕಿತವಾಗುವಂತೆ ನಿತ್ಯ ಬದುಕಿನ ಜಂಜಡ ಮರೆಸುವ ಸಂತಸದ ಆಗರ.  ಕಣ್ಣು ಕೋರೈಸುವಂತೆ ಮೈಸೂರೆಂಬೋ ಸ್ವರ್ಗದ ಬಾಗಿಲು ತೆರೆದುಕೊಳ್ಳುವ ಸಂಭ್ರಮದ ಚಿತ್ತಾರ.  ಮೈಸೂರು ದಸರೆಯೇ ಹಾಗೆ.  ಇದಕ್ಕಾಗಿ ಇಡೀ ಮೈಸೂರು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ನಿಲ್ಲುವ ಪರಿ ಇದೆಯಲ್ಲ ವಾಹ್ಹ್, ಮಹದದ್ಭುತ! ಇದಕ್ಕಿಲ್ಲ ಮತ್ತೊಂದು ಸರಿಸಮ. ಅದಕ್ಕೇನೆ ಇದು ಅಷ್ಟೊಂದು ಜಗದ್ವಿಖ್ಯಾತ.  ದೇಶದ ಹಲವು ಕಡೆ ದಸರಾ ಉತ್ಸವಗಳು ನಡೆಯುವುದುಂಟು.  ಆದರೆ, ಮೈಸೂರು ದಸರಾದ ವೈಭವವೇ ಬೇರೆ.  ಇಡೀ ವಿಶ್ವವೇ ಇತ್ತ ತಿರುಗಿ ನೋಡುವಂಥದ್ದು.  ಯಾರೇ ಆಗಲಿ ಈ ಕ್ಷಣಕ್ಕೂ ಮೈಸೂರು ದಸರಾ ಎಂದಾಕ್ಷಣ ಏನೋ ಒಂಥರಾ ಆನಂದ. ಮೈಮನವೆಲ್ಲಾ ರೋಮಾಂಚನ.  ಕಣ್ಮುಂದೆ ಚೆಂದದ ಮೈಸೂರು, ಅಂದದ ಅರಮನೆ, ಸುಂದರ ಚಿನ್ನದ ಅಂಬಾರಿ, ಮನಸೆಳೆವ ರತ್ನ ಸಿಂಹಾಸನ, ಸಿಂಹಾಸನಾಧೀಶರಾಗಿ ಮೆರೆದ ಮಹಾರಾಜರ ವೈಭವ-ವೈಭೋಗಗಳೆಲ್ಲವೂ ನೆನಪುಗಳ ಮೆರವಣಿಗೆಯಾಗಿ ತೇಲಿ ಬರುತ್ತದೆ.  ಇದರ ಜೊತೆಗೆ ಮೈಸೂರು ದಸರೆಯ ಜಂಬೂ ಸವಾರಿ ಮತ್ತೆ ಮತ್ತೆ ಕಣ್ಣಿಗೆ ಕಟ್ಟಿದಂತೆ ನೆನಪಿನ ಪರದೆಯಲ್ಲಿ ಹಾದು ಹೋಗುತ್ತದೆ.  ಇದೇ ನೋಡಿ ಮೈಸೂರು ದಸರಾದ ವೈಶಿಷ್ಟ್ಯತೆ.


ಒಂದು ಕಾಲದಲ್ಲಿ ಆಳರಸರ ಮಹೋತ್ಸವವಾಗಿ ಮೆರೆದು ಇಂದು ಬದಲಾದ ಕಾಲಘಟ್ಟದಲ್ಲಿ ನಾಡಹಬ್ಬವೆಂದು ಕರೆಯಲ್ಪಡುತ್ತಿರುವ ಮೈಸೂರು ದಸರಾ ಮಹೋತ್ಸವಕ್ಕೆ ನಾಲ್ಕು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ.  ನಮ್ಮ ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲೇ ಇಷ್ಟೊಂದು ಸುದೀರ್ಘ ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಸಿಗುವುದು ಬಹಳ ಅಪರೂಪ.  ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿ ವೈಭವದ ವಿಜಯ ದಶಮಿಯ ಈ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆಯುಂಟು.  ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ ವಿಜಯನಗರ ಸಾಮ್ರಾಜ್ಯ ಕಟ್ಟಿ ವೈಭವದಿಂದ ಮೆರೆದವರು ವಿಜಯನಗರ ಅರಸರು.  ಅವರ ಕಾಲದಲ್ಲಿ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಇನ್ನೂ ಹೆಚ್ಚಿನ ವೈಭವದ ವರ್ಣಮಯ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀ ಕೃಷ್ಣದೇವರಾಯರು.  

ಇಂಥ ವಿಜಯದಶಮಿಯ ದಸರಾ ಮಹೋತ್ಸವವನ್ನು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮುಂದುವರಿಸಿಕೊಂಡು ಬಂದವರು ಯದುವಂಶದ ಮೈಸೂರು ಒಡೆಯರು.  ಇವರಲ್ಲಿನ 9ನೇ ಆಳ್ವಿಕೆಯ ರಾಜ ಒಡೆಯರು (1578-1617) ಅಂದು ತಮ್ಮ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ 1610ರಲ್ಲಿ ವಿಜಯನಗರದ ರಾಜಪರಂಪರೆಯಂತೆ ನವರಾತ್ರಿ ಉತ್ಸವದ ವಿಜಯದಶಮಿಯ ದಸರಾ ಮಹೋತ್ಸವವನ್ನು ಮೊದಲಿಗೆ ಆರಂಭಿಸಿದರು.  

1799ರವರೆಗೂ ಮೈಸೂರು ರಾಜ್ಯದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲೇ ದಸರಾ ನಡೆಯುತ್ತಿತ್ತು.  ಹೈದರಾಲಿ ಮತ್ತು ಟಿಪ್ಪುವಿನ ಆಳ್ವಿಕೆಯ ನಂತರ ಮತ್ತೆ ಅಧಿಕಾರಕ್ಕೆ ಬಂದ ಯದುಕುಲತಿಲಕ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಕಾಲಕ್ಕೆ (1799-1868) ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗವಾಯಿತು.  ಅಲ್ಲಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಅತೀವ ಕಾಳಜಿಯಿಂದ ಮತ್ತಷ್ಟು ವಿಜೃಂಭಣೆಯಿಂದ 1800ರಲ್ಲಿ ಮೈಸೂರಿನಲ್ಲಿ ದಸರಾ ಪ್ರಾರಂಭವಾಗಿ 'ಮೈಸೂರು ದಸರಾ' ಎಂದು ವಿಶ್ವವಿಖ್ಯಾತಿಯಾಯಿತು.  ವಿಜಯದಶಮಿಯಂದು ಮಧ್ಯಾಹ್ನ ಮಹಾರಾಜರು ಅಲಂಕೃತ ಆನೆಯ ಮೇಲಿನ ಚಿನ್ನದ ಅಂಬಾರಿಯನ್ನೇರಿ ವೈಭವದ ಜಂಬೂಸವಾರಿಯಲ್ಲಿ ಅಂಬಾ ವಿಲಾಸ ಅರಮನೆಯಿಂದ ಹೊರಟು ಬನ್ನಿಮಂಟಪಕ್ಕೆ ತೆರಳಿ ಬನ್ನಿಪೂಜೆ ಮಾಡಿ ಧ್ವಜ ಹಾರಿಸಿ ಸೈನಿಕರಿಂದ ವಂದನೆ ಸ್ವೀಕರಿಸಿ ನಂತರ ತಾವು ಬಂದ ರಾಜ ಮಾರ್ಗದಲ್ಲೇ ಅರಮನೆಗೆ ವಾಪಸ್ಸಾಗುವ ಈ ಜಂಬೂ ಸವಾರಿಯೇ ಮೈಸೂರು ದಸರೆಯ ಪ್ರಮುಖ ಆಕರ್ಷಣೆಯಾಯಿತು.  

ಈ ರೀತಿ ರಾಜ ಒಡೆಯರಿಂದ ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾದ ವಿಜಯನಗರ ಪರಂಪರೆಯ ನವರಾತ್ರಿ ಪೂಜೆಯ ದಸರಾ ಮಹೋತ್ಸವ ಮೈಸೂರಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಮತ್ತಷ್ಟು ಭವ್ಯಗೊಂಡು, ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆ(1902-1940) ಕಾಲಕ್ಕೆ ಮಗದಷ್ಟು ವೈಭವದ ಉತ್ತುಂಗಕ್ಕೇರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವಾಗಿ ವಿಜೃಂಭಿಸಿತು.  ನಾಲ್ವಡಿಯವರ ನಂತರ ಯದುವಂಶದ 25ನೆಯ ಹಾಗೂ ಕಟ್ಟಕಡೆಯ ದೊರೆಯಾಗಿ ಅಧಿಕಾರಕ್ಕೆ ಬಂದ ಶ್ರೀ ಜಯಚಾಮರಾಜ ಒಡೆಯರ್ ಆಳ್ವಿಕೆ ಕಾಲದಲ್ಲಿ (1940-1947) ಇನ್ನಷ್ಟು ವೈಭವ ಪಡೆದುಕೊಂಡು ಜಾಗತಿಕ ಆಕರ್ಷಣೆ ಪಡೆಯಿತು.  ಆದರೆ, 1947 ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯಗಳಿಸಿದ ನಂತರ ರಾಜ ಮಹಾರಾಜರ ಸಂಸ್ಥಾನಗಳೆಲ್ಲವೂ ಭಾರತ ಸರ್ಕಾರದಲ್ಲಿ ವಿಲೀನವಾದವು.  ಆದರೂ ಸಹ ಯಾವುದೇ ಅಡ್ಡಿಯಿಲ್ಲದೆ ಮೈಸೂರು ದಸರಾ ಆಚರಣೆ ನಡೆದುಕೊಂಡು ಬರುತ್ತಿತ್ತು.  ಶ್ರೀ ಜಯಚಾಮರಾಜ ಒಡೆಯರು ರಾಜ ಪ್ರಮುಖರಾಗಿ ಹಿಂದಿನಂತೆ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದ್ದರು.  1962ರಲ್ಲಿ ರಾಜಧನ ಮತ್ತು ರಾಜತ್ವರದ್ದಾದಾಗ ಮೂರ್ನಾಲ್ಕು ವರ್ಷಗಳ ಕಾಲ ದಸರಾ ನಿಂತು ಹೋಗಿತ್ತು.  ಆದರೆ, ಮೈಸೂರಿನ ಪ್ರಮುಖ ಕೈಗಾರಿಕೋದ್ಯಮಿ ಎಫ್.ಕೆ. ಇರಾನಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಸರಳವಾಗಿ ದಸರಾ ಹಬ್ಬವನ್ನು ನಡೆಸಿಕೊಂಡು ಬರಲಾಯಿತು.  1980ರಲ್ಲಿ ಆರ್. ಗುಂಡೂರಾವ್ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದಾಗ ಭವ್ಯ ಪರಂಪರೆಯ ಮೈಸೂರು ದಸರಾ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿ ಅದರ ಉಸ್ತುವಾರಿಯನ್ನು ಸರ್ಕಾರವೇ ವಹಿಸಿಕೊಂಡಿತು.  ಹಾಗಾಗಿ ಅಂದಿನಿಂದ ಇಂದಿನ ತನಕವೂ ನಾಡಹಬ್ಬವಾಗಿ ರಾಜ್ಯ ಸರ್ಕಾರದಿಂದಲೇ ಪ್ರತಿವರ್ಷ ಮೈಸೂರು ದಸರಾ ನಡೆಯುತ್ತಾ ಬಂದಿದೆ.

ಅಂದು ಅಂಬಾರಿಯಲ್ಲಿ ಸ್ವತಃ ಮಹಾರಾಜರೇ ಕೂರುತ್ತಿದ್ದರೆ ಇಂದು ಮೈಸೂರಿನ ಅಧಿದೇವತೆ ನಾಡದೇವಿ ಶ್ರೀ ಚಾಮುಂಡೇಶ್ವರಿ ಅಂಬಾರಿಯಲ್ಲಿ ಅಲಂಕೃತವಾಗಿ ಪೂಜಿಸಲ್ಪಡುತ್ತಾಳೆ. 750 ಕೆ.ಜಿ. ಭಾರದ ಬಂಗಾರದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ಸುಂದರ ಮೂರ್ತಿಯನ್ನು ಹೊತ್ತ ಗಜರಾಜನ ಗಾಂಭೀರ್ಯ ನಡಿಗೆಯಲ್ಲಿ ಮೈಸೂರು ರಾಜ ಬೀದಿಯಲ್ಲಿ ಸಾಗುವ ಮೈಸೂರು ದಸರೆಯ ಜಂಬೂ ಸವಾರಿಯನ್ನು ನೋಡುವುದೇ ಒಂದು ಮಹಾಹಬ್ಬ.  ಹಾಗಾಗಿ ಈ ಮಹಾದೃಶ್ಯ ಕಾವ್ಯವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಿಯರೆಲ್ಲಾ ಸಾಗರದೋಪಾದಿಯಲ್ಲಿ ಮೈಸೂರಿನತ್ತ ಹರಿದು ಬರುತ್ತಾರೆ.  ವಿಜಯದಶಮಿಯಂದು ಈ ಚಿನ್ನದ ಅಂಬಾರಿಯನ್ನು ದರ್ಶಿಸುವುದು ಮಹಾ ಪುಣ್ಯವೆಂಬ ಭಾವನೆ ಇಲ್ಲಿ ಬೇರೂರಿರುವುದರಿಂದ ಇದಕ್ಕೆ ದೈವೀಕಶಕ್ತಿಯದ್ದೆಂದು ಹೆಚ್ಚಿನ ಮಹತ್ವವುಂಟು.

ಆಶ್ವಯುಜ ಶುದ್ಧ ಪ್ರಥಮೆಯಂದು ದೇವಿ ಚಾಮುಂಡಿ ಪೂಜೆಯೊಡನೆ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ಉತ್ಸವ ಆರಂಭಗೊಳ್ಳುವ ಮೊದಲ ದಿನದಿಂದ ಹಿಡಿದು ಮಹಾನವಮಿಯ ಒಂಭತ್ತು ದಿನಗಳೂ ದಸರಾ ಸಂಗೀತೋತ್ಸವ, ದಸರಾ ಚಲನಚಿತ್ರೋತ್ಸವ, ದಸರಾ ಕಾವ್ಯೋತ್ಸವ, ದಸರಾ ರಂಗೋತ್ಸವ, ದಸರಾ ಕ್ರೀಡೋತ್ಸವ, ಯುವ ದಸರಾ, ಯೋಗ ದಸರಾ, ಗ್ರಾಮೀಣ ದಸರಾ, ಜನಪದ ದಸರಾ, ರೈತ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ದಸರಾ ಗೊಂಬೆ ಪ್ರದರ್ಶನ, ದಸರಾ ವೈಮಾನಿಕ ಪ್ರದರ್ಶನ, ದಸರಾ ಆಹಾರ ಮೇಳ...... ಹೀಗೆ ಮೈಸೂರಿನ ತುಂಬಾ ವಿವಿಧ ದಸರಾ ಉತ್ಸವಗಳ, ಮೇಳಗಳ, ಪ್ರದರ್ಶನಗಳ ಮಹಾ ಸುಗ್ಗಿಯೇ ಜರುಗುತ್ತದೆ.  ನವರಾತ್ರಿಯ ಸಮಾರೋಪವಾಗಿ ವಿಜಯ ದಶಮಿಯಂದು ರಾಜ್ಯದ ಮುಖ್ಯಮಂತ್ರಿಯಿಂದ ನಂದಿ ಕಂಬ ಪೂಜೆಯೊಡನೆ ಆನೆ ಮೇಲಿನ ಅಂಬಾರಿಯಲ್ಲಿ ಆಸೀನಳಾಗಿರುವ ತಾಯಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಚಾಲನೆಗೊಂಡು ನಡೆಯುವ ಜಂಬೂ ಸವಾರಿಯ ಮಹಾ ಮೆರವಣಿಗೆಯಲ್ಲಂತೂ ಇಡೀ ನಾಡಿನ ಸಾಂಸ್ಕೃತಿಕ ಸಂಪತ್ತು ತೆರೆದುಕೊಳ್ಳುತ್ತದೆ. ಮಿಂಚಿ ಮೆರೆಯುತ್ತದೆ.

ನಂದೀಧ್ವಜ ಕುಣಿತ, ನಾದಸ್ವರ ವಾದನ, ಪ್ಯಾಲೇಸ್ ಬ್ಯಾಂಡ್, ಪೊಲೀಸ್ ಬ್ಯಾಂಡ್, ಆನೆ ಸಾರೋಟು, ಕುದುರೆ ಸಾರೋಟು, ಪಿರಂಗಿಗಳು, ಬೆಳ್ಳಿ ರಥ, ವಿವಿಧ ಪಲ್ಲಕ್ಕಿಗಳು, ಭಜನೆ ಮೇಳ, ಕರಗ, ವೀರಭದ್ರನ ಕುಣಿತ, ಕೀಲು ಕುದುರೆ, ಮಲ್ಲಗಂಬ, ವೇಷಗಾರರು, ಅಲಾವಿ ಕುಣಿತ, ವೀರಗಾಸೆ, ಝೂಂಜ್ ಪಥಕ್, ಗೊರವರ ಕುಣಿತ, ಜಗ್ಗಲಗೆ ಮೇಳ, ಹೆಜ್ಜೆ ಮೇಳ, ಗಾರುಡಿಗೊಂಬೆ, ಟಿಬೇಟಿಯನ್ ನೃತ್ಯ, ಚಿಟ್ ಮೇಳ, ಕೋಲಾಟ, ಮಲೆನಾಡು ಸುಗ್ಗಿಕುಣಿತ, ಕೊಡವ ಕುಣಿತ, ಪೂಜಾ ಕುಣಿತ, ಕಂಸಾಳೆ, ತಮಟೆ ವಾದನ, ಮರಗಾಲು ಕುಣಿತ, ಸೋಮನಕುಣಿತ, ಚಂಡೆ ಮೇಳ, ಹಾಲಕ್ಕಿ ಸುಗ್ಗಿ ಕುಣಿತ, ನಗಾರಿ ಮೇಳ, ಪಟಾ ಕುಣಿತ, ಕೊಂಬು ಕಹಳೆ, ಕರಡಿ ಮಜಲು, ಪಾಳೇಗಾರನ ವೇಷ, ದೊಣ್ಣೆವರಸೆ, ಕಂಗಿಲು ಕುಣಿತ, ಯಕ್ಷಗಾನ ವೇಷಧಾರಿಗಳು, ಜಡೆಕೋಲಾಟ, ಧ್ವಜ ಕುಣಿತ, ಚಿಟಿಕಿ ಭಜನೆ, ಒನಕೆ ನೃತ್ಯ, ಭೂತ ನೃತ್ಯ ಇವುಗಳೆಲ್ಲದರ ಮಹಾ ಸಂಗಮವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯನ್ನೂ ಪ್ರತಿನಿಧಿಸುವ 30ಕ್ಕೂ ಹೆಚ್ಚು ವೈವಿಧ್ಯಮಯ ಸ್ತಬ್ದಚಿತ್ರಗಳೊಡನೆ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಸಾಗುವ 'ಮೈಸೂರು ದಸರಾ' ಎಂಬ ಈ ಮಹಾ ಮೆರವಣಿಗೆ ಲಕ್ಷಾಂತರ ಜನರ ಕಣ್ಮನ ಸೆಳೆಯುತ್ತಾ ನಗರದಿಂದ ನಾಲ್ಕೈದು ಕಿ.ಮೀ. ದೂರವಿರುವ ಬನ್ನಿಮಂಟಪ ತಲುಪುತ್ತದೆ.

ಆಗ ಅಲ್ಲಿ ಪೊಲೀಸ್ ದಳದಿಂದ ಮನಮೋಹಕ, ಬಹುರೋಚಕವಾದ ಟಾರ್ಚ್‍ಲೈಟ್ ಪೆರೇಡ್ (ಪಂಜಿನ ಕವಾಯಿತು) ಆರಂಭವಾಗುತ್ತದೆ. ಹಿಂದೆ ಮಹಾರಾಜರು ಸೈನಿಕರಿಂದ ಧ್ವಜ ವಂದನೆ ಸ್ವೀಕರಿಸುತ್ತಿದ್ದ ಮಾದರಿಯಲ್ಲೇ ಈಗ ಟಾರ್ಚ್‍ಲೈಟ್ ಪೆರೇಡ್‍ನಲ್ಲಿ ರಾಜ್ಯದ ರಾಜ್ಯಪಾಲರು ಧ್ವಜವಂದನೆ ಗೌರವ ಸ್ವೀಕರಿಸುತ್ತಾರೆ.  ಟಾರ್ಚ್‍ಲೈಟ್ ಪೆರೇಡ್‍ನ ಚಿತ್ತಾಕರ್ಷಕ ಸಾಹಸಮಯ ವರ್ಣ ದೃಶ್ಯಗಳಂತೂ ವಣಿಸಲಸದಳ.  ಲೇಸರ್ ಪ್ರದರ್ಶನ, ಅಶ್ವಾರೋಹಿಗಳ ಸಾಹಸ ಕಸರತ್ತು, ಹೊನಲು ಬೆಳಕಿನ ಮಾಯಾಲೋಕ, ಬಣ್ಣ ಬಣ್ಣದ ಬಾಣ ಬಿರುಸುಗಳ ಯಕ್ಷಲೋಕಗಳೆಲ್ಲವೂ ಒಮ್ಮೆಗೇ ಸೃಷ್ಟಿಗೊಂಡು ಇವುಗಳೊಂದಿಗೆ ಹತ್ತು ದಿನಗಳ ಒಟ್ಟಾರೆ ದಸರಾ ಕಾರ್ಯಕ್ರಮಗಳಿಗೆ ಮಂಗಳ ಹಾಡಲಾಗುತ್ತದೆ.  

ಜ್ಞಾನ ಪೀಠಸ್ಥ ಕಂಬಾರರಿಗೆ ಮೈಸೂರು ದಸರಾ ಗೌರವ

ಬನ್ನೂರು ಕೆ. ರಾಜು
ಲೇಖನಿಯಿಂದಲೇ ಕನ್ನಡದ ಕೀರ್ತಿಯನ್ನು ಹಿಮಾಲಯದೆತ್ತರಕ್ಕೇರಿಸಿ, ಕನ್ನಡ ಸಾಹಿತ್ಯದ ಕಂಪನ್ನು ಜಗದಗಲ ಹರಡಿದ ಡಾ. ಚಂದ್ರಶೇಖರ ಕಂಬಾರ ಅವರು ಸಾಹಿತ್ಯ ದಿಗಂತದ ಶಿಖರ ಸೂರ್ಯನೇ ಸರಿ! ಅಂದ ಹಾಗೆ ಕಂಬಾರರ ಮಹತ್ವಾಕಾಂಕ್ಷೆಯ ಕಾದಂಬರಿಯೊಂದರ ಹೆಸರೂ ಶಿಖರ ಸೂರ್ಯ. ಇದು ಗದ್ಯ ರೂಪಿ ಮಹಾ ಕಾವ್ಯ. ಇಂದಿನ ಮತ್ತು ಹಿಂದಿನ ಅನೇಕನೇಕ ಕಥನಗಳನ್ನು ದೇಸಿ ಶೈಲಿಯಲ್ಲಿ ಜಾನಪದ ಬೇರುಗಳಿಂದ ಕಾವ್ಯಮಯವಾಗಿ ಒಟ್ಟಿಗೆ ಕಟ್ಟಿಕೊಡುವ ಈ ಮಹಾಕಾದಂಬರಿಯ ಪರಿ ಇದೆಯಲ್ಲ ಅದೇ ಒಂದು ಅದ್ಭುತ! ಇಂಥ ಅನೇಕ ಅದ್ಭುತಗಳನ್ನು ಸಾಹಿತ್ಯ ಲೋಕದಲ್ಲಿ ಸೃಷ್ಠಿಸಿರುವ ಕಂಬಾರ ದೇಸಿ ಕಸುಬುದಾರ. ನಿಜಕ್ಕೂ ಈ ಚಂದ್ರಶೇಖರ ಕನ್ನಡದ ಮೇರು ಶಿಖರ.
'ತವರೀ ಹೂವರಳಿ, ಹೂ ಹೂವಿನೊಳಗೊಂದು ಕೈಲಾಸವರಳ್ಳಾವು. ಕೈಲಾಸ ಕೈ ಮುಗಿದು ಭೂ ಲೋಕಕಿಳಿದಾವು. ಸಾವಿರದ ಶರಣವ್ವ ಕನ್ನಡ ತಾಯೇ.....' ಎಂದು ತಮ್ಮ ಚಿತ್ತದ ತುಂಬ ಕನ್ನಡದವ್ವನನ್ನು ತುಂಬಿಕೊಂಡು ಸಾವಿರದ ಸಾಹಿತ್ಯವನ್ನು ಸೃಜಿಸುತ್ತಾ ಬಂದಿರುವ ಕನ್ನಡಮ್ಮನ ಸುಪುತ್ರ ಡಾ. ಚಂದ್ರಶೇಖರ ಕಂಬಾರರು ಕನ್ನಡಮ್ಮನ ಮಡಿಲಿಗೆ 48 ಮಹದದ್ಭುತ ಕೃತಿರತ್ನಗಳನ್ನು ತುಂಬಿದವರು. ಈ ಕೃತಿರತ್ನಗಳ ಒಟ್ಟಾರೆ ಸಾಧನೆಯಿಂದಲೇ ಕನ್ನಡಕ್ಕೆ ಗಿರೀಶ್ ಕಾರ್ನಾಡರ ನಂತರ 12 ವರ್ಷಗಳ ಸುಧೀರ್ಘ ಕಾಲದ ಬಳಿಕ 8ನೇ 'ಜ್ಞಾನಪೀಠ ಪ್ರಶಸ್ತಿ'ಯನ್ನು ಹೊತ್ತು ತಂದು ಕನ್ನಡಮ್ಮನನ್ನು ಸಿಂಗರಿಸಿದ್ದಾರೆ. ತಮ್ಮ ಸಾಹಿತ್ಯದ 'ಸಿರಿಸಂಪಿಗೆ'ಯಿಂದ ಕನ್ನಡ ಘಮಘಮಿಸುವಂತೆ ಮಾಡಿದ್ದ ಅವರು, 'ಜ್ಞಾನ ಪೀಠ'ದ ಹಿರಿಸಂಪಿಗೆಯಿಂದ ಕನ್ನಡಿಗರೆಲ್ಲಾ ಹಿರಿಹಿರಿ ಹಿಗ್ಗುವಂತೆ ಮಾಡಿದ್ದಾರೆ.
ಕಂಬಾರರ ಸಾಹಿತ್ಯವೆಂದರೆ ಕರ್ದಾಲು ಕರ್ದಂತೆ ಕೊಡುವ ಗಟ್ಟಿ ಹಾಲಿನಂತಹ ಗಟ್ಟಿ ಸಾಹಿತ್ಯ. ದೇಸಿ ಸೊಗಡಿನ, ಜಾನಪದ ಸೊಗಸಿನ, ಗ್ರಾಮ ಜೀವಾಳದ ಜೀವ ದ್ರವ್ಯದ ದೈತ್ಯ ಪ್ರತಿಭೆ ಅವರದು. ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಕಂಬಾರರು ಕೈಯಾಡಿಸದ ಸಾಹಿತ್ಯ ಪ್ರಕಾರವಿಲ್ಲ. ಕಾವ್ಯ, ಮಹಾಕಾವ್ಯ, ಕಥೆ, ಕಾದಂಬರಿ, ವಿಮರ್ಶೆ, ಸಂಪಾದನೆ, ಸಂಶೋಧನೆ, ನಾಟಕ... ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರು ಕೃಷಿ ಮಾಡಿದ್ದರೂ ನಾಟಕಕಾರರಾಗಿಯೇ ಬಹುಜನಪ್ರಿಯರು. ಅವರದು ಬಹುಮುಖ ಪ್ರತಿಭೆ. ಬಹು ಮುಖ್ಯ ಪ್ರತಿಭೆಯೂ ಹೌದು. ಚೆನ್ನಾಗಿ ಬರೆಯುತ್ತಾರೆ. ಅಷ್ಟೇ ಚೆನ್ನಾಗಿ ಭಾಷಣ ಮಾಡುತ್ತಾರೆ. ಮತ್ತಷ್ಟೂ ಚೆನ್ನಾಗಿ ಅವರದೇ ಪದ್ಯಗಳನ್ನು ಹಾಡುತ್ತಾರೆ. ಇನ್ನೂ ಅಷ್ಟು ಚೆನ್ನಾಗಿ ಸಿನಿಮಾ ತೆಗೆಯುತ್ತಾರೆ ಮತ್ತು ಅಭಿನಯಿಸುತ್ತಾರೆ. ಅದೇ ಕಂಬಾರರ ವೈಶಿಷ್ಟ್ಯ.
ಕನ್ನಡದ ಇಂಥ ಮೇರು ಸದೃಶ ಕವಿ, ಸಾಹಿತಿ ಡಾ. ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2. ತಂದೆ ಕಮ್ಮಾರ ಮನೆತನದ ಬಸವಣ್ಣಪ್ಪ. ತಾಯಿ  ಸಂಸ್ಕೃತಿ ಸಂಪನ್ನೆ ಚೆನ್ನಮ್ಮ. ಹುಟ್ಟಿದೂರು ಗಂಡು ಮೆಟ್ಟಿದ ನಾಡು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಘೋಡಗೇರಿ. ಘಟಪ್ರಭಾ ನದಿಯ ನೀರುಂಡು ಬೆಳೆದ ಹಳ್ಳಿಯಿದು. ಇದರ ಮೊದಲ ನೆಲೆ ಅಲ್ಲೇ ಸಮೀಪದ ಎರಡು ನದಿಗಳ ಕೂಡು ಜಾಗದಲ್ಲಿದ್ದ ಶಿವಾಪುರ. ಘನ ಸಂಸ್ಕೃತಿಯುಳ್ಳ ಜಾನಪದ ತೊಟ್ಟಿಲಿದು. ಘಟಪ್ರಭ ನದಿಯಲ್ಲಿ ಶಿವಾಪುರ ಮುಳುಗಿದ ಕಾರಣ ಅಲ್ಲಿದ್ದವರು ಬಂದು ನೆಲೆಯಾದದ್ದು ಘೋಡಗೇರಿಯಲ್ಲಿ. ಇದ್ದ ಊರು ಶಿವಾಪುರ, ಇರುವ ಊರು ಘೋಡಗೇರಿ. ಇರಬೇಕಾದ ಊರು ಶಿವಾಪುರ. ಇದು ಕಂಬಾರರ ಜಗತ್ತು. ಶಿವಾಪುರವೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ, ಅದಿಲ್ಲದೆ ಅವರ ಸಾಹಿತ್ಯ ಸಾಗುವುದು ಅಪರೂಪ. ಕಂಬಾರರ ಬಹುತೇಕ ಕೃತಿಗಳಲ್ಲಿ ಶಿವಾಪುರದ ಪ್ರಸ್ಥಾಪ ಇದ್ದೇ ಇರುತ್ತದೆ. ಘೋಡಗೇರಿಯ ಮಣ್ಣಿನ ಹಟ್ಟಿಯಲ್ಲಿ ಬಿದ್ದು, ಎದ್ದು, ಅದೇ ಮಣ್ಣಿನ ಪರಿಸರದಲ್ಲಿ ಆಡುತ್ತಾ ಬಡತನದ ಬೇಗೆಯಲ್ಲೂ ಜಾನಪದ ಸಂಸ್ಕೃತಿಯ ಶ್ರೀಮಂತಿಕೆಯ ತಂಪಿನಲ್ಲಿ ಬೆಳೆದವರು ಕಂಬಾರರು. ತನ್ನೂರಿನ ಮೊದಲ ನೆಲೆಯಾದ ಶಿವಾಪುರದ ರೋಚಕ ಕಥೆಗಳನ್ನು ಹಿರಿಯರಿಂದ ಕೇಳುತ್ತಾ ಬೆಳೆದ ಕಂಬಾರರ ಮೊದಲ ಕಾವ್ಯಗುರು ತಾಯಿ ಚೆನ್ನಮ್ಮಳೇ. ಅವರ ಬಾಯಿಂದ ಮುತ್ತುಗಳಂತೆ ಉದುರುತ್ತಿದ್ದ ತ್ರಿಪದಿಗಳನ್ನು ಆಯ್ದುಕೊಂಡು, ಕೇಳಿಕೊಂಡು ಕವಿಯಾದವರಿವರು. 
ಕಂಬಾರರು ತಮ್ಮ ಬಾಲ್ಯದ ಶಿಕ್ಷಣವನ್ನು ಹುಟ್ಟಿದೂರು ಘೋಡಗೇರಿ ಮತ್ತು ಗೋಕಾಕ್‍ನಲ್ಲಿ ಕಲಿತು, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿ.ಎ. ಮುಗಿಸಿ, 1962 ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದರು. ತದನಂತರ ಅದೇ ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್.ಡಿ. ಮಾಡಿ 'ಉತ್ತರ ಕರ್ನಾಟಕದ ಜನಪದ ರಂಗಭೂಮಿ' ಎಂಬ ಸಂಶೋಧನಾ ಮಹಾ ಪ್ರಬಂಧವನ್ನು ನಾಡಿಗೆ ನೀಡಿದರು. ವಿದ್ಯಾರ್ಥಿ ದೆಸೆಯಲ್ಲೇ ಬರವಣಿಗೆಯಲ್ಲಿ ತೊಡಗಿದ್ದ ಕಂಬಾರರು ಪ್ರೌಢಶಾಲೆಯಲ್ಲಿದ್ದಾಗಲೇ ನಾಟಕವೊಂದನ್ನು ರಚಿಸಿ ಸೈ ಎನಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಬರವಣಿಗೆಯಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡ ಅವರು ಸಾಹಿತ್ಯವನ್ನು ಉಸಿರಿನಷ್ಟೆ ಸರಾಗವಾಗಿಸಿಕೊಂಡರು. ಪರಿಣಾಮ ಕನ್ನಡ ಸಾಹಿತ್ಯ ಲೋಕಕ್ಕೆ ಕಂಬಾರರರಂಥ ಅನನ್ಯ ಪ್ರತಿಭೆ ದೊರೆಯುವಂತಾಯ್ತು. ಭಾರತೀಯ ಸಾಹಿತ್ಯದ ಅತ್ಯುನ್ನತ ಗೌರವವಾದ 'ಜ್ಞಾನಪೀಠ ಪ್ರಶಸ್ತಿ'ಯು ಕನ್ನಡಕ್ಕೆ ದೊರೆತು ಏಳರಿಂದ ಎಂಟನೇ ಸ್ಥಾನಕ್ಕೇರಿ ದಾಖಲೆ ನಿರ್ಮಿಸುವಂತಾದದ್ದು ಈಗ ಇತಿಹಾಸ. 
ವೃತ್ತಿ ಮತ್ತು ಅಲಂಕರಿಸಿದ ಸ್ಥಾನಗಳು : 1970ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಕಂಬಾರರು ಇದಕ್ಕೂ ಮುನ್ನ ಸಾಗರ, ಉಡುಪಿ, ಧಾರವಾಡ ಮುಂತಾದ ಕಡೆ ಕಾಲೇಜು ಅಧ್ಯಾಪಕರಾಗಿದ್ದು. 1968 ರಿಂದ 1969ರವರೆಗೆ ಅಮೇರಿಕಾದ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಅಧ್ಯಾಪಕರೂ ಆಗಿದ್ದರು. ಹಂಪಿ ಕನ್ನಡ ವಿಶ್ವದ್ಯಾನಿಲಯದ ಮೊದಲ ಕುಲಪತಿಯಾಗಿ 1991 ರಿಂದ 1998ರವರೆಗೆ ಎರಡು ಅವಧಿಗೆ ಅಮೂಲ್ಯ ಸೇವೆ ಸಲ್ಲಿಸಿದ್ದರು. 1983 ರಿಂದ 1987ರವರೆಗೆ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಕಂಬಾರರು 1996 ರಿಂದ 2000ದವರೆಗೆ ದೆಹಲಿಯ ನ್ಯಾಷಿನಲ್ ಸ್ಕೂಲ್ ಆಫ್ ಡ್ರಾಮಾ ಸೊಸೈಟಿಯ ಅಧ್ಯಕ್ಷರಾಗಿದ್ದರಲ್ಲದೆ 1986ರಲ್ಲಿ ಉಪಾಧ್ಯಕ್ಷರಾಗಿದ್ದರು. 2004 ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಮೈಸೂರಿನ ರಂಗಾಯಣ, ನವದೆಹಲಿಯ ರಾಷ್ಟ್ರೀಯ ನಾಟಕ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇಂದ್ರ ಸಂಗೀತ ಅಕಾಡೆಮಿಗಳ ಕಾರ್ಯ ನಿರ್ವಾಹಕ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಂಬಾರರ ಪ್ರಮುಖ ಕೃತಿಗಳು
ಕವನ ಸಂಕಲನಗಳು : ಮುಗುಳು (1958), ಹೇಳತೇನ ಕೇಳ (1964), ತಕರಾರಿನವರು (1971), ಸಾವಿರದ ನೆರಳು (1979), ಆಯ್ದ ಕವನಗಳು (1980), ಬೆಳ್ಳಿಮೀನು (1989), ಅಕ್ಕಕ್ಕ ಹಾಡುಗಳೆ (1993), ಈವರೆಗಿನ ಹೇಳತೇನ ಕೇಳಿ (1994), ಚಕೋರಿ (ಮಹಾಕಾವ್ಯ-1996), ಎಲ್ಲಿದೆ ಶಿವಪುರ?, ಇದು ದೇಸಿ (2010). 
ನಾಟಕಗಳು : ಬೆಂಬತ್ತಿದ ಕಣ್ಣು (1961), ನಾರ್ಸಿಸಸ್ (1969), ಋಷ್ಯಶೃಂಗ (1970), ಜೋಕುಮಾರಸ್ವಾಮಿ (1972), ಕಿಟ್ಟಿಯಕಥೆ (1974), ಚಾಳೇಶ, ಸಂಗ್ಯಾಬಾಳ್ಯಾ ಅನಬೇಕೋ ನಾಡೊಳಗ, ಜೈಸಿದನಾಯಕ (1975), ಖರೋಖರ (1977), ಮತಾಂತರ (1978), ಕಾಡುಕುದುರೆ (1979), ಹುಲಿಯ ನೆರಳು, ಆಲಿಬಾಬ (1980), ಹರಕೆಯ ಕುರಿ (1983), ಕಂಬಾರ ಅವರ ನಾಟಕಗಳು (1984), ಸಾಂಬಶಿವ ಪ್ರಹಸನ (1987), ತುಕ್ರನ ಕನಸು (1989), ಪುಷ್ಪರಾಶಿ (1990), ಸಿರಿಸಂಪಿಗೆ, ಬೆಪ್ಪುತಕ್ಕಡಿ ಬೋಳೇಶಂಕರ, ಮಹಾಮಾಯಿ (1991), ಶಿವರಾತ್ರಿ (2009). 
ಕಥೆ-ಕಾದಂಬರಿಗಳು : ಅಣ್ಣ ತಂಗಿ (1956), ಕರಿಮಾಯಿ (1975), ಸಿಂಗಾರವ್ವ ಮತ್ತು ಅರಮನೆ (1982), ಜೀಕೆ ಮಾಸ್ತರರ ಪ್ರಣಯ ಪ್ರಸಂಗ (1986), ಶಿಖರ ಸೂರ್ಯ (ಗದ್ಯ ರೂಪಿ ಮಹಾಕಾವ್ಯ). 
ಸಂಶೋಧನಾ ಪ್ರಬಂಧಗಳು : ಉತ್ತರ ಕರ್ನಾಟಕದ ಜನಪದ ರಂಗಭೂಮಿ (ಪಿಹೆಚ್.ಡಿ. ಮಹಾ ಪ್ರಬಂಧ – 1965), ಸಂಗ್ಯಾಬಾಳ್ಯಾ (1966), ಬಣ್ಣಿಸಿ ಹಾಡವ್ವ ನನ್ನ ಬಳಗ (1968), ಬಯಲಾಟಗಳು, ಮಾತಾಡು ಲಿಂಗವೇ (1973), ನಮ್ಮ ಜನಪದ (1980), ಬಂದಿರೆ ನನ್ನ ಜೋಳಗೆ (1981), ಕನ್ನಡ ಜಾನಪದ ವಿಶ್ವಕೋಶ (ಎರಡು ಸಂಪುಟಗಳಲ್ಲಿ -1985), ಲಕ್ಷಾಪತಿರಾಜನ ಕಥೆ (1986), ಕಾಸಿಗೊಂದು ಸೇರು, ಬೇಡರ ಹುಡುಗ ಮತ್ತು ಗಿಲ್ಲಿ (1989), ನೆಲದ ಮರೆಯ ನಿಧಾನ (1993), ಬೃಹದ್ದೇಸೀಯ ಚಿಂತನ (2001), ನ್ಯಾಷಿನಲ್ ಸ್ಕೂಲ್ ಆಫ್ ಡ್ರಾಮಾಗಾಗಿ ಆಧುನಿಕ ಭಾರತದ ಸಮಗ್ರ ನಾಟಕಗಳ ರಚನೆ (2000). 
ಕಂಬಾರರ ಸಿರಿಸಂಪಿಗೆ, ಜೋಕುಮಾರಸ್ವಾಮಿ, ಕಾಡುಕುದುರೆ, ಸಂಗ್ಯಾಬಾಳ್ಯಾ, ಸಿಂಗಾರವ್ವ ಮತ್ತು ಅರಮನೆ ಅತ್ಯಂತ ಜನಪ್ರಿಯ ಕೃತಿಗಳಾಗಿದ್ದು 'ಜೋಕುಮಾರಸ್ವಾಮಿ' ನಾಟಕ ಭಾರತೀಯ ಹವ್ಯಾಸಿ ರಂಗಭೂಮಿಯ ಇತಿಹಾಸದಲ್ಲೇ ಒಂದು ದಾಖಲೆ ನಿರ್ಮಿಸಿದೆ. 'ಸಿರಿಸಂಪಿಗೆ' ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದು ಕನ್ನಡಕ್ಕೊಂದು ಸಿರಿತಂದಿದ್ದರೆ, 'ಸಿಂಗಾರವ್ವ' ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿಯ ಗರಿ ತಂದಿತ್ತಿದೆ. ಇವರು ನೂರಾರು ಪ್ರಬಂಧ ಮತ್ತು ವಿವಿಧ ಬಿಡಿ ಲೇಖನಗಳನ್ನು ಬರೆದಿದ್ದು, ಚಿಕಾಗೊ, ನ್ಯಾಯಾರ್ಕ್, ಬರ್ಲಿನ್, ಮಾಸ್ಕೊ ಮುಂತಾದ ವಿದೇಶಿ ವಿಶ್ವ ವಿದ್ಯಾನಿಲಯಗಳಲ್ಲಿ ಭಾರತೀಯ ಜಾನಪದ ರಂಗಭೂಮಿ ಕುರಿತಾದ ತಮ್ಮ ವಿದ್ವತ್ ಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇದಕ್ಕಾಗಿ ಇವರು 1998ರಲ್ಲಿ ವಿಶೇಷವಾಗಿ ಫ್ರಾನ್ಸ್‍ಗೆ ಆಹ್ವಾನಿಸಲ್ಪಟ್ಟಿದ್ದರು. ಇವರು ಎರಡು ಸಂಪುಟಗಳಲ್ಲಿ ಪ್ರಕಟಿಸಿರುವ ಜಾನಪದ ವಿಶ್ವಕೋಶವಂತೂ ವಿಶ್ವ ಜಾನಪದ ಕ್ಷೇತ್ರಕ್ಕೆ ಮಹತ್ತರ ಕಾಣಿಕೆ. ನವ್ಯ ಸಾಹಿತ್ಯ ಉತ್ತುಂಗ ಸ್ಥಿತಿಯಲ್ಲಿದ್ದ ಕಾಲದಲ್ಲಿ ಕಂಬಾರರು ಸಾಹಿತ್ಯ ಲೋಕ ಪ್ರವೇಶಿಸಿದರೂ ಸಹ ನವ್ಯಕ್ಕಷ್ಟೇ ಜೋತು ಬೀಳದೆ, ಗ್ರಾಮೀಣ ಜನಪದ ಸಾಹಿತ್ಯಕ್ಕೇ ನವ್ಯದ ಕಿರೀಟ ತೊಡಿಸಿ ಸೃಜನ ಶೀಲತೆಯನ್ನು ಅಭಿವ್ಯಕ್ತಿಸಿದ ಅಪರೂಪದ ಸಾಧಕರಿವರು. ಇವರ ಹಲವಾರು ಕೃತಿಗಳು ತಮಿಳು, ಪಂಜಾಬಿ, ಹಿಂದಿ, ಮರಾಠಿ, ಇಂಗ್ಲೀಷ್ ಮುಂತಾದ ಭಾಷೆಗಳಿಗೂ ಅನುವಾದಗೊಂಡಿವೆ. 
ಸಿನಿಮಾದಲ್ಲೂ ಸಾಧನೆ : ಕಂಬಾರರು ತಮ್ಮದೇ ಕೃತಿಗಳನ್ನಾಧರಿಸಿದ ಕರಿಮಾಯಿ, ಕಾಡುಕುದುರೆ, ಸಂಗೀತ... ಮುಂತಾದ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಅವರದೇ ನಾಟಕ 'ಋಷ್ಯಶೃಂಗ'ವನ್ನು ವಿ.ಆರ್.ಕೆ. ಪ್ರಸಾದ್ ನಿರ್ದೇಶಿಸಿದ್ದಾರೆ. ಒಂದಾನೊಂದು ಕಾಲದಲ್ಲಿ, ವಂಶವೃಕ್ಷ ಮೊದಲಾದ ಚಿತ್ರಗಳಿಗೆ ಗೀತೆಗಳನ್ನು ಒದಗಿಸಿದ್ದಾರೆ. ಅವರ ಅತ್ಯಂತ ಜನಪ್ರಿಯ ಚಿತ್ರಗೀತೆಗಳಲ್ಲಿ 'ಕಾಡುಕುದುರೆ ಓಡಿ ಬಂದಿತ್ತಾ...' ಒಂದಾಗಿದೆ. ಇದು ಕನ್ನಡಕ್ಕೆ ಮೊಟ್ಟ ಮೊದಲ ರಾಷ್ಟ್ರ ಪ್ರಶಸ್ತಿಯನ್ನು ತಂದು ಕೊಟ್ಟ ಹೆಗ್ಗಳಿಕೆ ಹೊಂದಿದೆ. ಮಹಾನವಮಿ, ಟಿ.ವಿ. ಧಾರಾವಾಹಿಗಾಗಿ 'ಕೈಯ ಮುಗಿಯುವೆ...' ಎಂಬ ಶೀರ್ಷಿಕೆ ಗೀತೆಯನ್ನೂ ಬರೆದಿದ್ದಾರೆ. ಕಾಡು ಕುದುರೆ, ಕರಿಮಾಯಿ, ಹರಕೆಯಕುರಿ, ಹುಲಿಯ ನೆರಳು, ಋಷ್ಯಶೃಂಗ, ಸಿಂಗಾರವ್ವ ಮತ್ತು ಅರಮನೆ ಮುಂತಾದ ಕೃತಿಗಳು ಚಲನಚಿತ್ರಗಳಾಗಿ ಜನಪ್ರಿಯಗೊಂಡಿವೆ. ಅಲ್ಲದೆ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಕಂಬಾರರ 'ನಾಯಿ ಕಥೆ' ಸಂಗೀತ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿ ಐದು ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸಿಂಗಾರವ್ವ ಮತ್ತು ಅರಮನೆ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ. 'ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಿರುತೆರೆಯಲ್ಲಿ ಧಾರವಾಹಿಯಾಗಿ ಹೆಸರು ಮಾಡಿದೆ. ಸಾಮಾಜಿಕ ಕಳಕಳಿಯ ಹಲವಾರು ಸಾಕ್ಷ್ಯಚಿತ್ರಗಳನ್ನೂ ಕಂಬಾರರು ನಿರ್ದೇಶಿಸಿದ್ದಾರೆ. 
ಪ್ರಮುಖ ಪ್ರಶಸ್ತಿ-ಪುರಸ್ಕಾರಗಳು : ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿರುವ ಹಿರಿಮೆಯ ಕಂಬಾರರಿಗೆ 1975 ರಲ್ಲಿ ವರ್ಧಮಾನ ಪ್ರಶಸ್ತಿ, ಕಮಲಾ ದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, 1982 ರಲ್ಲಿ ಕೇರಳ ರಾಜ್ಯದ ಕುಮಾರನ್ ಆಶಾನ್ ಪ್ರಶಸ್ತಿ, 1983ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1991ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2001ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಟಾಗೋರ್ ಸಾಹಿತ್ಯ ಪ್ರಶಸ್ತಿ, ಕಾಳಿದಾಸ್ ಸಮ್ಮಾನ್ ಪ್ರಶಸ್ತಿ, 2002ರಲ್ಲಿ ಕಬೀರ್ ಸಮ್ಮಾನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಆಂಧ್ರ ಪ್ರದೇಶದ ಜಷುವಾ ಪ್ರಶಸ್ತಿ, 2003ರಲ್ಲಿ ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ, 2004ರಲ್ಲಿ ಕನ್ನಡ ವಿಶ್ವದ್ಯಾನಿಲಯದಿಂದ ನಾಡೋಜ ಪ್ರಶಸ್ತಿ, ಕಾಡುಕುದುರೆ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ದೇಶಾದ್ಯಂತ ನೂರಾರು ಪ್ರಶಸ್ತಿ ಪುರಸ್ಕಾರಗಳು ಕಂಬಾರರನ್ನು ಅರಸಿಕೊಂಡು ಬಂದು ಅವರನ್ನು ಅಲಂಕರಿಸಿ ಧನ್ಯವಾಗಿವೆ. ಇವೆಲ್ಲಕ್ಕೂ ಕಳಶಪ್ರಾಯವಾಗಿ ಭಾರತದ ನೊಬೆಲ್ ಎಂದೇ ಕರೆಯಲ್ಪಡುವ 2010ನೇ ಸಾಲಿನ ಭಾರತೀಯ 'ಜ್ಞಾನಪೀಠ ಪ್ರಶಸ್ತಿ' ಕಂಬಾರರ ಕೊರಳನ್ನು ಧರಿಸಿ, ತನ್ಮೂಲಕ ಕನ್ನಡ ಕೀರ್ತಿಯ 'ಸಿರಿಸಂಪಿಗೆ'ಯ ಸುವಾಸನೆಯನ್ನು ವಿಶ್ವವ್ಯಾಪಿ ಹರಡಿದೆ. 

ಮೈಸೂರಿನಿಂದ ಕಣ್ಮರೆಯಾಗಿದೆ ಎತ್ತಿನ ಗಾಣ....

ದೊಡ್ಡನಹುಂಡಿ ರಾಜಣ್ಣ

ಒಂದು ಕಾಲದಲ್ಲಿ ಮೈಸೂರಿನ ಬೀದಿಗಳಲ್ಲಿ ಗಾಣಗಳು ಎಲ್ಲೆಂದರಲ್ಲಿ ಕಂಡು ಬರುತ್ತಿದ್ದವು. ಆ ದಿನಗಳಲ್ಲಿ ಎಣ್ಣೆಗಳನ್ನು ಗಾಣಗಳ ಮೂಲಕವೇ ತೆಗೆಯಲಾಗುತ್ತಿತ್ತು. ಹಾಗಾಗಿ ಕೆಲವರು ತಮ್ಮ ಹೊಟ್ಟೆಪಾಡನ್ನು ಗಾಣ ನಡೆಸುವುದರೊಂದಿಗೆ ಕಳೆಯುತ್ತಿದ್ದರು. ಆದರೆ ಕಾಲ ಕಳೆದಂತೆ ಎಲ್ಲವೂ ಬದಲಾಗುತು. ಆಧುನಿಕ ಕಾಲಘಟ್ಟದಲ್ಲಿ ವೈಜ್ಞಾನಿಕತೆ ಬೆಳೆಯುತ್ತಿದ್ದಂತೆಯೇ ಆಯಿಲ್ ಮಿಲ್‍ಗಳು ಆರಂಭಗೊಂಡವು ಇದು ಗಾಣಗಳು ನೇಪಥ್ಯಕ್ಕೆ ಸರಿಯಲು ಕಾರಣವಾಯಿತು.

ಎಣ್ಣೆ ಕಾರ್ಖಾನೆಗಳು ಎಲ್ಲೆಂದರಲ್ಲಿ ತಲೆ ಎತ್ತಿರುವ ಕಾರಣ ಗಾಣಗಳು ಅಸ್ಥಿತ್ವ ಕಳೆದುಕೊಂಡಿವೆ. ಹಿಂದೆ ಹುಚ್ಚೆಳ್ಳು ಎಣ್ಣೆ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ, ಕಡಲೇಕಾಯಿ ಎಣ್ಣೆ ತೆಗೆಯಲಾಗುತ್ತಿತ್ತು. ಹೀಗಾಗಿ ಬಹಳಷ್ಟು ಕುಟುಂಬಗಳು ಇದನ್ನೇ ನಂಬಿ ಬದುಕು ಸಾಗಿಸುತ್ತಿದ್ದರು. 
ತಮಿಳುನಾಡಿನ ಈರೋಡ್ ಜಿಲ್ಲೆಯ ಚಿತ್ತೋಡ್‍ನಿಂದ ಬಂದ ಸುಮಾರು 40 ಕುಟುಂಬಗಳು ಮೈಸೂರಿನ ಅಗ್ರಹಾರ, ಸುಬ್ಬರಾಯನ ಕೆರೆ ಆಸುಪಾಸಿನಲ್ಲಿ ಗಾಣಗಳನ್ನು ನಿರ್ಮಿಸಿ ಬದುಕು ನಡೆಸುತ್ತಿದ್ದವು. ಕ್ರಮೇಣ ಗಾಣಗಳ ಸಂಖ್ಯೆ ಕಡಿಮೆಯಾಗುತ್ತಾ
ಇದೀಗ ಒಂದು ಗಾಣವೂ ಇಲ್ಲದಂತಹ ಪರಿಸ್ಥಿತಿ ಬಂದಿದೆ. ಇವತ್ತು ಗಾಣಗಳು ಕಣ್ಮರೆಯಾಗಲು ಕಾರಣವೂ ಇದೆ. 
ಎರಡು ಎತ್ತುಗಳನ್ನು ಸಾಕಬೇಕು, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯಕ ನಿರ್ವಹಿಸಬೇಕು. ಒಂದು ಹೊರೆ ಭತ್ತದ ಹುಲ್ಲು 130 ರೂ, ಹುರಳಿ ಕೆಜಿಗೆ 30ರೂ,. ಎರಡು ಎತ್ತುಗಳಿಗೆ ದಿನವೊಂದಕ್ಕೆ ಒಂದು ಹೊರೆ ಹುಲ್ಲು, 3ಕೆ.ಜಿ. ಹುರುಳಿ ಬೇಕು. ಇದನ್ನೆಲ್ಲಾ ಸರಿದೂಗಿಸುವುದು ಸಾಮಾನ್ಯದ ಕೆಲಸವಲ್ಲ. ಹೋಗಲಿ ಗಾಣದ ಎಣ್ಣೆ ತೆಗೆದು ಕೊಡಿ ಅಂಥ ಬರೋರು ತಾನೆ ಯಾರಿದ್ದಾರೆ ಹೀಗಾಗಿ 
ಒಂದು ಕಾಲದಲ್ಲಿ ಮೈಸೂರಿನ ಬೀದಿಯ ದೀಪಗಳನ್ನು ಬೆಳಗಲು ವಿವಿಧ ಎಣ್ಣೆಗಳನ್ನು ತೆಗೆಯಲು ಸಹಕಾರಿಯಾಗಿದ್ದ ಗಾಣಗಳು ಮೈಸೂರಿನಿಂದಲೇ ಕಣ್ಮರೆಯಾಗಿವೆ. 

ಸಕ್ಕರೆ ನಾಡಿನಲ್ಲಿ ಪ್ರಥಮ ಕುಂಭಮೇಳ

ದೊಡ್ಡನಹುಂಡಿ ರಾಜಣ್ಣ

ಚಿತ್ರಗಳು: ನೀಲಕಂಠ, ಕೆ.ಅರ್.ಪೇಟೆ

ಮಹಾ ಕುಂಭಮೇಳ ಎಂದರೆ ತಕ್ಷಣಕ್ಕೆ ನೆನಪು ಬರುವುದು ಅಲಹಾ ಬಾದ್‍ನ ಪ್ರಯಾಗ ಕೇತ್ರವೇ. ಕುಂಭ ಮೇಳಕ್ಕೂ ಪ್ರಯಾಗಕ್ಕೂ ಅಂತಹ ಆಧ್ಯಾತ್ಮಿಕ ನಂಟಿದೆ. ನಂತರ ಹರಿ ದ್ವಾರ, ಉಜ್ಜಯಿನಿ ಹಾಗೂ ನಾಸಿಕ್ ನಲ್ಲಿ ನಡೆಯುವ ಕುಂಭಮೇಳ ಮಹತ್ವ ಪಡೆಯುತ್ತವೆ.

ಕೆಲ ವರ್ಷಗಳ ಹಿಂದಿನಿಂದ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳವನ್ನು ಆಚರಿಸಲಾಗು ತ್ತಿದೆ. ಕರ್ನಾಟಕದ ಎರಡನೇ ಸ್ಥಳ ವಾದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಅಂಬಿಗರ ಹಳ್ಳಿಯ ಲ್ಲಿಯೂ ಸೆಪ್ಟೆಂಬರ್ 25 ಹಾಗೂ 26ರಂದು ಎರಡು ದಿನ ಮಹಾ ಕುಂಭಮೇಳ ಹಾಗೂ ಶ್ರೀ ಮಲೆ ಮಹದೇಶ್ವರ ಜಯಂತಿ ಮಹೋತ್ಸವ ವನ್ನು ಆಚರಿಸಲಾಗುತ್ತದೆ.ಪುರಾಣಗಳಲ್ಲಿ ಬಹಳ ಮಹತ್ವ ಪಡೆದಿರುವ ಕುಂಭಮೇಳ ಮಂಡ್ಯ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ನಡೆಯುತ್ತಿರುವುದು ವಿಶೇಷ. ಜತೆಗೆ ಪವಾಡ ಪುರುಷ ಶ್ರೀ ಮಲೆ ಮಹ ದೇಶ್ವರರು ಉತ್ತರ ಕರ್ನಾಟಕದಿಂದ ದಕ್ಷಿಣಕ್ಕೆ ಬಂದಾಗ ಮೊದಲು ಪಾದ ಸ್ಪರ್ಶ ಮಾಡಿದ ಪಾವನ ಭೂಮಿ ಈ ತ್ರಿವೇಣಿ ಸಂಗಮ. ಆದ್ದರಿಂದ ಶ್ರೀ ಮಲೆ ಮಹದೇಶ್ವರರ ಜನ್ಮ ನಕ್ಷತ್ರ ವಾದ ಸೆ.25 ಹಾಗೂ 26ರಂದೇ ಕುಂಭಮೇಳವನ್ನು ಆಚರಿಸಲಾಗುತ್ತದೆ.

ತ್ರಿವೇಣಿ ಸಂಗಮದ ಮಹತ್ವ: ಸಾಮಾನ್ಯವಾಗಿ ಕುಂಭಮೇಳ ನಡೆಯು ವುದು ಮೂರು ನದಿಗಳು ಸಂಗಮ ಗೊಳ್ಳುವ ಸ್ಥಳಗಳಲ್ಲಿ. ಅಲಹಾ ಬಾದ್‍ನ ಪ್ರಯಾಗದಲ್ಲಿ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮವಿದೆ. ಗಂಗಾ, ಯಮುನಾ ನದಿಗಳು ಪ್ರತ್ಯಕ್ಷವಾಗಿ ಹರಿದರೆ, ಸರಸ್ವತಿ ನದಿಯು ಅಗೋಚರ ಹಾಗೂ ಗುಪ್ತಗಾಮಿನಿಯಾಗಿದೆ. ತಿರುಮ ಕೂಡಲು ತಿ.ನರಸೀಪುರದಲ್ಲಿ ಕಾವೇರಿ, ಕಪಿಲಾ ನದಿಗಳು ಪ್ರತ್ಯಕ್ಷವಾಗಿ ಹರಿದರೆ, ಸ್ಫಟಿಕ ಸರೋವರ ಗುಪ್ತ ಗಾಮಿಯಾಗಿ ಹರಿಯುತ್ತದೆ. ತಿರುಮ ಕೂಡಲಿನ ಅಗಸ್ತೇಶ್ವರ ಲಿಂಗದ ಮೇಲೆ ಕುಳಿಯೊಂದಿದ್ದು, ಅದರೊಳಗಿಂದ ತೀರ್ಥ ಮೊಗೆದಷ್ಟೂ ಉದ್ಭವವಾಗು ತ್ತದೆ. ಅದೇ ಸ್ಫಟಿಕ ಸರೋವರ ಎನ್ನ ಲಾಗುತ್ತದೆ.

ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಮೂಲ ಶಕ್ತಿ ದೇವತೆಯಾದ ಹೇಮಾ ವತಿ ನದಿ, ಭಗಂಡೇಶ್ವರ ಪಾದ ತೀರ್ಥ ವೆಂದೇ ಕರೆಯುವ ಪವಿತ್ರ ಕಾವೇರಿ ನದಿ ಹಾಗೂ ಲಕ್ಷ್ಮಣ ಸ್ನಾನ ಮಾಡಿದ ನೆಂಬ ಐತಿಹ್ಯವಿರುವ ವಿಷ್ಣುತೀರ್ಥ ವೆಂದೇ ಕರೆಯುವ ಲಕ್ಷ್ಮಣ ತೀರ್ಥ ನದಿಗಳು  ಕೆ.ಆರ್.ಪೇಟೆ ತಾಲೂಕಿನ ಅಂಗರ ಹಳ್ಳಿ, ಸಂಗಾಪುರ ಹಾಗೂ ಪುರ ಗ್ರಾಮದಲ್ಲಿ ಸಂಗಮಗೊಳ್ಳಲಿವೆ. ಜೀವಂತ ನದಿಗಳು ಸಂಗಮವಾಗುವ ಈ ಕ್ಷೇತ್ರ ಭಾರತದ ಇತರ ಕುಂಭ ಮೇಳ ನಡೆಯುವ ಕ್ಷೇತ್ರಗಳಿಗಿಂತಲೂ ಶ್ರೇಷ್ಠ ಎಂದೇ ಭಾವಿಸಲಾಗಿದೆ.

ಏಕೆಂದರೆ ಶಿವ-ಶಕ್ತಿ-ವಿಷ್ಣು ಒಂದೆಡೆ ಸೇರುವ ಅಪರೂಪದ ಪುಣ್ಯ ಭೂಮಿಯಾಗಿದೆ.ಹಿಂದೂ ಧರ್ಮ ದಲ್ಲಿ ಈ ಮೂರು ದೇವತೆಗಳು ಪ್ರಮುಖ ವಾಹಿನಿಗಳಾದ್ದರಿಂದ ಎಲ್ಲಾ ಧರ್ಮ ತತ್ವ ಇದರಲ್ಲಡಗಿದೆ.

ಸಾಮಾನ್ಯವಾಗಿ ಎರಡು ನದಿಗಳು ಸಂಗಮಗೊಳ್ಳುವ ಸ್ಥಳಗಳಲ್ಲಿ ಸಂಗಮ ಮೇಶ್ವರ ಅಥವಾ ಪಾರ್ವತಿಯ ದೇವಾ ಲಯ ಇರುವುದನ್ನು ಕಾಣಬಹುದು.

ಮಹದೇಶ್ವರರ ಮಹಿಮೆ: ಶ್ರೀಶೈಲದಿಂದ ಕರ್ನಾಟಕದಿಂದ ಬಂದ ಬಾಲಕ ಮಹದೇಶ್ವರರು ಬೆಂಗಳೂರು, ರಾಮ ನಗರ, ಮಂಡ್ಯ, ಕೊಡಗು, ಅರಸೀಕೆರೆ ಮುಖಾಂತರ ಕೆ.ಆರ್.ಪೇಟೆಗೆ ಆಗಮಿಸಿದ ಮಹದೇಶ್ವರರು, ಅಂಬಿಗರಹಳ್ಳಿ ಬಳಿ ಬಳಿ ನದಿ ದಾಟಲು ಅಲ್ಲಿದ್ದ ಅಂಬಿಗ ರನ್ನು ನದಿ ದಾಟಿಸಲು ಕೇಳುತ್ತಾರೆ.  ಮೊದಲೇ ಬಾಲ ಸನ್ಯಾಸಿ ಆತ ಕೊಟ್ಟಾನೆಯೇ ಎಂದು ಉದಾಸೀನ ಮಾಡಿ ಬಾಲಕ ಮಹದೇಶ್ವರರನ್ನು ಮೊದಲಿಸಿ, ಬೆದರಿಸಿ ಕಳುಹಿಸುತ್ತಾರೆ. ಬಾಲಕ ಆ ಅಂಬಿಗರಿಗೆ ನಿಮ್ಮ ಊರು ನಾಶವಾಗಲಿ, ನೀವು ನಾಶವಾಗಿ ಹೋಗುತ್ತೀರಾ ಎಂದು ಶಾಪ ಕೊಟ್ಟ ಬಾಲಕ ಮಹದೇಶ್ವರರು ತಾವು ಧರಿಸಿದ್ದ ಮೇಲುವಸ್ತ್ರವನ್ನು ನೀರಿನ ಮೇಲೆ ಹಾಸಿ ಯೋಗಶಕ್ತಿಯಿಂದ ನೀರಿನಲ್ಲಿ ತೇಲಿ ದಡ ಸೇರುತ್ತಾರೆ ಅದನ್ನು ಕಂಡ ಅಂಬಿಗರು ಮೂಕವಿಸ್ಮಿತರಾಗುತ್ತಾರ ಲ್ಲದೆ, ತಮಗೆ ಕೊಟ್ಟ ಶಾಪವನ್ನು ಹಿಂಪಡೆಯುವಂತೆ ಗೋಗರೆಯು ತ್ತಾರೆ. ನಂತರ ಮಹದೇಶ್ವರರು ನಿಮ್ಮ ಊರು ನಾಶವಾಗುತ್ತದೆ. ನೀವು ಅನುಕೂಲವಾಗುತ್ತೀರಿ ಎಂದು ಹೇಳಿ ಹೊರಟು ಹೋದರು. ಅದರಂತೆ ಹಲವು ಗ್ರಾಮಗಳು ಕೃಷ್ಣರಾಜ ಸಾಗರದ ಹಿನ್ನೀರಿನಲ್ಲಿ ಮುಳುಗಿದವು.

ನಂತರ ಮಹದೇಶ್ವರರು ಸುತ್ತೂರು, ಕುಂತೂರಿನಲ್ಲಿ ಕೆಲ ದಿನಗಳಿದ್ದು ಅಲ್ಲಿಯೂ ಹಲವು ಪವಾಡಗಳನ್ನು ಮೆರೆದು ಪೂರ್ವಘಟ್ಟದ ಎಪ್ಪತ್ತೇಳು ಮಲೆಗೆ ತೆರಳಿ ಮಹದೇಶ್ವರ ಬೆಟ್ಟದಲ್ಲಿ ನೆಲೆಯೂರಿದರು. ಅಷ್ಟಕ್ಕೂ ಇಲ್ಲಿಗೆ ಮಹದೇಶ್ವರರು ಬರಲು ಕಾರಣವೇನು? ಎಂಬ ಪ್ರಶ್ನೆ ಜನರ ಮನದಲ್ಲಿ ಉದ್ಬವವಾಗಬಹುದು. ದಟ್ಟಾರಣ್ಯ ಮಹದೇಶ್ವರ ಬೆಟ್ಟದಲ್ಲಿ ಯೋಗಿಗಳು, ಸಂತರು ತಪಸ್ಸನ್ನಾಚರಿಸುತ್ತಿದ್ದರು. ಅವರಿಗೆ ಶ್ರವಣ ಎಂಬ ಶಿವ ಧರ್ಮ ವಿರೋಧಿ ದುಷ್ಟ ವಿಪರೀತ ಕಾಟ ಕೊಡುತ್ತಿದ್ದ, ಇವನ ಕಿರುಕುಳದಿಂದ ತಪಸ್ವಿಗಳು ಬೇಸತ್ತು ಹೋಗಿದ್ದರು. ಈ ಮಾಹಿತಿ ಅರಿತ ಮಹದೇಶ್ವರರು ಶ್ರವಣನ ಕಿರುಕುಳದಿಂದ ತಪಸ್ವಿಗಳಿಗೆ ಮುಕ್ತಿ ನೀಡಲು ಆಗಮಿಸುತ್ತಿರುತ್ತಾರೆ. ಮಹದೇಶ್ವರರು ಆಗಮಿಸುವುದಕ್ಕೂ ಮೊದಲೇ ಶಿವ ಧ್ಯಾನ ನಿರತ ತಪಸ್ವಿಗಳನ್ನು ಹಿಡಿದು ಸೆರೆಯಲ್ಲಿಟ್ಟಿರುತ್ತಾನೆ. ಮಹದೇಶ್ವರರು ಅವರನ್ನೆಲ್ಲಾ ಸೆರೆಯಿಂದ ಬಿಡುಗಡೆಗೊಳಿಸುತ್ತಾರೆ. ಈಗಲೂ ಬೆಟ್ಟದ ಸಮೀಪದಲ್ಲೇ 'ತವಸೆರೆ' ಎಂಬ ಗ್ರಾಮವಿದ್ದು, ಅದೇ ತಪಸ್ವಿಗಳನ್ನು ಕೂಡಿಹಾಕಿದ್ದ ಸ್ಥಳವೆನ್ನಲಾಗುತ್ತದೆ. ಶ್ರವಣನನ್ನು ನಾಶ ಮಾಡಿದರು. ಈಗಲೂ ತಮಿಳುನಾಡಿನಲ್ಲಿ ಮಹದೇಶ್ವರ ಬೆಟ್ಟಕ್ಕೆ ಸುಮಾರು 60 ಕಿ.ಮೀ.ದೂರವಿರುವ ಬೆಟ್ಟದಲ್ಲಿಯೇ ಶ್ರವಣನನ್ನು ನಾಶ ಮಾಡಲಾಯಿತು ಎನ್ನಲಾಗಿದೆ. ಆ ಬೆಟ್ಟಕ್ಕೆ 'ಶ್ರವಣ ಬೋಳಿ' ಎಂದು ಕರೆಯುತ್ತಾರೆ. ನಂತರ ಮಹದೇಶ್ವರರು ಎಪ್ಪತ್ತೇಳು ಮಲೆಯನ್ನೂ ಸಂಚಾರ ಮಾಡಿ ಕಾಡಿನಲ್ಲಿ ವಾಸಿಸುತ್ತಿದ್ದ ಬೇಡರು, ಕಾಡು ಕುರುಬರು ಹಾಗೂ ಹರಿಜನರನ್ನು ಸಂಘಟಿಸುತ್ತಾರೆ. ಮಾಂಸಹಾರ ತ್ಯಜಿಸಿದ ಬೇಡರಿಗೆ ಲಿಂಗಧಾರಣೆ ಮಾಡುತ್ತಾರೆ. ಮಾಂಸಹಾರ ತ್ಯಜಿಸದ ಕಾಡು ಕುರುಬರು ಹಾಗೂ ದಲಿತರನ್ನು ಗುಡ್ಡರನ್ನಾಗಿ ಮಾಡಿ ಧರ್ಮ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳುತ್ತಾರೆ. 

ಕಂಸಾಳೆ,ಪಂಜಿನ ಸೇವೆ ಬಂದ ಬಗೆ: ಮಹದೇಶ್ವರರ ತತ್ವ ಸಂದೇಶ ಪ್ರಚಾರಕರೆಂದರೆ ಜನಪದ ಕಲಾವಿದರು. ಕಂಸಾಳೆಯವರು, ಗುಡ್ಡರು, ನೀಲಗಾರರು ಮುಂತಾದವರು. ಕಂಸಾಳೆ ಹಾಡುಗಾರರು ಬಳಸುವ ಕಂಸಾಳೆಗಳು ರೂಪುಗೊಂಡ ಬಗೆಯೇ ರೋಚಕ. ಮಹದೇಶ್ವರರು ಜೀವಿಸಿದ್ದ ಕಾಲಘಟ್ಟದಲ್ಲಿ ಮಹದೇಶ್ವರ ಬೆಟ್ಟದ ಕಾಡು ದಟ್ಟವಾಗಿತ್ತು.ಹುಲಿ, ಚಿರತೆ ಮುಂತಾದ ಕ್ರೂರ ಪ್ರಾಣಿಗಳ ಹಾವಳಿ ಹೆಚ್ಚಾಗಿತ್ತು. ಮಹದೇಶ್ವರರ ತತ್ವ ಪ್ರಚಾರಕರಾದ ಕಂಸಾಳೆಯವರು ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಊಟದ ತಟ್ಟೆಗಳನ್ನು ಬಡಿಯುತ್ತಾ ಸಾಗುತ್ತಿದ್ದರು.ಇದೇ ಮುಂದೆ ಕಂಸಾಳೆಯಾಯಿತು ಎನ್ನಲಾಗುತ್ತಿದೆ. ಕತ್ತಲೆಯಲ್ಲಿ ಸಾಗಲು ಹಾಗೂ ಕಾಡು ಪ್ರಾಣಿಗಳನ್ನು ಹತ್ತಿರ ಬರದಿರಲಿ ಎಂಬ ಉದ್ದೇಶದಿಂದ ಪಂಜುಗಳನ್ನು ಬಳಸುತ್ತಿದ್ದರು. ಈ ಪಂಜೇ ಈಗಲೂ ಪಂಜಿನ ಸೇವೆಯ ಹೆಸರಿನಲ್ಲಿ ಉಳಿದು ಬಂದಿದೆ.

ಮಹದೇಶ್ವರರು ಯಾವ ಯಾವ ಸ್ಥಳಗಳಲ್ಲಿ ಸಂಚಾರ ಮಾಡಿದರೋ ಆ ಸ್ಥಳಗಳಲೆಲ್ಲ ಅವರ ಭಕ್ತರಿದ್ದಾರೆ. ಕೆ.ಆರ್.ನಗರ, ಹುಣಸೂರು, ಹೆಚ್.ಡಿ.ಕೋಟೆ, ಬೆಂಗಳೂರು, ರಾಮನಗರ, ಕೊಡಗು, ಮಂಡ್ಯ, ಕೊಳ್ಳೇಗಾಲ, ಮತ್ತಿತರ ಸ್ಥಳಗಳಲ್ಲಿ ಮಹದೇಶ್ವರರ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ಅಲ್ಲದೇ ಇಲ್ಲೆಲ್ಲಾ ಮಹದೇಶ್ವರರ ದೇವಾಲಯಗಳಿವೆ.ಕುಂಭಮೇಳದ ಪುರಾಣ: ಕುಂಭಮೇಳ ನಿನ್ನೆ ಮೊನ್ನೆಯಿಂದ ನಡೆದು ಬಂದ ಆಚರಣೆಯಲ್ಲ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.ಭಾಗವತ ಪುರಾಣ, ವಿಷ್ಣುಪುರಾಣ, ರಾಮಾಯಣ ಹಾಗೂ ಮಹಾಭಾರತದಲ್ಲಿಯೂ ಕುಂಭಮೇಳದ ಬಗೆಗೆ ಉಲ್ಲೇಖವಿದೆ. ರಾಜ ಹರ್ಷವರ್ಧನನ ಆಸ್ಥಾನಕ್ಕೆ ಕ್ರಿ.ಶ.629-645ರಲ್ಲಿ ಭೇಟಿ ನೀಡಿದ್ದ ಚೀನಾದ ಯಾಂತ್ರಿಕ ಹೂಯೆನ್ಸ್ ತ್ಸಾಂಗ್ ತನ್ನ ಪ್ರವಾಸ ಗ್ರಂಥದಲ್ಲಿ ಭಾರತದಲ್ಲಿ ನಡೆಯುವ ಮಹಾ ಕುಂಭಮೇಳದ ವೈಭವವನ್ನು ವರ್ಣಿಸಿ      ದ್ದಾನೆ.

ಕುಂಭಮೇಳಕ್ಕೆ ದೇವತೆಗಳು-ಅಸುರರ ಮಧ್ಯೆ ಅಮೃತಕ್ಕಾಗಿ ನಡೆದ ಹೋರಾಟವೇ ಕಾರಣ. ವಿಷ್ಣು ಆದಿಯಾಗಿ ಎಲ್ಲಾ ದೇವತೆಗಳು ಅಮರತ್ವಗಳಿಸಲು ಅಮೃತಕ್ಕಾಗಿ ಸಮುದ್ರ ಮಂಥನ ಮಡೆಸುತ್ತಾರೆ. ಮಹಾ ಹಿಮಾಲಯವೇ ಕಡಗೋಲಾಗಿ, ಆದಿ ಶೇಷನೇ ಹಗ್ಗ ವನ್ನಾಗಿ ಮಾಡಿಕೊಂಡ ದೇವತೆಗಳು ಹಾಗೂ ಅಸುರರು ಒಂದೊಂದು ಕಡೆ ಆದಿಶೇಷನ್ನು ಹಿಡಿದು ಸಮುದ್ರವನ್ನು ಕಡೆಯುತ್ತಾರೆ.

ದೀರ್ಘ ಸಮಯದ ನಂತರ ಸಮುದ್ರದಲ್ಲಿ ಉರಿಸಿ ಅಮೃತ ದೇವತೆಗಳ ಪಾಲಾಗುತ್ತದೆ. ಈ ಸಂದರ್ಭ ದಲ್ಲಿ ದೇವತೆಗಳು- ಅಸುರರ ಮಧ್ಯೆ ಆಕಾಶ ಮಾರ್ಗದಲ್ಲಿ ದೊಡ್ಡ ಹೋರಾಟವೇ ನಡೆದು ಹೋಗುತ್ತದೆ. ಈ ಸಂದರ್ಭ ದಲ್ಲಿ ಅಮೃತದ ಕೆಲ ಹನಿಗಳು ಹರಿದ್ವಾರ, ಅಲಹಾಬಾದ್, ನಾಸಿಕ್ ಹಾಗೂ ಉಜ್ಜೈನಿಯ ತ್ರಿವೇಣಿ ಸಂಗಮದಲ್ಲಿ ಬಿದ್ದಿ ತೆಂದು ಪುರಾಣದಲ್ಲಿ ಕಥೆಯಿದೆ. ದೇವತೆಗಳು ಶ್ರಮ ವಹಿಸಿ ಪಡೆದ ಅಮೃತ ಪವಿತ್ರ ನದಿಯ ಪಾಲಾಗಿದ್ದು ಅಂತಹ ನದಿಯಲ್ಲಿ ಮಹಾಕುಂಭಮೇಳ ನಡೆಯುವ ಸುದಿನದಲ್ಲಿ ಪುಣ್ಯ ಸ್ನಾನ ಮಾಡಿದರೆ ಮಾಡಿದ ಪಾಪಗಳು ಕಳೆದು ಪುಣ್ಯ ಲಭಿಸುತ್ತದೆ ಎಂಬುದು ಹಿಂದುಗಳ ನಂಬಿಕೆ.ಈ ಪುಣ್ಯ ಕ್ಷೇತ್ರಗಳಲ್ಲಿ 12 ವರ್ಷಕ್ಕೊಮೆ ಪೂರ್ಣ ಕುಂಭಮೇಳ ನಡೆಯುತ್ತದೆ. ಹರಿದ್ವಾರ ಹಾಗೂ ಅಲಹಾಬಾದ್‍ನಲ್ಲಿ ಪ್ರತಿ ಆರು ವರ್ಷಕ್ಕೊಮ್ಮೆ ಅರ್ಧಕುಂಭಮೇಳವೂ ನಡೆಯುತ್ತದೆ. 

 

 

ಜನಮೆಚ್ಚಿದ ಮಹಾರಾಜ ಜಯಚಾಮರಾಜೇಂದ್ರ

- ಬನ್ನೂರು ಕೆ. ರಾಜು
1399ರಲ್ಲಿ ಯದುರಾಯನಿಂದ ಆರಂಭಗೊಂಡು 1947ರ ತನಕ ಐದೂವರೆ ಶತಕಗಳ ಕಾಲ ಈ ನಾಡನ್ನು ವೈಭವದಿಂದ ಆಳಿ ಅಲಂಗಿಸಿಕೊಂಡು ಪ್ರಜಾಪಾಲಕರಾಗಿ ಮೆರೆದವರು ಯದುಕುಲದರಸರು. ಈ ಸುದೀರ್ಘ ಅವಧಿಯಲ್ಲಿ ಮೈಸೂರು ಅರಸೊತ್ತಿಗೆಯು ಇಪ್ಪತ್ತೈದು ಅರಸರನ್ನು ಕಂಡಿದೆ. ಇವರ ಪೈಕಿ ಶ್ರೀ ಜಯಚಾಮರಾಜ ಒಡೆಯರ್‍ರವರೇ ಕೊನೆಯವರು. ಒಂದು ರೀತಿಯಲ್ಲಿ ಸತ್ಯ, ಧರ್ಮಗಳ ಕಾಲವೂ ಇವರ ಜೊತೆಯಲ್ಲಿಯೇ ಕೊನೆಗೊಂಡಿತೆಂದು ಹೇಳಬಹುದು. ಮೊದಲ ದೊರೆ ಯದುರಾಯನಿಂದ ಹಿಡಿದು ಎಲ್ಲಾ ದೊರೆಗಳೂ ತಮ್ಮದೇ ಆದ ಒಂದೊಂದು ವಿಶಿಷ್ಟ ವ್ಯಕ್ತಿತ್ವಗಳನ್ನು ಹೊಂದಿದ್ದು ತಮ್ಮ ನಿಸ್ವಾರ್ಥ ಸೇವೆಯಿಂದ ತಾವೂ ಬೆಳಗಿ ನಾಡನ್ನೂ ಬೆಳಗಿಸಿದ್ದರು. ಪ್ರಜೆಗಳ ಕಷ್ಟ-ನಷ್ಟಗಳನ್ನು ಅರಿತು, ಅವರ ಸುಖ-ದುಃಖಗಳಲ್ಲಿ ಬೆರೆತು ಅವರ ಕಂಬನಿ ಒರೆಸುವಲ್ಲಿ ಮೈಸೂರು ಅರಸೊತ್ತಿಗೆ ಇಡೀ ವಿಶ್ವಕ್ಕೆ ಮಾದರಿಯಾಗಿತ್ತು. ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲದಲ್ಲಿಯೇ ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಗೆ ತಂದವರಿವರು. ಇವರು ಅಂದು ಸ್ಥಾಪಿಸಿದ ಪ್ರಜಾಪ್ರತಿನಿಧಿ ಸಭೆಯೇ ಮುಂದೆ ಸ್ವತಂತ್ರ ಭಾರತದ ರಾಜಕೀಯಕ್ಕೆ ನಾಂದಿಯಾಯಿತು. ಪ್ರಜೆಗಳ ಪಾಲಿಗೆ ಪ್ರತ್ಯಕ್ಷ ದೈವದಂತೆಯೇ ಇದ್ದ ಶ್ರೀ ಜಯಚಾಮರಾಜ ಒಡೆಯರ್‍ರವರ ಕಾಲವೂ ಅಷ್ಟೇ ಸುವರ್ಣಯುಗವಾಗಿತ್ತು. ಹಿಂದಿನವರು ಅದನ್ನು ನೆನೆಸುತ್ತಲೇ ಈಗಿನವರಿಗೆ ಮಹಾರಾಜರಾಳ್ವಿಕೆಯ ಸಿಹಿಬುತ್ತಿಯನ್ನು ಬಿಚ್ಚಿ ಹಂಚುವುದನ್ನು ಕಂಡಾಗ ಅಬ್ಬಾ! ಆ ಕಾಲ ಎಷ್ಟೊಂದು ಸುಭಿಕ್ಷವಾಗಿತ್ತೆಂದು ಆಶ್ಚರ್ಯವಾಗುತ್ತದೆ.
ಮಹಾರಾಜರಾಗಷ್ಟೇ ಇರದೆ ಸ್ವತಃ ಸಾಹಿತಿಯೂ, ಕೀರ್ತನಕಾರರೂ, ಸಂಗೀತಗಾರರೂ, ವಾಗ್ಗೇಯಕಾರರೂ, ಸಂಸ್ಕೃತ ಪಂಡಿತರೂ, ಜ್ಯೋತಿಷ್ಯಶಾಸ್ತ್ರಜ್ಞರೂ, ಉಪನ್ಯಾಸಕರೂ, ಶಿಕ್ಷಣತಜ್ಞರೂ, ಛಾಯಾಚಿತ್ರಕಾರರೂ, ಸಂಶೋಧಕರೂ, ವೇದಾಂತಿಗಳೂ, ತತ್ವಜ್ಞಾನಿಗಳೂ, ದಾರ್ಶನಿಕರೂ ಆಗಿ ಒಟ್ಟಾರೆ ಮಹಾನ್ ಮಾನವತಾವಾದಿಯಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ ಹುಟ್ಟು ಈ ನಾಡಿನ ಭಾಗ್ಯವೆಂದೇ ಹೇಳಬಹುದು. ಮಹಾರಾಜ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ಸಹೋದರ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಹಾಗೂ ಯುವರಾಣಿ ಕೆಂಪು ಚೆಲುವಾಜಮ್ಮಣ್ಣಿಯವರ ಸುಪುತ್ರರಾಗಿ 1919 ರ ಜುಲೈ 18 ರಂದು ಶ್ರೀ ಜಯಚಾಮರಾಜ ಒಡೆಯರ್ ಜನಿಸಿದಾಗ ಬಂಡಿ ಬಂಡಿಗಳಲ್ಲಿ ಮೂಟೆಗಟ್ಟಲೆ ತುಂಬಿದ ಸಕ್ಕರೆ ನಾಡಿನ ತುಂಬಾ ಊರು ಊರಿಗೆ, ಕೇರಿ ಕೇರಿಗೆ ಹಂಚಲ್ಪಟ್ಟಿದ್ದನ್ನು ಈಗಲೂ ಕಣ್ಣಿಗೆ ಕಟ್ಟಿದಂತೆ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಒಡೆಯರ ಜನನ ಆಗ ಅಂಥ ಸಿಹಿ ಸಂಭ್ರಮವಾಗಿತ್ತು.  ವಿಜಯಲಕ್ಷ್ಮಮ್ಮಣ್ಣಿ, ಸುಜಯಕಾಂತಮ್ಮಣ್ಣಿ ಹಾಗೂ ಜಯಚಾಮುಂಡಮ್ಮಣ್ಣಿ ಅವರುಗಳು ಇವರ ಒಡಹುಟ್ಟಿದ ಸಹೋದರಿಯರು.  ಕಿರಿಯ ಸಹೋದರಿ ಜಯಚಾಮುಂಡಮ್ಮಣ್ಣಿ ಭರತಪುರದ ರಾಜರಿಗೆ ಮದುವೆಯಾಗಿದ್ದು 1954 ಜುಲೈ 26ರಂದು ನಿಧನಹೊಂದಿದರು.
ರಾಜಪರಂಪರೆಯ ಪದ್ಧತಿಯಂತೆ ಅರಮನೆಯ ರಾಯಲ್ ಶಾಲೆಯಲ್ಲೇ ಎಸ್ಸೆಸ್ಸೆಲ್ಸಿ ತನಕ ಕಲಿತ ಜಯಚಾಮರಾಜ ಒಡೆಯರ್ ಇಂಗ್ಲೀಷ್, ಸಂಸ್ಕೃತದೊಂದಿಗೆ ಪ್ರೌಢ ವೇದಾಂತ ಗ್ರಂಥಗಳ ಜ್ಯೋತಿಷ್ಯಶಾಸ್ತ್ರದ ಅಭ್ಯಾಸವನ್ನೂ ನಡೆಸಿದ್ದರು. ಆ ನಂತರ ರಾಜಪುತ್ರರೆಂಬ ಗತ್ತು, ದವಲತ್ತು, ಗಾಂಭೀರ್ಯ, ದೊಡ್ಡಸ್ಥಿಕೆ ಇದಾವುದೂ ಇಲ್ಲದೆ ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಬೆರೆತು, ಕಲಿತು ದೊಡ್ಡಪ್ಪ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರು ಸ್ಥಾಪಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದಿಂದಲೇ ಕನ್ನಡ, ಇಂಗ್ಲೀಷ್, ಇತಿಹಾಸ, ರಾಜ್ಯಶಾಸ್ತ್ರದೊಂದಿಗೆ 1938 ರಲ್ಲಿ ಐದು ಚಿನ್ನದ ಪದಕಗಳ ಜೊತೆ ಬಿ.ಎ. ಪದವಿ ಗಳಿಸಿದರು. ಇದಕ್ಕೆ ಪೂರಕವಾಗಿ ಅವರಿಗೆ ಗುರುಗಳಾದ ರಾಲೋ, ವಾಡಿಯಾ, ಸತ್ಯಗಿರಿನಾಥನ್ ಅವರುಗಳಿಂದ ಉತ್ತಮ ಶಿಕ್ಷಣ ದೊರಕಿತ್ತು.
ದೊಡ್ಡಪ್ಪ ನಾಲ್ವಡಿಯವರ ಗರಡಿಯಲ್ಲೇ ರಾಜ್ಯಾಡಳಿತದ ಸಕಲ ಪಟ್ಟುಗಳನ್ನೂ ಕಲಿತ ಜಯಚಾಮರಾಜ ಒಡೆಯರ್‍ರವರು ರಾಜಮನೆತನಕ್ಕೆ ಬೇಕಾದ ಎಲ್ಲಾ ಧೀರೋದಾತ್ತ ಗುಣಗಳನ್ನು ಅವರಿಂದಲೇ ಮೈಗೂಢಿಸಿಕೊಂಡಿದ್ದರು. ಅವರು ಅಪ್ಪಟ ಕನ್ನಡ ಪ್ರೇಮಿಯಾದರೂ ಜ್ಞಾನದ ಹಸಿವಿನಿಂದ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಮಲೆಯಾಳಿ ಹೀಗೆ ಭಾರತದ ಭಾಷೆಗಳಲ್ಲದೆ ದೇಶ ವಿದೇಶಗಳ ಬಹಳಷ್ಟು ಭಾಷೆಗಳನ್ನು ಕಲಿತು ಬಹುಭಾಷಾ ಪಂಡಿತರಾಗಿ ಎಳೆವಯಸ್ಸಿನಲ್ಲೇ ಬಹಳ ಎತ್ತರದ ಜ್ಞಾನ ಶಿಖರವನ್ನು ತಲುಪಿದ್ದರು.
ತಮ್ಮ 18 ನೆಯ ವಯಸ್ಸಿಗೆ 1938 ಮೇ 15ರಲ್ಲಿ ಸತ್ಯಪ್ರೇಮಕುಮಾರಿದೇವಿಯವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಯಚಾಮರಾಜ ಒಡೆಯರ್, ನಂತರದ ದಿನಗಳಲ್ಲಿ ಸತ್ಯಪ್ರೇಮಕುಮಾರಿಯವರಿಂದ ತಮಗೆ ಮಕ್ಕಳ ಭಾಗ್ಯ ಲಭಿಸದ ಕಾರಣ ತಮ್ಮ 21 ನೇ ವಯಸ್ಸಿಗೆ 1942ರಲ್ಲಿ ತ್ರಿಪುರ ಸುಂದರಮ್ಮಣ್ಣಿಯವರೊಡನೆ ಎರಡನೇ ವಿವಾಹವಾದರು. ಹೀಗೆ ದ್ವಿಪತ್ನಿಯರನ್ನು ಹೊಂದಿದ್ದ ಅವರು ಸಾಂಸಾರಿಕ ಜೀವನದಲ್ಲಿ ಐವರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿದಂತೆ ಒಟ್ಟು ಆರು ಮಕ್ಕಳನ್ನು ಪಡೆದಿದ್ದರು. ಅವರುಗಳೆಂದರೆ ಗಾಯಿತ್ರಿದೇವಿ, ಮೀನಾಕ್ಷಿದೇವಿ, ಕಾಮಾಕ್ಷಿದೇವಿ, ವಿಶಾಲಾಕ್ಷಿದೇವಿ, ಇಂದ್ರಾಕ್ಷಿದೇವಿ ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರು.  ಹಿರಿಯ ರಾಜಕುಮಾರಿ ಗಾಯಿತ್ರಿದೇವಿ 1974 ಜೂನ್ 30ರಂದು ನಿಧನರಾದರು.  
1940 ಮಾರ್ಚ್ 24ರಂದು ಭಾನುವಾರ ರಾತ್ರಿ ಇವರ ತಂದೆ ಕಂಠೀರವ ನರಸಿಂಹರಾಜ ಒಡೆಯರ್ ಮತ್ತು 1940 ಆಗಸ್ಟ್ 3ರ ಶನಿವಾರ ರಾತ್ರಿ ದೊಡ್ಡಪ್ಪ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಿಧನಾನಂತರ 1940ರ ಸೆಪ್ಟೆಂಬರ್ 8ರಂದು ವಿಕ್ರಮ ಸಂವತ್ಸರದ ಭಾದ್ರಪದ ಶುಕ್ಲ ಸಪ್ತಮಿಯಂದು 21 ವರ್ಷದ ಜಯಚಾಮರಾಜ ಒಡೆಯರ್ ಕರ್ನಾಟಕ ರತ್ನ ಸಿಂಹಾಸನಾಧೀಶರಾಗಿ ಪಟ್ಟಾಭಿಷಿಕ್ತರಾದರು. ಆ ಕಾಲಕ್ಕೆ 80 ಲಕ್ಷ ಮಹಾ ಪ್ರಜೆಗಳ ಕ್ಷೇಮಪಾಲನೆಯ ಜವಾಬ್ದಾರಿಯನ್ನು ಮಹಾಪ್ರಭುಗಳಾಗಿ ಅವರು ಹೊತ್ತಿದ್ದರು. ಆ ಕ್ಷಣದಿಂದ ಅವರು ನಾಡಪ್ರಭುವಾಗಿ ನಾಡಿನ ಸರ್ವತೋಮುಖ ಪ್ರಗತಿಗಾಗಿ ಅಹರ್ನಿಶಿ ದುಡಿಯಲು ಕಂಕಣ ಕಟ್ಟಿ ನಿಂತಿದ್ದರು. ದೊಡ್ಡಪ್ಪ ನಾಲ್ವಡಿಯವರನ್ನು ಮಾದರಿಯನ್ನಾಗಿ ಮಾಡಿಕೊಂಡಿದ್ದ ಅವರು ತಮ್ಮ ದೊಡ್ಡಪ್ಪನಂತೆಯೇ ಪ್ರಜೆಗಳು ಮೆಚ್ಚಿದ ಪ್ರಭುವಾಗಿ ಎಲ್ಲದರಲ್ಲೂ ಸೈ ಎನಿಸಿಕೊಂಡರು.  
ದೊಡ್ಡಪ್ಪನಷ್ಟು ಸುದೀರ್ಘಕಾಲ ಆಳ್ವಿಕೆ ನಡೆಸುವ ಅವಕಾಶ ಮತ್ತು ಅದೃಷ್ಟ ಇವರಿಗಿರಲಿಲ್ಲ. ಆದರೆ ಇದ್ದಷ್ಟು ಕಾಲ ಅಂದರೆ ಕೇವಲ ಏಳು ವರ್ಷಗಳಲ್ಲಿ ರಾಜ್ಯಕ್ಕೆ ಇವರಿತ್ತ ಕೊಡುಗೆ ಅಪಾರ. ಅದರಲ್ಲೂ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಗೀತ, ಶಿಲ್ಪ, ಸಂಸ್ಕೃತಿ, ನಾಟಕ, ದೃಶ್ಯ... ಹೀಗೆ ಒಟ್ಟಾರೆ ಕನ್ನಡದ ಅಭಿವೃದ್ಧಿಗೆ ತಮ್ಮನ್ನೇ ಅರ್ಪಿಸಿಕೊಂಡಿದ್ದ ಇವರು ಪ್ರಜೆಗಳ ಕಣ್ಣಲ್ಲಿ 'ಕನ್ನಡ ಕಣ್ಮಣಿ'ಯಾಗಿದ್ದರು.
ಜಯಚಾಮರಾಜ ಒಡೆಯರ್‍ರವರು ಸ್ವತಃ ಸಾಹಿತಿಯೂ ಆಗಿದ್ದು ಇವರು ಇಂಗ್ಲೀಷ್‍ನಲ್ಲಿ ರಚಿಸಿ ವಿಶ್ವಮಾನ್ಯತೆ ಗಳಿಸಿದ 'ದತ್ತಾತ್ರೇಯ ದ ವೇ ಅಂಡ್ ದ ಗೋಲ್' ಗೀತೆ ಮತ್ತು ಭಾರತ ಸಂಸ್ಕೃತಿ, ಮತ ಮತ್ತು ಮಾನವ, ಭಾರತೀಯ ಸೌಂದರ್ಯದ ಹಲವು ಮುಖಗಳು, ಆತ್ಮ ಮತ್ತು ಬ್ರಹ್ಮ, ಮತ ಮತ್ತು ಧ್ಯೇಯ ಮುಂತಾದ ಮೌಲಿಕ ಕೃತಿಗಳು ಇವರ ಪಾಂಡಿತ್ಯವನ್ನು ತೆರೆದಿಡುತ್ತವೆ. ಇವು ಆಗಿನ ಕಾಲದಲ್ಲೇ ದೇಶ-ವಿದೇಶಿಯರ ವಿದ್ವಜ್ಜನರ ಗಮನ ಸೆಳೆದು ಜಯಚಾಮರಾಜ ಒಡೆಯರ್ ಸಾಹಿತ್ಯ ಕೀರ್ತಿಯನ್ನು ಜಾಗತಿಕವಾಗಿಯೂ ಬೆಳಗಿದ್ದವು.
ಕರ್ನಾಟಕ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತಗಳೆರಡರಲ್ಲೂ ಪ್ರಭುತ್ವ ಸಾಧಿಸಿದ್ದ ಜಯಚಾಮರಾಜ ಒಡೆಯರ್ ಶ್ರೇಷ್ಟ ಪಿಯಾನೊ ವಾದಕರಾಗಿದ್ದರಷ್ಟೇ ಅಲ್ಲದೆ, ಪೈಪ್ ಆರ್ಗನ್ ನುಡಿಸುವುದರಲ್ಲಿ ನಿಸ್ಸೀಮರಾಗಿದ್ದರು. ಪಾಶ್ಚಾತ್ಯ ಸಂಗೀತದ ಘಟಾನುಘಟಿಗಳಾದ ವ್ಯಾಗ್ನರ್, ಮೆಹ್ಲರ್, ಬಾಬ್, ಬಿಥೋಮವನ್ ಮುಂತಾದವರ ಬಗ್ಗೆ ಒಲವು ಹೊಂದಿದ್ದ ಒಡೆಯರ್‍ರವರು 1937ರಲ್ಲಿ ಲಂಡನ್‍ನ ಗಿಲ್ಫ್‍ಹಾಲ್ ಸ್ಕೂಲ್ ಆಫ್ ಮ್ಯೂಸಿಕ್‍ನ ಲೈಸೆನ್ಸಿಯೇಟ್ ಪದವೀಧರರಾಗಿದ್ದು, 1945 ರಲ್ಲಿ ಕಾಲೇಜ್ ಆಫ್ ಮ್ಯೂಸಿಕ್‍ನಲ್ಲಿ ಲಂಡನ್‍ನ ಆನರರಿ ಫೆಲೋ ಪದವಿಗೆ ಪಾತ್ರರಾಗಿದ್ದರಲ್ಲದೆ, ಭಾರತದ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದ ಹೆಗ್ಗಳಿಕೆ ಇವರ ಹೆಸರಿನಲ್ಲಿದೆ. ಇವರ ಅಗಾಧವಾದ ಸಂಗೀತ ಪ್ರತಿಭೆಗೆ 1965 ರಲ್ಲಿ ಹಂಪೆಯಲ್ಲಿ ನಡೆದ ಪ್ರತಿಷ್ಠಿತ ಪುರಂದರದಾಸರ ಚತುರ್ಥ ಶತಮಾನೋತ್ಸವದ ಅಧ್ಯಕ್ಷತೆಯ ಗೌರವ ಕಿರೀಟ ಇವರ ಸಿರಿಮುಡಿಗೇರಿತ್ತು.
ಇಂದಿಗೂ ಪೊಲೀಸ್ ಬ್ಯಾಂಡ್, ಪ್ಯಾಲೇಸ್ ಬ್ಯಾಂಡ್ ಎಂದು ಬಹು ಪ್ರಸಿದ್ಧಿಯಾಗಿರುವ ಮೈಸೂರಿನಲ್ಲಿರುವ ಕರ್ನಾಟಕ ಸರ್ಕಾರದ 'ಪೊಲೀಸ್ ವಾದ್ಯವೃಂದ'ವು ಜಯ ಚಾಮರಾಜ ಒಡೆಯರ್ ಅವರ ಪ್ರೋತ್ಸಾಹದ ಫಲವಾಗಿದ್ದು ದಕ್ಷಿಣ ಭಾರತದಲ್ಲೇ ಇದು ಏಕೈಕವೆನಿಸಿದೆ.  ನಾಡಿನ ವಿವಿಧ ಕಡೆಗಳಿಂದ ಆಯ್ಕೆಯಾದ 350 ಮಂದಿ ಸಂಗೀತಗಾರರ ಪೊಲೀಸ್ ವಾದ್ಯವೃಂದಕ್ಕೆ ಜಯ ಚಾಮರಾಜ ಒಡೆಯರೇ ಸ್ಪೂರ್ತಿ.  ಇವರ ಒತ್ತಾಸೆಯಿಂದ ಪ್ರಾರಂಭವಾದ ಈ ವಿಶೇಷ ವಾದ್ಯವೃಂದಕ್ಕೆ ಫ್ರಾನ್ಸಿನ ಖ್ಯಾತ ಸಂಗೀತಗಾರ ಡಿಫ್ರಿಜ್ ಮೊದಲ ಬ್ಯಾಂಡ್ ಮಾಸ್ಟರ್ ಆಗಿದ್ದರು.  ಪ್ರಾರಂಭದಲ್ಲಿ ಪಾಶ್ಚಾತ್ಯ ಸಂಗೀತವನ್ನಷ್ಟೇ ನುಡಿಸುತ್ತಿದ್ದ ಈ ವಾದ್ಯವೃಂದಕ್ಕೆ ಒಡೆಯರು ಕರ್ನಾಟಕ ಸಂಗೀತವನ್ನೂ ಸೇರಿಸಿ ಪೂರ್ವ-ಪಶ್ಚಿಮದ ರಾಗ ಸಂಗಮ ಮಾಡಿದ್ದು, ಇದರಿಂದ ಇದರ ಇಂಪು ಇನ್ನಷ್ಟು ಹೆಚ್ಚಾಗಿ ಕೇಳುಗರು ರೋಮಾಂಚನಗೊಳ್ಳುವಂತಾಯಿತು.  ಹಾಗಾಗಿ ಇಂದಿಗೂ ಸಹ ಪ್ಯಾಲೇಸ್ ಬ್ಯಾಂಡ್ ಅರ್ಥಾತ್ ಪೊಲೀಸ್ ಬ್ಯಾಂಡ್ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ.  ಇದರ ಸಂಗೀತದ ಖದರ್ರೇ ಖದರ್ರ್.  ಅದು ಬೇರೆ ಯಾವ ವಾದ್ಯವೃಂದಕ್ಕೂ ಬರಲಾರದು!   
ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿ, ಸ್ಕೌಟ್ ಮಹಾರಾಜರೆನಿಸಿ 1942 ರಲ್ಲಿ ಕಾಶಿ ವಿಶ್ವವಿದ್ಯಾನಿಲಯದಿಂದ ಎಲ್.ಎಲ್.ಬಿ. ಪದವಿ, 1945 ರಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ಜೆಸಿಎಸ್‍ಐ, 1958 ರಲ್ಲಿ ಜಿಸಿಬಿ ಗೌರವಗಳನ್ನು ಹಾಗೂ 1945 ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್ ಪದವಿಗೆ ಪಾತ್ರರಾಗಿ ವಿದ್ವತ್ತಿನ ಮೇರುಪರ್ವತವಾಗಿದ್ದ ಶ್ರೀ ಜಯಚಾಮರಾಜ ಒಡೆಯರ್‍ರವರು ಉತ್ತಮ ವಾಗ್ಮಿಗಳೂ ಆಗಿದ್ದರು. ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ತಮ್ಮ ವಿದ್ವತ್‍ಪೂರ್ಣ ಭಾಷಣಗಳಿಂದ ಎಲ್ಲರ ಮೆಚ್ಚಿನ ಮಹಾರಾಜರಾಗಿದ್ದರು. ಸ್ವಾತಂತ್ರ್ಯ ಹೋರಾಟ ದೇಶದಲ್ಲಿ ತೀವ್ರವಾಗಿ ನಡೆಯುತ್ತಿದ್ದಾಗಲೇ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆಗೆ ಕಾರಣರಾಗಿ ಒಡೆಯರ್‍ರವರು ತಮ್ಮ ಆಶ್ರಯದಲ್ಲೇ ಕೆ.ಸಿ. ರೆಡ್ಡಿಯವರ ನೇತೃತ್ವದ ಸಚಿವ ಸಂಪುಟದ ರಚನೆಗೂ ಕಾರಣಕರ್ತರಾಗಿ ಇತಿಹಾಸ ನಿರ್ಮಿಸಿದ್ದರು.
1947 ಆಗಸ್ಟ್ 15 ರಂದು ದೇಶ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯದ ಗಾಳಿ ಕುಡಿದಾಗ ಸಿಂಹಾಸನದಿಂದ ಕೆಳಗಿಳಿದ ಜಯಚಾಮರಾಜ ಒಡೆಯರ್, ಬದಲಾದ ವ್ಯವಸ್ಥೆಗೆ ಬಹುಬೇಗ ಹೊಂದಿಕೊಂಡರು. ಸ್ವಾತಂತ್ರ್ಯ ನಂತರ ಭಾರತದ ಅದೆಷ್ಟೋ ಸಂಸ್ಥಾನಗಳ ಮಹಾರಾಜರು ಪ್ರಭುತ್ವವನ್ನು ತ್ಯಜಿಸಿದ್ದರು. ಆಗ ಮಹಾರಾಜರ ಜಂಬೂ ಸವಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಕೂಡ ಜನತಾ ದಸರೆಯಾಗಿ ಮಾರ್ಪಾಡು ಹೊಂದಿತು. 1948 ರಿಂದ 1956 ರವರೆಗೆ ರಾಜ ಪ್ರಮುಖರಾಗಿದ್ದ ಒಡೆಯರು ನಂತರ ಏಕೀಕೃತ ಕರ್ನಾಟಕದ ಮೊದಲ ರಾಜ್ಯಪಾಲರಾಗಿ, ಭಾರತದ ಮೊದಲ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದ್‍ರ ಸಮ್ಮುಖದಲ್ಲಿ 1956 ರ ನವೆಂಬರ್ 1 ರಂದು ಪ್ರಮಾಣವಚನ ಸ್ವೀಕರಿಸಿದರು. ಒಂದು ರೀತಿಯಲ್ಲಿ ಅವರ ಪ್ರಭುತ್ವ ಹೋದರೂ ಮತ್ತೊಂದು ರೀತಿಯಲ್ಲಿ ಅವರು ತಾವು ಬದುಕಿರುವ ತನಕವೂ ಪ್ರಭುಗಳಾಗಿಯೇ ಬದುಕಿದ್ದರು. ಏಕೆಂದರೆ ಅವರು ಕೇವಲ ಮಹಾರಾಜರಾಗಿರಲಿಲ್ಲ. ಅದಕ್ಕೂ ಮೀರಿದ ಪ್ರಭುತ್ವವನ್ನು ಅವರು ಸಂಪಾದಿಸಿಕೊಂಡಿದ್ದರು. ರಾಷ್ಟ್ರಕವಿ ಕುವೆಂಪುರವರು ಜಯಚಾಮರಾಜ ಒಡೆಯರ್‍ರವರ ಕುರಿತು ಒಂದು ಕಡೆ ಹೇಳಿರುವ ಮಾತುಗಳಿವು – 'ಎಲ್ಲರೂ ಸಿಂಹಾಸನವನ್ನೇರಿ ಮಹಾರಾಜರಾದರೆ ಇವರು ಸಿಂಹಾಸನದಿಂದ ಇಳಿದು ಮಹಾರಾಜರಾಗಿದ್ದಾರೆ' ಇದು ಬೆಳಕಿನಷ್ಟೇ ಸತ್ಯ.
ಇಂಥ ಯುಗಪುರುಷ ಜಯಚಾಮರಾಜ ಒಡೆಯರ್‍ರವರು 1974 ರ ಸೆಪ್ಟೆಂಬರ್ 23 ರಂದು ಬೆಂಗಳೂರು ಅರಮನೆಯಲ್ಲಿ ಕೊನೆಯುಸಿರೆಳೆದಾಗ ಇಡೀ ವಿಶ್ವವೇ ಕಂಬನಿಗರೆದಿತ್ತು. ಕಾಕತಾಳೀಯವೆಂದರೆ ಇವರ ದೊಡ್ಡಪ್ಪ ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ 1940 ರಲ್ಲಿ ಇದೇ ಬೆಂಗಳೂರು ಅರಮನೆಯಲ್ಲಿ ಪ್ರಾಣ ಬಿಟ್ಟಿದ್ದರು. ಇನ್ನೊಂದು ಆಶ್ಚರ್ಯಕರ ವಿಚಾರವೆಂದರೆ ಶಂಕರ ಭಗವತ್ಪಾದರ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟಿದ್ದ ಜಯಚಾಮರಾಜ ಒಡೆಯರ್ ನಿಧನರಾಗುವ ಒಂದೆರಡು ದಿನಗಳ ಮುಂಚೆ ಶೃಂಗೇರಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಪವಿತ್ರ ತಾಣವಾದ ಶ್ರೀ ಶಂಕರಮಠವನ್ನೂ, ತಾಯಿ ಶೃಂಗೇರಿ ಶಾರದೆಯನ್ನೂ ದರ್ಶನ ಮಾಡಿ ಬಂದಿದ್ದರು.

ಅಳಿವಿನ ಅಂಚಿನಲ್ಲಿ ಆಳರಸರ 'ಮಧುವನ'

 ಬನ್ನೂರು ಕೆ. ರಾಜು

9481533167

ಮೈಸೂರೆಂದರೆ ಆಕರ್ಷಿಸುವುದು ಅಂಬಾವಿಲಾಸ ಅರಮನೆ, ಚಾಮುಂಡಿಬೆಟ್ಟ, ಕೃಷ್ಣರಾಜಸಾಗರ, ಜಗನ್ಮೋಹನಅರಮನೆ, ಮೃಗಾಲಯ, ಲಲಿತಮಹಲ್, ಕಾರಂಜಿಕೆರೆ, ವಿಶ್ವವಿಖ್ಯಾತ ದಸರಾ ಮತ್ತು ದಸರಾ ವಸ್ತುಪ್ರದರ್ಶನ ಕೇಂದ್ರ ಎಂದಷ್ಟೇ ಬಹಳಷ್ಟು ಮಂದಿ ತಿಳಿದುಕೊಂಡಿದ್ದಾರೆ. ಆದರೆ ಇವುಗಳಂತೆಯೇ ಆಕರ್ಷಣೀಯವಾಗಿರುವ ಅದ್ಭುತಕಲೆಗಾರಿಕೆಯ ಅಪೂರ್ವ ತಾಣವೊಂದು ಮೈಸೂರಿನಲ್ಲೇ ಇರುವುದು ಹೆಚ್ಚಿನವರಿಗೆ ತಿಳಿದೇ ಇಲ್ಲ. ಹೊರಗಿನವರಿಗಿರಲಿ ಮೈಸೂರಿಗರಿಗೇ ಎಷ್ಟೋ ಮಂದಿಗೆ ಇದರ ಅರಿವಿಲ್ಲ. ಸ್ಮೃತಿಪಟಲಕ್ಕೆ ಬಿದ್ದೊಡನೆ  ಎಂತಹವರನ್ನೂ ತನ್ನದೇ ಆದ ಸುಂದರಲೋಕದಲ್ಲಿ ಮುಳುಗಿಸಿಕೊಂಡು ಅವರ್ಣನೀಯ ಆನಂದ ನೀಡುವ 'ಮಧುವನ'ವೊಂದು ಮೈಸೂರಿನ ಚಾಮುಂಡಿಬೆಟ್ಟದ ಪದತಲದಲ್ಲೇ ಹಾದುಹೋಗುವ ನಂಜನಗೂಡು ರಸ್ತೆಯಲ್ಲಿದ್ದು, ವಾಸ್ತುಶಿಲ್ಪದ ವೈಭವವನ್ನು, ಶಿಲ್ಪಕಲೆಯ ಕಾವ್ಯಮಯ ಕಲಾವಂತಿಕೆಯನ್ನು ಹುಡುಕುವವರನ್ನು, ತಡಕುವವರನ್ನು ಕೈಬೀಸಿ ಕರೆಯುತ್ತಿದೆ.

'ಮಧುವನ' ಎಂದರೆ ಮೈಸೂರು ಸಂಸ್ಥಾನವನ್ನು ಆಳಿ ಅಳಿದ ಅರಸರ ಸಮಾಧಿಗಳು. ಆದರೆ ಇವು ಕೇವಲ ಸಮಾಧಿಗಳಲ್ಲ. ಅಪಾರ ಕೀರ್ತಿಗಳಿಸಿ ಮೆರೆದಂತಹ ಯದುವಂಶದ ರಾಜಾಧಿರಾಜರು, ರಣಧೀರ ಕಂಠೀರವರು, ವೀರಾಧಿವೀರರು, ಶೂರರುಗಳೆಲ್ಲಾ ಮಣ್ಣಾಗಿ ಇಲ್ಲಿ ಸಮಾಧಿಗಳಾಗಿದ್ದಾರೆ. ಆದರೆ ಯಾರಿಗೂ ಕೂಡ ಇವುಗಳನ್ನು ಅಷ್ಟು ಸುಲಭವಾಗಿ ಸಮಾಧಿಗಳೆಂದು ತಿಳಿಯಲಾರದಷ್ಟು ಬೃಂದಾವನದ ರೂಪದಲ್ಲಿ ಪ್ರತಿಯೊಂದು ಸಮಾಧಿಗಳೂ ಅದ್ಭುತ ವಾಸ್ತುಶಿಲ್ಪದ ನಂಟಿನೊಡನೆ ಚೆಲುವಿನ ಕಲಾಕೃತಿಗಳಾಗಿ ಅರಳಿ ನಿಂತಿವೆ. ಅಷ್ಟೇ ಅಲ್ಲ, ಒಂದೊಂದು ಸಮಾಧಿಗಳೂ ವಿವಿಧ ಚಿತ್ತಾರಗಳಿಂದ ಗೋಪುರಾಕೃತಿಯಲ್ಲಿ ಬೃಹತ್ತಾಗಿ ಮೈತಳೆದಿರುವುದರಿಂದ ಇವುಗಳ ಸುಂದರ ರೂಪಗಳು ನಯನಾನಂದವಾಗಿ ಬೆರಗುಗೊಳಿಸುತ್ತವೆ. ನೂರಾರು ವರ್ಷಗಳ ಇತಿಹಾಸವನ್ನು ತನ್ನ ಗರ್ಭದಲ್ಲಿರಿಸಿಕೊಂಡು ನೂರಾರು ಬಗೆಯ ಚಿತ್ತಾರಗಳ ಬೃಂದಾವನಗಳನ್ನು ಧರಿಸಿಕೊಂಡಿರುವ ಈ 'ಮಧುವನ' ಯದುಕುಲತಿಲಕರಾದ ಮೈಸೂರು ಅರಸರ ಮತ್ತವರ ರಕ್ತಸಂಬಂಧಿಗಳಿಗೆ ಮಾತ್ರವೇ ಮೀಸಲಾದ ರುದ್ರಭೂಮಿಯಾದರೂ ಅರಸರ ಬಗ್ಗೆ ಭಕ್ತಿ ಗೌರವ ಉಳ್ಳವರಿಗೆ ಇದು ಅಂದಿನಿಂದಲೂ ಇಂದಿನ ತನಕವೂ ಕೂಡ ಪುಣ್ಯ ಭೂಮಿಯಾಗಿದೆ. ಹಾಗಾಗಿ ಈಗಲೂ ಕೂಡ ಮಧುವನದ ಬೃಂದಾವನಗಳಿಗೆ ಪೂಜೆ ಮಾಡುವ ರಾಜಭಕ್ತರನ್ನು ಕಾಣಬಹುದು.

ಎಂಟು ಎಕರೆಯಷ್ಟು ವಿಶಾಲ ವಿಸ್ತೀರ್ಣ ಹೊಂದಿರುವ 'ಮಧುವನ'ವನ್ನು ಪ್ರವೇಶಿಸುತ್ತಿದ್ದಂತೆಯೇ ಕಲ್ಪನೆಯ ಗಂಧರ್ವಲೋಕವನ್ನು ಹೊಕ್ಕಂತಹ ಅನುಭವವಾಗುತ್ತದೆ. ಮುಗಿಲನ್ನು ಮುತ್ತಿಕ್ಕುತ್ತಿರುವಂತೆ ಬಾನೆತ್ತರ ನಿಂತಿರುವ ಮಧುವನದ ಹೆಬ್ಬಾಗಿಲು ಆಶ್ಚರ್ಯ ತರಿಸಿದರೆ ಅದರ ಬಲ ಪಕ್ಕದಲ್ಲೇ ಇರುವ ವೀರಭದ್ರೇಶ್ವರ ದೇವಾಲಯ ಎಂಥಾ ನಾಸ್ತಿಕನಲ್ಲೂ ಭಕ್ತಿಯನ್ನು ಮೂಡಿಸುತ್ತದೆ. ಇಲ್ಲಿರುವಂತಹ ವೀರಭದ್ರೇಶ್ವರನ ಕಪ್ಪುಶಿಲೆಯ ಇಷ್ಟೊಂದು ಚೆಂದದ ಪುತ್ಥಳಿ ಬಹುಶಃ ಬೇರೆಲ್ಲೂ ಇರಲಾರದೇನೋ. ಇದನ್ನು ಸ್ವತಃ ಮುಮ್ಮಡಿ ಶ್ರೀಕೃಷ್ಣರಾಜೇಂದ್ರಒಡೆಯರ್‍ರವರೇ ಸ್ಥಾಪಿಸಿರುವುದರಿಂದ ಇಲ್ಲಿ ರಾಜಸಿರಿಯನ್ನು ಕಾಣಬಹುದು. ಹಾಗೆಯೇ ಇಲ್ಲಿಂದ ಬಲಕ್ಕೆ ಕೆಲವು ಹೆಜ್ಜೆಗಳು ಸರಿದಿತೆಂದರೆ ಅಲ್ಲೊಂದು ಕೊಳ ಉಂಟು. ದೇವಲೋಕದ ದೇವೇಂದ್ರನೇ ಜಲಕ್ರೀಡೆಯಾಡುತ್ತಿದ್ದ ಕೊಳವಿದಂತೆ. ಆದರೀಗ ಇದು ಕಸಕಡ್ಡಿಗಳು ತುಂಬಿದ ಹೊಂಡವಾಗಿದೆ. ಇಲ್ಲಿಂದ ತುಸುದೂರ ಕ್ರಮಿಸಿ ಮಧುವನದ ಒಳಾಂಗಣಕ್ಕೆ ಬಂದರೆ ಪವಿತ್ರ ಕಾಶಿಯನ್ನು ನೆನಪಿಸುವ ಕಾಶಿವಿಶ್ವನಾಥ ದೇವಾಲಯ ಮಂತ್ರಮುಗ್ಧರನ್ನಾಗಿಸಿಬಿಡುತ್ತದೆ. ಕಾಶಿವಿಶ್ವನಾಥ ದೇವಾಲಯದ ಬಲಭಾಗದಲ್ಲಿರುವ ಗಣೇಶನ ಪುಟ್ಟಗುಡಿ ಮತ್ತು ಎಡಭಾಗದಲ್ಲಿರುವ ಕಾಳಮ್ಮದೇವಿಯ ಪುಟ್ಟಗುಡಿಗಳು ತಮ್ಮದೇ ಆದ ಅಂದದಿಂದ ಒಂದು ಕ್ಷಣ ತಡೆದು ನಿಲ್ಲಿಸುತ್ತವೆ.

ಅಲ್ಲಿಂದ ಮುಂದೆ ಸಾಗಿ 'ಮಧುವನ'ದ ಹೃದಯಭಾಗ ತಲುಪಿತೆಂದರೆ ನೋಡಲಿಕ್ಕೆ ಎರಡು ಕಣ್ಣುಗಳೂ ಸಾಲದಾಗುತ್ತವೆ. ಸ್ವರ್ಗದಲ್ಲಿರಬಹುದಾದ ಯಾವುದೋ ಭವ್ಯ ದೇಗುಲದಂತೆ ಭುವಿಯಿಂದ ಬಾನಿನತ್ತ ಬೆಳೆದು ಹಲವು ಗೋಪುರ ಕಳಸಗಳೊಡನೆ ನಿರ್ಮಾಣಗೊಂಡಿರುವ ಮುಮ್ಮಡಿ ಶ್ರೀಕೃಷ್ಣರಾಜೇಂದ್ರಒಡೆಯರ್‍ರವರ ಬೃಂದಾವನವನ್ನು ನೋಡಬೇಕಾದರೆ ಕೊರಳೆತ್ತಿ ಹಿಂದಕ್ಕೆ  ಬೆನ್ನನ್ನು ಬಾಗಿಸಬೇಕಾಗುತ್ತದೆ.  

ಎಡಭಾಗದಲ್ಲೇ ಶ್ರೀ ಚಾಮರಾಜೇಂದ್ರ ಒಡೆಯರ್‍ರವರ ಬೃಂದಾವನವು ತನ್ನದೇ ಆದ ಚೆಂದದಿಂದ ಸೌಂದರ್ಯವನ್ನು ಅರಸುವ ಕಂಗಳನ್ನು ಮುದ್ದಿಸುತ್ತದೆ. ಹಾಗೆಯೇ ಮುಂದೆ ಹೋದಲ್ಲಿ ರಣಧೀರ ಕಂಠೀರವ ಶ್ರೀ ನರಸಿಂಹರಾಜ ಒಡೆಯರ್ ಮತ್ತು 9ನೇ ಚಾಮರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತ್ರಿವಳಿ ಬೃಂದಾವನಗಳು ಭವ್ಯತೆಯ ರೂಪ ತಳೆದಿದ್ದು ಅಮೃತಶಿಲೆಯ ಹೊಳಪಿನಿಂದ ತಾಜ್‍ಮಹಲಿನಂತೆ ಪಳಪಳನೆ ಹೊಳೆಯುತ್ತ ನಿರ್ಜೀವತನದಲ್ಲೂ ಜೀವತಳೆದು ನೋಡುಗರ ಕಣ್ಣಕಕ್ಷೆಯನ್ನು ಹಿಡಿಯುತ್ತವೆ. ಇಲ್ಲಿಯೇ ಪಕ್ಕದಲ್ಲೇ ಪವಡಿಸಿರುವ ಶ್ರೀ ಚಾಮರಾಜ ಒಡೆಯರ್‍ರವರ ಧರ್ಮಪತ್ನಿ ಮಹಾರಾಣಿ ರೀಜಂಟ್‍ರವರಾದ ವಾಣಿವಿಲಾಸರ ಬೃಂದಾವನವಂತೂ ಭೃಂಗಗಳನ್ನು ಸೆಳೆಯುವ ಬಿಳಿಗುಲಾಬಿಯಂತೆ ಹಾಲ್ಗಲ್ಲಿನ ಬೆಳಕಿನಲ್ಲಿ ಮನೋಹರವಾಗಿ ಮನ ಸೆಳೆಯುತ್ತದೆ. ಇದರ ಪಕ್ಕದಲ್ಲೇ ಇವರ ತೃತೀಯ ಕುವರಿ ಚೆಲುವರಾಜಮ್ಮಣ್ಣಿಯವರ ಬೃಂದಾವನವೂ ಆಕರ್ಷಕವಾಗಿ ರೂಪುಗೊಂಡಿದೆ.

ಒಂದಕ್ಕಿಂತ ಒಂದು ಅಂದವಾಗಿ ಚೆಂದವಾಗಿ ಮಧುವನದ ತುಂಬ ತುಂಬಿಕೊಂಡಿರುವ ಒಂದೊಂದು ಬೃಂದಾವನವೂ ವಾಸ್ತುಶಿಲ್ಪದ ವೈವಿಧ್ಯತೆಯನ್ನು ಪರಿಚಯಿಸುತ್ತವೆ. ಯದುಕುಲದ ಅರಸರ ಮಾತಾಪಿತ ಪತ್ನಿಯರಾದಿಯಾಗಿ ಪುತ್ರ ಪುತ್ರಿಯರ ತನಕ ಎಲ್ಲರ ಸಮಾಧಿಗಳೂ ಇಲ್ಲಿ ಅಂದ ಚೆಂದದ ಬೃಂದಾವನಗಳ ರೂಪದಲ್ಲಿ ಆಳರಸರ ಕುರುಹುಗಳಾಗಿ ಚೆಲುವಿನ ಚಿತ್ತಾರಗಳನ್ನು ಹೊತ್ತು ನಿಂತಿವೆ. 

ದುರಂತವೆಂದರೆ ಚಿತ್ತಾರದ ನಗರಿಯಂತಿರುವ,  ಚಿತ್ತಾಕರ್ಷಕ ಮಂದಿರವೇ ಆಗಿರುವ ಇಂತಹ ಅಭೂತಪೂರ್ವ ತಾಣ ಈಗ ಅವಸಾನದ ಅಂಚಿನಲ್ಲಿದೆ. ವಾಸ್ತವವಾಗಿ ಇದೊಂದು ಸ್ಮಶನವಾಗಿದ್ದರೂ ಕೂಡ ತನ್ನದೇ ಆದ ಅಭೂತ ಸೌಂದರ್ಯವನ್ನು, ಅಪೂರ್ವ ಕಲೆಗಾರಿಕೆಯನ್ನು, ಅರಸರ ಹಿರಿಮೆಯನ್ನು, ಅನನ್ಯ ಸಿರಿಯನ್ನು ಹೊಂದಿರುವ 'ಮಧುವನ' ಒಂದು ಸುಂದರ ಲೋಕವೇ ಹೊರತು ಎಂದೂ ಸ್ಮಶಾನದಂತಿರಲಿಲ್ಲ. ಆದರೀಗ ಆಳರಸರ ವಂಶಸ್ಥರಿಂದ ಹಿಡಿದು ಸರ್ಕಾರದ ತನಕ ನಿರ್ಲಕ್ಷ್ಯಕ್ಕೊಳಗಾಗಿರುವ 'ಮಧುವನ' ತನ್ನೊಳಗಿನ ಸೌಂದರ್ಯವನ್ನೆಲ್ಲಾ ಕಳೆದುಕೊಳ್ಳುತ್ತಾ ಸ್ಮಶಾನವಾಗಿದೆ.

ಮಹತ್ವಪೂರ್ಣವಾದ ಇಂತಹ ಒಂದು ಹಿರಿದಾದ ಸ್ಥಳವಾಗಿದ್ದರೂ ಕೂಡ ಬೇಲಿ ಇಲ್ಲದ ಹೊಲದಂತೆ ಬಟಾ ಬಯಲಿನಲ್ಲಿ ಅನಾಥವಾಗಿ ನಿಂತಿರುವ ಮಧುವನದ ತುಂಬಾ ಈಗ ಪುಂಡು ಪೋಕರಿಗಳದೇ ಕಾರುಬಾರು. ಕಳ್ಳಕಾಕರು, ಜೂಜುಕೋರರು, ಅನೈತಿಕ ವ್ಯವಹಾರ ಮಾಡುವವರು ಇವರುಗಳಿಗೆಲ್ಲಾ ಮಧುವನವೇ ತವರು ಮನೆಯಾಗಿದೆ. ವಿವೇಕ ಶೂನ್ಯರಾದ ಇವರುಗಳ ದರ್ಬಾರಿಗೆ ಸಿಕ್ಕಿ ಹಲವಾರು ಬೃಂದಾವನಗಳು ಈಗಾಗಲೇ ಮುಕ್ಕಾಗಿವೆ. ಕಾಶಿ ವಿಶ್ವನಾಥನ ವಿಗ್ರಹವೂ ಸೇರಿದಂತೆ ಬಹಳಷ್ಟು ಬೃಂದಾವನಗಳ ಕಳಶಗಳು ಕಳ್ಳರ ಪಾಲಾಗಿವೆ.

ಇನ್ನು ಪಾರ್ಟಿ ನೆಪದಲ್ಲಿ ಮೋಜಿಗಾಗಿ ಬಹಳ ಜನ ಇಲ್ಲಿಗೆ ಬಂದು ತಿಂದು ತೇಗಿ, ಕುಡಿದು ಕುಣಿದು, ಕೇಕೆ ಹಾಕಿ ತಾವು ಮಾಡಿದ ಮಹಾಕಾರ್ಯದ ಗುರುತುಗಳೆಲ್ಲವನ್ನೂ ಮಧುವನದ ಮೈಮೇಲೆ ಹರಡಿ ಹೋಗುತ್ತಾರೆ. ಇದನ್ನೆಲ್ಲಾ ತಡೆಯುವವರು ಯಾರೆಂಬ ಪ್ರಶ್ನೆ ಸಹಜವಾಗಿ ಬಂದರೂ ಇದಕ್ಕೆ ಉತ್ತರವನ್ನು ಮಧುವನದ ಸ್ಮಶಾನ ಮೌನದಲ್ಲಿ ಹುಡುಕಬೇಕಷ್ಟೆ.

 

 

(ಸೆಪ್ಟಂಬರ್ 15 ಇಂಜಿನಿಯರ್‍ಗಳ ದಿನಾಚರಣೆ)

ಎಂದೂ ಮರೆಯದ ಪ್ರತಿಭೆ ಸರ್. ಎಂ.ವಿಶ್ವೇಶ್ವರಯ್ಯ

ನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ ಅಮರವಾಸ್ತು ಶಿಲ್ಪಿ, ತಂತ್ರಜ್ಞ , ಭಾರತದ ಭಾಗ್ಯ ಸರ್ ಮೋಕ್ಷಗೊಂಡಂ ವಿಶ್ವೇಶ್ವರಯ್ಯನವರು.
ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸಶಾಸ್ತ್ರಿ ತಾಯಿ ವೆಂಕಾಚಮ್ಮ ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು, ಧರ್ಮಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ, ಆಯುರ್ವೇದ ತಜ್ಞರು ಆಗಿದ್ದರು. ಇವರೀರ್ವರ ಸುಪುತ್ರರಾಗಿ 15 ಸೆಪ್ಟಂಬರ್ 1860ರಲ್ಲಿ ವಿಶ್ವೇಶ್ವರಯ್ಯನವರು ಜನಿಸಿದ್ದು, ಬೆಂಗಳೂರಿನಿಂದ 45 ಕಿ.ಮೀ ದೂರದಲ್ಲಿರುವ, ಚಿಕ್ಕಬಳ್ಳಾಪುರದಿಂದ 5 ಕಿ.ಮೀ ಅಂತರದಲ್ಲಿರುವ ಮುದ್ದೇನಹಳ್ಳಿಯಲ್ಲಿ.
ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. 1881ರಲ್ಲಿ ಬಿ.ಎ ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಡೆದರು. ನಂತರ ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದರು.
ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಬ್ರಿಟಿಷ್ ಸರ್ಕಾರ ಅವರಿಗೆ 'ಸರ್' ಪದವಿಯನ್ನು ನೀಡಿ ಗೌರವಿಸಿತು. 1955ರಲ್ಲಿ ಭಾರತ ಸರ್ಕಾರದ ಅತ್ಯುನ್ನತ ಗೌರವವಾದ 'ಭಾರತ ರತ್ನ' ಪ್ರಶಸ್ತಿ ಲಭಿಸುವುದರೊಂದಿಗೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರಾದರು.
ವಿಶ್ವೇಶ್ವರಯ್ಯನವರು 1884ರಲ್ಲಿ ಮುಂಬಯಿ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿ ಜೀವನ ಆರಂಭವಾಯಿತು. ಇದಾದ ನಂತರ ಭಾರತೀಯ ನೀರಾವರಿ ಕಮಿಷನ್‍ನಿಂದ ಅವರಿಗೆ ಆಮಂತ್ರಣ ಬಂದಿತು. ಈ ಕಮಿಷನ್‍ನ್ನು ಸೇರಿದ ನಂತರ ದಖನ್ ಪ್ರಸ್ಥ ಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ.ವಿಶ್ವೇಶ್ವರಯ್ಯನವರು ಅರ್ಥರ್ ಕಾಟನ್‍ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚಿರಾಪಳ್ಳಿಯಲ್ಲಿ ಚೋಳರಾಜರಿಂದ ನಿರ್ಮಿಸಲ್ಪಟ್ಟ ಹಾಗೂ 18ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್‍ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಗ್ರಾಂಡ್ ಅಣೆಕಟ್ಟನ್ನು ನೋಡಿ ಪ್ರಭಾವಿತರಾಗಿದ್ದರು. 
ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ 'ಸ್ವಯಂ ಚಾಲಿತ ಪ್ಲಡ್‍ಗೇಟ್ ವಿನ್ಯಾಸ'ವೊಂದನ್ನು ಕಂಡು ಹಿಡಿದು ಅದಕ್ಕಾಗಿ 'ಪೇಟೆಂಟ್' ಪಡೆದರು. ಮೊದಲ ಬಾರಿಗೆ 1903ರಲ್ಲಿ ಪುಣೆಯ ಬಳಿ 'ಖಡಕ್‍ವಾಸ್ಲ' ಜಲಾಶಯದಲ್ಲಿ ಈ ವಿಶಿಷ್ಟ ತಂತ್ರಜ್ಞಾನದ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ, ಜಲಾಶಯದ ಈ ತಂತ್ರಜ್ಞಾನ ವಿಶ್ವದಲ್ಲಿಯೇ ಪ್ರಥಮ ಬಾರಿಗೆ ತೋರಿಸಿಕೊಟ್ಟ ಏಕೈಕ ತಂತ್ರಜ್ಞಾನಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ.
ಗ್ವಾಲಿಯರ್‍ನ 'ಟಿಗ್ರಾ' ಅಣೆಕಟ್ಟು ಮತ್ತು ಕರ್ನಾಟಕದ 'ಕೃಷ್ಣರಾಜ ಸಾಗರ' ಅಣೆಕಟ್ಟುಗಳಿಗೂ ಸಹ ಉಪಯೋಗಿತವಾದವು. ಈ ಗೇಟ್‍ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಿದ್ದಾಗ ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲೇ ಅತ್ಯಂತ ದೊಡ್ಡ ಅಣೆಕಟ್ಟು. ಜಗತ್ತೇ ಆಶ್ಚರ್ಯದಿಂದ ನೋಡುವಂತಾಗಿದ್ದು ಕನ್ನಂಬಾಡಿ ಜೀವನದಿ ಕಾವೇರಿ ನದಿಗೆ ಕಟ್ಟಲಾದ ಅಣೆಕಟ್ಟನ್ನು ಪ್ರಾರಂಭಿಸಿ 4 ವರ್ಷಗಳಲ್ಲಿ ಮುಗಿಸಿ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ ಜಗತ್ತಿನಲ್ಲಿ ಯಾರೋಬ್ಬರು ಮಾಡಿರದಂತಹ ಸಾಧನೆ ಮಾಡಿದರು. ಬೇರೆ ಅಣೆಕಟ್ಟುಗಳು ಸಿಮೆಂಟ್, ಕಾಂಕ್ರೀಟ್‍ನಿಂದ ನಿರ್ಮಾಣವಾಗಿದ್ದರೆ. ಕೆ.ಆರ್.ಎಸ್.ಅಣೆಕಟ್ಟು ಸರ್.ಎಂ.ವಿಶ್ವೇಶ್ವರಯ್ಯನವರ ಜಾಣ್ಮೆಯ ತಂತ್ರಜ್ಞಾನದಿಂದ ಸುಣ್ಣ ಮತ್ತು ಬೆಲ್ಲದ ಮಿಶ್ರಣದಿಂದ ಕಟ್ಟಿದ ಗಟ್ಟಿ, ಮಾನವ ನಿರ್ಮಿತವಾಗಿದ್ದು ದಾಖಲೆಯೊಂದಿಗೆ ಶತಮಾನದಿಂದ ಮೈಸೂರು, ಮಂಡ್ಯ, ಬೆಂಗಳೂರು, ತಮಿಳುನಾಡಿಗೆ ಜೀವಜಲವನ್ನು ನೀಡುತ್ತಿರುವ ವಾಸ್ತು ಶಿಲ್ಪವಾಗಿದೆ. ಎಲ್ಲಿಯಾದರು ದುರಂತ ಸಂಭವಿಸಿದರೆ ಸ್ವಯಂ ಚಾಲಿತ ಗೇಟ್‍ಗಳು ತನ್ನಷ್ಟಕ್ಕೆ ತಾನೇ ತೆರೆದುಕೊಂಡು ಮುನ್ನುಗ್ಗುವ ಅಪಾರ ಪ್ರಮಾಣದ ನೀರು ಯಾರಿಗೂ ತೊಂದರೆಯಾಗದಂತೆ ಹರಿದು ಮುಂದೆ ಸಾಗಲು ಮುಂದಾಲೋಚನೆಯಿಂದ ಅಣೆಕಟ್ಟು ನಿರ್ಮಿಸುವಾಗಲು ಆಳವಾದ ನಾಲೆ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಅದ್ಭುತಗಳ ಸಾಲಿನಲ್ಲಿ ಬರುವ ಕೆ.ಆರ್.ಸಾಗರ ಅಣೆಕಟ್ಟು ಒಂದು ಲಕ್ಷ ಇಪ್ಪತ್ತು ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸಿ ದಕ್ಷಿಣ ಭಾರತದ ಕೋಟ್ಯಾಂತರ ಜೀವಿಗಳಿಗೆ ಜೀವ ಜಲವನ್ನು ನೀಡಿ ಬೃಂದಾವನ ಉದ್ಯಾನ ವನದಲ್ಲಿ ವೈವಿದ್ಯಮಯ, ನರ್ತಿಸುವ ಕುಣಿದು ಕುಪ್ಪಳಿಸುವ ನೀರಿನ ಕಾರಂಜಿಗಳು ಪುಷ್ಪಕಾಶಿಯೊಂದಿಗೆ ಜಗತ್ತಿನ ನಾನಾ ದೇಶದ ಪ್ರವಾಸಿಗರನ್ನು ತನ್ನಡೆಗೆ ಆಕರ್ಷಿಸುವಂತೆ ಮಾಡಿದ ಭಾರತದ ಭಾಗ್ಯವಿದಾತ ಸರ್ ಎಂ.ವಿಶ್ವೇಶ್ವರಯ್ಯನವರನ್ನು ದಕ್ಷಿಣ ಭಾರತದ ಜನತೆ ಎಂದಿಗೂ ಮರೆಯುವಂತಿಲ್ಲ.
'ಸರ್.ಮೋಕ್ಷಗೊಂಡಂ ವಿಶ್ವೇಶ್ವರಯ್ಯ' ಭರತ ಭೂಮಿಯಲ್ಲಿ ಜನಿಸಿ ವಿಶ್ವದೆತ್ತರಕ್ಕೆ ಬೆಳೆದ ಧೀಮಂತ ಪುರುಷರಲ್ಲಿ ಒಬ್ಬರು. ಸರ್.ಎಂ.ವಿ.ರವರು ಶಿಸ್ತಿನ ಸಿಪಾಯಿ ಆಗಿದ್ದು, ಮಹಾಸ್ವಾಭಿಮಾನಿಗಳು, ಉದಾರ ಮನಸ್ಸಿನವರು ಆಗಿದ್ದರು. ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬರುವುದನ್ನು ಅವರು ಎಂದಿಗೂ ಸಹಿಸುತ್ತಿರಲಿಲ್ಲ. ವಿಚಾರಾತ್ಮಕ ಮತ್ತು ಪ್ರಗತಿದಾಯಕವಾದ ಅಪಾರ ಪ್ರತಿಭೆ ದಕ್ಷ ಹಾಗೂ ನಿಷ್ಠೆಯ ಕಾರ್ಯತತ್ಪರತೆ, ನಿಸ್ವಾರ್ಥ ಸೇವೆ ಅವರ ಗುಣವಿಶೇಷಗಳಾಗಿದ್ದವು.
ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ ಸಾಧಿಸಿದ ಸಾಧನೆಗಳು ಅವರೊಬ್ಬ ಉತ್ತಮ ಆಡಳಿತಗಾರ ಎಂಬುದನ್ನು ಸಾಬೀತು ಪಡಿಸಿವೆ. ಅವರ ಪ್ರತಿಭೆಗೆ, ಸೇವಾ ತತ್ಪರತೆಗೆ ಬ್ರಿಟಿಷ್ ಸರಕಾರವೇ ತಲೆದೂಗಿತ್ತು. ಅವರು ದಿವಾನರಾದಾಗ ಆಗಿನ ಬ್ರಿಟಿಷ್ ವೈಸ್‍ರಾಯ್ ಹಾರ್ಡಿಂಜ್ ರಾಜ್ಯದ ಆಂತರಿಕ ವಿಷಯಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು.
ಇದು ಅವರ ಘನತೆ-ಗೌರವಗಳಿಗೆ ಇನ್ನೊಂದು ಗರಿ ಮೂಡಿಸಿತು. ಅವರು ಬೆಂಗಳೂರು, ಮೈಸೂರು, ಮಾರುಕಟ್ಟೆ, ಬೀದಿ, ಉದ್ಯಾನವನ, ನಗರ ನೈರ್ಮಲ್ಯ-ಸೌಂದರ್ಯ, ಪೌರಸೌಲಭ್ಯ ಹಾಗೂ ಜನರ ಆರೋಗ್ಯದತ್ತ ಗಮನಹರಿಸಿ ಆಶ್ಚರ್ಯಕಾರಕ ಸಾಧನೆಗಳನ್ನು ಮಾಡಿದರು. ಗ್ರಾಮಗಳ ಸುಧಾರಣೆಗಾಗಿಯೂ ಶ್ರಮಿಸಿದರು.
ಆಡಳಿತದಲ್ಲೂ ಚುರುಕು ಮೂಡಿಸಿದರು. ವರ್ಷಕ್ಕೊಮ್ಮೆ ಸಮಾವೇಶಗೊಳ್ಳುತ್ತಿದ್ದ ಪ್ರಜಾಪ್ರತಿನಿಧಿ ಸಭೆ ವರ್ಷದಲ್ಲಿ ಎರಡು ಬಾರಿ ಸಮಾವೇಶಗೊಳ್ಳುವಂತೆ ಮಾಡಿದರು. ಸರ್.ಎಂ.ವಿಶ್ವೇಶ್ವರಯ್ಯನವರು ಮಾಡಿದ ಇನ್ನೊಂದು ಗಮನಾರ್ಹ ಸಾಧನೆ ಎಂದರೆ ಆಯ-ವ್ಯಯ ಸಂಗ್ರಹ  ಪಟ್ಟಿಯನ್ನು ಕನ್ನಡದಲ್ಲಿ ಪ್ರಕಟಿಸಲು ಆರಂಭಿಸಿದರು. ಲೆಜಿಸ್ಲೆಟಿವ್ ಕೌನ್ಸಿಲ್ ಸಭೆಗೆ ಹೆಚ್ಚಿನ ಅಧಿಕಾರವನ್ನು ನೀಡಿ ಪ್ರಜಾಪ್ರಭುತ್ವದ ಉಚ್ಛ ಪರಂಪರೆಗೆ ಚಾಲನೆ ನೀಡಿದರು. ಪ್ರಜಾ ಪ್ರತಿನಿಧಿ ಸಭೆ-ಲೆಜಿಸ್ಲೆಟಿವ್ ಕೌನ್ಸಿಲ್‍ಗಳು ಇಂದಿನ ವಿಧಾನಸಭೆ-ವಿಧಾನ ಪರಿಷತ್ತುಗಳಂತೆಯೇ ಕಾರ್ಯ ನಿರ್ವಹಿಸುತ್ತಿದ್ದವು. ಅವರ ನೇತೃತ್ವದಲ್ಲಿ ಮೈಸೂರು ರಾಜ್ಯ ಪ್ರಗತಿಯ ಪಥವನ್ನೇರಿ ಮಾದರಿಯ ರಾಜ್ಯವಾಗಿ ಮಾರ್ಪಟ್ಟಿತು.
ಶಿಕ್ಷಣದಿಂದಲೇ ದೇಶೋದ್ಧಾರ ಎಂಬುದನ್ನು ಮನಗಂಡಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಮಕ್ಕಳ ಶಿಕ್ಷಣಕ್ಕೆ ತುಂಬ ಮಹತ್ವ ನೀಡಿದರು. ಅವರು ಅಲ್ಪ ಸಂಖ್ಯಾತರ, ಪರಿಶಿಷ್ಟ ಪಂಗಡಗಳ ಹಾಗೂ ಹಿಂದುಳಿದ ವರ್ಗಗಳಿಗೆ ಶಿಕ್ಷಣದ ಮಹತ್ವವನ್ನು ಮನನ ಮಾಡಿ ಅವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಪ್ರೋತ್ಸಾಹಿಸಿದರು. ಅದಕ್ಕಾಗಿ ಅವರಿಗೆ ಶಾಲೆಗಳಲ್ಲಿ ಮುಕ್ತ ಪ್ರವೇಶ ದೊರೆಕಿಸಿಕೊಟ್ಟರು. ವ್ಯಾಸಂಗ ಮುಂದುವರೆಸಲು ಅಗತ್ಯ ಸೌಕರ್ಯಗಳನ್ನು ಒದಗಿಸಿದರು. ಉದ್ಯೋಗದಲ್ಲೂ ಅವರಿಗೆ ಪಾಲು ನೀಡಿ ಅವರು ಸಾಮಾಜಿಕವಾಗಿ ತಲೆಯೆತ್ತಿ ಬದುಕಲು ಅವಕಾಶ ಕಲ್ಪಿಸಿದರು. ವಿದ್ಯಾರ್ಥಿಗಳೆಂದರೆ ಅವರಿಗೆ ತುಂಬಾ ಅಚ್ಚುಮೆಚ್ಚು. ಅವರು ದಿವಾನರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಮೈಸೂರು ರಾಜ್ಯದಲ್ಲಿ 4568 ಶಾಲೆಗಳಿದ್ದರೆ, ಅವರು ದಿವಾನಗಿರಿಯಿಂದ ನಿವೃತ್ತರಾಗುವಾಗ ಅಂದರೆ 1918ರಲ್ಲಿ ಅವುಗಳ ಸಂಖ್ಯೆ 11294ಕ್ಕೇರಿತು. ಸರ್ ಎಂ.ವಿಶ್ವೇಶ್ವರಯ್ಯನವರು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜನ್ನು ಅಭಿವೃದ್ಧಿ ಪಡಿಸಿದರು. ವಿಶೇಷ ತಾಂತ್ರಿಕ ಶಿಕ್ಷಣ ಹಾಗೂ ತರಬೇತಿಗಾಗಿ ವಿದೇಶಗಳಿಗೆ ಹೋಗಲಿಚ್ಛಿಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಸೌಕರ್ಯ ನೀಡಿದರು. ಕೃಷಿಕರಿಗಾಗಿ ಅವರು ಅಂದು ಆರಂಭಿಸಿದ ಕೃಷಿಶಾಲೆ ಇಂದು ಕೃಷಿ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿದೆ. ಬೆಂಗಳೂರಿನ ಇಂದಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ಮತ್ತು ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಅವರ ಶೈಕ್ಷಣಿಕ ಸಾಧನೆ ಅನುಪಮ ಕೊಡುಗೆಗಳಾಗಿವೆ. ಸಾಮಾಜಿಕವಾಗಿ ಶೋಷಣೆಗೊಳಗಾಗುತ್ತಿದ್ದ ಮಹಿಳೆಯರನ್ನು ಪ್ರಜ್ಞಾವಂತರನ್ನಾಗಿಸಲು ಮಹಿಳಾ ಶಿಕ್ಷಣಕ್ಕೆ ಪ್ರೇರಣೆ ನೀಡಿದರು. ರಾಜ್ಯಾದ್ಯಂತ ಹೆಣ್ಣು ಮಕ್ಕಳ ಶಾಲೆಗಳನ್ನು ಆರಂಭಿಸಿ ದಾಖಲೆ ಬರೆದರು. 
ಕನ್ನಡಾಂಬೆಯ ವರಪುತ್ರರಾದ ಸರ್.ಎಂ.ವಿಶ್ವೇಶ್ವರಯ್ಯರವರು ನಮ್ಮವರು- ನಮ್ಮ ಕನ್ನಡಿಗರು ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಕನ್ನಡದ ಹಿರಿಮೆಯನ್ನು ಹಿಮಾಲಯದೆತ್ತರಕ್ಕೆ ಹಾರಿಸಿದ ಸಾಧಕರು ಇವರು. ಒಬ್ಬ ಮನುಷ್ಯ ಮನಸ್ಸು ಮಾಡಿದರೆ ತನ್ನ ಜೀವನದಲ್ಲಿ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಕನ್ನಡಾಂಬೆಯ ಈ ವರ ಪುತ್ರನ ಆದರ್ಶಗಳೇ ಸಾರ್ವಕಾಲಿಕ ಸಾಕ್ಷಿಯಾಗಿ ನಿಲ್ಲುತ್ತವೆ. ಇಂತಹ ಮಹಾನ್ ಪುರುಷನ ಆದರ್ಶಗಳನ್ನು ಇಂದಿನ ಯುವ ಜನತೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ನೀಡುವ ಗೌರವವಾಗಿದೆ. 

 

 

 

ಡಿ.ಸಿ.ರಾಮಚಂದ್ರ ಎಂ.ಎ (ಕನ್ನಡ, ರಾಜ್ಯಶಾಸ್ತ್ರ)

dcrchandru74@gmail.com

Mobile : 9845565696

ಕಾವೇರಿಯ ಮಡಿಲಲ್ಲೊಂದು ನಿಸರ್ಗಧಾಮ

ರಜೆಯಲ್ಲಿ ಎಲ್ಲಾ ಜಂಜಾಟವನ್ನು ಬದಿಗೊತ್ತಿ ಪ್ರಕೃತಿಯ ಮಡಿಲಲ್ಲಿ ಒಂದಷ್ಟು ಸಮಯ ನೆಮ್ಮದಿಯಾಗಿ ಕಳೆದು ಬರಬೇಕೆಂಬ ಆಲೋಚನೆಯಲ್ಲಿರುವವರು ಎಲ್ಲಿಗೆ ಹೋಗೋದಪ್ಪಾ? ಎಂದು ತಲೆಕೆಡಿಸಿಕೊಂಡಿದ್ದರೆ? ಅಂತಹವರು ತಮ್ಮ ಪ್ರವಾಸಕ್ಕೆ ಕೊಡಗಿನ ಕಾವೇರಿ ನಿಸರ್ಗಧಾಮವನ್ನು ಆಯ್ಕೆ ಮಾಡಿಕೊಳ್ಳಬಹುದು. ಕಾವೇರಿ ನಿಸರ್ಗಧಾಮವು ಜೀವನದಿ ಕಾವೇರಿ  ಸೃಷ್ಟಿಸಿರುವ ದ್ವೀಪಗಳಲ್ಲೊಂದಾಗಿದೆ. ತನ್ನದೇ ಆದಂತಹ ವೈಶಿಷ್ಟ್ಯತೆ ಹಾಗೂ ಮುಖ್ಯರಸ್ತೆಗೆ ಸಮೀಪದಲ್ಲಿಯೇ ಇರುವುದರಿಂದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ. ಹಾಗಾಗಿ ವರ್ಷದ ಎಲ್ಲಾ ದಿನಗಳಲ್ಲಿಯೂ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಕೊಡಗಿನ ಹೆಬ್ಬಾಗಿಲು ಕುಶಾಲನಗರದಿಂದ ಮಡಿಕೇರಿ ಕಡೆಗಿನ ಮುಖ್ಯ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ. ಸಾಗಿದರೆ ರಸ್ತೆಯ ಎಡಭಾಗದಲ್ಲಿಯೇ ನಿಸರ್ಗಧಾಮದ ಪ್ರವೇಶ ದ್ವಾರ ಕಾಣಸಿಗುತ್ತದೆ. ಜುಳು...ಜುಳು... ನಿನಾದಗೈಯುತ್ತಾ ಹರಿಯುವ ಕಾವೇರಿ ನದಿ ಅದರ ದಡದುದ್ದಕ್ಕೂ ಮುಗಿಲೆತ್ತರಕ್ಕೆ ಬೆಳೆದು ನಿಂತ ಮರಗಿಡಗಳು... ಬಿದಿರು ಮೆಳೆಗಳು... ಚಿಲಿಪಿಲಿ ಗುಟ್ಟುವ ಹಕ್ಕಿಗಳು... ಇಂತಹವೊಂದು ನಿಸರ್ಗ ರಮಣೀಯತೆಯನ್ನು ತನ್ನೊಡಲಿನಲ್ಲಿರಿಸಿಕೊಂಡು ನಿಸರ್ಗಧಾಮ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ. ನಿಸರ್ಗದ ಕೌತುಕ: ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ.ತೋರ್ವೆ ಹಾಗೂ ವಲಯಾಧಿಕಾರಿ ಟಿ.ಎನ್.ನಾರಾಯಣ್‍ರವರ ಸತತ ಪ್ರಯತ್ನದಲ್ಲಿ 1989ರಲ್ಲಿ ನಿರ್ಮಿಸಲ್ಪಟ್ಟ ಕಾವೇರಿ ನಿಸರ್ಗಧಾಮ ಅಲ್ಲಿಂದ ಇಲ್ಲಿಯವರೆಗೆ ದೇಶ, ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.ನಿಸರ್ಗಧಾಮವನ್ನು ವೀಕ್ಷಿಸಲು ಬರುವವರು ಇಲ್ಲಿನ ಕುಟೀರವೊಂದರಲ್ಲಿ ಟಿಕೆಟ್ ಪಡೆದು ಪ್ರವೇಶ ದ್ವಾರದ ಮೂಲಕ ತೂಗು ಸೇತುವೆಯ ಮೇಲೆ ಹೆಜ್ಜೆ ಹಾಕುತ್ತಾ ಮುನ್ನಡೆದರೆ ನಿಸರ್ಗದ ಕೌತುಕಮಯ ದೃಶ್ಯಗಳು ಕಣ್ಮುಂದೆ ಬಂದು ನಿಲ್ಲುತ್ತದೆ. ತಳುಕಿ ಬಳುಕಿ ಜುಳು ಜುಳು ಎನ್ನುತ್ತಾ ಹರಿಯುವ ಕಾವೇರಿ ನದಿ... ಬೀಸುವ ತಂಗಾಳಿ... ಪ್ರಕೃತಿಯ ಸೋಜಿಗ ಮೈಪುಳಕಗೊಳಿಸುತ್ತದೆ. ಇಲ್ಲಿ ಮಾರ್ಗಸೂಚಿ ಫಲಕಗಳಿದ್ದು, ನಿಸರ್ಗಧಾಮದ ಬಗ್ಗೆ ಮಾಹಿತಿ ನೀಡುತ್ತದೆ. ಅರಣ್ಯ ಇಲಾಖೆಯು ಪ್ರವಾಸಿಗರ ಅನುಕೂಲಕ್ಕಾಗಿ ಉಪಹಾರ ಗೃಹವನ್ನು ತೆರೆದಿದ್ದು ಇದರ ಸಮೀಪವೇ ಮಕ್ಕಳ ವಿಹಾರಧಾಮವಿದೆ. 

ಈ ವಿಹಾರಧಾಮದಲ್ಲಿ ಮಕ್ಕಳು ಆಡಿ ನಲಿಯಲು ಏಣಿಯಾಟ, ಉಯ್ಯಾಲೆ, ಉದ್ದಜಿಗಿತ ಮುಂತಾದ ಆಟದ ಸಾಮಾಗ್ರಿಗಳನ್ನಿಡಲಾಗಿದೆ.  ಇಲ್ಲಿಂದ ಮುಂದೆ ಬಿದಿರುಮೆಳೆಗಳ ನಡುವೆ ನಡೆದರೆ ಆನೆ ಸವಾರಿ ನಡೆಸುವ ಜಾಗವನ್ನು ತಲುಪಬಹುದು.

ಇಲ್ಲಿ ನಿಗದಿತ ಹಣವನ್ನು ನೀಡಿ ಆನೆಯ ಮೇಲೆ ಕುಳಿತು ಸವಾರಿಯನ್ನು ಮಾಡಬಹುದು. ಆನೆ ಸವಾರಿ ಪಕ್ಕದಲ್ಲಿಯೇ ಜಿಂಕೆವನವಿದೆ. ಸುಮಾರು  5 ಎಕರೆ ಪ್ರದೇಶದಲ್ಲಿ ಸುತ್ತಲೂ ಸುಸಜ್ಜಿತವಾಗಿ ತಂತಿ ಬೇಲಿ ಹಾಕಿ ನಿರ್ಮಿಸಲಾಗಿರುವ ಈ ವನದಲ್ಲಿ ಹಲವಾರು ಜಿಂಕೆ, ಕಡವೆಗಳಿವೆ. ಕಾಲು ದಾರಿಯಲ್ಲಿ ಹೆಜ್ಜೆಯಿಡುತ್ತಾ ಮುನ್ನಡೆದರೆ ಮರದಿಂದ ನಿರ್ಮಿಸಲಾಗಿರುವ ಕುಟೀರಗಳು ಮನಸ್ಸೆಳೆಯುತ್ತವೆ. ಈ ಕುಟೀರಗಳಿಗೆ ಹತ್ತಲು ಏಣಿಗಳನ್ನು ನಿರ್ಮಿಸಿದ್ದು, ಇದರಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ಜೊತೆಗೆ ಇಲ್ಲಿನ ನಿಸರ್ಗ ಸೌಂದರ್ಯವನ್ನು ಕೂಡ ಸವಿಯಬಹುದು. (ಈ ಹಿಂದೆ ಬಿದಿರು ಮೆಳೆಗಳ ಮೇಲೆ ಕುಟೀರವನ್ನು ನಿರ್ಮಿಸಲಾಗಿತ್ತಾದರೂ ಇದೀಗ ಬಿದಿರು ಹೂ ಬಿಟ್ಟು ನಾಶವಾಗಿರುವುದರಿಂದ ಮರದಿಂದ ಕುಟೀರಗಳನ್ನು ನಿರ್ಮಿಸಲಾಗಿದೆ.)

ದೋಣಿ ವಿಹಾರ: ನಿಸರ್ಗಧಾಮದಲ್ಲಿ ಅಡ್ಡಾಡುತ್ತಾ ಅಂಚಿಗೆ ಬಂದರೆ ವಿಶಾಲವಾಗಿ ಹರಿಯವ ಕಾವೇರಿ ನದಿಯ ದರ್ಶನವಾಗುತ್ತದೆ. ಇಲ್ಲಿ ಪ್ರವಾಸಿಗರಿಗಾಗಿ ದೋಣಿ ವಿಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ನದಿಯ ಒಳಭಾಗದಲ್ಲಿ ವಿಹಾರ ಮಾಡುವ ಸಂದರ್ಭ ಅಪಾಯವಾಗದಿರಲಿ ಎಂಬ ಉದ್ದೇಶದಿಂದ ನದಿಯಲ್ಲಿರುವ ಸುಳಿ ಹಾಗೂ ಹೆಬ್ಬಂಡೆಗಳಿರುವ ಸ್ಥಳಗಳಲ್ಲಿ ಅಪಾಯದ ಸಂಕೇತವಾದ ಕೆಂಪು ಬಾವುಟವನ್ನು ಹಾರಿಸಲಾಗಿದೆ. ಇಲ್ಲಿ ವಿಹಾರಕ್ಕಾಗಿ ಕಪಿಲಾ, ಭದ್ರಾ, ನೇತ್ರಾವತಿ, ತುಂಗಾ, ನರ್ಮದಾ, ಬ್ರಹ್ಮಪುತ್ರ ಹೆಸರಿನ ದೋಣಿಗಳಿವೆ.ನಿಸರ್ಗದ ಚೆಲುವನ್ನು ಸವಿಯುತ್ತಾ ಅಲ್ಲಿಯೇ ತಂಗುವುದಾದರೆ ಅದಕ್ಕೂ ವ್ಯವಸ್ಥೆಯಿದೆ. ಇಟ್ಟಿಗೆ ಗೋಡೆ, ತೇಗದ ಮರ, ಹುಲ್ಲಿನ ಛಾವಣಿಯಿಂದ ನಿರ್ಮಿಸಲಾದಂತಹ ಐದು ಕಾಟೇಜ್‍ಗಳಿದ್ದು, ಇವುಗಳಿಗೆ ನಿಗದಿತ ಶುಲ್ಕ ಪಾವತಿಸ ಬೇಕಾಗುತ್ತದೆ. ಪ್ರವಾಸಿಗರಿಗಾಗಿಯೇ ಇಲ್ಲೊಂದು ಮಾಹಿತಿ ಕೇಂದ್ರವನ್ನು ಕೂಡ ನಿರ್ಮಿಸಲಾಗಿದೆ.

ಕಾವೇರಿ ನಿಸರ್ಗಧಾಮವು ಎಲ್ಲಾ ರೀತಿಯಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಬೇಕಾದ ಅಗತ್ಯವಿದೆ.ನಿಸರ್ಗಧಾಮವು  ನಿರ್ಮಾಣಗೊಂಡಿರುವ ದ್ವೀಪವು ಸುಮಾರು 65 ಎಕರೆ ಪ್ರದೇಶವನ್ನು ಹೊಂದಿದ್ದು ಕೇವಲ 15 ಎಕರೆ ಪ್ರದೇಶದಲ್ಲಿ ಮಾತ್ರ ವಿವಿಧ ಸವಲತ್ತುಗಳನ್ನು ಕಲ್ಪಿಸಿ ನಿಸರ್ಗಧಾಮವನ್ನು ನಿರ್ಮಿಸಲಾಗಿದೆ. ಹಾಗಾಗಿ ಉಳಿದ ಸ್ಥಳಗಳಲ್ಲಿ ಪವಿತ್ರವನ, ಶ್ರೀಚಕ್ರವನ, ರಾಶಿವನ ಹಾಗೂ ಕೊಡಗಿನ ಇತಿಹಾಸ ಸಾರುವ ಕಾವೇರಿ ಪುರಾಣ, ಶ್ರೀಕೃಷ್ಣವನ, ಕೃತಕ ಜಲಪಾತ, ಕಾರಂಜಿ ನಿರ್ಮಾಣವಲ್ಲದೆ, ಈಗಿರುವ ಜಿಂಕೆವನವನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಾತುಗಳು ಕೇಳಿ ಬಂದಿತ್ತಾದರೂ ಅದ್ಯಾವುದೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.ಕಾವೇರಿ ನಿಸರ್ಗಧಾಮಕ್ಕೆ ಹೊಂದಿಕೊಂಡಂತೆ ಇನ್ನೆರಡು ದ್ವೀಪಗಳಿದ್ದು ಅವುಗಳಿಗೆ ತೂಗು ಸೇತುವೆ ನಿರ್ಮಿಸುವ ಮೂಲಕ ಅಭಿವೃದ್ಧಿಪಡಿಸಿದ್ದೇ ಆದಲ್ಲಿ ಕಾವೇರಿ ನಿಸರ್ಗಧಾಮಕ್ಕೆ ಇನ್ನಷ್ಟು ಪ್ರವಾಸಿಗರು ಭೇಟಿ ನೀಡಬಹುದು. 

ಪ್ರವಾಸಿಗರಿಗೆ ನಿಶ್ಚಿಂತೆಯ ತಾಣ ಇರ್ಪು
ಬಿ.ಎಂ.ಲವಕುಮಾರ್
ವೀಕೆಂಡ್ ಟ್ರಿಪ್ ಹೊರಡುವರು ಕೊಡಗಿನ ಇರ್ಪು ತಾಣವನ್ನು ಆಯ್ದುಕೊಂಡದ್ದೇ ಆದರೆ ನಿಸರ್ಗ ಮಡಿಲ ಪ್ರಶಾಂತ ತಾಣದಲ್ಲಿ ತಮ್ಮೆಲ್ಲಾ ಜಂಜಾಟಗಳನ್ನು ಮರೆತು ಧುಮುಕುವ ಜಲಧಾರೆಯಲ್ಲಿ ಮಿಂದೆದ್ದು ಮರೆಯಲಾರದ ನೆನಪಿನ ಬುತ್ತಿಯನ್ನು ಹೊತ್ತು ಬರಬಹುದು.  
ಮೊದಲೆಲ್ಲಾ ಇರ್ಪುಗೆ ಹೋಗುವುದು ಸುಲಭದ ಮಾತಾಗಿರಲಿಲ್ಲ. ಜನಜಂಗುಳಿಯಿಂದ ದೂರವಾಗಿ ಬೆಟ್ಟಗುಡ್ಡ ಕಾಡುಗಳ  ನಡುವೆಯಿದ್ದ ಈ ತಾಣಕ್ಕೆ ತೆರಳುವುದೆಂದರೆ  ತೀರ್ಥಯಾತ್ರೆ ಕೈಗೊಂಡಂತಾಗುತ್ತಿತ್ತು. ವಾಹನ, ರಸ್ತೆ ಸಂಪರ್ಕಗಳಾಗಲೀ, ವಸತಿ ಇತರೆ ಸೌಲಭ್ಯಗಳು ಪ್ರವಾಸಿಗರಿಗೆ ಲಭ್ಯವಿರಲಿಲ್ಲ. ಈಗ ಹಾಗೇನಿಲ್ಲ ಬಿಡಿ ಇರ್ಪು ತಾಣ ಅಭಿವೃದ್ಧಿಯಾಗಿದೆ. ಪ್ರವಾಸಿಗರ ಅನುಕೂಲದ ದೃಷ್ಟಿಯಿಂದ  ಇಲ್ಲಿ ಕೆಲವು ಸೌಲಭ್ಯಗಳನ್ನು ಮಾಡಲಾಗಿದೆ. ಅಲ್ಲದೆ ಭೇಟಿ ನೀಡುವ ಪ್ರವಾಸಿಗರು ಅಂದೇ ಹಿಂತಿರುಗಬೇಕಾಗಿಲ್ಲ. ಅಲ್ಲಿಯೇ ವಾಸ್ತವ್ಯ ಹೂಡಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ರೆಸಾರ್ಟ್‍ಗಳಿವೆ. 
ಹಾಗೆನೋಡಿದರೆ ಕೊಡಗಿನಲ್ಲಿರುವ ಇತರೆ ಪ್ರವಾಸಿ ತಾಣಗಳಿಗೆ ಹೋಲಿಸಿದರೆ  ಇರ್ಪು ವಿಶಿಷ್ಟವಾಗಿ ಗಮನಸೆಳೆಯುತ್ತದೆ. ಮಡಿಕೇರಿಯಿಂದ 85 ಕಿ.ಮೀ. ದೂರದಲ್ಲಿರುವ ಈ ತಾಣ ವೀರಾಜಪೇಟೆ ತಾಲೂಕಿಗೆ ಸೇರಿದೆ. ಮಡಿಕೇರಿ ಕಡೆಯಿಂದ ಬರುವವರು ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಬರಬಹುದು.
ಒತ್ತೊತ್ತಾಗಿರುವ ಅರಣ್ಯಗಳನ್ನೊಳಗೊಂಡ ಗಿರಿಶಿಖರಗಳು, ಜುಳುಜುಳು ಹರಿಯುವ ಲಕ್ಷ್ಮಣ ತೀರ್ಥ ನದಿ, ವಿಶಾಲ ಗದ್ದೆ ಬಯಲುಗಳ ನಡುವೆ ನೆಲೆ ನಿಂತ ರಾಮೇಶ್ವರ ದೇಗುಲ, ಅದರಾಚೆ ದಟ್ಟಕಾನನದ ನಡುವೆ ಭೋರ್ಗರೆದು ಧುಮುಕುವ ಜಲಪಾತ ಪ್ರವಾಸಿಗರಿಗೆ ಮುದ ನೀಡುತ್ತದೆ. ಅಷ್ಟೇ ಅಲ್ಲ ದಿನನಿತ್ಯದ ಜಂಜಾಟವನ್ನೆಲ್ಲಾ ಮರೆಸಿ ಅಲ್ಲಿಯೇ ಠಿಕಾಣಿ ಹೂಡುವಂತೆ ಮಾಡಿಬಿಡುತ್ತದೆ.
ಇರ್ಪುವಿನಲ್ಲಿರುವ ರಾಮೆಶ್ವರ ದೇವಾಲಯ ಕೇರಳೀಯರ ವಾಸ್ತುಶಿಲ್ಪದೊಂದಿಗೆ ವೃತ್ತಾಕಾರದ ಗರ್ಭಗುಡಿಯನ್ನು ಹೊಂದಿ ಬಲು ಸೊಗಸಾಗಿ ನಿರ್ಮಿಸಲ್ಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿರುವ ಇತರೆ ದೇವಾಲಯಕ್ಕಿಂತ ಭಿನ್ನವಾಗಿ ಗೋಚರಿಸುತ್ತದೆ.  
ಲಕ್ಷ್ಮಣ ಸೃಷ್ಟಿಸಿದ ಜಲಧಾರೆ: ರಾಮೇಶ್ವರ ದೇವಾಲಯ ಮತ್ತು ಇಲ್ಲಿನ ಅಧಿದೇವತೆ ರಾಮೇಶ್ವರ ಹೇಗೆ ಪ್ರತಿಷ್ಠಾಪನೆಗೊಂಡ ಅಲ್ಲದೆ, ಈ ತಾಣಕ್ಕೆ ಇರ್ಪು ಎಂಬ ಹೆಸರು ಹೇಗೆ ಬಂತು? ಲಕ್ಷ್ಮಣತೀರ್ಥ ನದಿಯ ಸೃಷ್ಟಿ ಹೇಗಾಯಿತು ಎಂಬುವುದಕ್ಕೆಲ್ಲಾ ಪೌರಾಣಿಕ ಹಿನ್ನಲೆಯಿದ್ದು, ಅದು ಹೀಗಿದೆ.
ಲಂಕೆಯಲ್ಲಿ ಯುದ್ದ ಮಾಡಿ ರಾಕ್ಷಸರನ್ನು ಸಂಹರಿಸಿ ಸೀತಾ ದೇವಿಯೊಂದಿಗೆ ಇರ್ಪುವಿಗೆ ಆಗಮಿಸಿದ ಶ್ರೀರಾಮ ಇಲ್ಲಿಯ ಪ್ರಶಾಂತ ವಾತಾವರಣ ಕಂಡು ದೇಗುಲ ನಿರ್ಮಾಣಕ್ಕೆ  ಇದೇ ಸೂಕ್ತ ತಾಣವೆಂದು ನಿರ್ಧರಿಸುತ್ತಾನೆ. ಪೂಜಾ ಕೈಂಕರ್ಯ ನೆರವೇರಿಸಲು ಶ್ರೀರಾಮನ ಆಜ್ಞೆಯಂತೆ ಆಂಜನೇಯ ಲಿಂಗತರಲೆಂದು ಕಾಶಿಯತ್ತ ಹೋಗುತ್ತಾನೆ. ಇತ್ತ ಶ್ರೀರಾಮ ಲಿಂಗಪ್ರತಿಷ್ಠಾಪನೆಗೆ ದಿನ ನಿಗದಿಪಡಿಸಿ ಮುನಿಪುಂಗವರನ್ನು ಆಹ್ವಾನಿಸಿದನಂತೆ. ಆದರೆ ಮುಹೂರ್ತ ಸಮೀಪಿಸಿದರೂ  ಲಿಂಗ ತರಲು ಹೋದ ಆಂಜನೇಯ ಬರಲೇ ಇಲ್ಲ. ಆಗ ಶ್ರೀರಾಮ ಸ್ವತಃ ಲಿಂಗವೊಂದನ್ನು ನಿರ್ಮಿಸಿ ಮುಹೂರ್ತದ ಸಮಯಕ್ಕೆ ಸರಿಯಾಗಿ ಲಿಂಗಪ್ರತಿಷ್ಠಾಪನೆ ಮಾಡಿದನಂತೆ. ಕಾರ್ಯ ಮುಗಿದ ಮೇಲೆ ಆಂಜನೇಯ ಲಿಂಗವನ್ನು ಹೊತ್ತು ತಂದನಂತೆ. ಆದರೆ ಆ ಲಿಂಗವನ್ನು ಆಂಜನೇಯನೇ ಪ್ರತಿಷ್ಠಾಪಿಸುವಂತೆ ಶ್ರೀರಾಮ ಹೇಳಿದ ಮೇರೆಗೆ  ಆಂಜನೇಯ  ಇರ್ಪುಗೆ ಹತ್ತು ಕಿ.ಮೀ. ದೂರವಿರುವ ಹೇರ್ಮಾಡಿನಲ್ಲಿ ಪ್ರತಿಷ್ಠಾಪಿಸಿದನೆಂಬುವುದು ಇಂದಿಗೂ ಜನವಲಯದಲ್ಲಿರುವ ಪೌರಾಣಿಕ ಕಥೆಯಾಗಿದೆ.
ಇನ್ನು ಇರ್ಪು ಎಂಬ ಹೆಸರು ಹೇಗೆ ಬಂತೆಂಬುವುದಕ್ಕೆ  ಮತ್ತೊಂದು ಪೌರಾಣಿಕ ಕಥೆಯಿದೆ. ಸೀತೆಯನ್ನು ಅರಸುತ್ತಾ ಹೊರಟ ರಾಮಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಶ್ರೀರಾಮ ಸೇರಿದಂತೆ ವಾನರರು ನಡೆಯುತ್ತಿದ್ದರೆ ಕೋಪಗೊಂಡ ಲಕ್ಷ್ಮಣ ಮುಂದಕ್ಕೆ ಹೆಜ್ಜೆಯಿರಿಸದೆ ಅಲ್ಲಿಯೇ ಕುಳಿತುಕೊಂಡನಂತೆ. ಎಂದೂ ರಾಮನಿಗೆ ಎದುರಾಡದ ಲಕ್ಷ್ಮಣ ಅಂದು ಕೋಪಗೊಂಡು ಕುಳಿತದ್ದೇ ಮಲಯಾಳದಲ್ಲಿ ಇರಿಕ್ಕನ್ (ಕುಳಿತುಕೊಳ್ಳುವುದು) ಪದದಿಂದ ಇರ್ಪು ಹುಟ್ಟಿತೆಂದು ಹೇಳಲಾಗುತ್ತಿದೆ.
ಕೆಲಕಾಲದ ನಂತರ ಶಾಂತಗೊಂಡ ಲಕ್ಷ್ಮಣ ತನ್ನ ವರ್ತನೆಗೆ ನಾಚಿ ಅಣ್ಣ ಶ್ರೀರಾಮನನ್ನು ನೋಯಿಸಿದ್ದಕ್ಕಾಗಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಭಯಗೊಂಡು ಲಕ್ಷ್ಮಣನನ್ನು ಸಮಾಧಾನಗೊಳಿಸಿ ಆತನ ತಪ್ಪನ್ನು ಕ್ಷಮಿಸಿದ. ಇದರಿಂದ ಸಂತೋಷಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ಆರಿಸಲು(ನಂದಿಸಲು) ಬಾಣಬಿಟ್ಟನಂತೆ ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು  ನಂದಿಸಿತಂತೆ. ಈ ರೀತಿ ಸೃಷ್ಟಿಯಾದ ಜಲಧಾರೆಯನ್ನು ರಾಮನೇ ಲಕ್ಷ್ಮಣತೀರ್ಥವೆಂದು ಹೆಸರಿಸಿ ಎಲ್ಲರೂ ಕುಡಿದು ಸಂತುಷ್ಟಗೊಂಡರಂತೆ. ಆದುದರಿಂದ ಇಂದಿಗೂ ಲಕ್ಷ್ಮಣತೀರ್ಥ ಪವಿತ್ರನದಿಯಾಗಿಯೇ ಉಳಿದಿದೆ.
ವೈಶಿಷ್ಟ್ಯಪೂರ್ಣ ಜಲಧಾರೆ: ಲಕ್ಷ್ಮಣತೀರ್ಥ ನದಿಯಿಂದ ನಿರ್ಮಿತವಾಗಿರುವ ಜಲಪಾತವು ಕೊಡಗಿನಲ್ಲಿರುವ ಇತರೆ ಜಲಪಾತಗಳಿಗಿಂತ ವಿಶಿಷ್ಟವಾಗಿದ್ದು, ಪರಮಪವಿತ್ರವಾಗಿ, ಇಷ್ಟಾರ್ಥಗಳನ್ನು ನೆರವೇರಿಸುವ ಜಲಧಾರೆಯಾಗಿ ಕೊಡಗಿನವರ ನಂಬಿಕೆಗೆ ಪಾತ್ರವಾಗಿದೆ. 
ರಾಮೇಶ್ವರ ದೇವಾಲಯಕ್ಕೆ ಒಂದು ಕಿ.ಮೀ. ದೂರದಲ್ಲಿರುವ ಈ ಜಲಪಾತ ತನ್ನ ಮೋಹಕತೆ, ಕುಲುಕುಲು ಸೌಂದರ್ಯ, ವಯ್ಯಾರದ ನಾಟ್ಯ, ಜುಳುಜುಳು ನಿನಾದದೊಂದಿಗೆ ಸುಮಾರು ಎಪ್ಪತ್ತು ಅಡಿಯಷ್ಟು ಎತ್ತರದಿಂದ ಧುಮುಕಿ, ಅಲ್ಲಿಂದ ಮತ್ತೆ ನೂರು ಅಡಿಯಷ್ಟು ಕೆಳಕ್ಕೆ ಜಿಗಿಯುತ್ತಾ, ಅಲ್ಲಿಂದ ಅಂಕುಡೊಂಕಾಗಿ ಹರಿದು ಚಿಕ್ಕಾತಿ ಚಿಕ್ಕ ಜಲಧಾರೆಗಳನ್ನು ಸೃಷ್ಟಿಸಿದೆ. ಸುಮಾರು ಇನ್ನೂರು ಅಡಿಯಷ್ಟು ಎತ್ತರದಿಂದ ಪ್ರಮುಖವಾಗಿ ಎರಡು ಹಂತಗಳಲ್ಲಿ ಧುಮುಕಿ ಹರಿಯುವ ಜಲಧಾರೆಯ ಸೊಬಗನ್ನು ಹತ್ತಿರದಿಂದ ಸವಿಯುವುದೆಂದರೆ ಮರೆಯಲಾಗದ ಅನುಭವ.
ಈ ಜಲಧಾರೆಗೆ ತಲೆಕೊಟ್ಟು ಮೀಯುವುದೆಂದರೆ ಇಲ್ಲಿನವರು ಪವಿತ್ರವೆಂದು ನಂಬುತ್ತಾರೆ. ಪ್ರತಿವರ್ಷದ ಶಿವರಾತ್ರಿಯಂದು  ಇಲ್ಲಿ ಜಾತ್ರೆಯನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಸ್ನಾನಗೈಯ್ಯಲು ಸಹಸ್ರಾರು ಮಂದಿ ಆಗಮಿಸುತ್ತಾರೆ.  ಈ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಕಟ್ಟಲಾಗುವ ಮರದ ಅಟ್ಟಳಿಗೆಯಲ್ಲಿ  ನಿಂತು ಮೀಯುವುದು ರೂಢಿ. ಹೀಗೆ ಸ್ನಾನ ಮಾಡಿದರೆ ಬೇಡಿದ ಫಲ ಒದಗುತ್ತದೆ  ಎಂಬ ಪ್ರಬಲ ನಂಬಿಕೆಯಿದೆ. ಅದರಲ್ಲೂ ನವದಂಪತಿಗಳು ಕೈಕೈ ಹಿಡಿದು ಸ್ನಾನ ಮಾಡಿದರೆ ಬಯಸಿದ್ದು ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನವರದ್ದಾಗಿದೆ. ಇನ್ನು ಇರ್ಪು ತಾಣದಲ್ಲಿ ಹಲವಾರು ವಿಶೇಷತೆಗಳಿರುವುದನ್ನು ನಾವು ಕಾಣಬಹುದಾಗಿದೆ.
ವಿಶಿಷ್ಟಚಿಟ್ಟೆಗಳು: ಇರ್ಪುವಿನ ಜಲಪಾತ ವ್ಯಾಪ್ತಿಯಲ್ಲಿ ವಿಶಿಷ್ಟ ಎನ್ನಬಹುದಾದ ಪಶ್ಚಿಮಘಟ್ಟ ಪ್ರದೇಶಕ್ಕೆ ಸೀಮಿತವಾದ ಮಲಬಾರ್ ಬ್ಯಾಂಡೆಡ್ ಪೀಕಾಕ್ (ಪ್ಯಾಪಿಲಿಯೋ ಬುದ್ದಾ) ಎಂಬ ಚಿಟ್ಟೆಯನ್ನು ಕಾಣಬಹುದು. 
ಅಶೋಕವೃಕ್ಷ: ರಾಮೇಶ್ವರ ದೇವಾಲಯ ಆವರಣದಲ್ಲಿ ಅಶೋಕ ವೃಕ್ಷವಿದ್ದು ಇದನ್ನು ಸಾರಣ ಅಶೋಕ ಎಂದೂ ಕರೆಯಲಾಗುತ್ತದೆ. ಲಂಕೆಯ ಅಶೋಕವನದಲ್ಲಿ ಸೀತಾದೇವಿ ಕಳೆದ ಬಂಧನದ ನೆನಪಿಗಾಗಿ ಇದನ್ನು ನೆಡಲಾಗಿದೆ ಎಂದು ಹೇಳಲಾಗುತ್ತದೆ.  ಈ ವೃಕ್ಷವು ಔಷಧೀಯ ಗಣಿಯಾಗಿದ್ದು, ಅಳಿವಿನ ಅಂಚಿನಲ್ಲಿರುವ  ವೃಕ್ಷಗಳ ಪೈಕಿ ಇದು ಒಂದಾಗಿದೆ.
ಬ್ರಹ್ಮಗಿರಿಬೆಟ್ಟ: ಇರ್ಪು ಜಲಪಾತದಿಂದ 9 ಕಿ.ಮೀ. ದೂರದಲ್ಲಿ ಬ್ರಹ್ಮಗಿರಿ ಬೆಟ್ಟ, 7 ಕಿ.ಮೀ. ದೂರದಲ್ಲಿ ಮುನಿಕಲ್ ಗುಹೆಯಿದ್ದು,  ಇಲ್ಲಿಯೇ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹವೂ ಇದೆ. ಚಾರಣ ಹಾಗೂ ತಂಗಲು ಪ್ರತ್ಯೇಕ ಶುಲ್ಕವನ್ನು ನೀಡಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ವಲಯ ಅರಣ್ಯಾಧಿಕಾರಿಗಳು ವನ್ಯಜೀವಿ ವಲಯ 08274-246331 ಸಂಪರ್ಕಿಸಬಹುದು.
ರೆಸಾರ್ಟ್ ಸೌಲಭ್ಯ: ಇರ್ಪು ವ್ಯಾಪ್ತಿಯಲ್ಲಿ ಹೈಫಾಲ್ಸ್, ರಾಮ್‍ಕಾಡ್, ಇರ್ಪು ರೆಸಾರ್ಟ್ ಮುಂತಾದ ಆತಿಥ್ಯದ ಮನೆಗಳಿವೆ. ನಿಗದಿತ ಶುಲ್ಕ ನೀಡಿ ತಂಗಬಹುದಾಗಿದೆ.
ಸಂಪರ್ಕ ಹೇಗೆ?: ಇರ್ಪುವಿಗೆ ತೆರಳುವವರಿಗೆ  ರಸ್ತೆ ಅಭಿವೃದ್ಧಿಯಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಿಲ್ಲ. ನಿಗದಿತ ಸಮಯಕ್ಕೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಗೋಣಿಕೊಪ್ಪಲಿನಿಂದ ಬಸ್ಸು ವ್ಯವಸ್ಥೆಯಿದೆ. ಉಳಿದಂತೆ ಕುಟ್ಟಕ್ಕೆ ತೆರಳುವ ಬಸ್ಸಿನಲ್ಲಿ ಶ್ರೀಮಂಗಲ ಹಾಗೂ ಕುಟ್ಟದ ನಡುವೆ ಸಿಗುವ ಕಾಕೂರು ಅಥವಾ ಕಾಯಿಮಾನಿಯಲ್ಲಿಳಿದು ಅಲ್ಲಿಂದ ನಡೆದುಕೊಂಡು ಹೋಗಬಹುದಾಗಿದೆ.  ಅಥವಾ ಶ್ರೀಮಂಗಲಕ್ಕೆ ತೆರಳಿ ಅಲ್ಲಿಂದ ಬಾಡಿಗೆ ವಾಹನಗಳಲ್ಲಿಯೂ ತೆರಳಬಹುದು.

ಪ್ರವಾಸಿಗರಿಗೆ ನಿಶ್ಚಿಂತೆಯ ತಾಣ ಇರ್ಪು

ವೀಕೆಂಡ್ ಟ್ರಿಪ್ ಹೊರಡುವರು ಕೊಡಗಿನ ಇರ್ಪು ತಾಣವನ್ನು ಆಯ್ದುಕೊಂಡದ್ದೇ ಆದರೆ ನಿಸರ್ಗ ಮಡಿಲ ಪ್ರಶಾಂತ ತಾಣದಲ್ಲಿ ತಮ್ಮೆಲ್ಲಾ ಜಂಜಾಟಗಳನ್ನು ಮರೆತು ಧುಮುಕುವ ಜಲಧಾರೆಯಲ್ಲಿ ಮಿಂದೆದ್ದು ಮರೆಯಲಾರದ ನೆನಪಿನ ಬುತ್ತಿಯನ್ನು ಹೊತ್ತು ಬರಬಹುದು.  

ಮೊದಲೆಲ್ಲಾ ಇರ್ಪುಗೆ ಹೋಗುವುದು ಸುಲಭದ ಮಾತಾಗಿರಲಿಲ್ಲ. ಜನಜಂಗುಳಿಯಿಂದ ದೂರವಾಗಿ ಬೆಟ್ಟಗುಡ್ಡ ಕಾಡುಗಳ  ನಡುವೆಯಿದ್ದ ಈ ತಾಣಕ್ಕೆ ತೆರಳುವುದೆಂದರೆ  ತೀರ್ಥಯಾತ್ರೆ ಕೈಗೊಂಡಂತಾಗುತ್ತಿತ್ತು. ವಾಹನ, ರಸ್ತೆ ಸಂಪರ್ಕಗಳಾಗಲೀ, ವಸತಿ ಇತರೆ ಸೌಲಭ್ಯಗಳು ಪ್ರವಾಸಿಗರಿಗೆ ಲಭ್ಯವಿರಲಿಲ್ಲ. ಈಗ ಹಾಗೇನಿಲ್ಲ ಬಿಡಿ ಇರ್ಪು ತಾಣ ಅಭಿವೃದ್ಧಿಯಾಗಿದೆ. ಪ್ರವಾಸಿಗರ ಅನುಕೂಲದ ದೃಷ್ಟಿಯಿಂದ  ಇಲ್ಲಿ ಕೆಲವು ಸೌಲಭ್ಯಗಳನ್ನು ಮಾಡಲಾಗಿದೆ. ಅಲ್ಲದೆ ಭೇಟಿ ನೀಡುವ ಪ್ರವಾಸಿಗರು ಅಂದೇ ಹಿಂತಿರುಗಬೇಕಾಗಿಲ್ಲ. ಅಲ್ಲಿಯೇ ವಾಸ್ತವ್ಯ ಹೂಡಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ರೆಸಾರ್ಟ್‍ಗಳಿವೆ. 

ಹಾಗೆನೋಡಿದರೆ ಕೊಡಗಿನಲ್ಲಿರುವ ಇತರೆ ಪ್ರವಾಸಿ ತಾಣಗಳಿಗೆ ಹೋಲಿಸಿದರೆ  ಇರ್ಪು ವಿಶಿಷ್ಟವಾಗಿ ಗಮನಸೆಳೆಯುತ್ತದೆ. ಮಡಿಕೇರಿಯಿಂದ 85 ಕಿ.ಮೀ. ದೂರದಲ್ಲಿರುವ ಈ ತಾಣ ವೀರಾಜಪೇಟೆ ತಾಲೂಕಿಗೆ ಸೇರಿದೆ. ಮಡಿಕೇರಿ ಕಡೆಯಿಂದ ಬರುವವರು ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಬರಬಹುದು.

ಒತ್ತೊತ್ತಾಗಿರುವ ಅರಣ್ಯಗಳನ್ನೊಳಗೊಂಡ ಗಿರಿಶಿಖರಗಳು, ಜುಳುಜುಳು ಹರಿಯುವ ಲಕ್ಷ್ಮಣ ತೀರ್ಥ ನದಿ, ವಿಶಾಲ ಗದ್ದೆ ಬಯಲುಗಳ ನಡುವೆ ನೆಲೆ ನಿಂತ ರಾಮೇಶ್ವರ ದೇಗುಲ, ಅದರಾಚೆ ದಟ್ಟಕಾನನದ ನಡುವೆ ಭೋರ್ಗರೆದು ಧುಮುಕುವ ಜಲಪಾತ ಪ್ರವಾಸಿಗರಿಗೆ ಮುದ ನೀಡುತ್ತದೆ. ಅಷ್ಟೇ ಅಲ್ಲ ದಿನನಿತ್ಯದ ಜಂಜಾಟವನ್ನೆಲ್ಲಾ ಮರೆಸಿ ಅಲ್ಲಿಯೇ ಠಿಕಾಣಿ ಹೂಡುವಂತೆ ಮಾಡಿಬಿಡುತ್ತದೆ.

ಇರ್ಪುವಿನಲ್ಲಿರುವ ರಾಮೆಶ್ವರ ದೇವಾಲಯ ಕೇರಳೀಯರ ವಾಸ್ತುಶಿಲ್ಪದೊಂದಿಗೆ ವೃತ್ತಾಕಾರದ ಗರ್ಭಗುಡಿಯನ್ನು ಹೊಂದಿ ಬಲು ಸೊಗಸಾಗಿ ನಿರ್ಮಿಸಲ್ಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿರುವ ಇತರೆ ದೇವಾಲಯಕ್ಕಿಂತ ಭಿನ್ನವಾಗಿ ಗೋಚರಿಸುತ್ತದೆ.  

ಲಕ್ಷ್ಮಣ ಸೃಷ್ಟಿಸಿದ ಜಲಧಾರೆ: ರಾಮೇಶ್ವರ ದೇವಾಲಯ ಮತ್ತು ಇಲ್ಲಿನ ಅಧಿದೇವತೆ ರಾಮೇಶ್ವರ ಹೇಗೆ ಪ್ರತಿಷ್ಠಾಪನೆಗೊಂಡ ಅಲ್ಲದೆ, ಈ ತಾಣಕ್ಕೆ ಇರ್ಪು ಎಂಬ ಹೆಸರು ಹೇಗೆ ಬಂತು? ಲಕ್ಷ್ಮಣತೀರ್ಥ ನದಿಯ ಸೃಷ್ಟಿ ಹೇಗಾಯಿತು ಎಂಬುವುದಕ್ಕೆಲ್ಲಾ ಪೌರಾಣಿಕ ಹಿನ್ನಲೆಯಿದ್ದು, ಅದು ಹೀಗಿದೆ.

ಲಂಕೆಯಲ್ಲಿ ಯುದ್ದ ಮಾಡಿ ರಾಕ್ಷಸರನ್ನು ಸಂಹರಿಸಿ ಸೀತಾ ದೇವಿಯೊಂದಿಗೆ ಇರ್ಪುವಿಗೆ ಆಗಮಿಸಿದ ಶ್ರೀರಾಮ ಇಲ್ಲಿಯ ಪ್ರಶಾಂತ ವಾತಾವರಣ ಕಂಡು ದೇಗುಲ ನಿರ್ಮಾಣಕ್ಕೆ  ಇದೇ ಸೂಕ್ತ ತಾಣವೆಂದು ನಿರ್ಧರಿಸುತ್ತಾನೆ. ಪೂಜಾ ಕೈಂಕರ್ಯ ನೆರವೇರಿಸಲು ಶ್ರೀರಾಮನ ಆಜ್ಞೆಯಂತೆ ಆಂಜನೇಯ ಲಿಂಗತರಲೆಂದು ಕಾಶಿಯತ್ತ ಹೋಗುತ್ತಾನೆ. ಇತ್ತ ಶ್ರೀರಾಮ ಲಿಂಗಪ್ರತಿಷ್ಠಾಪನೆಗೆ ದಿನ ನಿಗದಿಪಡಿಸಿ ಮುನಿಪುಂಗವರನ್ನು ಆಹ್ವಾನಿಸಿದನಂತೆ. ಆದರೆ ಮುಹೂರ್ತ ಸಮೀಪಿಸಿದರೂ  ಲಿಂಗ ತರಲು ಹೋದ ಆಂಜನೇಯ ಬರಲೇ ಇಲ್ಲ. ಆಗ ಶ್ರೀರಾಮ ಸ್ವತಃ ಲಿಂಗವೊಂದನ್ನು ನಿರ್ಮಿಸಿ ಮುಹೂರ್ತದ ಸಮಯಕ್ಕೆ ಸರಿಯಾಗಿ ಲಿಂಗಪ್ರತಿಷ್ಠಾಪನೆ ಮಾಡಿದನಂತೆ. ಕಾರ್ಯ ಮುಗಿದ ಮೇಲೆ ಆಂಜನೇಯ ಲಿಂಗವನ್ನು ಹೊತ್ತು ತಂದನಂತೆ. ಆದರೆ ಆ ಲಿಂಗವನ್ನು ಆಂಜನೇಯನೇ ಪ್ರತಿಷ್ಠಾಪಿಸುವಂತೆ ಶ್ರೀರಾಮ ಹೇಳಿದ ಮೇರೆಗೆ  ಆಂಜನೇಯ  ಇರ್ಪುಗೆ ಹತ್ತು ಕಿ.ಮೀ. ದೂರವಿರುವ ಹೇರ್ಮಾಡಿನಲ್ಲಿ ಪ್ರತಿಷ್ಠಾಪಿಸಿದನೆಂಬುವುದು ಇಂದಿಗೂ ಜನವಲಯದಲ್ಲಿರುವ ಪೌರಾಣಿಕ ಕಥೆಯಾಗಿದೆ.

ಇನ್ನು ಇರ್ಪು ಎಂಬ ಹೆಸರು ಹೇಗೆ ಬಂತೆಂಬುವುದಕ್ಕೆ  ಮತ್ತೊಂದು ಪೌರಾಣಿಕ ಕಥೆಯಿದೆ. ಸೀತೆಯನ್ನು ಅರಸುತ್ತಾ ಹೊರಟ ರಾಮಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಶ್ರೀರಾಮ ಸೇರಿದಂತೆ ವಾನರರು ನಡೆಯುತ್ತಿದ್ದರೆ ಕೋಪಗೊಂಡ ಲಕ್ಷ್ಮಣ ಮುಂದಕ್ಕೆ ಹೆಜ್ಜೆಯಿರಿಸದೆ ಅಲ್ಲಿಯೇ ಕುಳಿತುಕೊಂಡನಂತೆ. ಎಂದೂ ರಾಮನಿಗೆ ಎದುರಾಡದ ಲಕ್ಷ್ಮಣ ಅಂದು ಕೋಪಗೊಂಡು ಕುಳಿತದ್ದೇ ಮಲಯಾಳದಲ್ಲಿ ಇರಿಕ್ಕನ್ (ಕುಳಿತುಕೊಳ್ಳುವುದು) ಪದದಿಂದ ಇರ್ಪು ಹುಟ್ಟಿತೆಂದು ಹೇಳಲಾಗುತ್ತಿದೆ.

ಕೆಲಕಾಲದ ನಂತರ ಶಾಂತಗೊಂಡ ಲಕ್ಷ್ಮಣ ತನ್ನ ವರ್ತನೆಗೆ ನಾಚಿ ಅಣ್ಣ ಶ್ರೀರಾಮನನ್ನು ನೋಯಿಸಿದ್ದಕ್ಕಾಗಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಭಯಗೊಂಡು ಲಕ್ಷ್ಮಣನನ್ನು ಸಮಾಧಾನಗೊಳಿಸಿ ಆತನ ತಪ್ಪನ್ನು ಕ್ಷಮಿಸಿದ. ಇದರಿಂದ ಸಂತೋಷಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ಆರಿಸಲು(ನಂದಿಸಲು) ಬಾಣಬಿಟ್ಟನಂತೆ ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು  ನಂದಿಸಿತಂತೆ. ಈ ರೀತಿ ಸೃಷ್ಟಿಯಾದ ಜಲಧಾರೆಯನ್ನು ರಾಮನೇ ಲಕ್ಷ್ಮಣತೀರ್ಥವೆಂದು ಹೆಸರಿಸಿ ಎಲ್ಲರೂ ಕುಡಿದು ಸಂತುಷ್ಟಗೊಂಡರಂತೆ. ಆದುದರಿಂದ ಇಂದಿಗೂ ಲಕ್ಷ್ಮಣತೀರ್ಥ ಪವಿತ್ರನದಿಯಾಗಿಯೇ ಉಳಿದಿದೆ.

ವೈಶಿಷ್ಟ್ಯಪೂರ್ಣ ಜಲಧಾರೆ: ಲಕ್ಷ್ಮಣತೀರ್ಥ ನದಿಯಿಂದ ನಿರ್ಮಿತವಾಗಿರುವ ಜಲಪಾತವು ಕೊಡಗಿನಲ್ಲಿರುವ ಇತರೆ ಜಲಪಾತಗಳಿಗಿಂತ ವಿಶಿಷ್ಟವಾಗಿದ್ದು, ಪರಮಪವಿತ್ರವಾಗಿ, ಇಷ್ಟಾರ್ಥಗಳನ್ನು ನೆರವೇರಿಸುವ ಜಲಧಾರೆಯಾಗಿ ಕೊಡಗಿನವರ ನಂಬಿಕೆಗೆ ಪಾತ್ರವಾಗಿದೆ. 

ರಾಮೇಶ್ವರ ದೇವಾಲಯಕ್ಕೆ ಒಂದು ಕಿ.ಮೀ. ದೂರದಲ್ಲಿರುವ ಈ ಜಲಪಾತ ತನ್ನ ಮೋಹಕತೆ, ಕುಲುಕುಲು ಸೌಂದರ್ಯ, ವಯ್ಯಾರದ ನಾಟ್ಯ, ಜುಳುಜುಳು ನಿನಾದದೊಂದಿಗೆ ಸುಮಾರು ಎಪ್ಪತ್ತು ಅಡಿಯಷ್ಟು ಎತ್ತರದಿಂದ ಧುಮುಕಿ, ಅಲ್ಲಿಂದ ಮತ್ತೆ ನೂರು ಅಡಿಯಷ್ಟು ಕೆಳಕ್ಕೆ ಜಿಗಿಯುತ್ತಾ, ಅಲ್ಲಿಂದ ಅಂಕುಡೊಂಕಾಗಿ ಹರಿದು ಚಿಕ್ಕಾತಿ ಚಿಕ್ಕ ಜಲಧಾರೆಗಳನ್ನು ಸೃಷ್ಟಿಸಿದೆ. ಸುಮಾರು ಇನ್ನೂರು ಅಡಿಯಷ್ಟು ಎತ್ತರದಿಂದ ಪ್ರಮುಖವಾಗಿ ಎರಡು ಹಂತಗಳಲ್ಲಿ ಧುಮುಕಿ ಹರಿಯುವ ಜಲಧಾರೆಯ ಸೊಬಗನ್ನು ಹತ್ತಿರದಿಂದ ಸವಿಯುವುದೆಂದರೆ ಮರೆಯಲಾಗದ ಅನುಭವ.

ಈ ಜಲಧಾರೆಗೆ ತಲೆಕೊಟ್ಟು ಮೀಯುವುದೆಂದರೆ ಇಲ್ಲಿನವರು ಪವಿತ್ರವೆಂದು ನಂಬುತ್ತಾರೆ. ಪ್ರತಿವರ್ಷದ ಶಿವರಾತ್ರಿಯಂದು  ಇಲ್ಲಿ ಜಾತ್ರೆಯನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಸ್ನಾನಗೈಯ್ಯಲು ಸಹಸ್ರಾರು ಮಂದಿ ಆಗಮಿಸುತ್ತಾರೆ.  ಈ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಕಟ್ಟಲಾಗುವ ಮರದ ಅಟ್ಟಳಿಗೆಯಲ್ಲಿ  ನಿಂತು ಮೀಯುವುದು ರೂಢಿ. ಹೀಗೆ ಸ್ನಾನ ಮಾಡಿದರೆ ಬೇಡಿದ ಫಲ ಒದಗುತ್ತದೆ  ಎಂಬ ಪ್ರಬಲ ನಂಬಿಕೆಯಿದೆ. ಅದರಲ್ಲೂ ನವದಂಪತಿಗಳು ಕೈಕೈ ಹಿಡಿದು ಸ್ನಾನ ಮಾಡಿದರೆ ಬಯಸಿದ್ದು ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನವರದ್ದಾಗಿದೆ. ಇನ್ನು ಇರ್ಪು ತಾಣದಲ್ಲಿ ಹಲವಾರು ವಿಶೇಷತೆಗಳಿರುವುದನ್ನು ನಾವು ಕಾಣಬಹುದಾಗಿದೆ.

ವಿಶಿಷ್ಟಚಿಟ್ಟೆಗಳು: ಇರ್ಪುವಿನ ಜಲಪಾತ ವ್ಯಾಪ್ತಿಯಲ್ಲಿ ವಿಶಿಷ್ಟ ಎನ್ನಬಹುದಾದ ಪಶ್ಚಿಮಘಟ್ಟ ಪ್ರದೇಶಕ್ಕೆ ಸೀಮಿತವಾದ ಮಲಬಾರ್ ಬ್ಯಾಂಡೆಡ್ ಪೀಕಾಕ್ (ಪ್ಯಾಪಿಲಿಯೋ ಬುದ್ದಾ) ಎಂಬ ಚಿಟ್ಟೆಯನ್ನು ಕಾಣಬಹುದು. 

ಅಶೋಕವೃಕ್ಷ: ರಾಮೇಶ್ವರ ದೇವಾಲಯ ಆವರಣದಲ್ಲಿ ಅಶೋಕ ವೃಕ್ಷವಿದ್ದು ಇದನ್ನು ಸಾರಣ ಅಶೋಕ ಎಂದೂ ಕರೆಯಲಾಗುತ್ತದೆ. ಲಂಕೆಯ ಅಶೋಕವನದಲ್ಲಿ ಸೀತಾದೇವಿ ಕಳೆದ ಬಂಧನದ ನೆನಪಿಗಾಗಿ ಇದನ್ನು ನೆಡಲಾಗಿದೆ ಎಂದು ಹೇಳಲಾಗುತ್ತದೆ.  ಈ ವೃಕ್ಷವು ಔಷಧೀಯ ಗಣಿಯಾಗಿದ್ದು, ಅಳಿವಿನ ಅಂಚಿನಲ್ಲಿರುವ  ವೃಕ್ಷಗಳ ಪೈಕಿ ಇದು ಒಂದಾಗಿದೆ.

ಬ್ರಹ್ಮಗಿರಿಬೆಟ್ಟ: ಇರ್ಪು ಜಲಪಾತದಿಂದ 9 ಕಿ.ಮೀ. ದೂರದಲ್ಲಿ ಬ್ರಹ್ಮಗಿರಿ ಬೆಟ್ಟ, 7 ಕಿ.ಮೀ. ದೂರದ

ರೆಸಾರ್ಟ್ ಸೌಲಭ್ಯ: ಇರ್ಪು ವ್ಯಾಪ್ತಿಯಲ್ಲಿ ಹೈಫಾಲ್ಸ್, ರಾಮ್‍ಕಾಡ್, ಇರ್ಪು ರೆಸಾರ್ಟ್ ಮುಂತಾದ ಆತಿಥ್ಯದ ಮನೆಗಳಿವೆ. ನಿಗದಿತ ಶುಲ್ಕ ನೀಡಿ ತಂಗಬಹುದಾಗಿದೆ.ಲ್ಲಿ ಮುನಿಕಲ್ ಗುಹೆಯಿದ್ದು,  ಇಲ್ಲಿಯೇ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹವೂ ಇದೆ. ಚಾರಣ ಹಾಗೂ ತಂಗಲು ಪ್ರತ್ಯೇಕ ಶುಲ್ಕವನ್ನು ನೀಡಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ವಲಯ ಅರಣ್ಯಾಧಿಕಾರಿಗಳು ವನ್ಯಜೀವಿ ವಲಯ 08274-246331 ಸಂಪರ್ಕಿಸಬಹುದು.

ಸಂಪರ್ಕ ಹೇಗೆ?: ಇರ್ಪುವಿಗೆ ತೆರಳುವವರಿಗೆ  ರಸ್ತೆ ಅಭಿವೃದ್ಧಿಯಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಿಲ್ಲ. ನಿಗದಿತ ಸಮಯಕ್ಕೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಗೋಣಿಕೊಪ್ಪಲಿನಿಂದ ಬಸ್ಸು ವ್ಯವಸ್ಥೆಯಿದೆ. ಉಳಿದಂತೆ ಕುಟ್ಟಕ್ಕೆ ತೆರಳುವ ಬಸ್ಸಿನಲ್ಲಿ ಶ್ರೀಮಂಗಲ ಹಾಗೂ ಕುಟ್ಟದ ನಡುವೆ ಸಿಗುವ ಕಾಕೂರು ಅಥವಾ ಕಾಯಿಮಾನಿಯಲ್ಲಿಳಿದು ಅಲ್ಲಿಂದ ನಡೆದುಕೊಂಡು ಹೋಗಬಹುದಾಗಿದೆ.  ಅಥವಾ ಶ್ರೀಮಂಗಲಕ್ಕೆ ತೆರಳಿ ಅಲ್ಲಿಂದ ಬಾಡಿಗೆ ವಾಹನಗಳಲ್ಲಿಯೂ ತೆರಳಬಹುದು.